March 5, 2015

ಹಿಂದೂ ಧರ್ಮವೇ ಅಥವಾ ಭಾರತ ಧರ್ಮವೇ ?



||ಶ್ರೀ ಗುರುಭ್ಯೋ ನಮಃ||

ನಾವೇಕೆ "ಹಿಂದೂ" ಎಂಬ ಪದದ ಬಗ್ಗೆ ಅಷ್ಟೊಂದು ಮೋಹಿತರಾಗಿದ್ದೇವೆಯೋ ಗೊತ್ತಿಲ್ಲ ! ಪಾಶ್ಚಿಮಾತ್ಯರು ಸಿಂಧೂ ನದಿಯ ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದುದರಿಂದ ಅಲ್ಲದೆ ಅವರಿಗೆ ಸಿಂಧು ಎಂದು ಉಚ್ಚರಿಸಲು ಬರದೆ ಇದ್ದುದರಿಂದ "ಹಿಂದೂ" ಎಂಬ ಪದದ ಜನನವಾಯಿತು. ಆಮೇಲೆ ಇಂಡಸ್ ಆಗಿ, ಕೇವಲ ಕ್ರಿ. . ರಿಂದ ಈಚೆಗೆ ಇಂಡಿಯಾ ಆಗಿದೆ. ಸಂಸ್ಕೃತದಲ್ಲಿ "ಭಾರತ" ಅಥವಾ "ಭರತ ವರ್ಷ" ಎಂದು ಪ್ರಾಕ್ತನ ಕಾಲದಿಂದಲೂ ಪ್ರಸಿದ್ದವಾಗಿರುವ ದೇಶ ಬ್ರಿಟಿಷರ ಓಡೆದು ಆಳುವ ನೀತಿಯ ಫಲವಾಗಿ ಹಿಂದುಸ್ತಾನವಾಯಿತು. ಹೀಗಿರುವಾಗ ದೇಶದಲ್ಲಿರುವವರನ್ನು "ಹಿಂದೂ" ಎಂದು ಕರೆಯಲು ಹೇಗೆ ಸಾಧ್ಯ? ಅವರು ಆಚರಿಸುವ ಧರ್ಮ ಹಿಂದೂ ಧರ್ಮವಾಗಲು ಹೇಗೆ ಸಾಧ್ಯ? ಹಾಗಿದ್ದರೆ ಕೋಟ್ಯಾಂತರ ವರ್ಷಗಳಿಂದ ಉಳಿದು ಬೆಳೆದಿರುವ ಸನಾತನ ಧರ್ಮವು ಕೇವಲ ೩೦೦-೪೦೦ ವರ್ಷಗಳ ಹಿಂದೆ ಬಳಕೆಗೆ ಬಂದ ಶಬ್ಧದಿಂದ ಗುರುತಿಸಲ್ಪಡಬೇಕೇ? ವಿದೇಶೀ ಆಕ್ರಮಣಕಾರರು ಸಿಂಧೂ ನದಿಯ ದಿಕ್ಕಿನ ಬದಲು ಪೂರ್ವದಿಂದ ಭಾರತವನ್ನು ಪ್ರವೇಶಿಸಿದ್ದರೆ ನಾವು "ಬ್ರಹ್ಮಪುತ್ರರೂ", ನಮ್ಮ ದೇಶವು "ಬ್ರಹ್ಮಸ್ಥಾನ"ವೂ ಆಗಿರುತ್ತಿತ್ತಲ್ಲವೇ!

