March 23, 2015

"ಗಧಾಧರ ಪೀಠ"

"ಗಯಾ" ದಂತಹ ಪೌರಾಣಿಕ ಸ್ಥಳಗಳಲ್ಲಿ ಇರುವಂತಹ "ಗಧಾಧರ ಪೀಠ" ವನ್ನು ಪಾವಂಜೆಯ ಪುಣ್ಯಭೂಮಿಯಲ್ಲಿ ದಿನಾಂಕ ೨೩-೩-೨೦೧೫ ರಂದು ನಮ್ಮ ಗುರುಗಳಾದಂತಹ ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ  ಪ್ರಿತಿಷ್ಠಾಪಿಸಲಾಯಿತು 


ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರೂ ಮಾಡಲೇಬೇಕಾದ ಕರ್ತವ್ಯಗಳಲ್ಲಿ ವೇದಾಧ್ಯಯನವೂ ಒಂದು. ಆದರೆ ಪ್ರತಿಯೊಬ್ಬ ಮನುಷ್ಯನೂ ತನ್ನದೇ ಆದ ಕೆಲಸ ಕಾರ್ಯಗಳಲ್ಲಿ ನಿರತನಾಗಿರುವುದರಿಂದ ವೇದಾಧ್ಯಯನ ಮಾಡಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ವೇದಾಧ್ಯಯನ ನಿರತ ಕೆಲವೇ ಮಂದಿಯ ಪುಣ್ಯಫಲವನ್ನು ಸಾರ್ವತ್ರಿಕವಾಗಿ ಹಂಚುವ ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಪ್ರಕಾರವಾಗಿ "ಗಧಾಧರ"ನ ಉಪಾಸನೆಯನ್ನು ಬಳಕೆಗೆ ತರಲಾಯಿತು. ವೇದಾಧ್ಯಯನಶೀಲರ ಪುಣ್ಯದ ಆರನೆಯ ಒಂದು ಭಾಗ ಮಾತ್ರ ಅವರಲ್ಲಿ ಸಂಚಯನಗೊಂಡರೆ ಉಳಿದ ಭಾಗಗಳು ರಾಜಾದಾಯ ಮುಂತಾದ ಭಾಗಗಳಾಗಿ ಹಂಚಿಕೆಯಾಗುತ್ತದೆ. 

ಗಧಾಧರನ ಉಪಾಸನೆ ಎಂದರೆ ಪಿತೃಯಜ್ಞ. ಅಗ್ನಿ ಶಾಸ್ತ, ದೇವಪಿತೃ ತರ್ಪಣ, ವಿಶ್ವೇದೇವತಾ ಆರಾಧನೆ, ಪಿತೃ ತರ್ಪಣ (ಶ್ರಾದ್ಧ) ಗಳಿಂದ  ವೇದಾಧ್ಯಯನದ ಪುಣ್ಯವನ್ನು ಪಡೆಯಲು ಸಾಧ್ಯ. ಗಧಾಧರ ಪೀಠದಲ್ಲಿ ಶ್ರಾದ್ಧ ಕರ್ಮವನ್ನು ಮಾಡುವುದರಿಂದ ಪಿತೃಗಳಿಗೆ ಸದ್ಗತಿಯನ್ನು ನೀಡಲು ಸಾಧ್ಯ. 

March 9, 2015

"ಮೂರ್ಖ" ರ ಕೈಯಲ್ಲಿ "ಸ್ಮಾರ್ಟ್ ಫೋನ್ "ಗಳು


"ಸ್ಮಾರ್ಟ್" ಎಂಬ ಆಂಗ್ಲ ಶಬ್ದಕ್ಕೆ "ಬುದ್ದಿವಂತ, ಚತುರ, ಜಾಣ" ಎಂಬ ಅರ್ಥಗಳಿದ್ದರೂ, "ಫೋನ್" ವಿಷಯಕ್ಕೆ ಬಂದಾಗ ಈ ವಿಶೇಷಣಗಳು ಸರಿಹೊಂದದೇ ಇರುವುದರಿಂದ "ಸ್ಮಾರ್ಟ್ ಫೋನ್ " ಎಂಬ ಆಂಗ್ಲ ಶಬ್ದ ಬಳಸುತ್ತಿರುವುದಕ್ಕೆ ಕ್ಷಮೆ ಇರಲಿ. ಸ್ಮಾರ್ಟ್ ಫೋನ್ ಹೊಂದಿರುವವರೆಲ್ಲ ಸ್ಮಾರ್ಟ್ ಆಗಿದ್ದರೆ ನಮ್ಮ ದೇಶ ಇಂದು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ ಅಲ್ಲವೇ? ಭಾರತವು ವಿಶ್ವದಲ್ಲೇ ಮೂರನೆಯ ಅತಿ ಹೆಚ್ಚು ಸ್ಮಾರ್ಟ್ ಫೋನ್ ಹೊಂದಿರುವವವರ ಹಾಗೂ ಮಾರುಕಟ್ಟೆ ಬೆಳವಣಿಗೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ದೇಶ ನಮ್ಮದು. ಕಾಲೇಜಿನ ವಿದ್ಯಾರ್ಥಿಗಳೆಲ್ಲ ಇದರ ದಾಸಾನುದಾಸರಗಿರುವ ಈ ಸಂದರ್ಭದಲ್ಲಿ ಇಂತಹ ಲೇಖನದ ಅಗತ್ಯ ಕಂಡು ಇದನ್ನು ಬರೆಯುತ್ತಿದ್ದೆನೆ. ಒಂದು ಜಾಹಿರಾತಿನ ಪ್ರಕಾರ ಯಾವುದೇ ಐ.ಐ.ಟಿ. ಅಥವಾ ಐ.ಐ.ಎಂ. ನಲ್ಲಿ ಕಲಿಯಬಹುದಾದ ವಿಷಯಗಳನ್ನು ಕೇವಲ ಒಂದು ಸ್ಮಾರ್ಟ್ ಫೋನ್ ನಿಂದ ಮನೆಯಲ್ಲೇ ಕುಳಿತು ಕಲಿಯಬಹುದು, ಇಂತಹ ಭ್ರಮೆಯಲ್ಲಿರುವವರಿಗಾಗಿಯೇ ಈ ಲೇಖನ.
ಸೂರ್ಯನ ಕಿರಣಗಳ ಪ್ರತಿಫಲನದ ಸಹಾಯದಿಂದ ಈ ಸುಂದರವಾದ ಪ್ರಕೃತಿಯನ್ನು ನೋಡಲು ಆ ಸೃಷ್ಟಿಕರ್ತ ನೀಡಿರುವ ಅಮೂಲ್ಯವಾದ ಕಣ್ಣುಗಳಿಗೆ, ಸ್ವಪ್ರಕಾಶ ಹೊಂದಿರುವ LCD ಪರದೆಯನ್ನು ಪದೇ ಪದೇ ತೋರಿಸುತ್ತ ಹಿಂಸಿಸುತ್ತಿದ್ದೇವೆ ಎಂದು ಅನಿಸುತ್ತಿಲ್ಲವೆ? ಕೌಶಲ್ಯಯುತವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಆ ದೇವರು ನೀಡಿದ ಕೈಗಳನ್ನು, ಸೂಕ್ಷ್ಮವಾದ ಬೆರಳುಗಳನ್ನು ಸ್ಮಾರ್ಟ್ ಫೋನ್ ನ ಅತಿಯಾದ ಉಪಯೋಗಕ್ಕೆ ದುರ್ಬಳಕೆ ಮಾಡುತ್ತಿದ್ದೆವಲ್ಲವೇ? ನಿಸರ್ಗದ ಅತ್ಯದ್ಭುತವಾದ ನಾದ ತರಂಗಗಳ ಗ್ರಹಿಕೆಗೆ ಏಕೈಕ ಸಾಧನವಾಗಿರುವ ಕಿವಿಗಳಿಗೆ ವಿಪರೀತವಾದ ಕಂಪನಗಳನ್ನು ನೀಡುವ ಸಾಧನಗಳನ್ನು ತುರುಕಿಸಿ ಆಲಿಸುವಂತೆ ಮಾಡುವುದು ತಪ್ಪಲ್ಲವೆ? ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾಭ್ಯಾಸದ ಅಮೂಲ್ಯವಾದ ಸಮಯವನ್ನು ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಲ್ಲಿ ಹಾಳುಮಾಡುವುದು ನಿಮ್ಮನ್ನು ನಂಬಿರುವ ತಂದೆ ತಾಯಿಗಳಿಗೆ ಮಾಡುವ ದ್ರೋಹವಲ್ಲವೇ? ಹಾಗಿದ್ದರೆ ಈ ಕೆಳಗೆ ಪಟ್ಟಿ ಮಾಡಿರುವ ಅಂಶಗಳನ್ನು ಗಂಭೀರವಾಗಿ ತರ್ಕಿಸಿ ಉತ್ತರ ಪಡೆದುಕೊಳ್ಳಿ.

