December 7, 2016

ಇನ್ನು ೨೦ ವರ್ಷಗಳಲ್ಲಿ ನನ್ನ ಭಾರತ

ನಮ್ಮ ಹೆಮ್ಮೆಯ ಪ್ರಧಾನಿಯವರ "ಡಿಜಿಟಲ್ ಇಂಡಿಯಾ" ಕನಸು ಸಾಕಾರವಾದರೆ ಮುಂದಿನ ೨೦ ವರ್ಷಗಳಲ್ಲಿ ಭವ್ಯ ಭಾರತವು ಯಾವ ದುಸ್ಥಿತಿಯನ್ನು ತಲುಪಬಹುದು ಎನ್ನುವ ನನ್ನ ಅಭಿಪ್ರಾಯವನ್ನು ಈ ಲೇಖನದ ಮೂಲಕ ವ್ಯಕ್ತಪಡಿಸುತ್ತಾ ಇದ್ದೇನೆ. ಇದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ವಿಶ್ಲೇಷಣೆಗಳು. 


ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ ಕಾರಣ ಮೊದಲು ಅಲ್ಲಿ ಆಗಬಹುದಾದ  ಪರಿಣಾಮಗಳನ್ನು ಊಹಿಸಿದ್ದೇನೆ. ಮೂಲ ತಂತ್ರಜ್ಞಾನಗಳಾದ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳು ಮುಚ್ಚಿ ಹೋಗಲಿವೆ (ಅಥವಾ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಲಿವೆ). ಇನ್ನು ಎಲೆಕ್ಟ್ರಾನಿಕ್ಸ್ ಎಂದರೆ ಮೊಬೈಲ್ ಫೋನಿನ ಹಾಗೂ ಗಣಕಯಂತ್ರಗಳ ಉತ್ಪಾದನೆಗಳಿಗೆ ಸೀಮಿತವಾಗಲಿದೆ. ರೊಬೊಟಿಕ್ಸ್ ಅನ್ನೂ ಇದರಲ್ಲಿ ಸೇರಿಸಬಹುದು. ಟೆಲಿ ಕಮ್ಯೂನಿಕೇಷನ್ ವಿಭಾಗವು ಮೊಬೈಲ್ ಕಮ್ಯೂನಿಕೇಷನ್ ಮತ್ತು ಅಂತರ್ಜಾಲ ವ್ಯವಸ್ಥೆಯ ಸುತ್ತ ಗಿರಾಕಿಹೊಡೆಯಲಿವೆ. ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗವು ಮುಂಚೂಣಿಗೆ ಬರಲಿದೆ. ಮೊಬೈಲ್ ಫೋನಿಗೆ ಬೇಕಾದ ತಂತ್ರಾಂಶ, ಇ-ಆಡಳಿತ, ಕೈಗಾರಿಕೆಗಳಲ್ಲಿ ಯಂತ್ರಗಳ ಸ್ವಯಂನಿಯಂತ್ರಣ (ಆಟೋಮೇಷನ್), ಬ್ಯಾಂಕಿಂಗ್ ಮುಂತಾದ  ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಗಣಕೀಕರಣಗೊಳ್ಳಲಿದೆ. ಇದರಿಂದಾಗಿ ಕೋಟ್ಯಂತರ ಸಾಫ್ಟ್ವೇರ್ ಉದ್ಯೋಗಗಳ ಸೃಷ್ಟಿಯಾಗಲಿವೆ. ಇದರಿಂದಾಗಿ ಮುಂದೆ ಇಂಜಿನಿಯರಿಂಗ್ ಎಂದರೆ ಸಾಫ್ಟ್ವೇರ್ ಎನ್ನುವ ಮನೋಭಾವ ಜನರಲ್ಲಿ ಉಂಟಾದರೆ ಅಚ್ಚರಿಯೇನಿಲ್ಲ. 