ಹೆಚ್ಚಿನ ಬುದ್ಧಿ ಜೀವಿಗಳಿಗೆ "ಹಿಂದೂ" ಹಾಗೂ "ಹಿಂದೂ ಧರ್ಮ" ಎಂಬ ಪದಗಳ ಬಗ್ಗೆ ಅಲರ್ಜಿ ಇದೆ. ಅದ್ದರಿಂದ ಭಾರತದಲ್ಲಿರುವ ಸನಾತನ ಧರ್ಮಕ್ಕೆ "ಭಾರತ ಧರ್ಮ" ಎಂಬ ಪದವೇ ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಭಾರತದಲ್ಲಿರುವವರು ಭಾರತೀಯರು ಹಾಗೂ ಭಾರತ ಧರ್ಮೀಯರು. ದೇಶದಲ್ಲಿ ಹಲವಾರು ಧರ್ಮಗಳು ಹುಟ್ಟಿ ಬೆಳೆದಿವೆಯಾದರೂ ಪ್ರಸಕ್ತ ಇರುವ ಬೌದ್ಧ, ಜೈನ, ಸಿಕ್ಖ, ವೀರಶೈವರು ತಮ್ಮನ್ನು ಭಾರತ ಧರ್ಮದಿಂದ ಹೊರಗಿನವರೆಂದು ಭಾವಿಸಿಲ್ಲ, ಅಲ್ಲದೆ ಹಾಗೆ ನಡೆದುಕೊಂಡೂ ಇಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ "ವಿರಾಟ್ ಹಿಂದೂ ಸಮಾವೇಶ" ಗಳ ಸಂಚಾಲಕರು ಓರ್ವ ಜೈನರು ಎನ್ನುವುದು ಇದಕ್ಕೆ ಪುಷ್ಟಿ ನೀಡುತ್ತದೆ. ನಮ್ಮ ಸನಾತನ ಭಾರತ ಧರ್ಮವು ಎಲ್ಲ ಧರ್ಮಗಳನ್ನೂ ಪೋಷಿಸಿಕೊಂಡುಬಂದಿರುವುದೇ ಇದಕ್ಕೆ ಕಾರಣ. ನಮ್ಮ ಸನಾತನ ಭಾರತ ಧರ್ಮ ಪ್ರತಿಪಾದಿಸುವ ವೇದಗಳು, ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ ಇತ್ಯಾದಿ ಪವಿತ್ರ ಗ್ರಂಥಗಳು ಕೇವಲ ಭಾರತೀಯರಿಗೆ ಮಾತ್ರ ಮಾರ್ಗದರ್ಶಕವಾಗಿರದೆ ಸಮಸ್ತ ವಿಶ್ವಕ್ಕೆ ದಾರಿದೀಪವಾಗಿವೆ. ಅದಕ್ಕಾಗಿಯೇ 'ವಸುಧೈವ ಕುಟುಂಬಕಂ' ( ಭೂಮಿಯಲ್ಲಿರುವವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು) ನಂತಹ ಉಕ್ತಿಗಳನ್ನು ಇದರಲ್ಲಿ ಕಾಣಬಹುದು.
ಸನಾತನ ಭಾರತದಲ್ಲಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳನ್ನು ಕೆಲವರು ಜಾತಿ ಪದ್ಧತಿ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ. ಅಲ್ಲದೆ ಅದಕ್ಕೆ ಪುರುಷ ಸೂಕ್ತದ ಆಧಾರವನ್ನು ನೀಡುತ್ತಾರೆ. ನಿಜವಾಗಲೂ ಇವರ್ಯಾರೂ ಸಂಸ್ಕ್ರತ ಪಂಡಿತರೂ ಅಲ್ಲ ಅಥವಾ ಬ್ರಾಹ್ಮೀ (ವೇದಗಳು ಬರೆಯಲ್ಪಟ್ಟ ಭಾಷೆ) ಗಂಧಗಾಳಿ ತಿಳಿದವರೂ ಅಲ್ಲ. ಪುರುಷ ಸೂಕ್ತ ಹೇಳುತ್ತದೆ , "ನಾವು ಯಾರನ್ನು ಪುರುಷ (ಇದು ಲಿಂಗ ಸೂಚಕ ಅಲ್ಲ, ಮನುಷ್ಯ ಎಂದರ್ಥ) ನೆಂದು ಕರೆಯುತ್ತೇವೆಯೋ ಆತನ ಮುಖದಲ್ಲಿ ಜ್ಞಾನವಿದೆ (ಬ್ರಹ್ಮ ಜ್ಞಾನ ಅಂದರೆ ಬ್ರಾಹ್ಮಣ), ಬಾಹುಗಳಲ್ಲಿ ಶೌರ್ಯವಿದೆ (ಕ್ಷತ್ರಿಯ), ಊರುವಿನ ಭಾಗದಲ್ಲಿ ತನ್ನ ವ್ಯವಹಾರಗಳನ್ನು ನಡೆಸುತ್ತಾನೆ (ವೈಶ್ಯ) ಹಾಗೂ ಪಾದಗಳ ಸಹಾಯದಿಂದ ಕೆಲಸ ಮಾಡಿಕೊಳ್ಳುತ್ತಾನೆ (ಶೂದ್ರ)" ಎಂದು. ಇದಕ್ಕೆ ವಿಪರೀತ ಅರ್ಥ ಕಲ್ಪಿಸಿ ಭಾರತದಲ್ಲಿ ಹಲವಾರು ಜಾತಿ, ವರ್ಗಗಳನ್ನು ಸೃಷ್ಟಿಸಲಾಯಿತು. ನೀವೇ ನೋಡಿ, ಭಾರತದಲ್ಲಿ ಎಲ್ಲಾದರೂ ಕ್ಷತ್ರಿಯ ಎಂಬ ಜಾತಿ ಇದೆಯೇ . ರಾಮನನ್ನೋ, ಸೋಮನನ್ನೋ ಸೇರಿಸಿಕೊಂಡು ಹೊಸ ಕ್ಷತ್ರಿಯ ಪಂಗಡಗಳನ್ನು ಸೃಷ್ಟಿಮಾಡಿಕೊಂಡಿರಬಹುದು. ಆದರೆ ದೇಶಕ್ಕಾಗಿ ಹೋರಾಡುವ ಎಲ್ಲರನ್ನೂ ಕರೆಯಲು ನಮ್ಮಲ್ಲಿ ಕ್ಷತ್ರಿಯ ಎಂಬ ಶಬ್ಧಕ್ಕಿಂತ ಉತ್ತಮ ಅಕ್ಷರ ಸಂಯೋಜನೆ ಸಿಗಲಾರದು. ಹಾಗೆಯೇ ವ್ಯಾಪಾರಿಗಳಿಗೆ ವೈಶ್ಯರೆಂಬ ಅಭಿದಾನ ಸೂಕ್ತ ಎನ್ನಿಸಿದರೆ ಇನ್ನೊಬ್ಬರ ಕೈಕೆಳಗೆ ದುಡಿಯುವವರೆಲ್ಲರೂ ಶೂದ್ರರೆ (ನನ್ನನ್ನೂ ಸೇರಿಸಿ). ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಇರುವ ಶಬ್ಧ "ಬ್ರಾಹ್ಮಣ". ಚತುರ್ವರ್ಣಗಳಲ್ಲಿ ಬ್ರಾಹ್ಮಣ ಎಂಬುದು ಮಾತ್ರ ಜಾತಿಯಾಗಿ ಉಳಿದುಕೊಂಡಿದೆ. ಇಂತಹ ಪಂಗಡ ಹೇಗೆ ಹುಟ್ಟಿಕೊಂಡಿತು ಎಂಬುವುದೇ ಬಹಳ ಕುತೂಹಲಕರ ವಿಷಯ. ನಿಜವಾಗಿ ಬ್ರಾಹ್ಮಣನೆಂದರೆ, ಸತತ ಅಧ್ಯಯನಗಳ ಮೂಲಕ ಬ್ರಹ್ಮಜ್ಞಾನವನ್ನು ಸಂಪಾದಿಸಿ ಅದನ್ನು ಲೋಕಕಲ್ಯಾಣಕ್ಕಾಗಿ ವ್ಯಯಿಸುವವನು ಎಂದರ್ಥ. ಆದರೆ ಇಂದು ಬ್ರಾಹ್ಮಣ ಜಾತಿ ಎಂದು ಹೇಳಿಕೊಂಡು ಅವರ ಸಂತಾನವೆಲ್ಲ ಬ್ರಾಹ್ಮಣ, ಅವರು ಶ್ರೇಷ್ಠ ಎಂಬ ಸುಳ್ಳುಗಳನ್ನೇ ಬೆಳೆಸಲಾಗುತ್ತಿದೆ. ಜಾತಿಯಲ್ಲಿ ಹುಟ್ಟಿದ ಸೈನಿಕ, ವ್ಯಾಪಾರೀ, ಕಾರಕೂನ ಎಲ್ಲರೂ ಬ್ರಾಹ್ಮಣರೇ

