ಗ್ರಾಮೀಣ ಪ್ರತಿಭೆಗಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಗರಗಳತ್ತ ಗುಳೇ ಹೋಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ಯ, ಸ್ವದೇಶೀ ಚಿಂತನೆಗಳು ಕೇವಲ ರಾಜಕಾರಣಿಗಳ ಭಾಷಣದಲ್ಲಿ ಮಾತ್ರ ಕೇಳಿಬರುತ್ತಿವೆ. ಪ್ರಸಕ್ತ ಕಾಲಘಟ್ಟದಲ್ಲಿ ಇದರ ಅನುಷ್ಠಾನ ಸಾಧ್ಯವೇ? ನಾವು ಹೇಗೆ ಇದನ್ನು ಅಳವಡಿಸಿಕೊಳ್ಳಬಹುದು? ಎಂಬ ಬಗ್ಗೆ ಈ ಲೇಖನದಲ್ಲಿ ಚಿಂತಿಸಲಾಗಿದೆ.
ಸ್ವದೇಶೀ ಉತ್ಪನ್ನಗಳೆಂದರೆ ಭಾರತೀಯ ಕಂಪೆನಿಗಳು ತಯಾರಿಸಿದ ಉತ್ಪನ್ನಗಳು, ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ್ದಲ್ಲ ಎಂದು ಅರ್ಥವಲ್ಲ. ಇತ್ತೀಚಿಗೆ ಬಹುರಾಷ್ಟ್ರೀಯ ಕಂಪೆನಿಯೊಂದು ಹೇಳಿಕೆ ನೀಡಿ, ನಾವೂ ಕೂಡ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸುತ್ತೇವೆ, ನಮ್ಮದೂ ಸ್ವದೇಶೀ ಎನ್ನುತ್ತಿವೆ. ಗಾಂಧೀಜಿಯ ಕಲ್ಪನೆಯಲ್ಲಿ ಸ್ವದೇಶೀ ಎಂದರೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ/ಉತ್ಪಾದನೆಗೊಂಡ ಉತ್ಪನ್ನಗಳ ಬಳಕೆ ಮಾಡುವುದು. ಆಯಾ ಗ್ರಾಮಗಳ ಜನರಿಗೆ ಬೇಕಾದಷ್ಟು ಆಹಾರ ಧಾನ್ಯಗಳ ಉತ್ಪಾದನೆ, ಬಟ್ಟೆಗಳ ನೇಯ್ಗೆ, ಪಾತ್ರೆ-ಪಗಡಿಗಳ ನಿರ್ಮಾಣ ಹಾಗೂ ಮತ್ತಿತರ ದಿನಬಳಕೆಯ ವಸ್ತುಗಳ ಉತ್ಪಾದನೆ ಆಯಾ ಗ್ರಾಮದಲ್ಲೇ ನಡೆಯಬೇಕು. ಅತೀ ದುರ್ಲಭವಾದ ವಸ್ತು-ಉತ್ಪನ್ನಗಳನ್ನು ಮಾತ್ರ ಇತರ ಗ್ರಾಮ ಅಥವಾ ನಗರಗಳಿಂದ ಆಮದು ಮಾಡಬೇಕು. ಗ್ರಾಮದಲ್ಲಿ ಹೆಚ್ಚಾಗಿ ಬೆಳೆದ ಉತ್ಪನ್ನಗಳ ರಫ್ತು ಹಾಗೂ ಅಗತ್ಯ ವಸ್ತುಗಳ ಆಮದಿನ ಅಧಿಕಾರ ಆ ಗ್ರಾಮದ ಆಡಳಿತಕ್ಕೆ ಒಳಪಟ್ಟಿರಬೇಕು. ಪ್ರತೀ ಗ್ರಾಮವೂ ತನ್ನದೇ ಆದ ರೈತರು, ಬಡಗಿಗಳು, ಚಮ್ಮಾರರು, ಕಮ್ಮಾರರು, ಕುಂಬಾರರು, ಅಕ್ಕಸಾಲಿಗರು, ಮೇಸ್ತ್ರಿಗಳು, ಶಿಲ್ಪಕಾರರು, ಯಂತ್ರ ಶಾಸ್ತ್ರ ನಿಪುಣರು, ನೇಕಾರರು, ಶಿಕ್ಷಕರು, ಲೇವಾದೇವಿದಾರರು, ವರ್ತಕರು, ವ್ಯಾಪಾರಿಗಳು, ಸಂಗೀತಗಾರರು, ಕಲಾವಿದರು, ಅರ್ಚಕರು, ಜೋಯಿಸರು ಮತ್ತು ಪುರೋಹಿತರನ್ನು ಹೊಂದಿರಬೇಕು. ಇನ್ನೊಂದರ್ಥದಲ್ಲಿ ಪ್ರತಿ ಗ್ರಾಮವೂ ಪುಟ್ಟ ಭಾರತದಂತಿರಬೇಕು. ಇದರಿಂದ ಗ್ರಾಮಗಳಲ್ಲಿ ಸ್ವಯಂ-ಆಡಳಿತ, ಸ್ವಾವಲಂಬನೆ ಹಾಗೂ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಪ್ರತಿಪಾದಿಸಿದರು. ಇದರಿಂದ ಸ್ವಾವಲಂಬಿ ಗ್ರಾಮಗಳ ನಿರ್ಮಾಣ, ತನ್ಮೂಲಕ ಅಲ್ಲಿನ ಸಂಸ್ಕೃತಿಯ ರಕ್ಷಣೆಯೇ "ಗ್ರಾಮ ಸ್ವರಾಜ್ಯ". ಆಗ ಮಾತ್ರ ನಾವು ನಿಜವಾದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಗಾಂಧೀಜಿಯ ನಿಲುವಾಗಿತ್ತು. ಬ್ರಿಟಿಷರ ಕಲ್ಪನೆ ದೊಡ್ಡ ದೊಡ್ಡ ಕಾರ್ಖಾನೆಗಳ ಮೂಲಕ ಪ್ರಗತಿಅಯನ್ನು ಸಾಧಿಸುವುದಗಿದ್ದರೆ, ಗಾಂಧೀಜಿ ಸಣ್ಣ ಗ್ರಾಮಗಳ ಸ್ವಾವಲಂಬನೆಯ ಕನಸು ಕಂಡರು. ಪ್ರತೀಗ್ರಾಮವೂ ಸ್ವಾವಲಂಬಿಯಾಗುವುದು ಇಂದಿನ ಅಗತ್ಯ. ಆದಷ್ಟು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆದ ಉತ್ಪನ್ನಗಳ ಬಳಕೆ ಮಾಡೋಣ, ನಮ್ಮ ಅಗತ್ಯದ ವಸ್ತುಗಳ ಸ್ವಯಂ ಉತ್ಪಾದನೆಗೆ ಮುಂದಾಗೋಣ, ಗೃಹ ಕೈಗಾರಿಕೆಗಳ ಬಗ್ಗೆ ಚಿಂತಿಸೋಣ ಎನ್ನುತ್ತಾ ನನ್ನ ಅನುಭವದ ಕೆಲವು ವಿಷಯಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಬೆಳಿಗ್ಗೆ ಹಲ್ಲು ಉಜ್ಜಲು ಬೇವಿನ ಕಡ್ಡಿಯ ಉಪಯೋಗ ಹಾಗೂ ಅದರ ರಸದ ಸೇವೆನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಿಗೆ ಇದು ರಾಮಬಾಣ. ಈಗ ನಾವು ಬಳಸುತ್ತಿರುವ ಪೇಸ್ಟ್ ನಲ್ಲಿರುವ ಫ್ಲೋರೈಡ್ ಹಲ್ಲನ್ನು ಬಲಹೀನ ಮಾಡುತ್ತಿವೆ. ಇದರಿಂದ ದಂತವೈದ್ಯರ ಆದಾಯ ಮಾತ್ರ ಹೆಚ್ಚಲು ಸಾಧ್ಯ! ಅದಕ್ಕೇ ಅವರು ದಿನಕ್ಕೆ ಎರಡು ಸಲ ಹಲ್ಲುಜ್ಜುವ ಸಲಹೆ ನೀಡುತ್ತಾರೆ. ಇನ್ನು ಸ್ನಾನಕ್ಕೆ ಬಳಸುವ ಮಾರ್ಜಕಗಳ ಕಥೆಯಂತೂ ಕೇಳುವುದೇ ಬೇಡ. ಬಗೆ ಬಗೆಯ ಜಾಹೀರಾತುಗಳ ಮೂಲಕ ಜನರನ್ನು ಆಕರ್ಷಿಸುವ ಇವುಗಳ ಅಗತ್ಯ ಮಾನವನಿಗೆ ಇಲ್ಲವೇ ಇಲ್ಲ. ಇವು ಚರ್ಮದ ಮೇಲಿನ ಅತಿ ಅಗತ್ಯವಾಗಿ ಇರಬೇಕಾದ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತವೆ. ಮಾರ್ಜಕಗಳ ಬಳಕೆ ಬಲು ಇತ್ತೀಚಿನದ್ದು. ಕೆರೆ, ನದಿ ಇತ್ಯಾದಿ ನೀರಿನ ಸೆಲೆಗಳಲ್ಲಿ ಸ್ನಾನ ಮಾಡುತ್ತಿದ್ದ ಮನುಷ್ಯ ಮೈತಿಕ್ಕಲು ಬಳಸುತ್ತಿದ್ದುದು ದೊರಗಾದ ಕಲ್ಲುಗಳನ್ನೇ ಹೊರತು ಮಾರ್ಜಕಗಳನ್ನಲ್ಲ. ದಿನ ನಿತ್ಯ ಮಾರ್ಜಕಗಳ ಬಳಕೆಯಿಂದ ಯಾವುದೇ ದೇಹಕಾಂತಿ ಹೊಂದಲು ಸಾಧ್ಯವಿಲ್ಲ. ಇದನ್ನು ಸ್ವಂತ ಅನುಭವದಿಂದ ಕಂಡುಕೊಂಡಿದ್ದೇನೆ. ಅಪರೂಪಕ್ಕೆ ಕಡಲೆ ಹಿಟ್ಟು ಅಥವ ಸೀಗೆಪುಡಿಯ ಬಳಕೆ ಮಾಡಿ ಖುಷಿ ಪಡಬಹುದು. ಇನ್ನು ಕೂದಲಿಗೆ ಹಾಕುವ ಶ್ಯಾಂಪೂಗಳೂ ಕೂಡ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು ಕಣ್ಣು, ಕಿವಿ ಮೊದಲಾದ ಸೂಕ್ಷ್ಮ ಅಂಗಗಳಿಗೆ ಹಾನಿ ಉಂಟುಮಾಡಬಲ್ಲವು. ಅಲ್ಲದೆ ಇವುಗಳಿಂದ ತಲೆಹೊಟ್ಟು ಹೆಚ್ಚುತ್ತದೆ. ಅದನ್ನು ಹೋಗಲಾಡಿಸಲು ಇನ್ನೊಂದು ಶ್ಯಾಂಪೂ ಬಳಸಬೇಕಾಗುತ್ತದೆ. ಈ ಚಕ್ರವು ಮುಂದುವರೆದಲ್ಲಿ ಮೂವತ್ತು ವರ್ಷಕ್ಕೆ ಕೂದಲಿಗೆ ಬಣ್ಣ ಹಚ್ಚಬೇಕಾದ ಪರಿಸ್ಥಿತಿ ಎದುರಾಗಬಹುದು. ಸ್ನಾನಕ್ಕೆ ಮಾರ್ಜಕಗಳನ್ನು ಬಳಸಲೇ ಬೇಕೆಂದಿದ್ದರೆ ಅದನ್ನು ಸುಲಭದಲ್ಲೇ ತಯಾರಿಸಬಹುದು. ಊರಿನಲ್ಲಿರುವ ಮಹಿಳಾಮಂಡಲಗಳು ಮನಸ್ಸು ಮಾಡಿದರೆ ಈ ವಿಧಾನವನ್ನು ಸುಲಭದಲ್ಲಿ ಕಲಿತು ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ಮಾರ್ಜಕಗಳನ್ನು