ದಸರಾ ಹಬ್ಬವು ಜನರೆಲ್ಲ ಬೆರೆತು, ಕಲೆತು ಸಂಭ್ರಮಿಸಿ ಕುಣಿಯುವ ಸಮಯವಾಗಿದೆ. ಆದರೆ 200 ವರ್ಷಗಳ ಹೊರಗಿನ ಪ್ರಭಾವ ಮತ್ತು ದಾಳಿಗಳಿಂದ ಆ ಸಂಭ್ರಮವನ್ನು ಇಂದು ಕಳೆದುಕೊಂಡಿದ್ದೇವೆ. ಹಾಗಾಗಬಾರದು, ಜಾತಿ, ಪಂಥ ಮತ್ತು ಮತಗಳನ್ನು ಪರಿಗಣಿಸದೆ ಸಂತೋಷ ಮತ್ತು ಪ್ರೀತಿಯಿಂದ ಎಲ್ಲರೂ ದಸರಾ ಆಚರಿಸಬೇಕು.
ಕರ್ಕಾಟಕ ಸಂಕ್ರಾಂತಿಯಂದು ದಕ್ಷಿಣಾಯನವು ಪ್ರಾರಂಭವಾಗುತ್ತದೆ. ಅಂದರೆ ಭೂಮಿಯ ಉತ್ತರಾರ್ಧಗೋಳದಲ್ಲಿ ಸೂರ್ಯನು ದಕ್ಷಿಣದೆಡೆಗೆ ಚಲಿಸಲು ಪ್ರಾರಂಭಿಸುತ್ತಾನೆ. ಹಾಗೆಯೇ, ಮಕರಸಂಕ್ರಾಂತಿಯಂದು ಉತ್ತರಾಯಣ, ಅಂದರೆ ಸೂರ್ಯನ ಉತ್ತರಾಭಿಮುಖ ಚಲನೆಯು ಪ್ರಾರಂಭವಾಗುತ್ತದೆ. ಉತ್ತರಾಯಣದಿಂದ ದಕ್ಷಿಣಾಯಣದ ಪ್ರಾರಂಭಕಾಲದವರೆಗಿನ ಅವಧಿಯನ್ನು ಜ್ಞಾನಪಾದ ಎಂದೂ, ವರ್ಷದ ಇನ್ನುಳಿದ ಅರ್ಧಭಾಗ- ದಕ್ಷಿಣಾಯಣದಿಂದ ಉತ್ತರಾಯಣದ ಪ್ರಾರಂಭದವರೆಗಿನ ಅವಧಿಯನ್ನು ಸಾಧನಪಾದ ಎಂದು ತಿಳಿಯಲಾಗಿದೆ. ದಕ್ಷಿಣಾಭಿಮುಖ ಚಲನೆಯು ಸಾಮೀಪ್ಯದ ಅಥವಾ ಸೀತತ್ತ್ವದ ಸಮಯ ವಾಗಿದೆ. ಭೂದೇವಿಯು ತನ್ನ ಸ್ವಭಾವವಾದ ತಾಯಿಯ ಪಾತ್ರವನ್ನು ನಿರ್ವಹಿಸುವಳು. ಈ ಆರು ತಿಂಗಳಲ್ಲಿ ಸ್ತ್ರೀಶಕ್ತಿಗೆ ಸಂಬಂಧಿಸಿದ ಹಬ್ಬಗಳನ್ನು ಆಚರಿಸಲಾಗುತ್ತದೆ. ಈ ನೆಲದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಇದರೊಂದಿಗೆ ಹೊಂದಿಸಲಾಗಿದೆ. ಪ್ರತಿ ತಿಂಗಳೂ, ಏನೋ ಒಂದು ಹಬ್ಬ ಇರುತ್ತದೆ.
