August 2, 2017

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂಶೋಧನಾತ್ಮಕ ಇತಿಹಾಸ

ನನ್ನ ಅಜ್ಜ ಡಾ|| ಎಂ.ಎಸ್ ಅಚ್ಯುತ ಶರ್ಮರು ಬರೆದ "ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂಶೋಧನಾತ್ಮಕ ಇತಿಹಾಸ ಹಿನ್ನಲೆ ಮತ್ತು ಮರೆಯಾದ ವಿನಾಯಕ ದೇವರು" ಪುಸ್ತಕದ ಪ್ರತಿ ಇಲ್ಲಿದೆ. ಓದಿ ಆನಂದಿಸಿ!!

https://archive.org/details/KukkeSriSubrahmanyaKshetra

July 25, 2017

ತಪ್ತ ಮುದ್ರಾಧಾರಣೆ ಲೇಖನದ ಬಗೆಗಿನ ಪ್ರತಿಕ್ರಿಯೆ ಮತ್ತು ನನ್ನ ಪ್ರತಿಕ್ರಿಯೆ

ಶ್ರೀ ಶ್ಯಾಮ ಉಪಾಧ್ಯಾಯ ಎನ್ನುವ ಮಹಾನುಭಾವರು ನನ್ನ ​ತಪ್ತ ಮುದ್ರಾಧಾರಣೆ ಲೇಖನದ ಬಗ್ಗೆ ಪ್ರತಿಕ್ರಿಯೆ ನೀಡಿರುತ್ತಾರೆ. ಅದನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಅದರ ಬಳಿಕ ನನ್ನ ವಾದಕ್ಕೆ ಸಮರ್ಥನೆಯನ್ನೂ ನೀಡಿದ್ದೇನೆ. 

ತಪ್ತ ಮುದ್ರಾಧಾರಣೆ ಬಗ್ಗೆ ನಿಮ್ಮ ಲೇಖನವನ್ನು ಓದಿದೆ. ವೈಜ್ಞಾನಿಕ ಕಾರಣವನ್ನು ತಿಳಿದವರು ಹೇಳಬೇಕೆಂದ್ದೀರಿ. ನಿಮಗೆ ಗೊತ್ತಿರ ಬಹುದು ಜಡವಾಗಿರುವ ದೇಹಕ್ಕೆ ಉದಾ ಪಾರ್ಶ್ವವಾಯು ಪೀಡಿತರಿಗೆ ಹಳ್ಳಿಯ ಕಡೆ ಬಿಸಿಯಾದ ಕಬ್ಬಿಣವನ್ನು ಮುಟ್ಟಿಸಿ ಶಕ್ತಿ ಬರುವಂತೆ ಮಾಡುತ್ತಾರೆ. ಇದನ್ನೇ ಆಧುನಿಕ ವಿಜ್ಞಾನಿಗಳು ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಎಂದು ಕರೆಯುತ್ತಾರೆ. ನಮ್ಮ ದೇಹದ ಯಾವುದೇ ಭಾಗವು ಜಡವಾಗಿದ್ದರೆ ನೋವಿನ ಚಿಕಿತ್ಸೆಯ ಮೂಲಕ ಗುಣಪಡಿಸುತ್ತಾರೆ. ನನ್ನ ಅನಿಸಿಕೆಯ ಪ್ರಕಾರ ಮುದ್ರಾಧಾರಣೆಯ ಹಿಂದಿರುವ ವೈಜ್ಞಾನಿಕ ಕಾರಣವು ಇದೇ. ಆದರೂ ಆರೋಗ್ಯವಂತರು ಸಹ ಮುದ್ರಾಧಾರಣ ಮಾಡಿಸಿಕೊಳ್ಳುತ್ತಾರಲ್ಲ ಏಕೆ? ದೇಹ ಆರೋಗ್ಯದಿಂದಿದ್ದರೆ ಸಾಕೆ ಮನಸ್ಸಿಗೆ ಆರೋಗ್ಯ ಬೇಡವೆ. ಮಾನವರಾದ ನಮ್ಮ ಮನಸ್ಸಿನಲ್ಲಿ ಅನೇಕ ಬಗೆಯ ಕಲ್ಮಶಗಳಿವೆ. ಅವುಗಳನ್ನೆಲ್ಲ ದೂರ ಮಾಡಿ ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡುವ ದ್ಯೋತಕವಾಗಿ ಮುದ್ರಾಧಾರಣೆಯನ್ನು ಮಾಡುತ್ತೇವೆ. ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ ಎಂದು‌. ಅದಕ್ಕೆ ತಪ್ತ ಮುದ್ರಾಧಾರಣೆ ಎಂದು ಹೆಸರು. ಏಕಾದಶಿಯಂದು ಉಪವಾಸ ಮಾಡಿ ದೇಹಕ್ಕೆ ಸಾತ್ವಿಕ ರೀತಿಯ ದಂಡನೆಕೊಡುವುದೆ ತಪ್ತ ಮುದ್ರಾಧಾರಣೆಯ ಉದ್ದೇಶ. ಪಾಪವು ಪ್ರಯಶ್ಚಿತ್ತವೆಂಬ ಅಗ್ನಿಯಿಂದ ದಹಿಸಿ ಹೋಗುತ್ತದೆ. ಮನಸ್ಸು ಹಾಗು ದೇಹ ಶುದ್ಧವಾಗುತ್ತದೆ. ತಪ್ತ ಮುದ್ರಾಧಾರಣೆ ಮಾಡಿಸಿಕೊಂಡವರಿಗೆ ಗೊತ್ತು ಅದರ ಅನುಭವ.
ಇನ್ನು ನೀವು ಕೊಟ್ಟಿರುವ ಕಾರಣ ಕಪೋಲ ಕಲ್ಪಿತ. ಇದಕ್ಕೆ ಎಲ್ಲಾದರು ಸಾಕ್ಷಿಯಿದೆಯೆ ತೋರಿಸಿಕೊಡಿ. ಹಾಗೆಯೆ ತಪ್ತ ಮುದ್ರಾಧಾರಣೆಯೆಂದರೆ ಆಡುಭಾಷೆಯಲ್ಲಿ ಸೌಟನ್ನು ಕಾಯಿಸಿ ಇಡುವುದು ಎಂದಿದ್ದೀರಿ. ಯಾರು ಹೇಳಿದರು ಸ್ವಾಮಿ ನಿಮಗೆ ಇದನ್ನು. ಆಡು ಭಾಷೆಯಲ್ಲಿ ಈ ಪದವೇ ಇಲ್ಲ. ಇದು ಸಂಸ್ಕೃತದ ಪದ. ಹೆಸರೇ ಸೂಚಿಸುವಂತೆ ಪಾಪದ ಪ್ರಾಯಶ್ಚಿತ್ತ.
ಇನ್ನು ಇದನ್ನು ಕೇವಲ ಒಂದು ಜನಾಂಗವನ್ನು ಗುರುತಿಸಲಿಕ್ಕೆ ಮಾಡಿದ್ದಲ್ಲ. ದೃಢವಾದ ವೈಷ್ಣವ ಭಕ್ತಿಯ ಅಪೇಕ್ಷೆ ಯಾರಿಗಿದೆಯೋ ಅವರೆಲ್ಲರು ಮುದ್ರಾಧಾರಣೆಯನ್ನು ಮಾಡಿಕೊಳ್ಳಲೇಬೇಕು. ಇದು ಕೇವಲ ಬ್ರಾಹ್ಮಣ ಸಂಸ್ಕಾರವಲ್ಲ. ಉಡುಪಿಯಲ್ಲಿ ಸಾರ್ವಜನಿಕವಾಗಿ ತಪ್ತ ಮುದ್ರಾಧಾರಣೆ ಮಾಡುತ್ತಾರೆ. ಇನ್ನು ಶಂಖ ಚಕ್ರಗಳನ್ನು ಕೇವಲ ಕಾಯಿಸಿ ಇಡುವುದಲ್ಲ. ಅಂದು ಸುದರ್ಶನ ಹೋಮ ಮಾಡಿ ಅದರ ಜ್ವಾಲೆಯಲ್ಲಿ ಶಂಖ ಚಕ್ರಗಳನ್ನು ಇಟ್ಟು ಮುದ್ರಾಧಾರಣ ಮಾಡಿಕೊಳ್ಳಬೇಕೆಂಬ ಶಾಸ್ತ್ರವಿದೆ. ವಾದಿರಾಜರು ಸಹ ತಮ್ಮ ಕೀರ್ತನೆಗಳಲ್ಲಿ ತಪ್ತ ಸುದರ್ಶನ ಶಂಖವ ಭುಜಯುಗದೊಳು ಧರಿಸಿ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಇದು ಮಾಧ್ವರಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಾಗು ಶ್ರೀವೈಷ್ಣವ ಬ್ರಾಹ್ಮಣರು ಸಹ ಈ ಸಂಸ್ಕಾರವನ್ನು ಮಾಡುತ್ತಾರೆ. ಅವರು ಶಿಶುವು ತಾಯಿಯ ಉದರದಲ್ಲಿರುವಾಗಲೆ ಈ ಸಂಸ್ಕಾರವಾಗಬೇಕೆಂದು ಪಾಯಸದಲ್ಲಿ ಕಾಯಿಸಿದ ಶಂಖ ಚಕ್ರಗಳ ಚಿಹ್ನೆಗಳನ್ನು ಅದ್ದಿ ಗರ್ಭಿಣಿ ಹೆಂಗಸರಿಗೆ ಈ ಪಾಯಸವನ್ನು ಸೇವಿಸಲು ಕೊಡುತ್ತಾರೆ. ಮಗುವು ಹುಟ್ಟಿದಾಗಲೆ ವೈಷ್ಣವ ಸಂಸ್ಕಾರವನ್ನು ಪಡೆದು ಬರುತ್ತದೆ ಎಂಬ ನಂಬಿಕೆ‌. ಇನ್ನು ಭಾಗವತ ಸಂಪ್ರದಾಯದ ಬ್ರಾಹ್ಮಣರಲ್ಲು ಈ ಸಂಸ್ಕಾರವಿದೆಯೆಂದು ಕೇಳಲ್ಪಟ್ಟಿದ್ದೇನೆ. ಉಡುಪಿಯಲ್ಲಿ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾಚಾರ್ಯರು ನಾರಾಯಣ ಅಷ್ಟಾಕ್ಷರ ಜಪಾಸಕ್ತ ಬ್ರಾಹ್ಮಣರನ್ನು ಭೇಟಿ ಮಾಡಿ ಅವರಿಗೆ ಊರ್ಧ್ವ ಪುಂಡ್ರಧಾರಣೆ ಪಂಚಮುದ್ರಾಂಕನ ನಾರಾಯಣ ಅಷ್ಟಾಕ್ಷರ ಹಾಗು ವಿಷ್ಣು ಪಂಚಾಯತನ ಪೂಜೆಯನ್ನು ಬೋಧಿಸಿದರೆಂದು ಶಂಕರವಿಜಯದಲ್ಲಿ ಉಲ್ಲೇಖವಿದೆ. ಆದ್ದರಿಂದ ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ. ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವವರು ಈ ಹಿನ್ನೆಲೆಯನ್ನರಿತೆ ಪರಂಪರಾಗತವಾಗಿ ಈ ಶುದ್ಧ ಸಂಸ್ಕಾರವನ್ನು ಮಾಡಿಸಿಕೊಂಡು ಪುನೀತರಾಗುತ್ತಾರೆ ಹೊರತು ಕುರುಡಾಗಿ ಈ ಆಚರಣೆಯನ್ನು ಮಾಡುವುದಿಲ್ಲ.
ಭಸ್ಮಧಾರಣೆಗು ಮುದ್ರಾಧಾರಣೆಗು ಸಂಬಂಧವಿಲ್ಲ. ಗೋಪಿ ಚಂದನ ಧರಿಸುವ ಬ್ರಾಹ್ಮಣರು ಸಹ ಯಜ್ಞಾನಂತರ ಅದರಲ್ಲಿ ಉಳಿದ ಹುತ ಭಸ್ಮವನ್ನು ಹಣೆಯಲ್ಲಿ ಧರಿಸುತ್ತಾರೆ. ಆದರೆ ಅಡ್ಡವಾಗಿ ಮೂರು ಪಟ್ಟಿ ಧರಿಸುವುದಿಲ್ಲ. ಗಂಡಸರು ಭ್ರೂಮಧ್ಯೆ ಚುಕ್ಕೆಯನ್ನಿಡುತ್ತಾರೆ. ಹೆಂಗಸರಿಗೆ ಕತ್ತಿನ ಮಧ್ಯೆಯಿರಿಸುತ್ತಾರೆ. ಹಾಗು ಅಡ್ಡನಾಮವನ್ನಿರಿಸುವ ಬ್ರಾಹ್ಮಣರು ಸಹ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ವಟುವಿಗೆ ವೇದಾಧ್ಯಯನದ ಆರಂಭದ ದ್ಯೋತಕವಾಗಿ ಉದ್ದ ನಾಮವನ್ನಿಡುತ್ತಾರೆ. ಊರ್ಧ್ವ ಪುಂಡ್ರವು ನಾವು ಊರ್ಧ್ವ ಗತಿಯನ್ನು ಹೊಂದಬೇಕೆಂಬ ಲಾಂಛನವಾಗಿದೆ‌. ಹಾಗು ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ. ಅದನ್ನು ಜಾಗೃತಗೊಳಿಸಲೆಂದೆ ಊರ್ಧ್ವ ಪುಂಡ್ರವನ್ನು ಧರಿಸುತ್ತಾರೆ.