ಇಂತಹ ತಂತ್ರಾಂಶಗಳ ಜನಕರು ಮುಂದೆ ನಿಜಜೀವನದಲ್ಲಿ ಬಹಳ ತೊಂದರೆಯನ್ನೂ ಅನುಭವಿಸಲಿದ್ದಾರೆ. ಕೌಟುಂಬಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ತಲೆದೋರಲಿವೆ. ಇಂತಹ ಸಮಸ್ಯಗಳು ಈಗಾಗಲೇ ಪ್ರಚಲಿತದಲ್ಲಿರುವುದರಿಂದ ಅವುಗಳನ್ನು ಇಲ್ಲಿ ಪುನರುಲ್ಲೇಖಿಸಿಲ್ಲ. ಅಲ್ಲದೆ ಮೊಬೈಲ್ ಫೋನಿನ ದಾಸರಾಗುವ ಜನರೂ ಹಲವಾರು ಆರೋಗ್ಯ ಸಮಸ್ಯಗಳಿಗೆ ತುತ್ತಾಗಲಿದ್ದಾರೆ. ಮೊಬೈಲ್ ಕ್ರಾಂತಿಯ ಪರಿಣಾಮವಾಗಿ ಕೆಲವೇ ವರ್ಷಗಳಲ್ಲಿ ಜನರು ಪಡುತ್ತಿರುವ ಪಾಡನ್ನು ನೋಡಿದರೆ ಅದು ಜನರ ಭವಿಷ್ಯವನ್ನು ಇನ್ನಷ್ಟು ಕರಾಳವಾಗಿಸುವುದರಲ್ಲಿ ಸಂಶಯವೇ ಇಲ್ಲ. ಇಂತಹ ಆರೋಗ್ಯ ಸಮಸ್ಯೆಗಳಿಗೆ "Biomedical engineering" ಅಥವಾ "Biotechnology" ವಿಭಾಗದ ತಂತ್ರಜ್ಞರು ಹೊಸ ಔಷದ ಉಪಕರಣಗಳ ಸಂಶೋಧನೆಗೆ ಮುಂದಾಗುತ್ತಾರೆ. ಈ ಉಪಕರಣಗಳು ಮನುಷ್ಯನನ್ನು ಒಂದು ಸಂಪೂರ್ಣ ಜೈವಿಕ ಘಟಕ ಎಂದು ಪರಿಗಣಿಸದೆ ಕೇವಲ ಅಂಗಾಂಗಗಳ ಪರಿಶೀಲನೆಗೆ ಒತ್ತು ಕೊಡುತ್ತವೆ. ಇವೆಲ್ಲವೂ ಒಂದಕ್ಕೊಂದು ತಾಳೆ ಇಲ್ಲದ ಚಿಕಿತ್ಸಾವರದಿಗಳನ್ನು ನೀಡಿ ಚಿಕಿತ್ಸೆಯನ್ನು ಸಂಕೀರ್ಣಗೊಳಿಸಲಿವೆ. ತಲೆಗೆ, ಕಿವಿಗೆ, ಕಣ್ಣಿಗೆ, ಮೂಗಿಗೆ, ಬಾಯಿಗೆ, ಗಂಟಲಿಗೆ ಪ್ರತ್ಯೇಕ ವೈದ್ಯರು. ಇನ್ನು ಹೃದಯ, ಶ್ವಾಸಕೋಶ, ಮೂತ್ರಕೋಶ, ಮೂಳೆ, ಇತ್ಯಾದಿ ಎಲ್ಲ ಅಂಗಗಳಿಗೂ ಒಬ್ಬೊಬ್ಬ ವೈದ್ಯ ಹುಟ್ಟಿಕೊಳ್ಳಲಿದ್ದಾನೆ. ಈ ಅಂಗಗಳನ್ನು ಪರೀಕ್ಷಿಸಲು ಹೊಸ ವೈದ್ಯಕೀಯ ಉಪಕರಣಗಳು, ಅದನ್ನು ನಿರ್ವಹಿಸಲು ಪರೀಕ್ಷಾಲಯಗಳು ಹುಟ್ಟಿಕೊಳ್ಳಲಿವೆ. ಈ ಪರೀಕ್ಷಾಲಯಗಳೂ, ಆಸ್ಪತ್ರೆಗಳೂ ಹಾಗೂ ವೈದ್ಯರ ನಡುವೆ ಅನಧಿಕೃತ ಒಳ ಒಪ್ಪಂದಗಳೂ ಏರ್ಪಟ್ಟು ರೋಗಿಯ ಬದುಕನ್ನು ಅಸಹನೀಯಗೊಳಿಸಲಿವೆ. ಇದರ ಜೊತೆಗೆ "ಆರೋಗ್ಯ ವಿಮೆ" ಎಂಬ ಹೆಮ್ಮಾರಿಯೂ ಬೃಹದಾಕಾರ ತಾಳಿ ಜನರ ಆದಾಯದ ಒಂದಷ್ಟು ಪಾಲನ್ನು ನುಂಗಲಿವೆ. ಪ್ರತ್ಯೇಕ ಅಂಗಗಳ ಚಿಕಿತ್ಸಾ ವಿಧಾನವು ರೋಗದ ಸಮಗ್ರ ಚಿತ್ರಣವನ್ನು ನೀಡುವಲ್ಲಿ ವಿಫಲವಾಗುತ್ತವೆ. ಇದರಿಂದ ರೋಗದ ಮೂಲ ಪತ್ತೆಹಚ್ಚುವಿಕೆ ಸಾಧ್ಯವಿಲ್ಲ. ಕೇವಲ ಪರಿಣಾಮಗಳನ್ನು ನೋಡಿ ಒಂದು ರೋಗದ ನಿರ್ಧಾರ ಮಾಡುವುದು ನಿಜವಾಗಿಯೂ ಮೂರ್ಖತನ. ಇದು ಮಲೇರಿಯಾ ಅಥವಾ ಚಿಕನ್ ಗುನ್ಯಾ ಬಂದಾಗ paracetamol ಮಾತ್ರೆ ತಿಂದಂತೆಯೇ ಆದೀತು. 


