ನಾವು ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತಿದ್ದೇವೆ ನಿಜ. ಆದರೆ ಕೇವಲ ಜನ ಲೋಕಪಾಲ ಮಸೂದೆಯ ಜಾರಿಯಿಂದ ಭ್ರಷ್ಟಾಚಾರದ ನಿಯಂತ್ರಣ ಸಾದ್ಧ್ಯವೇ?
ಕರ್ನಾಟಕದ ಬಲಿಷ್ಠ ಲೋಕಾಯುಕ್ತವನ್ನೇ ತೆಗೆದುಕೊಳ್ಳಿ. ಕರ್ನಾಟಕ ಭ್ರಷ್ಟಾಚಾರ ಮುಕ್ತ ರಾಜ್ಯವಾಗಿದೆಯೇ? (ಭ್ರಷ್ಟಾಚಾರದಲ್ಲಿ ಬಹುಶಃ ಮೊದಲನೆ ಇಲ್ಲವೆ ಎರಡನೆ ಸ್ಥಾನದಲ್ಲಿದೆ).
ಮಸೂದೆಗಳಿಂದ, ಕಾನೂನುಗಳಿಂದ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ. ಕಾನೂನುಗಳಿಂದ ಅಪರಾಧ ನಿಯಂತ್ರಣವೇ ಅಸಾಧ್ಯ ಆಗಿರುವಾಗ ಭ್ರಷ್ಟಾಚಾರ ನಿಯಂತ್ರಣ ಕನಸಿನ ಮಾತು.
ಸತ್ಯಾಗ್ರಹ, ಚಳುವಳಿಗಳ ಇತಿಹಾಸ ಗಮನಿಸಿದರೆ ಒಂದು ಮಾತಂತೂ ಸತ್ಯ. ಯಾವ ಚಳುವಳಿಯೂ ಜನರ ಸ್ವಭಾವವನ್ನು ಬದಲಿಸುವಲ್ಲಿ ಯಶಸ್ವಿಯಾಗಿಲ್ಲ. ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ನಡೆಸಿದರೂ ನಮಗಿನ್ನೂ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಮರೀಚಿಕೆಯಾಗಿಯೇ ಉಳಿದಿದೆ. ಸತ್ಯ, ಅಹಿಂಸೆ, ಅಪರಿಗ್ರಹದಂತಹ ತತ್ವಗಳನ್ನು ಅವರ ಸಾವಿನ ಮೊದಲೇ ನಾವು ಮರೆತಾಯಿತು. ಜೆ.ಪಿ.ಯವರ ಚಳುವಳಿಯೂ ಜನತಾ ಪಕ್ಷದ ಅಧಿಕಾರದ (ತುರ್ತು ಪರಿಸ್ಥಿತಿಯ ಬಳಿಕದ ೨ ವರ್ಷದ ಆಳ್ವಿಕೆ) ನಂತರ ಮಹತ್ವ ಕಳೆದುಕೊಂಡು ಮೂಲೆಗುಂಪಾಯಿತು.
ಇನ್ನು ಅಣ್ಣಾ ಚಳುವಳಿಗೂ ಇದೆ ಪರಿಸ್ಥಿತಿ ಬರಲಿದೆ. ಭ್ರಷ್ಟಾಚಾರ ನಿಲ್ಲಿಸಬೇಕೆ? ಮೊದಲು ನಾವು ಬದಲಾಗೋಣ. ಭ್ರಷ್ಟಾಚಾರದ ಎಂಜಲು ಕಾಸಿಗೆ ನಾವು ಕೈಯೊಡ್ಡದಿರೋಣ. ಲಂಚ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ ಎನ್ನುವ ಸಂಕಲ್ಪ ಮಾಡೋಣ. ಆಗ ಮಾತ್ರ ನಾವು ಅಣ್ಣಾಗೆ ನಿಜವಾದ ಬೆಂಬಲ ನೀಡಿದಂತೆ. ಜೈ ಹಿಂದ್.