ವರ್ಷದ ಈ
ಸೀತತ್ತ್ವದ ಅವಧಿಯಲ್ಲಿ ಸೆಪ್ಟೆಂಬರ್ 23ರಂದು ತುಲಾ ಸಂಕ್ರಾಂತಿ ಬರುತ್ತದೆ ಮತ್ತು ನಂತರದ ಮೊದಲ ಅಮಾವಾಸ್ಯೆಯು ಮಹಾಲಯ ಅಮಾವಾಸ್ಯೆಯಾಗಿದೆ. ಮಹಾಲಯ ಅಮಾವಾಸ್ಯೆಯು ನಮ್ಮ ಜೀವನಕ್ಕೆ ಕೊಡುಗೆಯನ್ನು ನೀಡಿದ ಹಿಂದಿನ ಎಲ್ಲ ತಲೆಮಾರುಗಳಿಗೂ ಶ್ರಾದ್ಧವೆಂಬ ಪ್ರಕ್ರಿಯೆಯ ಮೂಲಕ ಕೃತಜ್ಞತೆ ಸಲ್ಲಿಸುವ ವಿಶೇಷ ದಿನವಾಗಿದೆ.
ಅಮಾವಾಸ್ಯೆಯಿಂದ ಉತ್ತರಾಯಣದ ಪ್ರಾರಂಭದವರೆಗಿನ ಸಮಯ
ವನ್ನು ದೇವಿಪಾದವೆಂದು ಕರೆಯಲಾಗಿದೆ. ಈ ಪಕ್ಷದಲ್ಲಿ ಭೂಮಿಯ ಉತ್ತರಾರ್ಧ ಗೋಳವು ‘ಕೋಮಲ’ವಾಗಲಿದೆ. ಏಕೆಂದರೆ ಉತ್ತರಾರ್ಧಗೋಳವು ಸೂರ್ಯನ ಬೆಳಕನ್ನು ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಡೆದುಕೊಳ್ಳುತ್ತದೆ. ಹಾಗಾಗಿ ಎಲ್ಲವೂ ದೊಡ್ಡ ಪ್ರಮಾಣದಲ್ಲಿರದೇ ಮಂದಗತಿಯಲ್ಲಿರುತ್ತದೆ.
ಮಹಾಲಯ ಅಮಾವಾಸ್ಯೆಯ ಮಾರನೆಯ ದಿನ ನವರಾತ್ರಿ ಅಥವಾ ದಸರಾಹಬ್ಬದ ಮೊದಲ ದಿನವಾಗಿದ್ದು, ದೇವಿಯ ಆರಾಧನೆಯು ಪ್ರಾರಂಭ ವಾಗುತ್ತದೆ. ವಿಜಯದಶಮಿಯಂದು ಸಮಾಪ್ತಿಯಾಗುವ ನವರಾತ್ರಿಯು ಒಂದು ಸಾಂಸ್ಕೃತಿಕ ಹಬ್ಬವಾಗಿದ್ದು, ಎಲ್ಲರಿಗೂ ಅತ್ಯಂತ ಮಹತ್ವದ್ದಾಗಿದೆ. ಅದು ಸಂಪೂರ್ಣವಾಗಿ ದೇವಿಯ ಹಬ್ಬವಾಗಿದೆ. ಕರ್ನಾಟಕದಲ್ಲಿ ದಸರಾ ಹಬ್ಬವು ಚಾಮುಂಡಿಯ ಕುರಿತಾಗಿದ್ದು, ಬಂಗಾಳದಲ್ಲಿ ಅದು ದುರ್ಗೆಯ ಹಬ್ಬವಾಗಿದೆ. ಇದೇ ರೀತಿ, ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಸ್ತ್ರೀದೇವತೆಗಳ ಹಬ್ಬವಾಗಿರುವ ನವರಾತ್ರಿಯು ಮೂಲಭೂತವಾಗಿ ಸ್ತ್ರೀದೇವತೆ ಅಥವಾ ಸ್ತ್ರೀದೈವದ ಆರಾಧನೆಯಾಗಿದೆ.