೧. ಸ್ಮಾರ್ಟ್ ಫೋನ್ ನ ಅತಿಯಾದ ಬಳಕೆಯಿಂದ ನಿಮ್ಮ ನಿದ್ರಾಸಮಯ ಕಡಿಮೆ ಆಗಿದೆಯೇ?

ತಾರುಣ್ಯದಲ್ಲಿ ಮನುಷ್ಯನಿಗೆ ೮ ರಿಂದ ೯ ಗಂಟೆ ನಿದ್ರೆಯ ಅಗತ್ಯ ಇದೆ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಮಲಗುವಾಗಲೂ ಕಿವಿಗೆ ಹಾಕಿಕೊಂಡು ಹಾಡುಗಳನ್ನು ಕೇಳುವ ಚಟ, ಇವುಗಳಿಂದಾಗಿ ನಿದ್ರೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಮನುಷ್ಯನ ಸ್ಮರಣ ಸಾಮರ್ಥ್ಯವನ್ನು ಕುಂಠಿತಗೊಳಿಸುವುದಲ್ಲದೆ ನಿದ್ರಾಹೀನತೆ, ಖಿನ್ನತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಬಗ್ಗೆ ಬರೆದರೆ ಅದು ಇನ್ನೊಂದು ಪುರಾಣವೇ ಆದೀತು!
೨. ಟಚ್ ಸ್ಕ್ರೀನಿನ ಅವಾಂತರದ ಬಗ್ಗೆ ನಮಗೆಷ್ಟು ಗೊತ್ತು?
ಕೈಬೆರಳು ಮಾನವ ದೇಹದ ಅತ್ಯಮೂಲ್ಯ ಅಂಗಗಳಲ್ಲಿ ಒಂದು. ಮಾನವ ಇಂದು ಈ ಪ್ರಪಂಚದಲ್ಲಿ ಇತರ ಪ್ರಾಣಿಗಳಿಗಿಂತ ಉನ್ನತ ಸ್ತರದ ಜೀವನ ನಡೆಸುತ್ತಿರಲು ಈ ಕೈ ಬೆರಳುಗಳೇ ಕಾರಣ. ನಮ್ಮ ನರವ್ಯೂಹದ ಪ್ರತಿಯೊಂದು ಮುಖ್ಯನರದ ಅಂತಿಮ ಗಮ್ಯಸ್ಥಾನ ಬೆರಳುಗಳು. ಕೇವಲ ಸ್ಪರ್ಶ ಮಾತ್ರ ದಿಂದ ಕಣ್ಣು ನೋಡಲಾಗದ್ದನ್ನು ಗ್ರಹಿಸುವ ಸಾಮರ್ಥ್ಯ ಬೆರಳಿಗಿದೆ (ಕಣ್ಣು ನೋಡುವುದೆಲ್ಲ ಯಾವಾಗಲೂ ನಿಜವಲ್ಲ!). ಅದ್ಭುತ ಚಿತ್ರಕಲೆ, ಶಿಲ್ಪಕಲೆ, ಕುಸುರಿ ಕಲೆ, ನೇಯ್ಗೆ ಇತ್ಯಾದಿಗಳು ನಮ್ಮ ಬೆರಳುಗಳ ಕೊಡುಗೆ. ಅಗಣಿತ ಶಸ್ತ್ರಚಿಕಿತ್ಸೆಗಳ ಮೂಲಕ ಜೀವಿಗಳ ಪ್ರಾಣ ಉಳಿಸುವ ಸಾಮರ್ಥ್ಯ ಈ ಬೆರಳುಗಳಿಗಿವೆ. ಇಂತಹ ಅತ್ಯಮೂಲ್ಯ ಸಂಪತ್ತನ್ನು ನಾವು ಇಂದು ಬಳಸುತ್ತಿರುವುದು ಏತಕ್ಕೆ? ಟಚ್ ಸ್ಕ್ರೀನ್ ಮೇಲೆ ಉಜ್ಜಲು!!