ತಯಾರಿಸಿ ಸದಸ್ಯರಿಗೆ ಹಂಚಬಹುದು. ಇದೊಂದು ಸಣ್ಣ ಉದ್ಯಮವಾಗಿಯೂ ಬೆಳೆಯುವ ಅವಕಾಶವನ್ನು ಹೊಂದಿದೆ. ಇದೇರೀತಿ ಬಟ್ಟೆ ತೊಳೆಯುವ ಮಾರ್ಜಕ, ಶ್ಯಾಂಪೂ ಇತ್ಯಾದಿಗಳನ್ನೂ ತಯಾರಿಸಬಹುದು. ಇದಕ್ಕೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಅಲ್ಲದೆ ಇದಕ್ಕೆ ಯಾವುದೇ ತಂತ್ರಜ್ಞಾನದ ಕಲಿಯುವಿಕೆಯ ಅಗತ್ಯವಿರುವುದಿಲ್ಲ.
ಮುಖಕ್ಷೌರಕ್ಕೆ ಲೋಳೆಸರವನ್ನು ಬಳಸುವುದು ಇನ್ನೊಂದು ದೇಸಿ ಕಲ್ಪನೆ. ಮುಖವನ್ನು ಬಿಸಿನೀರಲ್ಲಿ ತೊಳೆದು ಲೋಳೆಸರವನ್ನು ಹಚ್ಚಿ ಯಾವುದೇ ಸಾಮಾನ್ಯ ಬ್ಲೇಡಿನಲ್ಲಿ ಮುಖಕ್ಷೌರವನ್ನು ಮಾಡುವುದರಿಂದ ಯಾವುದೇ ನೋವಿಲ್ಲದೇ ಈ ಕೆಲಸ ಮುಗಿಸಬಹುದು. ಇದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ ಬ್ಲೇಡಿನ ಆಯುಸ್ಸು ಗಣನೀಯವಾಗಿ ಹೆಚ್ಚುತ್ತದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯತ್ತಮ ಮುಖಕ್ಷೌರ ಸಾಧನಗಳಿಗಿಂತಲೂ ಉತ್ತಮ ಪರಿಣಾಮ ಈ ವಿಧಾನದಿಂದ ಸಾಧ್ಯ.
ಇನ್ನು ಉಡುಗೆ ತೊಡುಗೆ ವಿಚಾರಕ್ಕೆ ಬಂದರೆ ನೈಸರ್ಗಿಕವಾಗಿ ತಯಾರಾದ ಹತ್ತಿ, ಖಾದಿಯಿಂದ ತಯಾರಾದ ಬಟ್ಟೆಗಳು ಆರೋಗ್ಯದಾಯಕವಾಗಿವೆ. ಖಾದಿಯ ವಿಶೇಷತೆ ಎಂದರೆ ಅದು ಚಳಿಗಾಲದಲ್ಲಿ ಬೆಚ್ಚನೆಯ ಅನುಭವವನ್ನೂ, ಬೇಸಿಗೆಯಲ್ಲಿ ತಣ್ಣನೆಯ ಅನುಭವವನ್ನೂ ನೀಡುವುದಾಗಿದೆ. ಆಧುನಿಕ ಶೈಲಿಯ ವಿನ್ಯಾಸದ ಖಾದಿ ಬಟ್ಟೆಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಗಾಂಧೀಜಿಯ ನೆನಪಿಗಾಗಿ "ಖಾದಿ ಭಂಡಾರ" ವೆಂಬ ಅಂಗಡಿಗಳಲ್ಲಿ ಜನವರಿ ಹಾಗೂ ಅಕ್ಟೋಬರ್ ತಿಂಗಳಲ್ಲಿ ಭಾರೀ ಕಡಿತದ ಮಾರಾಟವಿರುತ್ತದೆ. ಇಲ್ಲಿ ಬಟ್ಟೆಗಳನ್ನು ಕೊಳ್ಳುವುದು ದೇಸೀ ನೇಕಾರರಿಗೆ ನಾವು ಕೊಡುವ ಪ್ರೋತ್ಸಾಹವೆನಿಸಿಕೊಳ್ಳುತ್ತದೆ.