ನವರಾತ್ರಿಯ 9 ದಿನಗಳನ್ನು 3 ಮೂಲಭೂತ ಗುಣಗಳಾದ ತಮಸ್ಸು, ರಜಸ್ಸು ಮತ್ತು ಸತ್ವ ಗುಣಗಳ ಆಧಾರದ ಮೇಲೆ ವಿಭಾಗೀಕರಿಸಲಾಗಿದೆ. ಮೊದಲ 3 ದಿನಗಳು ತಮಸ್ಸಿಗೆ ಸಂಬಂಧಿಸಿದ್ದು, ದೇವಿಯು ದುರ್ಗೆ ಮತ್ತು ಕಾಳಿಯಂತೆ ಉಗ್ರರೂಪಿಯಾಗಿರುತ್ತಾಳೆ. ನಂತರದ 3 ದಿನಗಳು ಲಕ್ಷ್ಮಿಯದು. ದೇವಿಯು ಕೋಮಲವಾಗಿದ್ದು ಲೌಕಿಕ ಸುಖಸಂಪತ್ತುಗಳ ದೇವತೆಯಾಗಿರುತ್ತಾಳೆ. ಕೊನೆಯ 3 ದಿನಗಳು ಸತ್ವಗುಣ ಪ್ರಧಾನ ವಾದ ಸರಸ್ವತಿಯ ಅವಧಿಯಾಗಿದ್ದು, ಜ್ಞಾನ ಮತ್ತು ಸಾಕ್ಷಾತ್ಕಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ.
ತಮಸ್ ಎಂದರೆ ಜಡತ್ವ. ರಜಸ್ ಎಂದರೆ ಕ್ರಿಯಾಶೀಲತೆ, ಭಾವತೀವ್ರತೆ. ಸತ್ವ ಎಂದರೆ ಮಿತಿಗಳನ್ನು ಮೀರುವುದು, ಶರಣಾಗತಿ, ಕರಗುವಿಕೆ ಮತ್ತು ಒಂದಾಗುವಿಕೆ. ನಮ್ಮ ಶರೀರಗಳ ತಯಾರಿಕೆಯು ಮೂರು ದಿವ್ಯವಸ್ತುಗಳಾದ ಭೂಮಿ, ಸೂರ್ಯ ಮತ್ತು ಚಂದ್ರರೊಂದಿಗೆ ಗಾಢವಾಗಿ ಸಂಬಂಧಿಸಿದ್ದು, ಭೂತಾಯಿಯನ್ನು ತಮಸ್ ಎಂದು ಪರಿಗಣಿಸಲಾಗಿದೆ. ಸೂರ್ಯನನ್ನು ರಜಸ್ ಎಂದೂ, ಚಂದ್ರನನ್ನು ಸತ್ವ ಎಂದೂ ಪರಿಗಣಿಸಲಾಗಿದೆ.
ತಮಸ್ಸು ಎನ್ನುವುದು ಭೂಮಿಯ ಗುಣ ಮತ್ತು ಅವಳು ಜನ್ಮನೀಡುವವಳು. ತಾಯಿಯ ಗರ್ಭದಲ್ಲಿ ಕಳೆಯುವ ಅವಧಿಯು ತಮಸ್ಸು ಆಗಿದ್ದು, ಅದು ಬಹುತೇಕ ಚಟುವಟಿಕೆರಹಿತವಾಗಿರುತ್ತದೆ, ಆದರೆ ನಾವು ಬೆಳೆಯುತ್ತಿರುತ್ತೇವೆ. ಹಾಗಾಗಿ ತಮಸ್ ಎನ್ನುವುದು ಭೂಮಿ ಹಾಗೂ ಹುಟ್ಟಿನ ಸ್ವಭಾವವಾಗಿರುತ್ತದೆ. ನೀವು ಹೊರಬಂದ ಕ್ಷಣದಿಂದ ಚಟುವಟಿಕೆಯನ್ನು ಪ್ರಾರಂಭಿಸುತ್ತೀರಿ ಅಂದರೆ ರಜಸ್ ಪ್ರಾರಂಭವಾಗುತ್ತದೆ. ಮತ್ತು ಸಾಕಷ್ಟು ಅರಿವನ್ನು ಹೊಂದಿದರೆ ಅಥವಾ ಅದೃಷ್ಟವಂತರಾದರೆ, ಸತ್ವವು ನಿಮ್ಮನ್ನು ಸ್ಪರ್ಶಿಸುವುದು.
