ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಹಾಶ್ರಮ ಸ್ವಾಮಿಗಳ ಪರಮಾನುಗ್ರಹದಿಂದ
ತಾ: ೯-೫-೨೦೧೭ರಂದು ಶ್ರೀಮಠ ಬಾಳೆಕುದ್ರುವಿನ ನರಸಿಹ ದೇವರಿಗೆ ಸುಮಾರು ೬೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಭವ್ಯವಾದ ರಥವನ್ನು ಸಮರ್ಪಿಸಲಾಯಿತು. ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ, ವೇದವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ನಿರ್ದೇಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬಳಿಕ ವೈಭವದ ರಥೋತ್ಸವವೂ ನೆರವೇರಿತು. ಮಧ್ಯಾಹ್ನ ಯಕ್ಷಗಾನ - ಪ್ರವಚನ, ಪ್ರಸಂಗ - "ಪ್ರಥಮ ಭಾಗವತ ಪ್ರಹ್ಲಾದ" ಕಾರ್ಯಕ್ರಮ ನಡೆಯಿತು. ಶ್ರೀಮತಿ ಭವ್ಯಶ್ರೀ ಹರೀಶ್ ಅವರ ಕಂಚಿನ ಕಂಠದಲ್ಲಿ ಗಾನವೂ, ಶ್ರೀ ಉಜಿರೆ ಅಶೋಕ್ ಭಟ್ಟರಿಂದ ಪ್ರವಚನ - ಜ್ಞಾನಾಮೃತ ಸಿಂಚನವೂ ಜರುಗಿತು. ಪ್ರಹ್ಲಾದನು ಹೇಗೆ ಭಾಗವತನೆನಿಸಿಕೊಂಡ, ಪ್ರಹ್ಲಾದ ರಾಜಾಭಿಷಕ್ತನಾದ ಬಳಿಕ ಹೇಗೆ ಭಾಗವತನಾಗಿ ಜಗತ್ತನ್ನೇ ಆಳಿದ. ಸಮಸ್ತ ಭೂಮಂಡಲಕ್ಕೆ ಹೇಗೆ ಪರೋಪಕಾರಿಯಾಗಿ ಬಾಳಿ ಶಾಶ್ವತವಾದ ಸ್ಥಾನವನ್ನು ಗಳಿಸಿದ ಎನ್ನುವುದನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಭಟ್ಟರು ಬಲು ಸುಂದರವಾಗಿ ವ್ಯಾಖ್ಯಾನಿಸಿದರು. ಎಲ್ಲರೂ ಪ್ರಹ್ಲಾದ ಎಂದರೆ ತಂದೆಯನ್ನು ಕೊಲ್ಲಿಸಿದವನು ಎಂದು ಜರೆಯುವುದು ತರವಲ್ಲ. ನರಸಿಂಹನು ಉಗ್ರರೂಪ ತೊರೆದು ಪ್ರಹ್ಲಾದನಲ್ಲಿ ವರವನ್ನು ಕೇಳೆಂದಾಗ ಆತ ತನಗೇನೂ ಕೇಳದೆ ತನ್ನ ತಂದೆಗೆ ಮುಕ್ತಿಯನ್ನು ಕರುಣಿಸು ಎಂದು ಕೋರುವುದರ ಮೂಲಕ ನಿಜವಾದ ಭಾಗವತ ಧರ್ಮವನ್ನು ಜಗತ್ತಿಗೆ ತೋರಿಸುತ್ತಾನೆ. ಪ್ರಹ್ಲಾದನು ಹರ ದ್ವೇಷಿಯಲ್ಲ, ಕೇವಲ ಹರಿಯನ್ನು ವಿರೋಧಿಸುವ ತಂದೆಗೆ ತಿಳಿಹೇಳಲು ಹರಿನಾಮವನ್ನು ಬಳಸಿದ. ಹರಿ-ಹರರಲ್ಲಿ ಭೇಧವಿಲ್ಲ, ಅದೇ ಭಾಗವತ ಎನ್ನುವ ವಿಚಾರವು ಅಶೋಕ್ ಭಟ್ಟರ ಪ್ರವಚನದ ಸಾರವಾಗಿತ್ತು.
No comments:
Post a Comment