ಸಾಫ್ಟ್ವೇರ್ ಕ್ರಾಂತಿಯ ಪರಿಣಾಮವಾಗಿ ಜನರು ಕುಳಿತಲ್ಲಿಯೇ ಕೆಲಸ ಮಾಡುವ ಪ್ರವೃತ್ತಿಯು ಹೆಚ್ಚಲಿದೆ. ಅಂಗಡಿಯ ಸಾಮಾನು ಕೊಳ್ಳುವುದು, ವಿದ್ಯುತ್, ದೂರವಾಣಿ ಇತ್ಯಾದಿಗಳ ಕಂತು ಕಟ್ಟುವುದು, ಬ್ಯಾಂಕಿಗೆ ಸಂಬಂಧಪಟ್ಟ ತಿರುಗಾಟ, ಶಿಕ್ಷಣ, ಮನರಂಜನೆ (ಚಲನ ಚಿತ್ರ, ಪುಸ್ತಕ ಇತ್ಯಾದಿ) ಎಲ್ಲವೂ ಕುಳಿತಲ್ಲಿಯೇ ಸಾಧ್ಯವಾಗಲಿವೆ. ಇದರಿಂದ ದೈಹಿಕ ವ್ಯಾಯಾಮ ಕಡಿಮೆಯಾಗಲಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗಲಿದೆ. ದೇಹಕ್ಕೆ ಬೊಜ್ಜು ಬರುವುದು, ಪರಿಣಾಮಮವಾಗಿ ಮಧುಮೇಹ, ರಕ್ತದೊತ್ತಡ, ಮಾನಸಿಕ ವ್ಯಾಧಿಗಳು (ಖಿನ್ನತೆ ಇತ್ಯಾದಿ) ಹೆಚ್ಚು ಹೆಚ್ಚಾಗಿ ಜನರಲ್ಲಿ ಕಂಡುಬರಲಿದೆ. ಇನ್ನು ಸಾಮಾಜಿಕ ತಾಣಗಳ ಮೂಲಕ ಮನಸ್ಸಿನ ಶಾಂತಿ ಕದಡುವುದಲ್ಲದೆ ಜನರ ಅಮೂಲ್ಯ ಸಮಯವೂ ವ್ಯರ್ಥವಾಗಲಿವೆ. ಅಲ್ಲದೆ ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. 

ಇನ್ನು ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ಅತಿಯಾದ ಧನದಾಹ ಕಂಡುಬರಲಿದೆ. ಅಲ್ಲದೆ ದಾಂಪತ್ಯ ಜೀವನದ ವೈಫಲ್ಯತೆಗಳು ಹೆಚ್ಚಲಿವೆ. ಹೊಸ ಹೊಸ ಸಾಫ್ಟ್ವೇರ್ ಗಳ ಆಗಮನವು ಹೊಸ ಪೀಳಿಗೆಗೆ ಹೆಚ್ಚಿನ ಅವಕಾಶಗಳನ್ನು ತರಲಿದೆ. ಇದರಿಂದ ಹಿರಿಯ ಸಾಫ್ಟ್ವೇರ್ ಉದ್ಯೋಗಿಗಳ ಕಡೆಗಡನೆ, ಉದ್ಯೋಗದಲ್ಲಿ ಅಸ್ಥಿರತೆ ಕಾಡಲಿದೆ. ಇತರೆ ಕೆಲಸ ಮಾಡಲು ನೈಪುಣ್ಯತೆಯ ಕೊರತೆಯಿಂದಾಗಿ ಅವರ ಜೀವನವು ಅಯೋಮಯ ಸ್ಥಿತಿಯನ್ನು ತಲುಪಲಿದೆ. 