ಅಧಿಕಾರ, ಅಮರತ್ವ, ಬಲವನ್ನು ಯಾರು ಅಪೇಕ್ಷಿಸುತ್ತಾರೋ ಅಂತಹವರು ಕಾಳಿ ಅಥವಾ ಭೂತಾಯಿಯಂತಹ ತಮೋಗುಣ ಪ್ರಧಾನವಾದ ಸೀ ರೂಪಗಳನ್ನು ಆರಾಧಿಸುತ್ತಾರೆ. ಯಾರು ಲೌಕಿಕ ಸುಖ-ಸಂಪತ್ತು, ಭಾವತೀವ್ರತೆ ಗಳನ್ನು ಬಯಸುತ್ತಾರೋ ಅಂತಹವರು ಸಹಜವಾಗಿಯೇ ಲಕ್ಷ್ಮಿ ಅಥವಾ ಸೂರ್ಯನಂತಹ ರಜೋಗುಣ ಪ್ರಧಾನ ಸೀರೂಪಗಳನ್ನು ಆರಾಧಿಸುತ್ತಾರೆ. ಜ್ಞಾನ, ಅರಿವು ಮತ್ತು ಶರೀರದ ಮಿತಿಗಳನ್ನು ಮೀರಲು ಬಯಸುವವರು ಸತ್ವಗುಣ ಪ್ರಧಾನವಾದ ಸರಸ್ವತಿ ಅಥವಾ ಚಂದ್ರನನ್ನು ಆರಾಧಿಸುತ್ತಾರೆ.
ಈ ಒಂಭತ್ತು ದಿನಗಳನ್ನು ಮತ್ತು ಜೀವನದ ಇತರ ಎಲ್ಲ ಸಂಗತಿಗಳನ್ನು ಸಂಭ್ರಮದ ಮನೋಭಾವದಿಂದ ಕಾಣುವುದು ಅತ್ಯಂತ ಮುಖ್ಯ. ಈ ಒಂಭತ್ತು ದಿನಗಳನ್ನು ಈ ಕ್ರಮದಲ್ಲಿ ಹೊಂದಿಸಲಾಗಿದೆ. ಏಕೆಂದರೆ ನಾವೆಲ್ಲರೂ ಈ ಭೂಮಿಯಿಂದಲೇ ಹುಟ್ಟಿದವರು, ಮತ್ತು ಕ್ರಿಯಾಶೀಲ ಜೀವನವನ್ನು ಮಾಡುವವರು. ಅದೇ ರಜಸ್ಸು, ದೇವಿಯ ಎರಡನೇ ಗುಣಸ್ವಭಾವವಾಗಿದೆ. ಮೂರನೆಯದು ಜೀವನದ ಹಾದಿಯಲ್ಲಿ ಬರಬಹುದು ಅಥವಾ ಬರದೇ ಹೋಗಬಹುದು. ಆಕೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದರೆ ಸಾಕಷ್ಟು ಪ್ರಯತ್ನ ಮಾಡಬೇಕು. ಇಲ್ಲವಾದರೆ ಆಕೆ ಕೆಳಗಿಳಿದು ಬರುವುದಿಲ್ಲ. ಕಾಳಿಯು ನೆಲದ ಮೇಲಿರುವಳು. ಲಕ್ಷ್ಮಿಯು ಹೂವಿನ ಮೇಲೆ ಕುಳಿತಿರುವಳು. ಸರಸ್ವತಿಯು ನವಿಲಿನ ಮೇಲೆ ಸವಾರಿ ಮಾಡುತ್ತಿರುವಳು.
ಈ ಒಂಭತ್ತು ದಿನಗಳನ್ನು ಸಂಭ್ರಮದಿಂದ ಆಚರಿಸುವುದು ಅತ್ಯಂತ ಮುಖ್ಯ. ಎಲ್ಲವನ್ನೂ ಸಂಭ್ರಮದಿಂದ ಸಮೀಪಿಸಿದರೆ, ಜೀವನದ ಬಗ್ಗೆ ಗಂಭೀರವಲ್ಲದ ಮನೋಭಾವ ತಳೆಯುವುದನ್ನು ಕಲಿಯುತ್ತೀರಿ, ಆದರೆ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೀರಿ. ಈಗಿನ ಬಹುತೇಕ ಜನರ ಸಮಸ್ಯೆಯೇನೆಂದರೆ ಅವರು ಏನಾದರೊಂದನ್ನು ಮುಖ್ಯವೆಂದು ಭಾವಿಸಿ ಕೊಂಡರೆ ಅದರ ಬಗ್ಗೆ ವಿಪರೀತ ಗಂಭೀರ ಮನೋಭಾವ ತಳೆದುಬಿಡುತ್ತಾರೆ. ಅವರು ಅದೇನೂ ಮುಖ್ಯವಲ್ಲವೆಂದು ತಿಳಿದುಕೊಂಡರೆ, ಅದರ ಬಗ್ಗೆ ನಿರಾಳರಾಗಿಬಿಡುತ್ತಾರೆ. ಅಗತ್ಯವಿರುವಷ್ಟು ಶ್ರದ್ಧೆ ವಹಿಸುವುದಿಲ್ಲ. ಎಲ್ಲವನ್ನೂ ಗಂಭೀರವಲ್ಲದ ದೃಷ್ಟಿಕೋನದಿಂದ ನೋಡುವುದರೊಂದಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ ಜೀವನದ ರಹಸ್ಯ, ಅದೊಂದು ಆಟದಂತೆ.
ಈ ಮೂರರಲ್ಲಿ ಬಂಡವಾಳವನ್ನು ಹೂಡುವುದರಿಂದ ಜೀವನಕ್ಕೆ ಒಂದು ನಿರ್ದಿಷ್ಟ ಗತಿ ನೀಡುತ್ತದೆ. ತಮಸ್ಸಿನಲ್ಲಿ ಬಂಡವಾಳ ಹೂಡಿದರೆ ಒಂದು ರೀತಿಯಲ್ಲಿ ಶಕ್ತಿಯುತರಾಗುವಿರಿ. ರಜಸ್ಸಿನಲ್ಲಿ ಬಂಡವಾಳ ಹೂಡಿದರೆ, ವಿಭಿನ್ನ ರೀತಿಯಲ್ಲಿ ಶಕ್ತಿಯುತರಾಗುವಿರಿ. ಸತ್ವದಲ್ಲಿ ಬಂಡವಾಳವನ್ನು ಹೂಡಿದರೆ ಸಂಪೂರ್ಣವಾಗಿ ಬೇರೆಯದೇ ರೀತಿಯಲ್ಲಿ ಶಕ್ತಿಯುತರಾಗುವಿರಿ.
ಆದರೆ, ಇವೆಲ್ಲವನ್ನೂ ಮೀರಿ ಹೋದರೆ, ಮತ್ತೆ ಶಕ್ತಿಯ ಸಂಗತಿ ಯಿರುವುದಿಲ್ಲ, ಅದು ಮುಕ್ತಿಯೆನಿಸುತ್ತದೆ. ನವರಾತ್ರಿಯ ನಂತರ ಹತ್ತನೆಯ ಮತ್ತು ಕೊನೆಯ ದಿನವೇ ವಿಜಯದಶಮಿ. ಅಂದರೆ ಈ ಮೂರೂ ಮೂಲಗುಣಗಳನ್ನು ಜಯಿಸಿದ್ದೀರಿ ಎಂದರ್ಥ. ನೀವು ಯಾವುದಕ್ಕೂ ಒಳಗಾಗದೆ, ಪ್ರತಿಯೊಂದನ್ನೂ ನೋಡಿದ್ದೀರಿ. ಪ್ರತಿಯೊಂದು ಗುಣದಲ್ಲೂ ಭಾಗವಹಿಸಿದ್ದೀರಿ, ಆದರೆ ಯಾವುದರಲ್ಲೂ ಬಂಡವಾಳ ಹೂಡಿಲ್ಲ. ಅವುಗಳನ್ನು ಜಯಸಿದ್ದೀರಿ. ಅದೇ ವಿಜಯದಶಮಿ, ವಿಜಯದ ದಿನ. ನವರಾತ್ರಿ ಉತ್ಸವವು ಜೀವನದ ಪ್ರತಿಯೊಂದು ಮಹತ್ವದ ಸಂಗತಿಗಳ ಬಗ್ಗೆ ಪೂಜ್ಯ ಭಾವನೆ ಮತ್ತು ಕೃತಜ್ಞತೆ ಹೊಂದಿದ್ದರೆ ಹೇಗೆ ಅದು ನಮ್ಮನ್ನು ಯಶಸ್ಸು ಮತ್ತು ವಿಜಯದ ಕಡೆ ಕರೆದೊಯ್ಯುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.