ಟಚ್ ಸ್ಕ್ರೀನ್ ತಂತ್ರಜ್ಞಾನ ನಾವು ತಿಳಿದಷ್ಟು ಸರಳವಲ್ಲ. ಇವುಗಲ್ಲಿ ಎರಡು ವಿಧ, ವಿರೋಧಕ (resistive) ಪರದೆ ಹಾಗೂ ಧಾರಣ (capacitive) ಪರದೆ. ವಿರೋಧಕ ಬಗೆಯವು ATM ನಂತಹ ದೊಡ್ಡ ಯಂತ್ರಗಳಲ್ಲೂ , ಧಾರಣ ಬಗೆಯವು ಸ್ಮಾರ್ಟ್ ಫೋನ್ ಗಳಲ್ಲಿ ಹಚ್ಚು ಜನಪ್ರಿಯವದವು. ಈ ಎರಡೂ ಬಗೆಯ ಪರದೆಗಳ ಉಪಯೋಗದಲ್ಲಿ ಸಣ್ಣ ಪ್ರಮಾಣದ ವಿದ್ಯುತ್ತನ್ನು ಪರದೆಯ ಮೇಲೆ ನಿರಂತರವಾಗಿ ಹಾಯಿಸಲಾಗುತ್ತದೆ. ನಮ್ಮ ಕೈ ಬೆರಳು ಇದರ ಸಂಪರ್ಕಕ್ಕೆ ಬಂದಾಗ ಆಗುವ ವೋಲ್ಟೇಜ್ ಬದಲಾವಣೆಯನ್ನು ಅಳೆಯುವ ಮೂಲಕ ಬೆರಳಿನ ಸ್ಥಾನವನ್ನು ಕಂಡುಹಿಡಿಯಲಾಗುತ್ತದೆ. ಈ ವಿದ್ಯುತ್ ಸಣ್ಣ ಪ್ರಮಾಣದ್ದೆ ಆದರೂ ನಿರಂತರವಾಗಿ ವಿದ್ಯುತ್ ತರಂಗಗಳನ್ನು ಮೆದುಳಿಗೆ ಕಳುಹಿಸುವ ಮೂಲಕ ಅನಾಹುತಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. ಬೆರಳುಗಳ ಚಲನೆಯನ್ನು ನಿಯಂತ್ರಿಸುವ ಮೆದುಳಿನ ಭಾಗದಲ್ಲಿ (somatosensory cortex) ಹೆಚ್ಚಿದ ಪ್ರತಿಕ್ರಿಯೆಗಳು ಈ ವಾದವನ್ನು ಪುಷ್ಟೀಕರಿಸಿವೆ. ಈ ಪ್ರತಿಕ್ರಿಯೆಗಳು ಮೆದುಳಿನ ಆ ಭಾಗದ ಇತರ ಕೆಲಸಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಅಷ್ಟೇ ಅಲ್ಲದೆ ಇದು ನೋವು, ಸೆಳೆತ ಹಾಗು ಇತರ ಚಲನೆಯ ಅಸ್ವಸ್ಥತೆ (ಉದಾ: ಡಿಸ್ಟೊನಿಯ) ಗಳಿಗೂ ಕಾರಣವಾಗಬಹುದು. ಹೆಬ್ಬೆರಳಿನ ಮೇಲೆ ಬೀಳುವ ಅತಿಯಾದ ಒತ್ತಡವು ಅದಕ್ಕೆ ಸಂಬಂದಿಸಿದ ನರ ಹಾಗೂ ಸ್ನಾಯುಗಳಿಗೆ ಅಶಕ್ತತೆಯನ್ನು ಉಂಟುಮಾಡುತ್ತವೆ. ಇನ್ನು ಸ್ಮಾರ್ಟ್ ಫೋನ್ ಗಳ ಬಳಕೆಯ ಸಂದರ್ಭದಲ್ಲಿನ ನಮ್ಮ ದೇಹ ಭಂಗಿಗಳೂ ಹಲವು ತೊಂದರೆಗಳಿಗೆ ಕಾರಣವಾಗಿವೆ. ಬೆರಳುಗಳನ್ನು ನಿಯಂತ್ರಿಸುವ ನರ, ಸ್ನಾಯು, ಸ್ನಾಯುರಜ್ಜು (ಟೆಂಡನ್), ಮೂಳೆ ಹಾಗು ಅದರ ಸಂಧಿಗಳು ಅತಿಯಾದ ಘರ್ಷಣೆಗಳನ್ನು ಸಹಿಸಬೇಕಾಗಿವೆ. ಹಸ್ತ, ಮೊಣಕೈ ಹಾಗೂ ಕೈಗಂಟುಗಳು ಅತಿಯಾದ ಒತ್ತಡದಿಂದ ಬಳಲುತ್ತವೆ. ಇದರಿಂದ Quervain syndrome,carpal tunnel syndrome ನಂತಹ ಖಾಯಿಲೆಗಳಿಗೆ ತುತ್ತಾಗಬಹುದು. ಕುತ್ತಿಗೆ ಹಾಗೂ ಅದರ ಸಮೀಪದ ಬೆನ್ನುಹುರಿಯ ಮೇಲೆ ಅಧಿಕ ಒತ್ತಡ ಉಂಟಾಗಿ ಅಲ್ಲಿನ ನರಗಳು ಸಂಕುಚಿತಗೊಳ್ಳಬಹುದು. ಇದು ಮನುಷ್ಯನ ದೇಹನಿಯಂತ್ರಣಕ್ಕೇ ಮಾರಕವಾಗಬಹುದು. ಕಳೆದ ವರ್ಷ ಕನ್ನಡದ ಖ್ಯಾತ ಸಾಹಿತಿ ಒಬ್ಬರ ಟೈಪಿಸ್ಟ್ ಅನ್ನು ಭೇಟಿ ಆಗಿದ್ದೆ. ಅರವತ್ತರ ಆಸುಪಾಸಿನ ಅವರ ಕೈಗಳಿಗೆ ಒಂದು ಲೋಟ ನೀರನ್ನು ಚೆಲ್ಲದಂತೆ ಹಿಡಿಯುವ ಸಾಮರ್ಥ್ಯ ಕೂಡ ಇರಲಿಲ್ಲ. ಅಷ್ಟೊಂದು ನಡುಕ. ಅದರೊಂದಿಗೆ ಹಲವು ಬಗೆಯ ಸಂಧಿ-ಕೀಲು ನೋವುಗಳು ಅವರನ್ನು ಬಾಧಿಸುತ್ತಿದ್ದವು. ಕೈಬೆರಳುಗಳ ಅತಿಯಾದ ಬಳಕೆಯಿಂದ ವ್ಯತಿರಿಕ್ತ ಪರಿಣಾಮ ಅನುಭವಿಸಿತ್ತಿರುವ ಇಂತಹ ಹಲವು ಉದಾಹರಣೆಗಳು ನಿಮ್ಮ ಸುತ್ತಮುತ್ತ ಬೇಕಾದಷ್ಟು ಸಿಗಬಹುದು. ಬೆಳಿಗ್ಗೆ ಎದ್ದ ತಕ್ಷಣ "ಕರಾಗ್ರೆ ವಸತೇ ಲಕ್ಷ್ಮಿ ..... " ಹೇಳುವ ನಾವು ಅದನ್ನು ಲಕ್ಷ್ಮಿಗೆ ವಾಸಯೋಗ್ಯವಾಗಿರಲು ಬಿಡಬೇಕಲ್ಲವೇ!

ಕೈ ಹಾಗೂ ಕಾಲು ಬೆರಳುಗಳ ನಿರ್ದಿಷ್ಟ ಪ್ರದೇಶಗಳ ಮೇಲೆ ಒತ್ತಡ ನೀಡುವ ಮೂಲಕ ಹಲವು ರೋಗಗಳನ್ನು ಗುಣಪಡಿಸುವ ಪದ್ಧತಿ (acupuncture) ನಮ್ಮಲ್ಲಿ ಎಷ್ಟೋ ಹಿಂದಿನ ಕಾಲದಿಂದಲೂ ಪರಿಚಯವಿದೆ. ಹಾಗಿದ್ದ ಮೇಲೆ ಅಲ್ಲಿ ಸ್ಮಾರ್ಟ್ ಫೋನಿನ ದುರ್ಬಳಕೆಯು ದೇಹದ ಮೇಲೆ ವಿಪರೀತ ಪರಿಣಾಮ ಉಂಟುಮಾಡುವುದು ಸ್ವಾಭಾವಿಕವಲ್ಲವೇ! ಅಲ್ಲದೆ ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಒಂದು ಚಿಕಿತ್ಸಾ ಪದ್ದತಿಯ ಬಗ್ಗೆ ತಿಳಿಸಬಯಸುತ್ತೇನೆ. ಬೆಂಗಳೂರಿನ ತಂತ್ರಜ್ಞಾನಿಯೂ, ವೈದ್ಯರೂ ಆಗಿರುವ ಓರ್ವರು finger tip revolution (FTR ) ಎಂಬ ಚಿಕಿತ್ಸಾ ವಿಧಾನವನ್ನೇ ಕಂಡುಹಿಡಿದಿದ್ದಾರೆ. ಇದರಲ್ಲಿ ಬೆರಳ ತುದಿಯಿಂದ ಹೊರಡುವ ಚೈತನ್ಯ ಮಾತ್ರದಿಂದಲೇ ದೇಹದ ಎಲ್ಲ ತರಹದ ಖಾಯಿಲೆಗಳನ್ನು ವಾಸಿ ಮಾಡಲಾಗುತ್ತದೆ. ಇದು ಬೆರಳುಗಳ ಅಗಾಧ ಶಕ್ತಿಯ ಒಂದು ಉದಾಹರಣೆ ಮಾತ್ರ.