ಬೆಂಗಳೂರಿನಂತಹ ನಗರಗಳು ಹೆಚ್ಚಿದ ಜನಸಂಖ್ಯೆ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಆಧಿನಿಕ ಯಮಪುರಿಯಾಗಲಿವೆ. ರಸ್ತೆ ತುಂಬಾ ವಾಹನಗಳು ಯಮದೂತರಂತೆ ವಿಹರಿಸಲಿವೆ. ಒಳಚರಂಡಿ, ಕಸ ವಿಲೇವಾರಿ ಸಮಸ್ಯೆಗಳು ಜೀವನವನ್ನು ನಿತ್ಯ ನರಕವಾಗಿಸಲಿವೆ. ವಾಯು, ಜಲ, ಶಬ್ದ ಮಾಲಿನ್ಯಗಳು ಪರಿಸರವನ್ನು ಹದಗೆಡಿಸಿ ಜನರು ಅನಾಗರಿಕ ಬದುಕನ್ನು ನಡೆಸುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. 



ಇದಕ್ಕೆಲ್ಲ ಪರಿಹಾರವನ್ನು ತುರ್ತಾಗಿ ಕಂಡು ಹಿಡಿಯದೇ ಹೋದರೆ ನಮ್ಮ ದೇಶ ಮುಂದುವರೆಯುವುದು ಅಸಾಧ್ಯ. ದಯವಿಟ್ಟು ಚಿಂತಿಸಿ ... ಮುನ್ನಡೆಯಿರಿ. ವಂದೇ ಮಾತರಂ.  

October 14, 2016

ಪರೋಪಕಾರ

ತಿರುಕ ಸಂಹಿತೆಯ ಹದಿಮೂರನೆಯ ಸಂಪುಟದಲ್ಲಿ ಪೂಜ್ಯ ಸ್ವಾಮೀಜಿಯವರು ಸ್ವಾನುಭವಗಳನ್ನೇ ನೀತಿಸಂಹಿತೆಯ ರೂಪದಲ್ಲಿ ನಮಗೆ ನೀಡಿರುತ್ತಾರೆ. ಇವು ತ್ರಿಪದಿಯಲ್ಲಿ ವಚನ ಪದಗಳಾಗಿ ಮೂಡಿಬಂದಿವೆ. ಇಂತಹ ಬೋಧಪ್ರದ ವಿಚಾರಗಳು ಸರಳ ಭಾಷೆಯಲ್ಲಿ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟವೇ ಸರಿ. ಸಂಹಿತೆಯಲ್ಲಿ ಹಲವು ನೀತಿಪಾಠಗಳು ಅಡಕವಾಗಿದ್ದರೂ ಪರೋಪಕಾರಕ್ಕೆ ಸಂಬಂದಿಸಿದ ಕೆಲವು ಪದಗಳನ್ನು ಆರಿಸಿ ನನ್ನ ವಿವೇಚನೆಯ ಮಿತಿಯಲ್ಲಿ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಾಜ್ಞರು ವಿಷಯಗಳ ಬಗ್ಗೆ ಇನ್ನಷ್ಟು ಬೆಳಕನ್ನು ಚೆಲ್ಲಬೇಕೆಂದು ಹಾರೈಸುತ್ತೆನೆ.
ತಿರುಕ ಸಂಹಿತೆಯ  ಹದಿಮೂರನೆಯ ಸಂಪುಟದ ೨೨ನೇ ತ್ರಿಪದಿಯು ಹೀಗಿದೆ