ದಿನನಿತ್ಯದ ಚಹಾ, ಕಾಫಿ ಸೇವನೆಯು ತಾತ್ಕಾಲಿಕ ಸುಖವನ್ನು ನೀಡಿದರೂ ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತವೆ. ಒಮ್ಮೆ ಚಹಾ ತಯಾರಿಸುವ ಅಡುಗೆ ಪಾತ್ರೆಯ ಬಗ್ಗೆ ಗಮನ ಹರಿಸಿ. ಕೆಲವು ತಿಂಗಳಲ್ಲೇ ಅದು ಕರಿಹಿಡಿದು ಬಳಸಲಸಾಧ್ಯವೆನ್ನಿಸಿಕೊಳ್ಳುತ್ತದೆ. ಹೀಗಿರುವಾಗ ಮಾನವ ದೇಹದ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಅದ್ದರಿಂದ ಇವುಗಳ ವರ್ಜನೆ ಆರೋಗ್ಯದಾಯಕ ಮಾತ್ರವಲ್ಲ ದೇಶದ ಮಾರುಕಟ್ಟೆಗೂ ಹಿತಕರ. ಏಕೆಂದರೆ ಇವುಗಳ ಮಾರಾಟದಿಂದ ಬಹುರಾಷ್ಟ್ರೀಯ ಕಂಪೆನಿಗಳು ದಿನ ನಿತ್ಯ ನೂರಾರು ಕೋಟಿ ರೂಪಾಯಿ ಕೊಳ್ಳೆಹೊಡೆಯುತ್ತಿದ್ದಾರೆ. ಇನ್ನು ಪೆಪ್ಸಿ, ಕೊಕಾಕೋಲದಂತಹ ತಂಪುಪಾನೀಯಗಳಿಂದ ಕೊಳ್ಳೆಹೊಡೆಯುವ ದುಡ್ಡಿಗೆ ಲೆಕ್ಕವೇ ಇಲ್ಲ. ಮಾನವ ದೇಹ ಆಮ್ಲಜನಕವನ್ನು ಸೇವಿಸಿ ಇಂಗಾಲದ ಡೈಆಕ್ಸೈಡ್ ಹೊರಗೆ ಹಾಕುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಮೇಲೆ ತಿಳಿಸಿದ ತಂಪುಪಾನೀಯಗಳಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ತುಂಬಿಸಲಾಗುತ್ತದೆ. ಈಗ ನೀವೇ ಹೇಳಿ ಅದು ಕುಡಿಯಲು ಯೋಗ್ಯವೇ? ಒಂದು ಕಬ್ಬಿಣದ ಚೂರನ್ನು ಈ ಪಾನೀಯದಲ್ಲಿ ಹಾಕಿಟ್ಟರೆ ಅದು ಕೆಲವೇ ದಿನಗಳಲ್ಲಿ ಕರಗಿಹೋಗುತ್ತದೆ. ಇಂತಹ ವಿಷಕರೀ ದ್ರಾವಣವನ್ನು ಪಾನೀಯದ ಹೆಸರಲ್ಲಿ ಮಾರಲಾಗುತ್ತದೆ. ಅದನ್ನು ಬಿಟ್ಟು ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ಹಣ್ಣಿನ ರಸ, ಎಳ್ಳಿನ ನೀರು, ರಾಗಿ ನೀರು, ಹೆಸರು ನೀರು, ಲಿಂಬೆ ಅಥವಾ ಬೀರುಂಡದ ಶರಬತ್ತು ಇತ್ಯಾದಿ ದೇಸೀ ಪಾನೀಯಗಳನ್ನು ಬಳಸಲು ಆರಂಭಿಸಬೇಕು. ನಮ್ಮ ಮಕ್ಕಳಿಗೂ ಇದರ ಅಭ್ಯಾಸ ಮಾಡಿಸಬೇಕು.