https://blogger.googleusercontent.com/img/b/R29vZ2xl/AVvXsEgsJKGfJXx4GNJR39XrbvB3CCD2HTtSIuFz_6as35mHIKgn5KNOdWiu8SnGiB9cwO65eGLprm48VcbQAQLwKqe0LdjeoNwyntBMr6eIEins0tFDJWN8lzfzWgGdYMVmKQg-MfGd1hn3Jy4/s1600/images.jpg

ಇನ್ನು ಇತರ ಜಾತಿಗಳ ಉಗಮದ ಬಗ್ಗೆ ಕನ್ನಡ ಸಾರಸ್ವತ ಲೋಕದ ಅತ್ಯತ್ತಮ ಸಾಹಿತಿಯೋರ್ವರ ಅಭಿಪ್ರಾಯಗಳು ಹೀಗಿವೆ. ಹಿಂದೆ ರಾಜರ ಆಳ್ವಿಕೆಯಲ್ಲಿ ಪ್ರತಿಯೊಂದು ಉದ್ಯೋಗ ಮಾಡುವ ಆಯಾ ಜನರ ಗುಂಪುಗಳೇ ಮುಂದೆ ಜಾತಿ - ವರ್ಗಗಳಾಗಿ ಮಾರ್ಪಾಡು ಹೊಂದಿದವು. ಉದಾಹರಣೆಗೆ ರಜಕ, ಗೊಲ್ಲ, ಅಕ್ಕಸಾಲಿ, ಚಮ್ಮಾರ, ಕ್ಷೌರಿಕ, ಶ್ಯಾನುಭೋಗ, ಪೂಜಾರಿ, ನೇಕಾರ, ಬಡಗಿ, ಬೆಸ್ತ, ಬೇಡ ... ಇತ್ಯಾದಿ. ರಾಜ್ಯದ ಪ್ರತಿಯೊಂದು ಕೆಲಸವನ್ನೂ ನಿರ್ದಿಷ್ಟ ಜನರ ಗುಂಪುಗಳು ಮಾಡುತ್ತಿದ್ದ ಕಾರಣ ಅಂತಹ ವರ್ಗಗಳು ಆಯಾ ಕೆಲಸದ ಹೆಸರಿನಿಂದ ಕರೆಯಲ್ಪಟ್ಟವು. ಮುಂದೆ ವಿವಾಹದ ಸಂದರ್ಭದಲ್ಲಿ ಜನರು ಆಯಾ ವರ್ಗಗಳ ವಧುವಿಗೇ ಹೆಚ್ಚಿನ ಆದ್ಯತೆಯನ್ನು ಕೊಡಲಾರಂಭಿಸಿದರು. ಇದಕ್ಕೆ ಆಯಾ ವರ್ಗಗಳ ಕಾರ್ಯ-ಕೌಶಲಗಳಲ್ಲಿನ ವ್ಯತ್ಯಾಸವೇ ಕಾರಣವಾಗಿತ್ತು. ಉದಾಹರಣೆಗೆ ಬೆಸ್ತರ ಮನೆಯಲ್ಲಿ ಬೇಡರ ಹುಡುಗಿ ಯಾವ ಉದ್ಯೋಗಕ್ಕೆ ಸಹಕಾರಿಯಾದಾಳು? ಹಾಗಾಗಿ ಉದ್ಯೋಗ ಪ್ರಧಾನ ಸಮಾಜದಲ್ಲಿ ಇಂತಹ ಅಂತರ್-ವರ್ಗೀಯ ಮದುವೆಗಳನ್ನು ಜನ ಇಷ್ಟ ಪಡದ ಕಾರಣ ಅವುಗಳೇ ಮುಂದೆ ಜಾತಿಗಳಾಗಿ ಪರಿವರ್ತನೆ ಹೊಂದಿರಬಹುದು. ವಾದಕ್ಕೆ ಪುಷ್ಟಿ ಎಂಬಂತೆ ಇಂದಿನ ಸಮಾಜದಲ್ಲಿ ಕೂಡ ಉದ್ಯೋಗಸ್ಥ ಪುರುಷರು ತಮ್ಮ ಮಾದರಿಯ ಉದ್ಯೋಗ ಮಾಡುವ ಸ್ತ್ರೀಯರನ್ನು ಮದುವೆ ಆಗಬಯಸುತ್ತಿರುವುದು! ಹಾಗಿದ್ದರೆ ಜಾತಿ ಪದ್ಧತಿ ಬೇಕೇ? ಕತ್ತೆಗಳು ಕತ್ತೆ ಜಾತಿಗೆ ಸೇರಿದರೆ, ಮಂಗಗಳು ಮಂಗನ ಜಾತಿ, ಹಾಗಿದ್ದ ಮೇಲೆ ಮಾನವರೆಲ್ಲ "ಮಾನವ ಜಾತಿ"ಯವರಲ್ಲವೇ? ಮೊದಲು "ಭಾರತ ಧರ್ಮ"ವು ಜಾತಿಗಳ ಸಂಕೋಲೆಯಿಂದ ಮುಕ್ತವಾಗಬೇಕು. ಆಗ ಮಾತ್ರ ಪರಧರ್ಮೀಯರು ನಮ್ಮನ್ನು ಗೌರವಿಸಬಹುದು. ತಾವೂ ಕೂಡ ಭಾರತ ಧರ್ಮೀಯರೆಂದು ಕರೆದುಕೊಳ್ಳಬಹುದು. ಇನ್ನು ಇಸ್ಲಾಂ ಧರ್ಮದವರು ದಿನವೂ ಆಲಾಪಿಸುವ ಪ್ರಾರ್ಥನೆಗಳು ಸಾಮಗಾನ ಆಧಾರಿತ, ಬೈಬಲ್ ಬರವಣಿಗೆಗಳಿಗೆ ಶ್ರೀಮದ್ ಭಗವದ್ಗೀತೆಯೇ ಆಧಾರ. ಇನ್ನು ಸಮಸ್ತ ಜಗತ್ತಿನ ಸಕಲ ಜ್ಞಾನಗಳಿಗೂ ವೇದವೇ ಆಧಾರ. ಹಾಗಿದ್ದ ಮೇಲೆ ಸಮಸ್ತ ಮಾನವ ಕುಲ ಒಂದೇ ಜಾತಿ ಅಂತ ಅನಿಸುವುದಿಲ್ಲವೇ