ಆಗು ನೀ ಮಾನವನೆ ಆಲದ ಮರವಾಗು 
ಆಗದಿರು ಜಾಲಿಯಾ ಮರ ಬರಿ ಮುಳ್ಳು 
ಸಾಗದಿರಲೈ ನಿನ್ನ ನೋಡುತ ದೂರ ನೀ ತಂಪಾಗು ನೆರಾಳಾಗು 
                           ಆಶ್ರಯವಾಗು ಬರಡಾಗದಿರು ತಿರುಕ।।
ಪದ್ಯವು "ಪರರಿಗೆ ನೀಡುವ ಆಶ್ರಯ" ಮಹತ್ವವನ್ನು ತಿಳಿಸುತ್ತದೆ. "ತಂಪಾಗು", "ನೆರಳಾಗು" ಮುಂತಾದ ವಿಶೇಷಣಗಳು ಆಶ್ರಯದ ಲಕ್ಷಣಗಳನ್ನು ತಿಳಿಹೇಳಿದರೆ, "ಬರಡಾಗದಿರು" ಎಂಬ ಎಚ್ಚರಿಕೆಯನ್ನೂ ಈ ತ್ರಿಪದಿ ನಮಗೆ ನೀಡುತ್ತದೆ. ತಿರುಕ ಸಂಹಿತೆಯ ಪ್ರಥಮ ಸಂಪುಟದ ಹದಿನಾರನೇ ಅಧ್ಯಾಯ (ಅಪಾತ್ರ ದಾನ) ದಲ್ಲೊಂದು ಆಲದ ಮರದ ಪ್ರಸಂಗ ಉಲ್ಲೇಖವಾಗಿದೆ.  ಆಲದ ಮರವೇನೋ ತಾನು ಹೆಮ್ಮರ, ಯಾರಿಗೆ ಬೇಕಾದರೂ ಆಶ್ರಯ ನೀಡಬಲ್ಲೆ ಎಂದು ಬೀಗುತ್ತದೆ. ಕಾರಣ ಅಲ್ಲಿ ಸೋಮಾರಿತನವೂ ಬೆಳೆಯುತ್ತದೆ. ಇದನ್ನು ಸಹಿಸದ ಪ್ರಕೃತಿ ಆಶ್ರಯವು ಆರ್ತರಿಗೆ ಮಾತ್ರ, ಇಲ್ಲವಾದರೆ ಅದು ಅಪಾತ್ರವಾಗುತ್ತದೆ ಎಂದು ಲೋಕ ಮುಖಕ್ಕೆ ಸಾರುತ್ತದೆ. ಅಂತೆಯೇ "ಅತಿಥಿ ದೇವೋ ಭಾವ" ಎನ್ನುವ ಉಪನಿಷತ್ ವಾಕ್ಯದಂತೆ ಅತಿಥಿಗಳಿಗೂ, ದೀನ-ದಲಿತರಿಗೂ, ಜೀವನದಲ್ಲಿ ದಣಿದವರಿಗೂ, ನೊಂದವರಿಗೂ, ಸೋತವರಿಗೂ ಆಶ್ರಯವನ್ನು ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಇಂತಹ ಸೌಲಭ್ಯ ಕಲ್ಪಿಸಲು ಅಸಾಧ್ಯವೆನಿಸಿದರೆ ಹೀಗೊಂದು ಉಪಾಯ ಇದೆ

ಇಂದಿನ ಯಾಂತ್ರಿಕ ಜೀವನದಲ್ಲಿ ಕುಟುಂಬದಿಂದ ತಿರಸ್ಕೃತಗೊಳ್ಳುತ್ತಿರುವ ಜನರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಲ್ಲಿ ಮಕ್ಕಳು, ಸ್ತ್ರೀಯರು ಹಾಗೂ ಹಿರಿಯ ಪೋಷಕರನ್ನೂ ಕಾಣಬಹುದು. ಇವರಿಗೆ ಆಶ್ರಯ ತಾಣಗಳಾಗಿ ಅನಾಥಾಶ್ರಮಗಳ ಸಂಖ್ಯೆಯಲ್ಲೂ ವೃದ್ಧಿಯಾಗಿದೆ. ಇಂತಹ ಸ್ಥಳಗಳಿಗೆ ವಾರಾಂತ್ಯದಲ್ಲಿ ಭೇಟಿ ನೀಡಿ ಅವರನ್ನು ಸಂತೈಸುವ ಕಾರ್ಯ ಮಾಡಬಹುದು. ಚಿಕ್ಕ ಪುಟ್ಟ ಸಂತೋಷದ ಸಮಾರಂಭಗಳನ್ನು (ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ) ಅವರ ಜೊತೆ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬಹುದು. ತನ್ಮೂಲಕ ತಮ್ಮನ್ನು ತೊರೆದವರ ಬಗೆಗಿನ ಅತೃಪ್ತಿಯನ್ನು ಹೋಗಲಾಡಿಸಲು ಪ್ರಯತ್ನಿಸಬಹುದು. ಅಷ್ಟೇ ಅಲ್ಲದೆ, ನಮ್ಮಲ್ಲಿ ಬಳಸಿ ಉಳಿದ ಬಟ್ಟೆ ಬರೆ, ಆಟದ ಸಾಮಾನು ಹಾಗೂ ಉಪಯುಕ್ತ ಬಳಸಿದ ವಸ್ತುಗಳನ್ನು ಅವರಿಗೆ ದಾನವಾಗಿ ನೀಡಬಹುದು. ಇಷ್ಟನ್ನು ಮಾಡಲು ಕೇವಲ ಒಂದು ಉತ್ತಮವಾದ ಮನಸ್ಸೊಂದಿದ್ದರೆ ಸಾಕಲ್ಲವೇ