ಒಂದು ಪ್ರದೇಶದ ಮಣ್ಣಿನಲ್ಲಿ ಹುಟ್ಟಿಬೆಳೆದ ಮಾನವನಿಗೆ ಆ ಪ್ರದೇಶದಲ್ಲಿ ಹುಟ್ಟಿಬೆಳೆದ ಆಹಾರ ಧಾನ್ಯಗಳು ಸ್ವಾಭಾವಿಕವಾಗಿ ಪೌಷ್ಟಿಕ ಆಹಾರವಾಗುತ್ತವೆ. ಇದು ಬೇಳೆ, ಕಾಳು, ಹಣ್ಣು, ತರಕಾರಿ ಎಲ್ಲದಕ್ಕೂ ಅನ್ವಯಿಸುತ್ತದೆ. ಅದಕ್ಕೆ ಸರಿಯಾದ ಪಾಕಶಾಸ್ತ್ರ ಆ ಪ್ರದೇಶದಲ್ಲಿ ವೃದ್ಧಿಯಾಗಿರುತ್ತದೆ. ಹಾಗಾಗಿ ಉತ್ತರ ಭಾರತದ ತಿನಿಸುಗಳಾಗಲೀ, ಚೈನೀಸ್, ಇಟಾಲಿಯನ್ ತಿನಿಸುಗಳಾಗಲೀ ಇಲ್ಲಿನ ಜನರಿಗೆ ಒಗ್ಗಲು ಸಾಧ್ಯವಿಲ್ಲ. ಭಾರತೀಯ ಪಾಕಶಾಸ್ತ್ರವು ಸಮೃದ್ಧವಾಗಿದ್ದು ಅದರ ಸದ್ಬಳಕೆಯು ನಮ್ಮೆಲ್ಲರ ಕರ್ತವ್ಯವಾಗಿದೆ. ಆಯಾ ಪ್ರದೇಶದಲ್ಲಿ ಬೆಳೆಯುವ ಬೇಳೆ-ಕಾಳುಗಳ ಸೇವನೆಯಿಂದ ಆರೋಗ್ಯವು ವೃದ್ಧಿಸುವುದಲ್ಲದೆ ಆ ಪ್ರದೇಶದ ರೈತರ ಬೆಳೆಗೆ ತಕ್ಕ ಪ್ರತಿಫಲ ದೊರಕುತ್ತದೆ. ಹಾಗೆಯೇ ಪ್ರಾದೇಶಿಕ ತರಕಾರಿಗಳ ಸೇವನೆಯೂ ಆರೋಗ್ಯಕ್ಕೆ ಪೂರಕ. ಇತ್ತೀಚಿನ ದಿನಪತ್ರಿಕೆಯಲ್ಲಿ "ವಾಟ್ಸ್ ಅಪ್" ಬಳಸಿ ಓರ್ವರು ತಾವು ಬೆಳೆದ ತರಕಾರಿಗಳನ್ನು ತಮ್ಮ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಸುದ್ಧಿ ಪ್ರಕಟವಾಗಿತ್ತು (ಸ್ಮಾರ್ಟ್ ಫೋನಿನ ಕೆಲವೇ ಕೆಲವು ಉಪಯೋಗಗಳಲ್ಲಿ ಇದೂ ಒಂದು). ಇಂತಹ ಪ್ರಯತ್ನಗಳು ರೈತರ ಕಷ್ಟಕ್ಕೆ ನಿಜವಾದ ಪ್ರತಿಫಲಕೊಡಿಸಬಲ್ಲುದೇನೋ! ಪ್ರತಿಯೊಬ್ಬರೂ ತಮ್ಮ ಕೈತೋಟದಲ್ಲಿ ಸಾಧ್ಯವಾದಷ್ಟು ಹಣ್ಣು ತರಕಾರಿ ಬೆಳೆಸುವುದರಿಂದ ಸಾವಯವ ಉತ್ಪನ್ನಗಳನ್ನು ಹೊಂದಲು ಸಾಧ್ಯ. ಇದು ದೇಹಕ್ಕೆ ವ್ಯಾಯಾಮವನ್ನೂ, ಪೌಷ್ಟಿಕ ಆಹಾರವನ್ನೂ ನೀಡುತ್ತದೆ. ಹೆಚ್ಚಾಗಿ ಬೆಳೆದ ಹಣ್ಣು ತರಕಾರಿಗಳನ್ನು ನೆರೆ-ಹೊರೆಯವರೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಇದು ಅವರೊಂದಿಗಿನ ಭಾಂಧವ್ಯ ವೃದ್ಧಿಗೂ ಸಹಕಾರಿಯಾಗುತ್ತದೆ.