ನಮ್ಮ ಅರಿವಿನಲ್ಲಿರುವ ಅನೇಕ ಸಂಗತಿಗಳಲ್ಲಿ, ಜೀವನ ರೂಪಿಸುವಲ್ಲಿ ಕೊಡುಗೆ ನೀಡುವ ಅನೇಕ ಸಂಗತಿಗಳಲ್ಲಿ, ಜೀವನದಲ್ಲಿ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಉಪಯೋಗಿಸುವ ಅತ್ಯಂತ ಮುಖ್ಯವಾದ ಉಪಕರಣಗಳೆಂದರೆ ಶರೀರ ಮತ್ತು ಮನಸ್ಸು. ನಡೆದಾಡುವ ಭೂಮಿ, ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ಸಂಪರ್ಕಕ್ಕೆ ಬರುವ ಜನರು ಹೀಗೆ ಎಲ್ಲದರ ಬಗ್ಗೆಯೂ, ಶರೀರ ಮತ್ತು ಮನಸ್ಸುಗಳನ್ನೂ ಸೇರಿಸಿ ಪೂಜ್ಯಭಾವನೆಯನ್ನು ಹೊಂದಿದರೆ ಅದು ಬದುಕನ್ನು ಜೀವನದ ವಿಭಿನ್ನ ಸಾಧ್ಯತೆಯೆಡೆಗೆ ಕರೆದೊಯ್ಯುತ್ತದೆ. ಈ ಎಲ್ಲ ಸಂಗತಿಗಳ ಬಗ್ಗೆ ಪೂಜ್ಯಭಾವನೆ ಮತ್ತು ಭಕ್ತಿಯನ್ನು ಹೊಂದುವುದರಿಂದ ನಾವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲೂ ಯಶಸ್ಸು ನಿಶ್ಚಿತವಾಗುತ್ತದೆ.
ಸಾಂಪ್ರದಾಯಿಕವಾಗಿ, ಭಾರತೀಯ ಸಂಸ್ಕೃತಿಯಲ್ಲಿ ದಸರಾ ಹಬ್ಬವು ಜನರೆಲ್ಲ ಬೆರೆತು, ಕಲೆತು ಸಂಭ್ರಮಿಸಿ ಕುಣಿಯುವ ಸಮಯವಾಗಿದೆ. ಆದರೆ ಸುಮಾರು 200 ವರ್ಷಗಳ ಹೊರಗಿನ ಪ್ರಭಾವ ಮತ್ತು ದಾಳಿಗಳಿಂದ ಆ ಸಂಭ್ರಮವನ್ನು ಇಂದು ಕಳೆದುಕೊಂಡಿದ್ದೇವೆ. ಅಲ್ಲವಾದರೆ ದಸರಾ ಎನ್ನುವುದು ಯಾವಾಗಲೂ ರೋಮಾಂಚಕ. ಈಗಲೂ ಅನೇಕ ಪ್ರದೇಶಗಳಲ್ಲಿ ಹಾಗೆಯೇ ಇದ್ದರೂ ದೇಶದ ಹಲವು ಭಾಗಗಳಲ್ಲಿ ಮರೆಯಾಗಿಬಿಟ್ಟಿದೆ. ನಾವದನ್ನು ಮತ್ತೆ ತರಬೇಕು. ವಿಜಯದಶಮಿ ಅಥವಾ ದಸರಾಹಬ್ಬವು ಈ ನೆಲದ ಜನರ ಜೀವನದಲ್ಲಿ ಅಗಾಧ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಜಾತಿ, ಪಂಥ ಮತ್ತು ಮತಗಳನ್ನು ಪರಿಗಣಿಸದೆ ಸಂತೋಷ ಮತ್ತು ಪ್ರೀತಿಯಿಂದ ಆಚರಿಸಲ್ಪಡಬೇಕು. ದಸರಾವನ್ನು ಪೂರ್ಣ ತೊಡಗಿಸಿಕೊಳ್ಳುವಿಕೆಯೊಂದಿಗೆ ಪ್ರೀತಿ ಮತ್ತು ಸಂತೋಷದಿಂದ ಆಚರಿಸಬೇಕೆಂಬುದು ನನ್ನ ಆಶಯ ಮತ್ತು ಆಶೀರ್ವಾದವಾಗಿದೆ.
(ಸದ್ಗುರು ಜಗ್ಗಿ ವಾಸುದೇವ್ ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)