೩. ಕಣ್ಣಿನ ಮೇಲಾಗುವ ದುಷ್ಪರಿಣಾಮಗಳು

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ (electronic) ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಇದು ಟಾರ್ಚನ್ನೋ, ವಿದ್ಯುತ್ ಬಲ್ಬುಗಳನ್ನೋ, ಸೂರ್ಯ ಗ್ರಹಣವನ್ನೋ ನೇರವಾಗಿ ವೀಕ್ಷಿಸುವುದಕ್ಕೆ ಸಮಾನ! ಅಲ್ಲದೆ ಹಲವು ಉಪಯೋಗಗಳ ಸಂದರ್ಭದಲ್ಲಿ ಮೊಬೈಲ್ ಪರದೆಗಳನ್ನು ನಿರಂತರವಾಗಿ ದಿಟ್ಟಿಸಿ ನೋಡುವುದೂ ಕಣ್ಣಿಗೆ ಹಾನಿಕಾರಕವಾಗಿದೆ. ಚಲಿಸುತ್ತಿರುವ ವಾಹನಗಳಲ್ಲಿನ ಸ್ಮಾರ್ಟ್ ಫೋನ್ ಬಳಕೆ ಕೂಡ ದೃಷ್ಟಿದೋಷಕ್ಕೆ ಕಾರಣವಾಗುತ್ತದೆ. ಫೋನಿನಲ್ಲಿ ಚಲನಚಿತ್ರ ವೀಕ್ಷಣೆ ಕಣ್ಣು ಹಾಗೂ ಕಿವಿ ಎರಡಕ್ಕೂ ಹಾನಿಕಾರಕ. ಹಾಗಾಗಿ ಚಾಳೀಸು ಬರಲು ಇನ್ನು ೪೦ ವರ್ಷ ಕಾಯಬೇಕಿಲ್ಲ!
ಗಣಕಯಂತ್ರದ ದೀರ್ಘಕಾಲೀನ ಬಳಕೆಯಿಂದ ಕಣ್ಣಿಗೆ ಉಂಟಾಗುವ ಖಾಯಿಲೆಗೆ computer vision syndrome ಎನ್ನಲಾಗುತ್ತದೆ. ಕಣ್ಣಿನ ಉರಿ, ಕೆಂಪಾಗುವಿಕೆ, ದೃಶ್ಯಗಳು ಮಂಜಾಗಿ ಕಾಣುವುದು ಅಥವಾ ಎರಡಾಗಿ ಕಾಣುವುದು ಮತ್ತು ತಲೆ ನೋವು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಎಡೆಬಿಡದೆ ನಿರಂತರವಾಗಿ LCD ಪರದೆ (TV, ಗಣಕಯಂತ್ರ ಅಥವಾ ಮೊಬೈಲ್ ನದ್ದಾಗಿರಬಹುದು) ಯನ್ನು ನೋಡುವುದರಿಂದ ಕಣ್ರೆಪ್ಪೆಯನ್ನು ಬಡಿಯುವ ಗತಿ ನಿಧಾನವಾಗುತ್ತದೆ. ಇದರಿಂದ ಕಣ್ಣಿನ ಹೊರಭಾಗದ ದ್ರವ ಆರಿಹೋಗಿ ಈ ಮೇಲಿನ ರೋಗ ಲಕ್ಷಣಗಳು ಕಾಣಿಸುತ್ತವೆ. ಹವಾನಿಯಂತ್ರಿತ ಸ್ಥಳಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚು. ಅಲ್ಲದೆ LCD ಪರದೆಗಳ resolution ಹೆಚ್ಚಿದಷ್ಟು ಚಿತ್ರಗಳಲ್ಲಿನ ಹೆಚ್ಚಿನ ವಿವರಗಳನ್ನು ತೋರಿಸುವ ಭರದಲ್ಲಿ ಕಣ್ಣಿನ ನರಗಳ ಮೇಲೆ ಅಧಿಕ ಒತ್ತಡ ಉಂಟುಮಾಡುತ್ತವೆ. ಇದು ಗ್ಲಕೋಮದಂತಹ ಕಣ್ಣಿನ ಖಾಯಿಲೆಯ ಸಮೀಪಕ್ಕೆ ನಮ್ಮನ್ನು ಕೊಂಡೊಯ್ಯಬಹುದು!