ಇನ್ನು ಯಾವುದೇ ಸಮುದಾಯದ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇರಲೇಬೇಕೆಂಬ ನಿಯಮವಿಲ್ಲ. ಇಲ್ಲಿ ನಂಬಿಕೆ ಹಾಗು ಭಕ್ತಿ ಪ್ರಧಾನವಾಗಿರುತ್ತದೆ.

ನನ್ನ ಸಮರ್ಥನೆ:

ವಾದ ೧: "ಪಾರ್ಶ್ವವಾಯು ಪೀಡಿತರಿಗೆ ಹಳ್ಳಿಯ ಕಡೆ ಬಿಸಿಯಾದ ಕಬ್ಬಿಣವನ್ನು ಮುಟ್ಟಿಸಿ ಶಕ್ತಿ ಬರುವಂತೆ ಮಾಡುತ್ತಾರೆ. ಇದನ್ನೇ ಆಧುನಿಕ ವಿಜ್ಞಾನಿಗಳು ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಎಂದು ಕರೆಯುತ್ತಾರೆ" 

ಬಿಸಿ ಮುಟ್ಟಿಸುವುದು "ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್" ಅಲ್ಲ. ಅದು "ಫಿಸಿಯೋಥೆರಪಿ". ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಅಂದರೆ ECT - Electro Convulsive Thrapy or TMS - Transcranial Magnetic Stimulation ಇದನ್ನು ಹುಚ್ಚರಿಗೆ ನೀಡುತ್ತಾರೆ ಪಾರ್ಶ್ವವಾಯು ಪೀಡಿತರಿಗೆ ಅಲ್ಲ. 