ದೇಶದ ಪ್ರತೀ ಗ್ರಾಮದ ಸ್ವರಾಜ್ಯವೇ ನಿಜವಾದ ಭಾರತದ ಸ್ವರಾಜ್ಯ. ಯಾವುದೇ ವಸ್ತುವಿನ ಸಮೂಹ ಉತ್ಪಾದನೆ (ಬೃಹತ್ ಯಂತ್ರಗಳ ಮೂಲಕ) ಗಿಂತಲೂ ಸಮೂಹದಿಂದ (ಸಣ್ಣ ಸಣ್ಣ ಗ್ರಾಮಗಳಲ್ಲಿ) ಆ ವಸ್ತುವಿನ ಉತ್ಪಾದನೆ ಉತ್ತಮವಾದ ವಿಧಾನವಾಗಿದೆ. ದೇವರು ಕೊಟ್ಟ ಕೌಶಲ್ಯಯುತವಾದ ಕೈಗಳಿಂದ ಮಾಡುವ ಕೆಲಸವು ಮಾನವ ದೇಹಕ್ಕೆ ಸಹಜವಾದ ವ್ಯಾಯಮವನ್ನು ನೀಡುತ್ತದೆ. ಆದ್ದರಿಂದ ಅಧುನಿಕ ಯಂತ್ರಗಳ ಬಳಕೆಯನ್ನು ಕಡಿಮೆ ಮಾಡೋಣ. ಗ್ರಾಮಗಳಲ್ಲಿ ಉಳಿದುಬಂದಿರುವ ವಿಶಿಷ್ಟ ಸಂಸ್ಕೃತಿಯ ರಕ್ಷಣೆ ಮಾಡೋಣ. ಗ್ರಾಮಸ್ಥರು ತಮ್ಮ ಕುಟುಂಬ, ನೆರೆಹೊರೆಯವರು, ತಮ್ಮ ಪ್ರಾಣಿಗಳು, ಭೂಮಿ, ಅರಣ್ಯ ಮತ್ತು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಇಂದಿನ ಹಾಗೂ ಭವಿಷ್ಯದ ಪೀಳಿಗೆಯ ಪ್ರಯೋಜನಕ್ಕಾಗಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ನಾಗರೀಕರಣ, ಕೈಗಾರಿಕೀಕರಣಗಳಿಂದ ಇವೆಲ್ಲವೂ ಅಪಾಯದಲ್ಲಿದೆ. ತಮ್ಮ ಅಮೂಲ್ಯವಾದ ಜೀವಮಾನವನ್ನು ಇಂತಹ ಪ್ರದೇಶದಲ್ಲಿ ಕಳೆದು, ನಿವೃತ್ತಿಯ ನಂತರ ಹಲವು ಅನಾರೋಗ್ಯಗಳ ಗೂಡಾಗಿ ಗ್ರಾಮದ ಕಡೆಗೆ ಮುಖಮಾಡುವುದಕ್ಕಿಂತ ಗ್ರಾಮಗಳಲ್ಲೇ ಆರೋಗ್ಯವಂತ ಜೀವನ ನಡೆಸೋಣ. ತನ್ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡೋಣ. "ಜೈ ಹಿಂದ್".