೪. ಕಿವಿಯ ಮೇಲಿನ ದುಷ್ಪರಿಣಾಮಗಳು

ಕಿವಿಯ ಸ್ವಾಭಾವಿಕ ಕೇಳುವ ಕೇಳುವ ವಿಧಾನ ಹೀಗಿದೆ. ಶಬ್ದ ತರಂಗಗಳು ಕಿವಿಯ ಹಾಲೆಯ ಮೇಲೆ ಬಿದ್ದು, ಹಾಲೆಯು ಆ ತರಂಗಗಳನ್ನು ಕಿವಿಯ ಒಳಕ್ಕೆ ತಲುಪುವಂತೆ ಮಾಡಿ ಅದನ್ನು ಗ್ರಹಿಸಲು ಸಹಕರಿಸುತ್ತದೆ. ಅಧುನಿಕ ವಿಜ್ಞಾನ ಇದನ್ನು ಒಪ್ಪದಿದ್ದರೂ ಕೂಡ ಕೆಲವು ಪ್ರಾಣಿಗಳನ್ನು ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ. ಉದಾಹರಣೆಗೆ ಜಿಂಕೆ, ಹಸು ಮುಂತಾದ ಪ್ರಾಣಿಗಳು ತಮ್ಮ ಕಿವಿಯ ಹಾಲೆಯನ್ನು ಶಬ್ಧದ ದಿಕ್ಕಿಗೆ ತಿರುಗಿಸಿ ಅದನ್ನು ಆಲಿಸುತ್ತವೆ. ಇಂತಹ ಸ್ವಾಭಾವಿಕ ಕೇಳುವ ವಿಧಾನಕ್ಕೆ ವಿಪರೀತವಾಗಿ ಇಂದು ನಾವು ಸ್ಮಾರ್ಟ್ ಫೋನ್ ನಿಂದ ಹಾಡುಗಳನ್ನು ಕೇಳುವ ಭರದಲ್ಲಿ ಕಿವಿಯ ಒಳಗಡೆ ಸಾಧನವನ್ನು ತುರುಕಿಸಿ ಕಿವಿಗೆ ಕೇಳುವಂತೆ ಬಲವಂತ ಪಡಿಸುತ್ತಿದ್ದೇವೆ. ಅಷ್ಟಕ್ಕೂ ಈ ಹಾಡುಗಳನ್ನು ವಿಚಿತ್ರ ಸಂಯೋಜನೆಗಳ ಮೂಲಕ ರಚಿಸಿರುತ್ತಾರೆ. ಇವು ತಕ್ಷಣದ ಉನ್ಮಾದವನ್ನು ಬಿಟ್ಟರೆ ಬೇರೇನನ್ನೂ ನೀಡಲಾರವು. ನೆನಪಿರಲಿ ಉತ್ತಮವಾದ ಸಂಗೀತಕ್ಕೆ ಅದ್ಭುತವಾದ ಸಾಮರ್ಥ್ಯವಿದೆ. ಇಂತಹ ಸಂಗೀತ ಮನುಷ್ಯನ ವೈಖರಿಯಿಂದ ಹೊರಡಬೇಕೆ ವಿನಃ ಧ್ವನಿವರ್ಧಕಕ್ಕೆ ಈ ಶಕ್ತಿ ಇಲ್ಲ. ಇಂತಹ ಕರ್ಕಶವಾದ ಹಾಡುಗಳನ್ನು ಆಲಿಸಲು ಎಲ್ಲೆಂದರಲ್ಲಿ ಕಿವಿಗೆ earphone ಸಿಕ್ಕಿಸಿಕೊಂಡು ತಿರುಗುತ್ತಿರುವವರು ಇನ್ನು ೧೫-೨೦ ವರ್ಷಗಳ ನಂತರ ಶ್ರವಣ ಸಾಧನ (hearing aid) ಹಾಕಿಕೊಂಡು ತಿರುಗುವಂತಾದರೆ ಆಶ್ಚರ್ಯವೇನಿಲ್ಲ!
ಸ್ಮಾರ್ಟ್ ಫೋನ್ ನ ಇನ್ನಿತರ ಅಡ್ಡ ಪರಿಣಾಮಗಳಲ್ಲಿ ಪ್ರಮುಖವಾದದ್ದು ಅದರಲ್ಲಿ ಆಡಬಹುದಾದ ಆಟಗಳು. ಇವು ಮನುಷ್ಯನ ಅಮೂಲ್ಯ ಸಮಯವನ್ನು ತಿನ್ನುವುದಲ್ಲದೆ ಕ್ರಮೇಣ ಚಟಕ್ಕೆ ಕಾರಣವಾಗಬಹುದು. ಮಕ್ಕಳು ಕ್ರಮೇಣವಾಗಿ ವ್ಯಾಯಾಮವನ್ನು ನೀಡುವ ಆಟೋಟಗಳಿಂದ ವಿಮುಖರಾಗುತ್ತಿದ್ದಾರೆ. ಇದು ಅವರ ಬೌದ್ಧಿಕ ಹಾಗೂ ಮಾನಸಿಕ ವಿಕಾಸಕ್ಕೆ ಮಾರಕವಾಗಿದೆ. ವಸ್ತುಗಳ ಮೇಲೆ ಗಮನ ಕೇಂದ್ರಿಕರಿಸುವಲ್ಲಿ ಹಾಗೂ ವಿಷಯಗಳ ಬಗ್ಗೆ ಏಕಾಗ್ರತೆ ಹೊಂದುವಲ್ಲಿ ಸೋಲುತ್ತಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್ ಫೋನಿನ ಅತಿಯಾದ ವ್ಯಾಮೋಹ ಹಾಗೂ ಅವಲಂಬನೆ ಒಂದು ಚಟವಾಗಿ ಪರಿವರ್ತನೆಗೊಂಡು ದುರ್ವ್ಯಸನವಾಗಿ ಬೆಳೆಯುತ್ತಿರುವುದು ನಮ್ಮ ಸಮಾಜದ ದುರಂತ. ಕೆಲವೇ ವರ್ಷಗಳಲ್ಲಿ ಇದಕ್ಕೆಂದೇ ವಿಶೇಷ ಮಾನಸಿಕ ಚಿಕಿತ್ಸಾಲಯಗಳನ್ನು ತೆರೆಯಬೇಕಾಗಿ ಬರಬಹುದು. ಸದಾ ಒಳ್ಳೆಯದನ್ನೇ - ಸ್ವಾಭಾವಿಕವಾದುದನ್ನೇ ನೋಡಬಯಸುವ ಕಣ್ಣುಗಳಿಗೆ, ನೈಸರ್ಗಿಕ ಧ್ವನಿಗಳನ್ನೇ ಆಲಿಸಬಯಸುವ ಕಿವಿಗಳಿಗೆ, ದುಡಿದು ಹೊಟ್ಟೆಹೊರೆದುಕೊಳ್ಳಲೆಂದೇ ನಿರ್ಮಿತವಾದ ಕೈಗಳಿಗೆ ಸ್ಮಾರ್ಟ್ ಫೋನಿನ ವಿಪರೀತ ಬಳಕೆಯ ಮೂಲಕ ಹಿಂಸೆ ನೀಡುವುದು ನ್ಯಾಯವೇ? ದಯವಿಟ್ಟು ಯೋಚಿಸಿ. ಇಷ್ಟೇ ಅಲ್ಲದೆ ಮೊಬೈಲ್ ಫೋನಿನ ತರಂಗಗಳಿಂದ ಉಂಟಾಗುವ ಮೆದುಳಿನ ಗಡ್ಡೆ, ಕ್ಯಾನ್ಸರ್ ಇತ್ಯಾದಿ ಸಂಭವನೀಯತೆಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿಲ್ಲ. ಇದನ್ನು ಪ್ರಮಾಣೀಕರಿಸುವ ಅನೇಕ ಸಂಶೋಧನಾ ಲೇಖನಗಳು ಈಗಾಗಲೇ ಪ್ರಕಟಗೊಂಡಿವೆ.
ಕೊನೆಯ ಮಾತು : ಇತ್ತೀಚಿಗೆ ಹತ್ತಿರದ ಇಂಜಿನಿಯರಿಂಗ್ ಕಾಲೇಜಿಗೆ ಆಹ್ವಾನಿತ ಉಪನ್ಯಾಸಕನಾಗಿ ಹೋದಾಗ "ಸ್ಮಾರ್ಟ್ ಫೋನ್ "ಗಳ ಕುರಿತು ಆಡಿದ ಮಾತುಗಳು ನೆನಪಿಗೆ ಬರುತ್ತಿವೆ. "ಸ್ಮಾರ್ಟ್ ಫೋನ್ " ಹೊಂದಿರದ ನಾನು ಅಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ, "ನನ್ನ ಫೋನ್ ಸ್ಮಾರ್ಟ್ ಅಲ್ಲ, ಏಕೆಂದರೆ ನಾನು ಸ್ಮಾರ್ಟ್!!"