ವಾದ ೨: "ಮಾನವರಾದ ನಮ್ಮ ಮನಸ್ಸಿನಲ್ಲಿ ಅನೇಕ ಬಗೆಯ ಕಲ್ಮಶಗಳಿವೆ. ಅವುಗಳನ್ನೆಲ್ಲ ದೂರ ಮಾಡಿ ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡುವ ದ್ಯೋತಕವಾಗಿ ಮುದ್ರಾಧಾರಣೆಯನ್ನು ಮಾಡುತ್ತೇವೆ. ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ ಎಂದು‌. ಅದಕ್ಕೆ ತಪ್ತ ಮುದ್ರಾಧಾರಣೆ ಎಂದು ಹೆಸರು"

ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡಲು ಭಜನೆ ಮಾಡುತ್ತಾರೆ, ಹರಿವಾಣ ತಲೆಯ ಮೇಲಿಟ್ಟು ನೃತ್ಯ ಮಾಡುತ್ತಾರೆ, ಧ್ಯಾನ, ಜಪ, ತಪ, ಅನುಷ್ಠಾನ, ಪಾರಾಯಣ (ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ವಿಷ್ಣು ಸಹಸ್ರನಾಮ ಇತ್ಯಾದಿ), ಸತ್ಸಂಗ ಮಾಡುತ್ತಾರೆ. ನಾನೂ ನರಸಿಂಹನ (ಹರಿಯ) ಪರಮ ಭಕ್ತ (ಪ್ರಹ್ಲಾದನ ನಂತರ!). ನಾನೂ ಇವೆಲ್ಲವನ್ನೂ ಮಾಡುತ್ತೇನೆ.  ಮುದ್ರಾಧಾರಣೆಯನ್ನು ಏಕೆ ಮಾಡಬೇಕು? "ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ" - ಪಾಪ ಮಾಡಿದರೆ ತಾನೇ ಸುಡಬೇಕು? ಪಾಪ ಏಕೆ ಮಾಡುತ್ತೀರಿ ಸ್ವಾಮಿ?

ವಾದ ೩: "ಏಕಾದಶಿಯಂದು ಉಪವಾಸ ಮಾಡಿ ದೇಹಕ್ಕೆ ಸಾತ್ವಿಕ ರೀತಿಯ ದಂಡನೆಕೊಡುವುದೆ ತಪ್ತ ಮುದ್ರಾಧಾರಣೆಯ ಉದ್ದೇಶ"

ದೇಹಕ್ಕೆ ದಂಡನೆ ಕೊಡುವುದು ಏಕಾದಶಿಯ ಉದ್ದೇಶ ಅಲ್ಲ. ಏಕಾದಶಿಯಂದು  ಚಂದ್ರಮ ಮನಸ್ಸಿಗೆ ಚೈತನ್ಯ ನೀಡುವ ಕಲೆಯನ್ನು ಹೊಂದುತ್ತಾನೆ. ಚಂದ್ರನ ೧೫ ಕಲೆಗಳಲ್ಲಿ ಇದೊಂದು ವಿಶೇಷವಾದ ಕಲೆ. ಆಗ ದೇಹಕ್ಕೆ ಆಹಾರದ ಅಗತ್ಯ ಇರುವುದಿಲ್ಲ. ಸದ್ಗುರು ಜಗ್ಗಿ ವಾಸುದೇವ ಅವರು ಇದನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಯುಟ್ಯೂಬ್ ನಲ್ಲಿ ಹುಡುಕಿ ನೋಡಿ, ವಿವರಣೆ ತಿಳಿಯುತ್ತದೆ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಸಂಬಂಧ ಕಲ್ಪಿಸಬೇಡಿ. ಕೆಲವರು ಈಗಾಗಲೇ ಸಂಬಂಧ ಕಲ್ಪಿಸಿ ಅಗ್ಗಿದೆ. ಮುಂಬರುವ ಅಷ್ಟಮಿಯಲ್ಲಿ ಉಡುಪಿಗೆ ಏನು ಕಾದಿದೆಯೋ ದೇವರೇ ಬಲ್ಲ. 

ವಾದ ೪: "ಸುದರ್ಶನ ಹೋಮ ಮಾಡಿ ಅದರ ಜ್ವಾಲೆಯಲ್ಲಿ ಶಂಖ ಚಕ್ರಗಳನ್ನು ಇಟ್ಟು ಮುದ್ರಾಧಾರಣ ಮಾಡಿಕೊಳ್ಳಬೇಕೆಂಬ ಶಾಸ್ತ್ರವಿದೆ"

ಎಲ್ಲಿದೆ? ಆಧಾರ ನೀಡಿ. ಸುದರ್ಶನ ಹೋಮ ಅಲ್ಲ. ಅದು ಅಸ್ತ್ರ ಪ್ರಯೋಗ - ತಾಂತ್ರಿಕ ಆಚರಣೆ. ಅದನ್ನು ಎಲ್ಲೆಂದರಲ್ಲಿ, ಯಾರ್ಯಾರೋ ಮಾಡುವಂತಿಲ್ಲ. ಅಸ್ತ್ರ ಪ್ರಯೋಗಕ್ಕೆ ನ್ಯಾಸ, ಕೀಲಕ, ಪ್ರಯೋಗ ಮತ್ತು ಉಪಸಂಹಾರ ಗೊತ್ತಿರಬೇಕು. 

ವಾದ ೫: "ವಾದಿರಾಜರು ಸಹ ತಮ್ಮ ಕೀರ್ತನೆಗಳಲ್ಲಿ ತಪ್ತ ಸುದರ್ಶನ ಶಂಖವ ಭುಜಯುಗದೊಳು ಧರಿಸಿ ಎಂದು ಉಲ್ಲೇಖಿಸಿದ್ದಾರೆ"

ಯಾವ ಗ್ರಂಥ? ಸರಿಯಾದ ಉತ್ತರ ಕೊಡಿ. ವಾದಿರಾಜರು ನಿಗಮಾಗಮಗಳಲ್ಲಿ ನಿಪುಣರು, ಅವರ ತಂತ್ರದ ಭಾಗವಾಗಿ ಇದು ಇದೆ ಅಷ್ಟೇ. 

ವಾದ ೫: "ಉಡುಪಿಯಲ್ಲಿ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾಚಾರ್ಯರು ನಾರಾಯಣ ಅಷ್ಟಾಕ್ಷರ ಜಪಾಸಕ್ತ ಬ್ರಾಹ್ಮಣರನ್ನು ಭೇಟಿ ಮಾಡಿ ಅವರಿಗೆ ಊರ್ಧ್ವ ಪುಂಡ್ರಧಾರಣೆ ಪಂಚಮುದ್ರಾಂಕನ ನಾರಾಯಣ ಅಷ್ಟಾಕ್ಷರ ಹಾಗು ವಿಷ್ಣು ಪಂಚಾಯತನ ಪೂಜೆಯನ್ನು ಬೋಧಿಸಿದರೆಂದು ಶಂಕರವಿಜಯದಲ್ಲಿ ಉಲ್ಲೇಖವಿದೆ. ಆದ್ದರಿಂದ ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ. "

ಹಸ್ತಾಮಲಕಾಚಾರ್ಯರು ಹೇಳಿದ್ದು ಪಂಚಾಯತನ ಪೂಜೆ ಪೂಜೆ. ಅವರು ಮಹಾನ್ ಭಾಗವತರು. ಹರಿ-ಹರರಲ್ಲಿ ಭೇದ ಕಾಣದವರು. ಅನಂತೇಶ್ವರ (ಶಿವ)ನ ಬಳಿ ಸಾಲಿಗ್ರಾಮ ಇಟ್ಟು ಪೂಜೆ ಮಾಡಿ ಎಂದು ಅವರು ಹೇಳಲಿಲ್ಲ. ದಯವಿಟ್ಟು ಪಂಚಾಯತನ ಪೂಜೆ ಪೂಜೆ ಬಗ್ಗೆ ಅಧ್ಯಯನ ಮಾಡಿ ನನ್ನಲ್ಲಿ ಚರ್ಚೆಗೆ ಬನ್ನಿ. "ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ" - ಎನ್ನುವುದು ಮಹಾನ್ ಸುಳ್ಳು, ಘೋರ ಅಪರಾಧ. ಭಾಗವತ ಸಂಪ್ರದಾಯದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮಠಕ್ಕೆ ನೀವೊಮ್ಮೆ ಬನ್ನಿ. ನೀವು ಹೇಳುತ್ತಿರುವುದು ಸುಳ್ಳು ಎಂದು ನಿಮಗೇ ಗೊತ್ತಾಗುತ್ತದೆ. 