https://blogger.googleusercontent.com/img/b/R29vZ2xl/AVvXsEir2t4FD62OQTtYAa_3-sWv5dzUDVfgBP3nQiJ2zbnCEEYpPGq-OuHv6gFO5AHg8-bIrebIFw4Kr0QmN5qmZDEQznpTOUJFf2cH_EkftSIeiNuPpgtErjWvg0gf7q8wXpAIJpEMglN9wqY/s1600/images+(1).jpg

ಸ್ನೇಹಿತರೇ, ನಾವೆಲ್ಲಾ ಒಂದೇ ಆದಿ ದಂಪತಿಗಳಿಗೆ (ಪ್ರಕೃತಿ + ಪುರುಷ) ಹುಟ್ಟಿದ ಸಂತಾನಗಳು. ಖಂಡಿತವಾಗಲೂ ನಮ್ಮೆಲ್ಲರ ಸಾವಿರಾರು ಹಿಂದಿನ ತಲೆಮಾರಿನವರು ಅಣ್ಣ-ತಮ್ಮಂದಿರಾಗಿದ್ದವರು. ಹಾಗಾಗಿ ವಿಶ್ವದ ಪ್ರತಿಯೊಬ್ಬರೂ ಪರಸ್ಪರ ಸಂಬಂಧಿಕರೇ ಅಲ್ಲವೇ .... ಯೋಚಿಸಿ. ನಾವು ಆಚರಿಸುವ ಧರ್ಮ, ಪದ್ದತಿಗಳು ಬೇರೆ ಬೇರೆ ಇರಬಹುದು. ಅವು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿರಲಿ. ಮೊದಲು ಮಾನವ ಧರ್ಮವನ್ನು ಪಾಲಿಸಿ ಮನುಷ್ಯರಾಗೋಣ. ಪ್ರಕೃತಿಯೊಂದಿಗೆ, ಅದಕ್ಕೆ ಪೂರಕವಾಗಿ ಬದುಕನ್ನು ನಡೆಸೋಣ. ವೇದದಲ್ಲಿ ಹೇಳಿರುವಂತೆ ಹೇಳಿರುವಂತೆ "ಕೃಣ್ವಂತೋ ವಿಶ್ವಮಾರ್ಯಂ" ಅಂದರೆ ವಿಶ್ವವನ್ನು ಸಮಸ್ತ ಜೀವಿಗಳಿಗೂ ವಾಸಯೋಗ್ಯ ಉನ್ನತ ಸ್ಥಾನವನ್ನಾಗಿ ಮಾಡೋಣ. ಇನ್ನು ಯಾರಾದರೂ ನಮ್ಮ ಜಾತಿ-ಧರ್ಮದ ವಿಷಯ ಪ್ರಸ್ತಾಪ ಮಾಡಿದರೆ ನನ್ನದು "ಮಾನವ ಜಾತಿ, ಭಾರತ ಧರ್ಮ" ಎಂದು ಎದೆ ತಟ್ಟಿ ಹೇಳಲು ಸಾಧ್ಯವೇ? ದಯವಿಟ್ಟು ಚಿಂತಿಸಿ.

ಝಕೀರ್ ನಾಯಕ್ ಅವರ ವಿಡಿಯೋವನ್ನು ನೋಡಿ ...