March 5, 2015

ಹಿಂದೂ ಧರ್ಮವೇ ಅಥವಾ ಭಾರತ ಧರ್ಮವೇ ?



||ಶ್ರೀ ಗುರುಭ್ಯೋ ನಮಃ||

ನಾವೇಕೆ "ಹಿಂದೂ" ಎಂಬ ಪದದ ಬಗ್ಗೆ ಅಷ್ಟೊಂದು ಮೋಹಿತರಾಗಿದ್ದೇವೆಯೋ ಗೊತ್ತಿಲ್ಲ ! ಪಾಶ್ಚಿಮಾತ್ಯರು ಸಿಂಧೂ ನದಿಯ ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದುದರಿಂದ ಅಲ್ಲದೆ ಅವರಿಗೆ ಸಿಂಧು ಎಂದು ಉಚ್ಚರಿಸಲು ಬರದೆ ಇದ್ದುದರಿಂದ "ಹಿಂದೂ" ಎಂಬ ಪದದ ಜನನವಾಯಿತು. ಆಮೇಲೆ ಇಂಡಸ್ ಆಗಿ, ಕೇವಲ ಕ್ರಿ. . ರಿಂದ ಈಚೆಗೆ ಇಂಡಿಯಾ ಆಗಿದೆ. ಸಂಸ್ಕೃತದಲ್ಲಿ "ಭಾರತ" ಅಥವಾ "ಭರತ ವರ್ಷ" ಎಂದು ಪ್ರಾಕ್ತನ ಕಾಲದಿಂದಲೂ ಪ್ರಸಿದ್ದವಾಗಿರುವ ದೇಶ ಬ್ರಿಟಿಷರ ಓಡೆದು ಆಳುವ ನೀತಿಯ ಫಲವಾಗಿ ಹಿಂದುಸ್ತಾನವಾಯಿತು. ಹೀಗಿರುವಾಗ ದೇಶದಲ್ಲಿರುವವರನ್ನು "ಹಿಂದೂ" ಎಂದು ಕರೆಯಲು ಹೇಗೆ ಸಾಧ್ಯ? ಅವರು ಆಚರಿಸುವ ಧರ್ಮ ಹಿಂದೂ ಧರ್ಮವಾಗಲು ಹೇಗೆ ಸಾಧ್ಯ? ಹಾಗಿದ್ದರೆ ಕೋಟ್ಯಾಂತರ ವರ್ಷಗಳಿಂದ ಉಳಿದು ಬೆಳೆದಿರುವ ಸನಾತನ ಧರ್ಮವು ಕೇವಲ ೩೦೦-೪೦೦ ವರ್ಷಗಳ ಹಿಂದೆ ಬಳಕೆಗೆ ಬಂದ ಶಬ್ಧದಿಂದ ಗುರುತಿಸಲ್ಪಡಬೇಕೇ? ವಿದೇಶೀ ಆಕ್ರಮಣಕಾರರು ಸಿಂಧೂ ನದಿಯ ದಿಕ್ಕಿನ ಬದಲು ಪೂರ್ವದಿಂದ ಭಾರತವನ್ನು ಪ್ರವೇಶಿಸಿದ್ದರೆ ನಾವು "ಬ್ರಹ್ಮಪುತ್ರರೂ", ನಮ್ಮ ದೇಶವು "ಬ್ರಹ್ಮಸ್ಥಾನ"ವೂ ಆಗಿರುತ್ತಿತ್ತಲ್ಲವೇ!

ಹೆಚ್ಚಿನ ಬುದ್ಧಿ ಜೀವಿಗಳಿಗೆ "ಹಿಂದೂ" ಹಾಗೂ "ಹಿಂದೂ ಧರ್ಮ" ಎಂಬ ಪದಗಳ ಬಗ್ಗೆ ಅಲರ್ಜಿ ಇದೆ. ಅದ್ದರಿಂದ ಭಾರತದಲ್ಲಿರುವ ಸನಾತನ ಧರ್ಮಕ್ಕೆ "ಭಾರತ ಧರ್ಮ" ಎಂಬ ಪದವೇ ಹೆಚ್ಚು ಸೂಕ್ತವಾಗಿ ಕಾಣುತ್ತದೆ. ಭಾರತದಲ್ಲಿರುವವರು ಭಾರತೀಯರು ಹಾಗೂ ಭಾರತ ಧರ್ಮೀಯರು. ದೇಶದಲ್ಲಿ ಹಲವಾರು ಧರ್ಮಗಳು ಹುಟ್ಟಿ ಬೆಳೆದಿವೆಯಾದರೂ ಪ್ರಸಕ್ತ ಇರುವ ಬೌದ್ಧ, ಜೈನ, ಸಿಕ್ಖ, ವೀರಶೈವರು ತಮ್ಮನ್ನು ಭಾರತ ಧರ್ಮದಿಂದ ಹೊರಗಿನವರೆಂದು ಭಾವಿಸಿಲ್ಲ, ಅಲ್ಲದೆ ಹಾಗೆ ನಡೆದುಕೊಂಡೂ ಇಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ "ವಿರಾಟ್ ಹಿಂದೂ ಸಮಾವೇಶ" ಗಳ ಸಂಚಾಲಕರು ಓರ್ವ ಜೈನರು ಎನ್ನುವುದು ಇದಕ್ಕೆ ಪುಷ್ಟಿ ನೀಡುತ್ತದೆ. ನಮ್ಮ ಸನಾತನ ಭಾರತ ಧರ್ಮವು ಎಲ್ಲ ಧರ್ಮಗಳನ್ನೂ ಪೋಷಿಸಿಕೊಂಡುಬಂದಿರುವುದೇ ಇದಕ್ಕೆ ಕಾರಣ. ನಮ್ಮ ಸನಾತನ ಭಾರತ ಧರ್ಮ ಪ್ರತಿಪಾದಿಸುವ ವೇದಗಳು, ಉಪನಿಷತ್ತುಗಳು, ಪುರಾಣಗಳು, ಭಗವದ್ಗೀತೆ ಇತ್ಯಾದಿ ಪವಿತ್ರ ಗ್ರಂಥಗಳು ಕೇವಲ ಭಾರತೀಯರಿಗೆ ಮಾತ್ರ ಮಾರ್ಗದರ್ಶಕವಾಗಿರದೆ ಸಮಸ್ತ ವಿಶ್ವಕ್ಕೆ ದಾರಿದೀಪವಾಗಿವೆ. ಅದಕ್ಕಾಗಿಯೇ 'ವಸುಧೈವ ಕುಟುಂಬಕಂ' ( ಭೂಮಿಯಲ್ಲಿರುವವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು) ನಂತಹ ಉಕ್ತಿಗಳನ್ನು ಇದರಲ್ಲಿ ಕಾಣಬಹುದು.
ಸನಾತನ ಭಾರತದಲ್ಲಿದ್ದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವರ್ಣಗಳನ್ನು ಕೆಲವರು ಜಾತಿ ಪದ್ಧತಿ ಎಂದು ಬೊಟ್ಟು ಮಾಡಿ ತೋರಿಸುತ್ತಾರೆ. ಅಲ್ಲದೆ ಅದಕ್ಕೆ ಪುರುಷ ಸೂಕ್ತದ ಆಧಾರವನ್ನು ನೀಡುತ್ತಾರೆ. ನಿಜವಾಗಲೂ ಇವರ್ಯಾರೂ ಸಂಸ್ಕ್ರತ ಪಂಡಿತರೂ ಅಲ್ಲ ಅಥವಾ ಬ್ರಾಹ್ಮೀ (ವೇದಗಳು ಬರೆಯಲ್ಪಟ್ಟ ಭಾಷೆ) ಗಂಧಗಾಳಿ ತಿಳಿದವರೂ ಅಲ್ಲ. ಪುರುಷ ಸೂಕ್ತ ಹೇಳುತ್ತದೆ , "ನಾವು ಯಾರನ್ನು ಪುರುಷ (ಇದು ಲಿಂಗ ಸೂಚಕ ಅಲ್ಲ, ಮನುಷ್ಯ ಎಂದರ್ಥ) ನೆಂದು ಕರೆಯುತ್ತೇವೆಯೋ ಆತನ ಮುಖದಲ್ಲಿ ಜ್ಞಾನವಿದೆ (ಬ್ರಹ್ಮ ಜ್ಞಾನ ಅಂದರೆ ಬ್ರಾಹ್ಮಣ), ಬಾಹುಗಳಲ್ಲಿ ಶೌರ್ಯವಿದೆ (ಕ್ಷತ್ರಿಯ), ಊರುವಿನ ಭಾಗದಲ್ಲಿ ತನ್ನ ವ್ಯವಹಾರಗಳನ್ನು ನಡೆಸುತ್ತಾನೆ (ವೈಶ್ಯ) ಹಾಗೂ ಪಾದಗಳ ಸಹಾಯದಿಂದ ಕೆಲಸ ಮಾಡಿಕೊಳ್ಳುತ್ತಾನೆ (ಶೂದ್ರ)" ಎಂದು. ಇದಕ್ಕೆ ವಿಪರೀತ ಅರ್ಥ ಕಲ್ಪಿಸಿ ಭಾರತದಲ್ಲಿ ಹಲವಾರು ಜಾತಿ, ವರ್ಗಗಳನ್ನು ಸೃಷ್ಟಿಸಲಾಯಿತು. ನೀವೇ ನೋಡಿ, ಭಾರತದಲ್ಲಿ ಎಲ್ಲಾದರೂ ಕ್ಷತ್ರಿಯ ಎಂಬ ಜಾತಿ ಇದೆಯೇ . ರಾಮನನ್ನೋ, ಸೋಮನನ್ನೋ ಸೇರಿಸಿಕೊಂಡು ಹೊಸ ಕ್ಷತ್ರಿಯ ಪಂಗಡಗಳನ್ನು ಸೃಷ್ಟಿಮಾಡಿಕೊಂಡಿರಬಹುದು. ಆದರೆ ದೇಶಕ್ಕಾಗಿ ಹೋರಾಡುವ ಎಲ್ಲರನ್ನೂ ಕರೆಯಲು ನಮ್ಮಲ್ಲಿ ಕ್ಷತ್ರಿಯ ಎಂಬ ಶಬ್ಧಕ್ಕಿಂತ ಉತ್ತಮ ಅಕ್ಷರ ಸಂಯೋಜನೆ ಸಿಗಲಾರದು. ಹಾಗೆಯೇ ವ್ಯಾಪಾರಿಗಳಿಗೆ ವೈಶ್ಯರೆಂಬ ಅಭಿದಾನ ಸೂಕ್ತ ಎನ್ನಿಸಿದರೆ ಇನ್ನೊಬ್ಬರ ಕೈಕೆಳಗೆ ದುಡಿಯುವವರೆಲ್ಲರೂ ಶೂದ್ರರೆ (ನನ್ನನ್ನೂ ಸೇರಿಸಿ). ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಇರುವ ಶಬ್ಧ "ಬ್ರಾಹ್ಮಣ". ಚತುರ್ವರ್ಣಗಳಲ್ಲಿ ಬ್ರಾಹ್ಮಣ ಎಂಬುದು ಮಾತ್ರ ಜಾತಿಯಾಗಿ ಉಳಿದುಕೊಂಡಿದೆ. ಇಂತಹ ಪಂಗಡ ಹೇಗೆ ಹುಟ್ಟಿಕೊಂಡಿತು ಎಂಬುವುದೇ ಬಹಳ ಕುತೂಹಲಕರ ವಿಷಯ. ನಿಜವಾಗಿ ಬ್ರಾಹ್ಮಣನೆಂದರೆ, ಸತತ ಅಧ್ಯಯನಗಳ ಮೂಲಕ ಬ್ರಹ್ಮಜ್ಞಾನವನ್ನು ಸಂಪಾದಿಸಿ ಅದನ್ನು ಲೋಕಕಲ್ಯಾಣಕ್ಕಾಗಿ ವ್ಯಯಿಸುವವನು ಎಂದರ್ಥ. ಆದರೆ ಇಂದು ಬ್ರಾಹ್ಮಣ ಜಾತಿ ಎಂದು ಹೇಳಿಕೊಂಡು ಅವರ ಸಂತಾನವೆಲ್ಲ ಬ್ರಾಹ್ಮಣ, ಅವರು ಶ್ರೇಷ್ಠ ಎಂಬ ಸುಳ್ಳುಗಳನ್ನೇ ಬೆಳೆಸಲಾಗುತ್ತಿದೆ. ಜಾತಿಯಲ್ಲಿ ಹುಟ್ಟಿದ ಸೈನಿಕ, ವ್ಯಾಪಾರೀ, ಕಾರಕೂನ ಎಲ್ಲರೂ ಬ್ರಾಹ್ಮಣರೇ

https://images-blogger-opensocial.googleusercontent.com/gadgets/proxy?url=http%3A%2F%2F1.bp.blogspot.com%2F-w5nhGbfPAOY%2FVP5yb9KeKFI%2FAAAAAAAAEJk%2FMtB7KVXA65g%2Fs1600%2Fimages.jpg&container=blogger&gadget=a&rewriteMime=image%2F*

ಇನ್ನು ಇತರ ಜಾತಿಗಳ ಉಗಮದ ಬಗ್ಗೆ ಕನ್ನಡ ಸಾರಸ್ವತ ಲೋಕದ ಅತ್ಯತ್ತಮ ಸಾಹಿತಿಯೋರ್ವರ ಅಭಿಪ್ರಾಯಗಳು ಹೀಗಿವೆ. ಹಿಂದೆ ರಾಜರ ಆಳ್ವಿಕೆಯಲ್ಲಿ ಪ್ರತಿಯೊಂದು ಉದ್ಯೋಗ ಮಾಡುವ ಆಯಾ ಜನರ ಗುಂಪುಗಳೇ ಮುಂದೆ ಜಾತಿ - ವರ್ಗಗಳಾಗಿ ಮಾರ್ಪಾಡು ಹೊಂದಿದವು. ಉದಾಹರಣೆಗೆ ರಜಕ, ಗೊಲ್ಲ, ಅಕ್ಕಸಾಲಿ, ಚಮ್ಮಾರ, ಕ್ಷೌರಿಕ, ಶ್ಯಾನುಭೋಗ, ಪೂಜಾರಿ, ನೇಕಾರ, ಬಡಗಿ, ಬೆಸ್ತ, ಬೇಡ ... ಇತ್ಯಾದಿ. ರಾಜ್ಯದ ಪ್ರತಿಯೊಂದು ಕೆಲಸವನ್ನೂ ನಿರ್ದಿಷ್ಟ ಜನರ ಗುಂಪುಗಳು ಮಾಡುತ್ತಿದ್ದ ಕಾರಣ ಅಂತಹ ವರ್ಗಗಳು ಆಯಾ ಕೆಲಸದ ಹೆಸರಿನಿಂದ ಕರೆಯಲ್ಪಟ್ಟವು. ಮುಂದೆ ವಿವಾಹದ ಸಂದರ್ಭದಲ್ಲಿ ಜನರು ಆಯಾ ವರ್ಗಗಳ ವಧುವಿಗೇ ಹೆಚ್ಚಿನ ಆದ್ಯತೆಯನ್ನು ಕೊಡಲಾರಂಭಿಸಿದರು. ಇದಕ್ಕೆ ಆಯಾ ವರ್ಗಗಳ ಕಾರ್ಯ-ಕೌಶಲಗಳಲ್ಲಿನ ವ್ಯತ್ಯಾಸವೇ ಕಾರಣವಾಗಿತ್ತು. ಉದಾಹರಣೆಗೆ ಬೆಸ್ತರ ಮನೆಯಲ್ಲಿ ಬೇಡರ ಹುಡುಗಿ ಯಾವ ಉದ್ಯೋಗಕ್ಕೆ ಸಹಕಾರಿಯಾದಾಳು? ಹಾಗಾಗಿ ಉದ್ಯೋಗ ಪ್ರಧಾನ ಸಮಾಜದಲ್ಲಿ ಇಂತಹ ಅಂತರ್-ವರ್ಗೀಯ ಮದುವೆಗಳನ್ನು ಜನ ಇಷ್ಟ ಪಡದ ಕಾರಣ ಅವುಗಳೇ ಮುಂದೆ ಜಾತಿಗಳಾಗಿ ಪರಿವರ್ತನೆ ಹೊಂದಿರಬಹುದು. ವಾದಕ್ಕೆ ಪುಷ್ಟಿ ಎಂಬಂತೆ ಇಂದಿನ ಸಮಾಜದಲ್ಲಿ ಕೂಡ ಉದ್ಯೋಗಸ್ಥ ಪುರುಷರು ತಮ್ಮ ಮಾದರಿಯ ಉದ್ಯೋಗ ಮಾಡುವ ಸ್ತ್ರೀಯರನ್ನು ಮದುವೆ ಆಗಬಯಸುತ್ತಿರುವುದು! ಹಾಗಿದ್ದರೆ ಜಾತಿ ಪದ್ಧತಿ ಬೇಕೇ? ಕತ್ತೆಗಳು ಕತ್ತೆ ಜಾತಿಗೆ ಸೇರಿದರೆ, ಮಂಗಗಳು ಮಂಗನ ಜಾತಿ, ಹಾಗಿದ್ದ ಮೇಲೆ ಮಾನವರೆಲ್ಲ "ಮಾನವ ಜಾತಿ"ಯವರಲ್ಲವೇ? ಮೊದಲು "ಭಾರತ ಧರ್ಮ"ವು ಜಾತಿಗಳ ಸಂಕೋಲೆಯಿಂದ ಮುಕ್ತವಾಗಬೇಕು. ಆಗ ಮಾತ್ರ ಪರಧರ್ಮೀಯರು ನಮ್ಮನ್ನು ಗೌರವಿಸಬಹುದು. ತಾವೂ ಕೂಡ ಭಾರತ ಧರ್ಮೀಯರೆಂದು ಕರೆದುಕೊಳ್ಳಬಹುದು. ಇನ್ನು ಇಸ್ಲಾಂ ಧರ್ಮದವರು ದಿನವೂ ಆಲಾಪಿಸುವ ಪ್ರಾರ್ಥನೆಗಳು ಸಾಮಗಾನ ಆಧಾರಿತ, ಬೈಬಲ್ ಬರವಣಿಗೆಗಳಿಗೆ ಶ್ರೀಮದ್ ಭಗವದ್ಗೀತೆಯೇ ಆಧಾರ. ಇನ್ನು ಸಮಸ್ತ ಜಗತ್ತಿನ ಸಕಲ ಜ್ಞಾನಗಳಿಗೂ ವೇದವೇ ಆಧಾರ. ಹಾಗಿದ್ದ ಮೇಲೆ ಸಮಸ್ತ ಮಾನವ ಕುಲ ಒಂದೇ ಜಾತಿ ಅಂತ ಅನಿಸುವುದಿಲ್ಲವೇ

https://images-blogger-opensocial.googleusercontent.com/gadgets/proxy?url=http%3A%2F%2F1.bp.blogspot.com%2F--1Z5pCWunLU%2FVP5yjrzkdFI%2FAAAAAAAAEJs%2F0ws8E3UGczA%2Fs1600%2Fimages%252B%281%29.jpg&container=blogger&gadget=a&rewriteMime=image%2F*

ಸ್ನೇಹಿತರೇ, ನಾವೆಲ್ಲಾ ಒಂದೇ ಆದಿ ದಂಪತಿಗಳಿಗೆ (ಪ್ರಕೃತಿ + ಪುರುಷ) ಹುಟ್ಟಿದ ಸಂತಾನಗಳು. ಖಂಡಿತವಾಗಲೂ ನಮ್ಮೆಲ್ಲರ ಸಾವಿರಾರು ಹಿಂದಿನ ತಲೆಮಾರಿನವರು ಅಣ್ಣ-ತಮ್ಮಂದಿರಾಗಿದ್ದವರು. ಹಾಗಾಗಿ ವಿಶ್ವದ ಪ್ರತಿಯೊಬ್ಬರೂ ಪರಸ್ಪರ ಸಂಬಂಧಿಕರೇ ಅಲ್ಲವೇ .... ಯೋಚಿಸಿ. ನಾವು ಆಚರಿಸುವ ಧರ್ಮ, ಪದ್ದತಿಗಳು ಬೇರೆ ಬೇರೆ ಇರಬಹುದು. ಅವು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿರಲಿ. ಮೊದಲು ಮಾನವ ಧರ್ಮವನ್ನು ಪಾಲಿಸಿ ಮನುಷ್ಯರಾಗೋಣ. ಪ್ರಕೃತಿಯೊಂದಿಗೆ, ಅದಕ್ಕೆ ಪೂರಕವಾಗಿ ಬದುಕನ್ನು ನಡೆಸೋಣ. ವೇದದಲ್ಲಿ ಹೇಳಿರುವಂತೆ ಹೇಳಿರುವಂತೆ "ಕೃಣ್ವಂತೋ ವಿಶ್ವಮಾರ್ಯಂ" ಅಂದರೆ ವಿಶ್ವವನ್ನು ಸಮಸ್ತ ಜೀವಿಗಳಿಗೂ ವಾಸಯೋಗ್ಯ ಉನ್ನತ ಸ್ಥಾನವನ್ನಾಗಿ ಮಾಡೋಣ. ಇನ್ನು ಯಾರಾದರೂ ನಮ್ಮ ಜಾತಿ-ಧರ್ಮದ ವಿಷಯ ಪ್ರಸ್ತಾಪ ಮಾಡಿದರೆ ನನ್ನದು "ಮಾನವ ಜಾತಿ, ಭಾರತ ಧರ್ಮ" ಎಂದು ಎದೆ ತಟ್ಟಿ ಹೇಳಲು ಸಾಧ್ಯವೇ? ದಯವಿಟ್ಟು ಚಿಂತಿಸಿ.

ಝಕೀರ್ ನಾಯಕ್ ಅವರ ವಿಡಿಯೋವನ್ನು ನೋಡಿ ...