ವಾದ ೬ : "ಊರ್ಧ್ವ ಪುಂಡ್ರವು ನಾವು ಊರ್ಧ್ವ ಗತಿಯನ್ನು ಹೊಂದಬೇಕೆಂಬ ಲಾಂಛನವಾಗಿದೆ‌. ಹಾಗು ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ. ಅದನ್ನು ಜಾಗೃತಗೊಳಿಸಲೆಂದೆ ಊರ್ಧ್ವ ಪುಂಡ್ರವನ್ನು ಧರಿಸುತ್ತಾರೆ"

ನಿಮ್ಮ ಸಂಪೂರ್ಣ ಲೇಖನದಲ್ಲಿ ಇದೊಂದು ವಾಕ್ಯ (ಮೊದಲನೇ ವಾಕ್ಯ) ಸತ್ಯವಿದ್ದರೂ ಇರಬಹುದು. "ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ" - ಇದೊಂದು ನಿರಾಧಾರ ಹೇಳಿಕೆ. ಚಕ್ರಗಳು ಯಾವತ್ತಾದರೂ ಊರ್ದ್ವಮುಖವಾಗಿರಲು ಸಾಧ್ಯವೇ ಸ್ವಾಮಿ?? ಅದನ್ನು ಜಾಗ್ರತಗೊಳಿಸುವುದು ಕೇವಲ  "ಊರ್ಧ್ವ ಪುಂಡ್ರವನ್ನು ಧರಿಸುವುದರಿಂದ" ಸಾಧ್ಯವೇ? ಬಹಳ ಹಾಸ್ಯಾಸ್ಪದವಾಗಿದೆ. 

July 5, 2017

ತಪ್ತ ಮುದ್ರಾ ಧಾರಣೆ - ಒಂದು ವಿಶ್ಲೇಷಣೆ

ಮಾಧ್ವ ಸಂಪ್ರದಾಯದವರು ವರ್ಷಕ್ಕೊಮ್ಮೆ ನಡೆಸುವ ತಪ್ತ ಮುದ್ರಾ ಧಾರಣೆಯ ಬಗ್ಗೆ ನಡೆಸಿದ ಸಣ್ಣದೊಂದು ಅಧ್ಯಯಯನದ ಫಲವೇ ಈ ಕಿರು ಲೇಖನ. ಸಾಮಾನ್ಯ ಭಾಷೆಯಲ್ಲಿ ತಪ್ತ ಮುದ್ರಾ ಧಾರಣೆ ಎಂದರೆ ಬಿಸಿಯಾದ ಸೌಟೊಂದನ್ನು ಕಾಯಿಸಿ ಮೈಮೇಲೆ ಬರೆ ಎಳೆದುಕೊಳ್ಳುವುದು. ಏಕೆ ಹೀಗೆ ಮಾಡುತ್ತಾರೆಂದು ಅವರನ್ನು ಕೇಳಿದರೆ ಅದು ನಮ್ಮ ಸಂಪ್ರದಾಯ, ಅದರಿಂದ ಕೆಲವು ಖಾಯಿಲೆ ವಾಸಿಯಾಗುತ್ತದೆ, ಮುಂತಾದ ಆಧಾರ ರಹಿತ ಕಾಗಕ್ಕ - ಗುಬ್ಬಕ್ಕನ ಕಥೆ ಕಟ್ಟುತ್ತಾರೆ. ಇದರ ಬಗ್ಗೆ ವೈಜ್ಞಾನಿಕ ಆಧಾರಗಳಿದ್ದರೆ ಅಂತಹವರು ದಯವಿಟ್ಟು ಒದಗಿಸಿ.

 

ಇನ್ನು ವಿಷಯಕ್ಕೆ ಬರೋಣ. ಅದ್ವೈತ ಸಿದ್ಧಾಂತವೇ ಹಿಂದೂ ಧರ್ಮದ ಮೂಲ ಇರಬಹುದೇ ಎನ್ನುವುದು ಮೊದಲ ಪ್ರಶ್ನೆ. ಆಚಾರ್ಯ ಶಂಕರರದ್ದು ೬ನೇ ಶತಮಾನ. ಅದಕ್ಕೂ ಮೊದಲಿದ್ದ ಸಿದ್ಧಾಂತ ಯಾವುದು? ಅದೇ "ಭಾಗವತ ಸಂಪ್ರದಾಯ" - ನಮ್ಮ ಸಂಪ್ರದಾಯ. ವಸಿಷ್ಠರ ಅಂಶವಾದ ನೋಧಾ ಗೌತಮ (ಶ್ರೀ ಅಣ್ಣಪ್ಪಯ್ಯ) ರು ಇದನ್ನು ಭಾರತದಾದ್ಯಂತ ಪಸರಿಸಿದರು. ಅವರ ಕಾಲಮಾನ ಕ್ರಿ. ಪೂ. ೩ನೇ ಶತಮಾನ. ಸುಮಾರು ೮೦೦ ವರ್ಷಗಳ ಕಾಲ ಬದುಕಿ ಬಾಳಿದ ಈ ಮಹಾನ್ ಸಾಧಕ ಬೌದ್ಧ, ಜೈನ ಮತ್ತಿತರ ಮತಗಳಲ್ಲಿ ಒಡಂಬಡಿಕೆಯನ್ನುಂಟುಮಾಡಿ, ಜಾತಿ-ಮತ-ಧರ್ಮಗಳ ಸಂಕೋಲೆಯನ್ನು ಕಳಚಿ ಸಮಾನತೆಯನ್ನು ತಂದರು - ಅದೇ  "ಭಾಗವತ ಸಂಪ್ರದಾಯ". ನಂತರ ಬಂದ ಶ್ರೀ ಶಂಕರರು (ಶಿವನ ಅಂಶ) ಅಣ್ಣಪ್ಪಯ್ಯನವರ ಆಶಯದಂತೆ ಅಧಿಕೃತವಾಗಿ ಅದ್ವೈತ ತತ್ವವನ್ನು ಪ್ರಚುರಪಡಿಸಿದರು. ಬಳಿಕ ೧೨ನೇ ಶತಮಾನಕ್ಕೆ ಬಂದವರು ಆಚಾರ್ಯ ಮಧ್ವರು. ಆಗ ಪ್ರಚಲಿತದಲ್ಲಿದ್ದ ನಂಬಿಕೆಗಳಿಗೆ ವಿರುದ್ಧವಾದ ದ್ವೈತ ತತ್ವನ್ನು ಪ್ರತಿಪಾದಿಸಲು ಅವರು ಬಹಳಷ್ಟು ಶ್ರಮಪಡಬೇಕಾಯಿತು. ಈ ಸಂದರ್ಭದಲ್ಲಿ ತಮ್ಮ ಮತಾನುಯಾಯಿಗಳನ್ನು ಗುರುತಿಸಲು ಕೈಗೊಂಡ ಉಪಕ್ರಮವೇ ಈ ತಪ್ತ ಮುದ್ರಾ ಧಾರಣೆ. ಇದರಿಂದ ಅವರಿಗೆ ಅವರ ಅನುಯಾಯಿಗಳನ್ನು ದೂರದಿಂದಲೇ ಗುರುತಿಸುವುದು ಸಾಧ್ಯವಾಗುತ್ತಿತ್ತು. ಅಪಾಯದ ಸೂಚನೆ ಎದುರಾದಾಗ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಆದರೆ ಈಗಲೂ ಅವರ ಅನುಯಾಯಿಗಳು ಮೈ-ಕೈ ಸುಟ್ಟುಕೊಳ್ಳುವ ಕಾರಣವೇ ತಿಳಿಯುತ್ತಿಲ್ಲ. ತಿಳಿದಿದ್ದರೆ ದಯವಿಟ್ಟು ತಿಳಿಸಿ.

June 18, 2017

Tradewings, Manipal is a fraud

Please don’t go to Tradewings, Manipal for passport assistance. Since my senior colleague advised me, I went there for their assistance to renew 2 passports and making new passports of other 3 family members. They took Rs. 2,500 as the consultation fee. Due to their wrong advice I was forced to visit Mangaluru passport office twice which is 90 km away from my place. Each time they made me to wait for 4 hours. It was very difficult as my younger son was only 10 month old and my father was 70 year old. All this happened because of wrong advice from Tradewings. When I asked them, they apologized and promised me to refund the consultation fee. The incident happened about a month ago and till date I have not received any reimbursement!


My sincere advice is please fill the online application for the passport and follow simple steps. Don’t believe frauds like Tradewings.

May 24, 2017

ಬಾಳೆಕುದ್ರು ಮಠದ ಶ್ರೀ ಅಣ್ಣಪ್ಪಸ್ವಾಮಿ ನಿರ್ಮಿತ ನ್ಯಾಯದಾನ ಯಂತ್ರ

ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಳಿಯ ಶ್ರೀ ಬಾಳೆಕುದ್ರು ಸಂಸ್ಥಾನದ "ಶ್ರೀಮಠ"ದಲ್ಲಿರುವ ಕುತೂಹಲಕಾರಿ ನ್ಯಾಯದಾನಯಂತ್ರದ ಸಂಕ್ಷಿಪ್ತ ಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಶ್ರೀಮಠವು ಅತ್ಯಂತ ಸುಂದರವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಅತ್ಯಂತ ವಿಸ್ಮಯಕಾರೀ ಸಂಗತಿಗಳು ಹೊರಬರುತ್ತಿವೆ. ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಅಂತಹ ಒಂದು ವಿಸ್ಮಯವೇ ಈ ನ್ಯಾಯದಾನ ಯಂತ್ರ. ಇದನ್ನು ಸ್ಥಾಪಿಸಿದವರು ನಮ್ಮೆಲ್ಲರ ಪ್ರೀತಿಯ ಅಜ್ಜ ಶ್ರೀ ಅಣ್ಣಪ್ಪಸ್ವಾಮಿಯವರು. ಬಾಳೆಕುದ್ರು ಮಠ ಹಾಗೂ ಶ್ರೀ ಅಣ್ಣಪ್ಪಸ್ವಾಮಿಯ ಸಂಬಂಧಗಳ ಬಗ್ಗೆ ಈಗಲೇ ಈ ಬ್ಲಾಗಿನಲ್ಲಿ ಬರೆಯಲಾಗಿದೆ. ಅದನ್ನು ಈ ವಿಳಾಸದಲ್ಲಿ ಓದಬಹುದು 


ಬಾಳೆಕುದ್ರು ಮಠದ ನ್ಯಾಯದಾನ ಯಂತ್ರದ ಚಿತ್ರವನ್ನು ಇಲ್ಲಿ ನೀಡಲಾಗಿದೆ. ​​
 ಎದುರಿಗೆ ಕಾಣುತ್ತಿರುವ ದ್ವಾರವೇ ನಾನು ಪ್ರಸ್ತಾಪಿಸುತ್ತಿರುವ ನ್ಯಾಯದಾನ ಯಂತ್ರ. ಇದರ ಮೂಲಕ ಹಾದು ಬರುವ ಪ್ರತಿಯೊಬ್ಬ ವ್ಯಕ್ತಿಯೂ ಸತ್ಯವನ್ನು ನುಡಿಯಲೇ ಬೇಕು. ಅಂತಹ ತಂತ್ರವನ್ನು ಶ್ರೀ ಅಣ್ಣಪ್ಪಯ್ಯನವರು ಈ ದ್ವಾರದಲ್ಲಿ ಅಳವಡಿಸಿದ್ದಾರೆ. ಇದರ ಮೂಲಕ ಸುಮಾರು ೨೩೦೦ ವರ್ಷಗಳಿಂದಲೂ ಶ್ರೀಮಠದಲ್ಲಿ ನ್ಯಾಯದಾನವು ಸುವ್ಯವಸ್ಥಿತವಾಗಿ ​ನಡೆದುಕೊಂಡು ಬಂದಿವೆ. ಸಾವಿರಾರು ಕ್ಲಿಷ್ಟ ಸಮಸ್ಯೆಗಳು ಪರಿಹಾರವನ್ನು ಕಂಡುಕೊಂಡಿವೆ, ಮಾತ್ರವಲ್ಲ ಇನ್ನೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿಗೂ ಈ ಪರಂಪರೆ ಉಳಿದು, ಬೆಳೆದು ಬಂದಿರುವುದು ಶ್ರೀಮಠದ ಹೆಗ್ಗಳಿಕೆ. 

ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಸತ್ಯ, ನ್ಯಾಯ, ಧರ್ಮದ ಪ್ರತಿರೂಪವಾಗಿ ನಮ್ಮನ್ನು ಸಲಹುತ್ತಿರುವುದು ಸರ್ವವಿದಿತ. ಇನ್ನು ಶ್ರೀ ಅಣ್ಣಪ್ಪಯ್ಯನವರು ದೇಶದಾದ್ಯಂತ ಸಂಚರಿಸಿ ನ್ಯಾಯದಾನ ಯಂತ್ರಗಳನ್ನು ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ. ಇದರ ಕುರುಹುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದು ಧರ್ಮಸ್ಥಳ, ಹಿರಿಯಡ್ಕ ಮತ್ತು ಮಾರಣಕಟ್ಟೆಗಳಲ್ಲಿ ಮಾತ್ರ ಎಂದು ನಾನು ತಿಳಿದಿದ್ದೆ. ಈಗ ಶ್ರೀಮಠದ ನ್ಯಾಯದಾನಯಂತ್ರವು (ಬಾಗಿಲು) ಬೆಳಕಿಗೆ ಬಂದು ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗೆ ಹೊಸ ಅವಕಾಶದ ಬಾಗಿಲನ್ನೇ ನಮಗಾಗಿ ತೆರೆದಿದೆ. ನಾವೆಲ್ಲರೂ ಕೋರ್ಟು ಕಛೇರಿ ಎಂದು ಹಣ, ಸಮಯ ಎರಡನ್ನೂ ವ್ಯರ್ಥ ಮಾಡುವ ಬದಲು ನಮ್ಮ ಹಿರಿಯರು ಕೊಟ್ಟಿರುವ ಇಂತಹ ಅಮೂಲ್ಯ ಯಂತ್ರಗಳ ಸಹಾಯದಿಂದ  ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋಣ. ಗುರುಗಳ ಸಾನ್ನಿಧ್ಯದಿಂದ ಪುನೀತರಾಗೋಣ. ವಂದೇ ಮಾತರಂ. 
  

May 10, 2017

ನೂತನ ರಥ ಸಮರ್ಪಣೆ ಮತ್ತು ರಥೋತ್ಸವದ ವರದಿ


ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ  ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಹಾಶ್ರಮ ಸ್ವಾಮಿಗಳ ಪರಮಾನುಗ್ರಹದಿಂದ  
ತಾ: ೯-೫-೨೦೧೭ರಂದು ಶ್ರೀಮಠ ಬಾಳೆಕುದ್ರುವಿನ ನರಸಿಹ ದೇವರಿಗೆ ಸುಮಾರು ೬೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಭವ್ಯವಾದ ರಥವನ್ನು ಸಮರ್ಪಿಸಲಾಯಿತು. ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ, ವೇದವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ನಿರ್ದೇಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬಳಿಕ ವೈಭವದ ರಥೋತ್ಸವವೂ ನೆರವೇರಿತು. ಮಧ್ಯಾಹ್ನ ಯಕ್ಷಗಾನ - ಪ್ರವಚನ, ಪ್ರಸಂಗ - "ಪ್ರಥಮ ಭಾಗವತ ಪ್ರಹ್ಲಾದ" ಕಾರ್ಯಕ್ರಮ ನಡೆಯಿತು. ಶ್ರೀಮತಿ ಭವ್ಯಶ್ರೀ ಹರೀಶ್ ಅವರ ಕಂಚಿನ ಕಂಠದಲ್ಲಿ ಗಾನವೂ, ಶ್ರೀ ಉಜಿರೆ ಅಶೋಕ್ ಭಟ್ಟರಿಂದ ಪ್ರವಚನ - ಜ್ಞಾನಾಮೃತ ಸಿಂಚನವೂ ಜರುಗಿತು. ಪ್ರಹ್ಲಾದನು ಹೇಗೆ ಭಾಗವತನೆನಿಸಿಕೊಂಡ, ಪ್ರಹ್ಲಾದ ರಾಜಾಭಿಷಕ್ತನಾದ ಬಳಿಕ ಹೇಗೆ ಭಾಗವತನಾಗಿ ಜಗತ್ತನ್ನೇ ಆಳಿದ. ಸಮಸ್ತ ಭೂಮಂಡಲಕ್ಕೆ ಹೇಗೆ ಪರೋಪಕಾರಿಯಾಗಿ ಬಾಳಿ ಶಾಶ್ವತವಾದ ಸ್ಥಾನವನ್ನು ಗಳಿಸಿದ ಎನ್ನುವುದನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಭಟ್ಟರು ಬಲು ಸುಂದರವಾಗಿ ವ್ಯಾಖ್ಯಾನಿಸಿದರು. ಎಲ್ಲರೂ ಪ್ರಹ್ಲಾದ ಎಂದರೆ ತಂದೆಯನ್ನು ಕೊಲ್ಲಿಸಿದವನು ಎಂದು ಜರೆಯುವುದು ತರವಲ್ಲ. ನರಸಿಂಹನು ಉಗ್ರರೂಪ ತೊರೆದು ಪ್ರಹ್ಲಾದನಲ್ಲಿ ವರವನ್ನು ಕೇಳೆಂದಾಗ ಆತ ತನಗೇನೂ ಕೇಳದೆ ತನ್ನ ತಂದೆಗೆ ಮುಕ್ತಿಯನ್ನು ಕರುಣಿಸು ಎಂದು ಕೋರುವುದರ ಮೂಲಕ ನಿಜವಾದ ಭಾಗವತ ಧರ್ಮವನ್ನು ಜಗತ್ತಿಗೆ ತೋರಿಸುತ್ತಾನೆ. ಪ್ರಹ್ಲಾದನು ಹರ ದ್ವೇಷಿಯಲ್ಲ, ಕೇವಲ ಹರಿಯನ್ನು ವಿರೋಧಿಸುವ ತಂದೆಗೆ ತಿಳಿಹೇಳಲು ಹರಿನಾಮವನ್ನು ಬಳಸಿದ. ಹರಿ-ಹರರಲ್ಲಿ ಭೇಧವಿಲ್ಲ, ಅದೇ ಭಾಗವತ ಎನ್ನುವ ವಿಚಾರವು ಅಶೋಕ್ ಭಟ್ಟರ ಪ್ರವಚನದ ಸಾರವಾಗಿತ್ತು.  

May 4, 2017

​ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!ಕೆಲವು ವರ್ಷಗಳ ಹಿಂದೊಮ್ಮೆ ಮಾತಿನ ಮಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಕೇಳಿದ್ದೆ. ಆರ್. ಎಸ್. ಎಸ್   ಪ್ರಚಾರಕರಂತೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ಹುಳುಕುಗಳನ್ನು ವೈಭವೀಕರಿಸಿ ಹೇಳುತ್ತಾ ಚಪ್ಪಾಳೆಗಿಟ್ಟಿಸುತ್ತಿದ್ದ ಬಿಸಿರಕ್ತದ ಯುವಕನನ್ನು ಇಂದು ನೀವು ಕಾಣಲು ಸಾಧ್ಯವಿಲ್ಲ. ಇತ್ತೀಚಿಗೆ ಉಡುಪಿ ಜಿಲ್ಲೆಯ ಬಾಳೆಕುದ್ರುವಿನ ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನಕಾರನಾಗಿ ಕಾಣಿಸಿದ ವ್ಯಕ್ತಿ ಬೇರೆಯವನೇ ಏನೋ ಎಂದು ಹೇಳುವಷ್ಟು ಬದಲಾಗಿದ್ದಾರೆ ಚಕ್ರವರ್ತಿ. ಮಾತಿನ ತೀಕ್ಷತೆ, ಮೊನಚು, ಉದಾಹರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಪರಿಯಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗದೆ ಇದ್ದರೂ ಕೂಡ, ವಿಷಯ ಮಂಡನೆಯಲ್ಲಿ, ವೈಚಾರಿಕತೆಯಲ್ಲಿ ಪ್ರೌಢಿಮೆಯನ್ನು ತೋರಲಾರಂಭಿಸಿದ್ದಾರೆ. ತಾವು ನಂಬಿರುವ ತತ್ವ ಸಿದ್ಧಾಂತಗಳಿಗೆ ರಾಷ್ಟ್ರೀಯತೆಯ ಸೊಗಡನ್ನು ತುಂಬುತ್ತಿದ್ದಾರೆ. ಹಿಂದೆಲ್ಲ ಬರಿಯ ಮಾತಿನಿಂದಲೇ ಮಂಟಪವನ್ನು ಕಟ್ಟುತ್ತಿದ್ದವರು ಈಗ ಕೃತಿಯಲ್ಲೂ ಅದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಕ್ರವರ್ತಿ ಬದಲಾಗಿದ್ದಾರೆ. ಸಮಾಜಕ್ಕೆ ಇನ್ನೂ ಉತ್ತಮವಾದದ್ದನ್ನು ಕೂಡುವ ಸಂಕಲ್ಪದಿಂದ ಬದಲಾಗಿದ್ದಾರೆ ಎನ್ನಬಹುದೇನೋ. 