ಕೊಟ್ಟಿದ್ದು ದಾನವಲ್ಲವೋ ಮುಂದೆ ನಿನಗದು ಇಡುಗಂಟು ಮು 
ಚ್ಚಿಟ್ಟದ್ದು ನಿನ್ನದಲ್ಲವೋ ಕಳ್ಳಕಾಕರದು ದೊರೆಗಳದು ಬಿಡು 
ಕೊಟ್ಟು ಕೆಟ್ಟೆನೆಂದೆನಬೇಡ ಕಾಲ ಹೇಳಲು ಬೇಡ 
         ಸಮಯವರಿತು ಬಂದು ನಿನ್ನನು ಸೇರುವುದು ತಿರುಕ।

ಪದ್ಯದಲ್ಲಿ ಕೊಟ್ಟ ದಾನವು ಹಿಂತಿರುಗಿ ನಮ್ಮ ಕೈ ಬಂದು ಸೇರುವುದರ ಬಗ್ಗೆ ಉಲ್ಲೇಖವಿದೆ. ಕೊಟ್ಟ ದಾನವೆಲ್ಲವೂ "ಇಡುಗಂಟು" ಎನ್ನಲಾಗಿದೆ. ದಾನವೇ ಇಡುಗಂಟು ಎಂದಾದ ಮೇಲೆ ನಮ್ಮ ಸಂಪತ್ತನ್ನು ಬಚ್ಚಿಡುವುದರಿಂದ ಲಾಭವಿಲ್ಲ ಅಲ್ಲವೇ! ಇದರಲ್ಲಿ "ಸಮಯವರಿತು" ಎನ್ನುವುದು ಬಹು ಮುಖ್ಯ ಶಬ್ದ. ಸತ್ಯ ಹರಿಶ್ಚಂದ್ರ, ಬಲೀಂದ್ರ ಹಾಗೂ ಶಿಭಿ ಚಕ್ರವರ್ತಿಯ ಪ್ರಸಂಗಗಳಲ್ಲಿ ಇದಕ್ಕೆ ಪೂರಕವಾದ ವಿಚಾರಗಳನ್ನು ಅರಿಯಬಹುದು. ವಿಧಿಯು ನಮ್ಮ ಬದುಕಿನಲ್ಲಿಯೂ ಕೂಡ ಇಂತಹ ಪ್ರಸಂಗಗಳನ್ನು ಎದುರಿಸುವಂತೆ ಮಾಡುತ್ತದೆ. ಸಂದರ್ಭದಲ್ಲಿ ಕೇವಲ ಭಗವಂತನನ್ನು ಮೊರೆಹೋಗುವುದನ್ನು ಬಿಟ್ಟರೆ ನಮಗೆ ಬೇರೆ ಅವಕಾಶ ಇರುವುದಿಲ್ಲ. ಸಕಲ ಚರಾಚರಗಳ ಜವಾಬ್ದಾರಿಯನ್ನೂ ಹೊತ್ತಿರುವ ಭಗವಂತನಾದರೂ ಸಂದರ್ಭದಲ್ಲಿ ಏನನ್ನು ಮಾಡಲು ಸಾಧ್ಯ! ಹಾಗಾಗಿ ನಾವೇ ಇಟ್ಟಿರುವ ದಾನವೆಂಬ ಇಡುಗಂಟಿನಿಂದ ಸಹಾಯ ಪಡೆದುಕೊಳ್ಳುವುದು ಜಾಣತನವಲ್ಲವೇ? ನೆನಪಿರಲಿ ಕೇವಲ ದುಡ್ಡಿನಿಂದ ಕೊಳ್ಳಲಾರದ ವಸ್ತುಗಳ ಸಂಖ್ಯೆ ಬಹಳದೊಡ್ಡದಿದೆ (ನಿದ್ರೆ, ನೆಮ್ಮದಿ, ಶಾಂತಿ, ಆರೋಗ್ಯ, ಸ್ನೇಹಜ್ಞಾನ, ಆನಂದ, ಒಳ್ಳೆಯ ಪತಿ/ಪತ್ನಿ, ಮಕ್ಕಳು, ಬಂಧುಗಳು, ಪ್ರೇಮ-ಪ್ರೀತಿ, ಸಹನೆ, ಗೌರವ, ಕಾಲ, ಗುಣ, ನಂಬಿಕೆ, ಸಹಾನುಭೂತಿ, ದಯೆ, ಸತ್ಯ, ನಡತೆ, ಇತ್ಯಾದಿ). ಆದರೆ ನಮ್ಮ ದಾನದ ಇಡುಗಂಟಿನಿಂದ ಇದರಲ್ಲಿ ಕೆಲವನ್ನಾದರೂ ಹೊಂದಲು ಸಾಧ್ಯ, ಪ್ರಯತ್ನಿಸೋಣ.     
ಸಿರಿವಂತ ತಾ ಮೆರೆವ ನಾದರೇನು ಫಲ ಬಡ  
ನರ ಪೊರೆವನೇ ಇಲ್ಲ ಖಂಡಿತವು ಅವರನು 
ತರಿದು ತಾ ತಿಂದು ಕೂಡಿಟ್ಟನದರಿಂದ ಸಿರಿವಂತನಾದನೈ ಸುಡಲಿ 
                       ಅದು ಜೀವನವೆ ತಿರುಕ।
ಕೂಡಿಟ್ಟದ್ದನ್ನೆಲ್ಲ ಕಳ್ಳ-ಕಾಕರು ಹೊತ್ತೊಯ್ಯುವ ವಿಚಾರಗಳನ್ನು ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುವ ಸಂದರ್ಭದಲ್ಲಿ ಪರೋಪಕಾರದ ಸವಿಯನ್ನು ನಾವೆಲ್ಲ ಸವಿಯೋಣ ಎಂದು ನಾನು ಹಾರೈಸುತ್ತೇನೆಪೂಜ್ಯ ಸ್ವಾಮೀಜಿಯವರು ಬರೆದಿರುವ ಶ್ರೀ ಅಣ್ಣಪ್ಪಯ್ಯ ಚರಿತ್ರೆಯ ಸಹ್ಯ ಪರ್ವದಲ್ಲಿ ಅವರು ನಾಗಸೂತ್ರವನ್ನು ಬಣ್ಣಿಸುತ್ತಾ "ಒನಕೆಯಂತಿರಬೇಕು ಜೀವನವು ಕಾಳ ಕುಟ್ಟಿ ಕೊಡು ಸಮಾಜಕ್ಕೆ ತಿನ್ನಬೇಡೆಲವೊ ಮನುಜ ಸ್ವಾರ್ಥಿಯಾಗಬೇಡಎಂದಿದ್ದಾರೆ. ಎಂತಹ ಸುಂದರ ಉಪಮೆ. ಸಿಕ್ಕಿದ್ದೆಲ್ಲವನ್ನೂ ಅನುಭವಿಸುತ್ತಾ, ಪಾಪದ ಪ್ರಾಣಿ ಪಕ್ಷಿಗಳನ್ನು ಕೇವಲ ತನ್ನ ಬಾಯಿ ಚಪಲಕ್ಕಾಗಿ ತಿನ್ನುತ್ತಾಕ್ರೂರಿಯಾಗಿ ಬದುಕನ್ನು ಸಾಗಿಸುತ್ತಿರುವವರನ್ನು ಎಚ್ಚರಿಸುತ್ತಿದೆ ನುಡಿ ಮಾತು. ಪ್ರಪಂಚದ ಎಲ್ಲ ಜೀವಿಗಳಿಗೂ ಸಮನಾಗಿ ಬದುಕುವ ಹಕ್ಕನ್ನು ಸೃಷ್ಟಿಕರ್ತ ಕರುಣಿಸಿದ್ದಾನೆ. ಅದನ್ನು ನಾವೆಲ್ಲರೂ ಗೌರವಿಸಲು ಕಲಿಯಬೇಕು.

ಹಾಗೆಯೇ ಅದೇ ಪರ್ವದ ಕೊನೆಯಲ್ಲಿ 

ಕರ್ತನೊಬ್ಬನು ಇಹನು ಪ್ರಕೃತಿಯಲಿ ಸೃಜಿಸಿದನು ಅನಂತವನು 
ಅರ್ಥಮಾಡಿಕೊ ಮನುಜ ಅವೆಲ್ಲ ನಿನಗಾಗಿಯಲ್ಲ ಅದಕೆ ಬಾಜನರು ಬೆರಿಹರೆಂದು ಅರಿಯೊ।। 

ಎನ್ನುವ ಮೂಲಕ ಕೇವಲ ಸ್ವಾರ್ಥಿಯಾಗಿ ಬದುಕು ಸವೆಸದೆ ಪರೋಪಕಾರಿಯಾಗಿ ಜೀವಿಸಿರಿ ಎಂಬ ಸುಂದರವಾದ ಸಂದೇಶವನ್ನು ನೆಡಲಾಗಿದೆನಿಸ್ವಾರ್ಥ ಬದುಕನ್ನು ಸವೆಸಿ ದೈವತ್ವಕ್ಕೆ ಏರಿದ "ಶ್ರೀ ಅಣ್ಣಪ್ಪಯ್ಯ"ನವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ.
"ಆಶ್ರಮ ಧರ್ಮ ದೀಪಿಕೆ" ಗೃಹಸ್ಥಾಶ್ರಮಾಧ್ಯಾಯದ ಆರಂಭದಲ್ಲೇ ಸ್ವಾಮೀಜಿಯವರು ಸದ್ಗೃಹಸ್ಥನ ಸಾಮರ್ಥ್ಯವನ್ನು ವಿವರಿಸಿದ್ದಾರೆ.  ಗೃಹಸ್ಥನೊಬ್ಬನು ಇಚ್ಛೆ ಪಟ್ಟರೆ, ಧರ್ಮಾಚರಣೆಯಲ್ಲಿ ಬದ್ಧನಾಗಿ ನಿಷ್ಠನಾಗಿ ನಡೆದುಕೊಂಡರೆ ಲೋಕಕ್ಷೇಮ, ಉತ್ಪಾತಾದಿ ರಹಿತ ಪ್ರಕೃತಿ, ಸಕಾಲಕ್ಕೆ ಮಳೆ, ಸಮೃದ್ಧ ಸಸ್ಯ ಸಂಪತ್ತು, ಸಮೃದ್ಧ ಆಹಾರ, ಅಮೃತ ಸಮಾನವಾದ ಔಷಧೀ ಸಂಪತ್ತು, ಸಮಾಜದಲ್ಲಿ ಸುಖ, ಸಂತೋಷ, ಎಲ್ಲವೂ ತನ್ನಿಂತಾನೇ ಉಂಟಾಗುತ್ತದೆ. ಹಾಗೇ ಬಹ್ಮಚಾರಿಯ ಅಧ್ಯಯನ, ವಾನಪ್ರಸ್ಥನ ಧ್ಯಾನ ಯೋಗಾದಿಗಳು, ಋಷಿಮುನಿಗಳ ತಪಸ್ಸು, ಯಾಗ-ಯಜ್ಞಾದಿಗಳು, ಸಂನ್ಯಾಸಿಯ ಜಪ-ತಪೋನುಷ್ಠಾನ, ಸಮಾಜ ನಿರ್ದೇಶನ, ಸಾಧು-ಸಂತರ ರಕ್ಷಣೆ, ಸಿದ್ಧ, ಸಾಧ್ಯ, ಗಂಧರ್ವ, ಯಕ್ಷ , ಕಿಂಪುರುಷ, ಕಿನ್ನರ, ಉರಗ-ಗರುಡಾದಿಗಳ ಪೂರಕತೆ, ಇವೆಲ್ಲ  ಗೃಹಸ್ಥಾಶ್ರಮ ಧರ್ಮವನ್ನು ನಿಷ್ಠೆಯಿಂದ ಪಾಲಿಸುವ  ಗೃಹಸ್ಥನ ಕಾರಣದಿಂದಾಗಿ ಸ್ಥಿರ, ಬದ್ಧ, ಸಂರಕ್ಷಣವಾಗಿ ನಿಲ್ಲಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಹಾಗಾಗಿ ಸದ್ಗೃಹಸ್ಥನು ಸಮಾಜದ ಬೆನ್ನೆಲುಬಿನಂತಿದ್ದು ಪರೋಪಕಾರಕ್ಕೆ ಪರ್ಯಾಯವನ್ನೇ ಧ್ಯೇಯವಾಗಿಟ್ಟುಕೊಳ್ಳಬೇಕು


ಪರೋಪಕಾರ ಸಾಧ್ಯ ಇಲ್ಲದಿದ್ದರೆ ಇನ್ನೊಬ್ಬರಿಗೆ ಉಪದ್ರವ ನೀಡದೆ ಚೆನ್ನಾಗಿ ಬದುಕಿದರೆ ಕೂಡ ಸಮಾಜದಲ್ಲಿ ಸಾಮರಸ್ಯ ಸಹಬಾಳ್ವೆ ಉಂಟಾಗಲು ಸಾಧ್ಯ. ಆದ್ದರಿಂದ ಎಲ್ಲರೂ ದಿಸೆಯಲ್ಲಿ ಕಾರ್ಯಪ್ರವೃತ್ತರಾಗೋಣ. ಭವ್ಯ ಭಾರತದ ನಿರ್ಮಾತೃಗಳಾಗೋಣ. ವಂದೇ ಮಾತರಂ