"ಮಿಥುನ್ ಚಕ್ರವರ್ತಿ" - ಹೀಗೆಂದಾಗ ಹಿಂದಿ ಚಲನಚಿತ್ರದ ನಟನೊಬ್ಬನ ನೆನಪಾಗಿರಬೇಕಲ್ಲ! ಅದೇ ನಾಮಧೇಯದ ಸೂಲಿಬೆಲೆ ಎಂಬ ಊರಿನ ಮಹತ್ವಾಕಾಂಕ್ಷೆಯ ಹುಡುಗನೊಬ್ಬ ದೇಶಭಕ್ತಿಯ ಭಾವಗಳನ್ನು ಮನದಲ್ಲಿ ತುಂಬಿಕೊಂಡು ಆರ್. ಎಸ್. ಎಸ್ ಸೇರುತ್ತಾನೆ. ಅಲ್ಲಿ ಸಂಘದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುತ್ತಾನೆ. ಸಂಘದ ಕೆಲವೊಂದು ನೀತಿ ನಿಯಮಗಳು ಯುವಕ ಮಿಥುನ್ ಕ್ಷಿಪ್ರ ಬೆಳವಣಿಗೆಯ ಕನಸುಗಳಿಗೆ ಅಡ್ಡಗಾಲಾಗಿ ಪರಿಣಮಿಸುತ್ತವೆ. ಹೊತ್ತಿಗಾಗಲೇ ಇಂಜಿನಿಯರಿಂಗ್ ಪದವಿಯನ್ನು ಪೂರ್ತಿಗೊಳಿಸಿದ್ದ ಮಿಥುನ್, ತನ್ನ ಮಹತ್ವಾಕಾಂಕ್ಷೆಯನ್ನು ಪೋಷಿಸುವ, ಅದನ್ನು ಈಡೇರಿಸಲು ಸಹಕರಿಸುವ ಇತರ ಸಂಘಟನೆಯನ್ನು ಅರಸುತ್ತಿರುತ್ತಾನೆ. ಅದು ೯೦ ದಶಕದ ಕೊನೆಯ ಭಾಗ. ರಾಷ್ಟ್ರಬಂಧು ಶ್ರೀ ರಾಜೀವ ದೀಕ್ಷಿತರು "ಆಜಾದಿ ಬಚಾವೋ ಆಂದೋಲನ" ಮೂಲಕ ಮನೆಮಾತಾಗಿದ್ದ ಕಾಲವದು. ಗಾಂಧೀಜಿಯ ರಾಮರಾಜ್ಯದ ಕನಸನ್ನು ನೆನಸು ಮಾಡಲು, ಸ್ವದೇಶೀ ಚಳುವಳಿಯನ್ನು ದೇಶದ ಉದ್ದಗಲಕ್ಕೂ ಪಸರಿಸಲು, ತಮ್ಮ ಆಕರ್ಷಕ ಶೈಲಿಯ ಭಾಷಣದ ಮೂಲಕ ದೇಶದ ಹಳ್ಳಿ ಹಳ್ಳಿಗಳಿಗೂ ಸಂಚಾರ ಕೈಗೊಳ್ಳುತ್ತಿದ್ದರು. ಹಿಂದಿ ಭಾಷಣಕಾರರಾದ ಅವರಿಗೆ ಕರ್ನಾಟಕದ ಹಳ್ಳಿಗಳನ್ನು ತಲುಪಲು ಸಮರ್ಥ ಭಾಷಾಂತರಕಾರನ ಅವಶ್ಯಕತೆ ಇತ್ತು. ಅಷ್ಟೋತ್ತಿಗಾಗಲೇ ಮಿಥುನ್ "ವೀರ ಸಾವರ್ಕರ್" ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿಯಾಗಿತ್ತು. ಆಜಾದಿ ಬಚಾವೋ ಆಂದೋಲನದಲ್ಲಿ ತನ್ನ ಆಕಾಂಕ್ಷೆಗಳ ಪೂರೈಕೆಗೆ ಇರುವ ಅವಕಾಶಗಳನ್ನು ಅರ್ಥಮಾಡಿಕೊಂಡ ಮಿಥುನ್, ರಾಜೀವ್ ದೀಕ್ಷಿತರಿಗೆ ಭಾಷಾಂತರಕಾರನಾಗಿ ಸೇರಿಕೊಳ್ಳುತ್ತಾನೆ. ಸುಮಾರು ವರ್ಷಗಳ ಕಾಲ ಆಜಾದಿ ಬಚಾವೋ ಆಂದೋಲನದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಮಿಥುನ್, ರಾಜೀವ್ ದಿಕ್ಷಿತರಿಂದ ಭಾಷಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಸಮಯದಲ್ಲಿ ಅವನ ಆಕಾಂಕ್ಷೆಗಳಿಗೆ ತಣ್ಣೀರು ಸುರಿಯುವ ಕಾರ್ಯ ಆಂದೋಲನದಲ್ಲಿ ನಡೆದು ಹೋಗುತ್ತದೆ. ಪ್ರಮುಖವಾಗಿ ರಾಜೀವ್ ದೀಕ್ಷಿತರ ಭಾಷಣದ ವೇದಿಕೆಯಲ್ಲಿ ಮಿಥುನ್ ಕೇವಲ ಭಾಷಾಂತರಕಾರನಾಗಿಯೇ ಉಳಿದುಹೋಗುತ್ತಾನೆ. ಸ್ವಂತ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ವೇದಿಕೆ ಸಹಾಯ ಮಾಡುವುದೇ ಇಲ್ಲ. ಹೀಗಾಗಿ ಕ್ರಮೇಣ ಆಂದೋಲನದಿಂದ ದೂರ ಸರಿಯುತ್ತಾ ಕೊನೆಗೆ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ "ಜಾಗೊ ಭಾರತ್" ಎನ್ನುವ ರಾಷ್ಟ್ರಪ್ರೇಮವನ್ನು ಸಾರುವ ವಿಶಿಷ್ಟವಾದ ಕಾರ್ಯಕ್ರಮ ಮಿಥುನ್ ಚಕ್ರವರ್ತಿ ಅಥವಾ ಚಕ್ರವರ್ತಿ ಸೂಲಿಬೆಲೆಯಿಂದ ಆರಂಭವಾಗುತ್ತದೆ. ಅಂದರೆ ಆರ್. ಎಸ್. ಎಸ್. ನಿಂದ ಹೊರಬಂದು "ಜಾಗೊ ಭಾರತ್" ಆರಂಭಿಸುವ ಕಾಲಘಟ್ಟದಲ್ಲಿ ಆಜಾದಿ ಬಚಾವೋ ಆಂದೋಲನವನ್ನು ಮಿಥುನ್ ಚಿಮ್ಮು ಹಲಗೆಯಾಗಿ ಮಾತ್ರ ಬಳಸಿಕೊಳ್ಳುತ್ತಾನೆ ಎಂದರೂ ತಪ್ಪಿಲ್ಲ. ಮಿಥುನ್ ಹೊರಬಂದ ನಂತರ ಕರ್ನಾಟಕದಲ್ಲಿ ಆಜಾದಿ ಬಚಾವೋ ಆಂದೋಲನವು ಮುಂದೆ "ಹಿಂದ್ ಸ್ವರಾಜ್ ಅಭಿಯಾನ" ಎನ್ನುವ ಹೆಸರಿನಿಂದ ಕುಂಟುತ್ತಾ ಸಾಗಿ, ರಾಜೀವ್ ದೀಕ್ಷಿತರು ಬಾಬಾ ರಾಮದೇವರೊಂದಿಗೆ ರಾಜಕೀಯ ಪಕ್ಷದ ಸಂಕಲ್ಪ ಕೈಗೊಂಡ ನಂತರ ಕಣ್ಮರೆಯಾಗುತ್ತದೆ. ಈಗಲೂ ಅಭಿಯಾನದ ಕೆಲವು ಕಾರ್ಯಕರ್ತರು ಮೈಸೂರಿನಲ್ಲಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ರಾಜೀವ್ ದೀಕ್ಷಿತರು ತಮ್ಮ ಪ್ರಿಯವಾದ ಉಪನ್ಯಾಸದ ಸಂದರ್ಭದಲ್ಲಿ ಹೃದಯಾಘಾತ ಅನುಭವಿಸುತ್ತಾರೆ. ಅವರ ಜೀವವನ್ನು ಉಳಿಸಬಹುದಾಗಿದ್ದ ಚುಚ್ಚುಮದ್ದನ್ನು ಕೇವಲ ವಿದೇಶಿ ಔಷಧ ಎನ್ನುವ ಕಾರಣಕ್ಕೆ ನಿರಾಕರಸಿ ಬಳಿಕ ಕೀರ್ತಿಶೇಷರಾಗುತ್ತಾರೆ. 

ಆಜಾದಿ ಬಚಾವೋ ಆಂದೋಲನದಿಂದ ಹೊರಬಂದ ಸಮಯದಲ್ಲಿ ಮಿಥುನ್ ಗೆ ಆರ್ಥಿಕ ಅಭದ್ರತೆ ಕಾಡುತ್ತದೆ. ಆಗ ಹುಟ್ಟಿದ್ದು "ಜಾಗೊ ಭಾರತ್". ಆಕಾಶವಾಣಿಯ ಕಲಾವಿದರನ್ನು ಕಟ್ಟಿಕೊಂಡು, ರಾಜೀವ್ ದೀಕ್ಷಿತರ ಜೀವನಾನುಭವಗಳನ್ನು ಬಳಸಿಕೊಂಡು, ದುಬಾರಿಯಾದ ಶುಲ್ಕವನ್ನು ನಿಗದಿಪಡಿಸಿ ಸಿದ್ಧಗೊಳಿಸಲ್ಪಟ್ಟ "ಜಾಗೊ ಭಾರತ್" ಕರ್ನಾಟಕದಾದ್ಯಂತ ಸಂಚಲನ ಮೂಡಿಸಿತು. ಇದು ಮಿಥುನ್ ಗೆ ಆರ್ಥಿಕ ದೃಢತೆಯನ್ನು ನೀಡಿದ್ದಲ್ಲದೆ "ಚಕ್ರವರ್ತಿ ಸೂಲಿಬೆಲೆ ಶ್ರೇಷ್ಠ ವಾಗ್ಮಿ" ಎಂಬ ಖ್ಯಾತಿಯನ್ನೂ ತಂದುಕೊಟ್ಟಿತು. ಮಹತ್ವಾಕಾಂಕ್ಷೆಯ ಮಿಥುನ್ ಗೆ ಇದೂ ಕೂಡ ತೃಪ್ತಿ ನೀಡದೆ ಇದ್ದಾಗ ಕಂಡದ್ದು ಶ್ರೀ ನರೇಂದ್ರ ಮೋದಿಯವರು. ೨೦೧೩ರಲ್ಲಿ "ನಮೋ ಬ್ರಿಗೇಡ್" ಆರಂಭವಾಯಿತು, ಭಾಜಪದ ಸಖ್ಯವೂ ಬೆಳೆಯಿತು. ಆರ್. ಎಸ್. ಎಸ್   ಪ್ರಚಾರಕನಂತೆ ಮಾತನಾಡುತ್ತಿದ್ದ ಮಿಥುನ್ ಭಾಜಪದ ಪ್ರಚಾರಕನಂತೆ ಮಾತನಾಡತೊಡಗಿದನು. ಮಾತೆತ್ತಿದರೆ ಹಿಂದೂ, ಹಿಂದುತ್ವದ ವಿಚಾರಗಳು. ರಾಷ್ಟ್ರಬಂಧು ರಾಜೀವ್ ದೀಕ್ಷಿತರ ಗಾಂಧೀವಾದದ ಮಾತುಗಳ ಬದಲಾಗಿ ಆರ್. ಎಸ್. ಎಸ್   ಸಂಕುಚಿತ ವಿಚಾರಧಾರೆಗಳು "ನಮೋ ಬ್ರಿಗೇಡ್" ಮೂಲಕ ಕೇಳಲಾರಂಭಿಸಿದವು. ಮುಂದೆ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ "ನಮೋ ಬ್ರಿಗೇಡ್" ಹೋಗಿ "ಯುವ ಬ್ರಿಗೇಡ್" ಸ್ಥಾಪನೆಯಾಯಿತು. ಕ್ರಮೇಣ ಮಿಥುನ್ ಭಾಷಣದಲ್ಲಿದ್ದ ಉಗ್ರ ಹಿಂದುತ್ವದ ವಿಚಾರಗಳು ಮೊನಚನ್ನು ಕಳೆದುಕೊಳ್ಳುತ್ತಾ ಬಂದವು. ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ಹಾಗೂ ಅವರ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎನ್ನಬಹುದು. ಮೋದಿಯವರು ಕೇವಲ "ಹಿಂದೂಗಳ ಪ್ರಧಾನಿ"ಯಾಗದೆ "ಭಾರತೀಯರ ಪ್ರಧಾನಿ" ಯಾದರು. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎನ್ನುವುದೇ ಮಂತ್ರವಾಯಿತು. ಇದರಿಂದಾಗಿ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರೂ ಕೂಡ ರಾಷ್ಟ್ರೀಯವಾದಿಗಳಾಗುವ ಅನಿವಾರ್ಯತೆ ಉಂಟಾಯಿತು. ಇದೇ ಕಾರಣಕ್ಕೆ ನಾನು ಹೇಳಿದ್ದು "ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!". 

ಗಾಂಧೀಜಿಯ ಮಾನವತಾವಾದ, ಸರ್ವರನ್ನೂ ಸಮನಾಗಿ ಕಾಣುವ ಭಾವ, ಇವುಗಳನ್ನು ರಾಜೀವ ದೀಕ್ಷಿತರು ಸಂಪೂರ್ಣ ಭಾರತದಲ್ಲಿ ಕಾಣಲು ಬಯಸಿದ್ದರು. ಈಗ ಅದೇ ವಿಚಾರಗಳನ್ನು ಸೂಲಿಬೆಲೆಯವರು ಪುನರುಚ್ಚರಿಸಲಾರಂಭಿಸದ್ದಾರೆ. ಬಾಳೆಕುದ್ರು ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಭಾಷಣದಲ್ಲಿ ಕೂಡ ನನಗೆ ಪ್ರಮುಖವಾಗಿ ಕೇಳಿಸಿದ್ದು ವಿಚಾರಗಳೇ. ಎಲ್ಲ ಭಾರತೀಯರೂ ಒಂದೇ. ನಾನು ಯಾರನ್ನೂ ಜಾತಿಯಿಂದ ಗುರುತಿಸಲು ಬಯಸುವುದಿಲ್ಲ. ಅವರವರ ಕಾರ್ಯದಿಂದಲೇ ಅವರವರ ವರ್ಣಗಳ ನಿರ್ಧಾರವಾಗುತ್ತದೆ. ನಾನು ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದ ಕೆಲಸಗಳಿಂದಾಗಿ ನಾನು ಶೂದ್ರ ವರ್ಣಕ್ಕೆ ಸೇರಿದವನು ಎಂದು ಬ್ರಾಹ್ಮಣನಾಗಿ ಹುಟ್ಟಿರುವ ಸೂಲಿಬೆಲೆ ಹೇಳುತ್ತಿರುವಾಗ ನಿಜಕ್ಕೊ ಅವರು ಬದಲಾಗಿದ್ದಾರೆ ಎಂದು ಅನ್ನಿಸಿತು. "ಯುವ ಬ್ರಿಗೇಡ್" ಉತ್ತಮವಾದ ಕೆಲಸಗಳ ಮೂಲಕ ಸೂಲಿಬೆಲೆಯವರು ತಾವು ಕೇವಲ ಮಾತುಗಾರ ಮಾತ್ರವಲ್ಲ, ಹೇಳಿದ್ದನ್ನು ಮಾಡಿ ತೋರಿಸುವ ತಾಕತ್ತು ಕೂಡ ಇದೆ ಎಂದು ಸಾಬೀತು ಮಾಡುತ್ತಿದ್ದಾರೆ. ಮಠದ ಕಲ್ಯಾಣಿಯನ್ನು ಉಚಿತವಾಗಿ ಸ್ವಚ್ಚಗೊಳಿಸುವ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ. ಹೀಗೆ ಒಂದೇ ತತ್ವ ಸಿದ್ಧಾಂತಕ್ಕೆ ಜೋತು ಬೀಳದೆ "ಮೊದಲು ಮಾನವನಾಗು" ಎಂಬ ದಿಸೆಯಲ್ಲಿ ಅವರು ಮುನ್ನಡೆದರೆ ದೇಶಕ್ಕೊಬ್ಬ ಆದರ್ಶ ಪುರುಷ ಸಿಗುವುದರಲ್ಲಿ ಸಂಶಯವಿಲ್ಲ.  ವಂದೇ ಮಾತರಂ. 

(ಲೇಖಕರು ಮಣಿಪಾಲ ತಾಂತ್ರಿಕ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಲ್ಲಿ ಪ್ರಾಧ್ಯಾಪಕರು. ಹಿಂದೆ ಆಜಾದಿ ಬಚಾವೋ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು)