July 25, 2017

ತಪ್ತ ಮುದ್ರಾಧಾರಣೆ ಲೇಖನದ ಬಗೆಗಿನ ಪ್ರತಿಕ್ರಿಯೆ ಮತ್ತು ನನ್ನ ಪ್ರತಿಕ್ರಿಯೆ

ಶ್ರೀ ಶ್ಯಾಮ ಉಪಾಧ್ಯಾಯ ಎನ್ನುವ ಮಹಾನುಭಾವರು ನನ್ನ ​ತಪ್ತ ಮುದ್ರಾಧಾರಣೆ ಲೇಖನದ ಬಗ್ಗೆ ಪ್ರತಿಕ್ರಿಯೆ ನೀಡಿರುತ್ತಾರೆ. ಅದನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಅದರ ಬಳಿಕ ನನ್ನ ವಾದಕ್ಕೆ ಸಮರ್ಥನೆಯನ್ನೂ ನೀಡಿದ್ದೇನೆ. 

ತಪ್ತ ಮುದ್ರಾಧಾರಣೆ ಬಗ್ಗೆ ನಿಮ್ಮ ಲೇಖನವನ್ನು ಓದಿದೆ. ವೈಜ್ಞಾನಿಕ ಕಾರಣವನ್ನು ತಿಳಿದವರು ಹೇಳಬೇಕೆಂದ್ದೀರಿ. ನಿಮಗೆ ಗೊತ್ತಿರ ಬಹುದು ಜಡವಾಗಿರುವ ದೇಹಕ್ಕೆ ಉದಾ ಪಾರ್ಶ್ವವಾಯು ಪೀಡಿತರಿಗೆ ಹಳ್ಳಿಯ ಕಡೆ ಬಿಸಿಯಾದ ಕಬ್ಬಿಣವನ್ನು ಮುಟ್ಟಿಸಿ ಶಕ್ತಿ ಬರುವಂತೆ ಮಾಡುತ್ತಾರೆ. ಇದನ್ನೇ ಆಧುನಿಕ ವಿಜ್ಞಾನಿಗಳು ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಎಂದು ಕರೆಯುತ್ತಾರೆ. ನಮ್ಮ ದೇಹದ ಯಾವುದೇ ಭಾಗವು ಜಡವಾಗಿದ್ದರೆ ನೋವಿನ ಚಿಕಿತ್ಸೆಯ ಮೂಲಕ ಗುಣಪಡಿಸುತ್ತಾರೆ. ನನ್ನ ಅನಿಸಿಕೆಯ ಪ್ರಕಾರ ಮುದ್ರಾಧಾರಣೆಯ ಹಿಂದಿರುವ ವೈಜ್ಞಾನಿಕ ಕಾರಣವು ಇದೇ. ಆದರೂ ಆರೋಗ್ಯವಂತರು ಸಹ ಮುದ್ರಾಧಾರಣ ಮಾಡಿಸಿಕೊಳ್ಳುತ್ತಾರಲ್ಲ ಏಕೆ? ದೇಹ ಆರೋಗ್ಯದಿಂದಿದ್ದರೆ ಸಾಕೆ ಮನಸ್ಸಿಗೆ ಆರೋಗ್ಯ ಬೇಡವೆ. ಮಾನವರಾದ ನಮ್ಮ ಮನಸ್ಸಿನಲ್ಲಿ ಅನೇಕ ಬಗೆಯ ಕಲ್ಮಶಗಳಿವೆ. ಅವುಗಳನ್ನೆಲ್ಲ ದೂರ ಮಾಡಿ ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡುವ ದ್ಯೋತಕವಾಗಿ ಮುದ್ರಾಧಾರಣೆಯನ್ನು ಮಾಡುತ್ತೇವೆ. ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ ಎಂದು‌. ಅದಕ್ಕೆ ತಪ್ತ ಮುದ್ರಾಧಾರಣೆ ಎಂದು ಹೆಸರು. ಏಕಾದಶಿಯಂದು ಉಪವಾಸ ಮಾಡಿ ದೇಹಕ್ಕೆ ಸಾತ್ವಿಕ ರೀತಿಯ ದಂಡನೆಕೊಡುವುದೆ ತಪ್ತ ಮುದ್ರಾಧಾರಣೆಯ ಉದ್ದೇಶ. ಪಾಪವು ಪ್ರಯಶ್ಚಿತ್ತವೆಂಬ ಅಗ್ನಿಯಿಂದ ದಹಿಸಿ ಹೋಗುತ್ತದೆ. ಮನಸ್ಸು ಹಾಗು ದೇಹ ಶುದ್ಧವಾಗುತ್ತದೆ. ತಪ್ತ ಮುದ್ರಾಧಾರಣೆ ಮಾಡಿಸಿಕೊಂಡವರಿಗೆ ಗೊತ್ತು ಅದರ ಅನುಭವ.
ಇನ್ನು ನೀವು ಕೊಟ್ಟಿರುವ ಕಾರಣ ಕಪೋಲ ಕಲ್ಪಿತ. ಇದಕ್ಕೆ ಎಲ್ಲಾದರು ಸಾಕ್ಷಿಯಿದೆಯೆ ತೋರಿಸಿಕೊಡಿ. ಹಾಗೆಯೆ ತಪ್ತ ಮುದ್ರಾಧಾರಣೆಯೆಂದರೆ ಆಡುಭಾಷೆಯಲ್ಲಿ ಸೌಟನ್ನು ಕಾಯಿಸಿ ಇಡುವುದು ಎಂದಿದ್ದೀರಿ. ಯಾರು ಹೇಳಿದರು ಸ್ವಾಮಿ ನಿಮಗೆ ಇದನ್ನು. ಆಡು ಭಾಷೆಯಲ್ಲಿ ಈ ಪದವೇ ಇಲ್ಲ. ಇದು ಸಂಸ್ಕೃತದ ಪದ. ಹೆಸರೇ ಸೂಚಿಸುವಂತೆ ಪಾಪದ ಪ್ರಾಯಶ್ಚಿತ್ತ.
ಇನ್ನು ಇದನ್ನು ಕೇವಲ ಒಂದು ಜನಾಂಗವನ್ನು ಗುರುತಿಸಲಿಕ್ಕೆ ಮಾಡಿದ್ದಲ್ಲ. ದೃಢವಾದ ವೈಷ್ಣವ ಭಕ್ತಿಯ ಅಪೇಕ್ಷೆ ಯಾರಿಗಿದೆಯೋ ಅವರೆಲ್ಲರು ಮುದ್ರಾಧಾರಣೆಯನ್ನು ಮಾಡಿಕೊಳ್ಳಲೇಬೇಕು. ಇದು ಕೇವಲ ಬ್ರಾಹ್ಮಣ ಸಂಸ್ಕಾರವಲ್ಲ. ಉಡುಪಿಯಲ್ಲಿ ಸಾರ್ವಜನಿಕವಾಗಿ ತಪ್ತ ಮುದ್ರಾಧಾರಣೆ ಮಾಡುತ್ತಾರೆ. ಇನ್ನು ಶಂಖ ಚಕ್ರಗಳನ್ನು ಕೇವಲ ಕಾಯಿಸಿ ಇಡುವುದಲ್ಲ. ಅಂದು ಸುದರ್ಶನ ಹೋಮ ಮಾಡಿ ಅದರ ಜ್ವಾಲೆಯಲ್ಲಿ ಶಂಖ ಚಕ್ರಗಳನ್ನು ಇಟ್ಟು ಮುದ್ರಾಧಾರಣ ಮಾಡಿಕೊಳ್ಳಬೇಕೆಂಬ ಶಾಸ್ತ್ರವಿದೆ. ವಾದಿರಾಜರು ಸಹ ತಮ್ಮ ಕೀರ್ತನೆಗಳಲ್ಲಿ ತಪ್ತ ಸುದರ್ಶನ ಶಂಖವ ಭುಜಯುಗದೊಳು ಧರಿಸಿ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಇದು ಮಾಧ್ವರಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಾಗು ಶ್ರೀವೈಷ್ಣವ ಬ್ರಾಹ್ಮಣರು ಸಹ ಈ ಸಂಸ್ಕಾರವನ್ನು ಮಾಡುತ್ತಾರೆ. ಅವರು ಶಿಶುವು ತಾಯಿಯ ಉದರದಲ್ಲಿರುವಾಗಲೆ ಈ ಸಂಸ್ಕಾರವಾಗಬೇಕೆಂದು ಪಾಯಸದಲ್ಲಿ ಕಾಯಿಸಿದ ಶಂಖ ಚಕ್ರಗಳ ಚಿಹ್ನೆಗಳನ್ನು ಅದ್ದಿ ಗರ್ಭಿಣಿ ಹೆಂಗಸರಿಗೆ ಈ ಪಾಯಸವನ್ನು ಸೇವಿಸಲು ಕೊಡುತ್ತಾರೆ. ಮಗುವು ಹುಟ್ಟಿದಾಗಲೆ ವೈಷ್ಣವ ಸಂಸ್ಕಾರವನ್ನು ಪಡೆದು ಬರುತ್ತದೆ ಎಂಬ ನಂಬಿಕೆ‌. ಇನ್ನು ಭಾಗವತ ಸಂಪ್ರದಾಯದ ಬ್ರಾಹ್ಮಣರಲ್ಲು ಈ ಸಂಸ್ಕಾರವಿದೆಯೆಂದು ಕೇಳಲ್ಪಟ್ಟಿದ್ದೇನೆ. ಉಡುಪಿಯಲ್ಲಿ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾಚಾರ್ಯರು ನಾರಾಯಣ ಅಷ್ಟಾಕ್ಷರ ಜಪಾಸಕ್ತ ಬ್ರಾಹ್ಮಣರನ್ನು ಭೇಟಿ ಮಾಡಿ ಅವರಿಗೆ ಊರ್ಧ್ವ ಪುಂಡ್ರಧಾರಣೆ ಪಂಚಮುದ್ರಾಂಕನ ನಾರಾಯಣ ಅಷ್ಟಾಕ್ಷರ ಹಾಗು ವಿಷ್ಣು ಪಂಚಾಯತನ ಪೂಜೆಯನ್ನು ಬೋಧಿಸಿದರೆಂದು ಶಂಕರವಿಜಯದಲ್ಲಿ ಉಲ್ಲೇಖವಿದೆ. ಆದ್ದರಿಂದ ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ. ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವವರು ಈ ಹಿನ್ನೆಲೆಯನ್ನರಿತೆ ಪರಂಪರಾಗತವಾಗಿ ಈ ಶುದ್ಧ ಸಂಸ್ಕಾರವನ್ನು ಮಾಡಿಸಿಕೊಂಡು ಪುನೀತರಾಗುತ್ತಾರೆ ಹೊರತು ಕುರುಡಾಗಿ ಈ ಆಚರಣೆಯನ್ನು ಮಾಡುವುದಿಲ್ಲ.
ಭಸ್ಮಧಾರಣೆಗು ಮುದ್ರಾಧಾರಣೆಗು ಸಂಬಂಧವಿಲ್ಲ. ಗೋಪಿ ಚಂದನ ಧರಿಸುವ ಬ್ರಾಹ್ಮಣರು ಸಹ ಯಜ್ಞಾನಂತರ ಅದರಲ್ಲಿ ಉಳಿದ ಹುತ ಭಸ್ಮವನ್ನು ಹಣೆಯಲ್ಲಿ ಧರಿಸುತ್ತಾರೆ. ಆದರೆ ಅಡ್ಡವಾಗಿ ಮೂರು ಪಟ್ಟಿ ಧರಿಸುವುದಿಲ್ಲ. ಗಂಡಸರು ಭ್ರೂಮಧ್ಯೆ ಚುಕ್ಕೆಯನ್ನಿಡುತ್ತಾರೆ. ಹೆಂಗಸರಿಗೆ ಕತ್ತಿನ ಮಧ್ಯೆಯಿರಿಸುತ್ತಾರೆ. ಹಾಗು ಅಡ್ಡನಾಮವನ್ನಿರಿಸುವ ಬ್ರಾಹ್ಮಣರು ಸಹ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ವಟುವಿಗೆ ವೇದಾಧ್ಯಯನದ ಆರಂಭದ ದ್ಯೋತಕವಾಗಿ ಉದ್ದ ನಾಮವನ್ನಿಡುತ್ತಾರೆ. ಊರ್ಧ್ವ ಪುಂಡ್ರವು ನಾವು ಊರ್ಧ್ವ ಗತಿಯನ್ನು ಹೊಂದಬೇಕೆಂಬ ಲಾಂಛನವಾಗಿದೆ‌. ಹಾಗು ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ. ಅದನ್ನು ಜಾಗೃತಗೊಳಿಸಲೆಂದೆ ಊರ್ಧ್ವ ಪುಂಡ್ರವನ್ನು ಧರಿಸುತ್ತಾರೆ.

ಇನ್ನು ಯಾವುದೇ ಸಮುದಾಯದ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇರಲೇಬೇಕೆಂಬ ನಿಯಮವಿಲ್ಲ. ಇಲ್ಲಿ ನಂಬಿಕೆ ಹಾಗು ಭಕ್ತಿ ಪ್ರಧಾನವಾಗಿರುತ್ತದೆ.

ನನ್ನ ಸಮರ್ಥನೆ:

ವಾದ ೧: "ಪಾರ್ಶ್ವವಾಯು ಪೀಡಿತರಿಗೆ ಹಳ್ಳಿಯ ಕಡೆ ಬಿಸಿಯಾದ ಕಬ್ಬಿಣವನ್ನು ಮುಟ್ಟಿಸಿ ಶಕ್ತಿ ಬರುವಂತೆ ಮಾಡುತ್ತಾರೆ. ಇದನ್ನೇ ಆಧುನಿಕ ವಿಜ್ಞಾನಿಗಳು ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಎಂದು ಕರೆಯುತ್ತಾರೆ" 

ಬಿಸಿ ಮುಟ್ಟಿಸುವುದು "ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್" ಅಲ್ಲ. ಅದು "ಫಿಸಿಯೋಥೆರಪಿ". ವಿದ್ಯುತ್ ಕಾಂತಿಯ ಮೂಲಕ ಶಾಕ್ ಟ್ರೀಟ್ಮೆಂಟ್ ಅಂದರೆ ECT - Electro Convulsive Thrapy or TMS - Transcranial Magnetic Stimulation ಇದನ್ನು ಹುಚ್ಚರಿಗೆ ನೀಡುತ್ತಾರೆ ಪಾರ್ಶ್ವವಾಯು ಪೀಡಿತರಿಗೆ ಅಲ್ಲ. 

ವಾದ ೨: "ಮಾನವರಾದ ನಮ್ಮ ಮನಸ್ಸಿನಲ್ಲಿ ಅನೇಕ ಬಗೆಯ ಕಲ್ಮಶಗಳಿವೆ. ಅವುಗಳನ್ನೆಲ್ಲ ದೂರ ಮಾಡಿ ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡುವ ದ್ಯೋತಕವಾಗಿ ಮುದ್ರಾಧಾರಣೆಯನ್ನು ಮಾಡುತ್ತೇವೆ. ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ ಎಂದು‌. ಅದಕ್ಕೆ ತಪ್ತ ಮುದ್ರಾಧಾರಣೆ ಎಂದು ಹೆಸರು"

ಶ್ರೀಹರಿಯಲ್ಲಿ ಒಮ್ಮನದ ಭಕ್ತಿ ಮಾಡಲು ಭಜನೆ ಮಾಡುತ್ತಾರೆ, ಹರಿವಾಣ ತಲೆಯ ಮೇಲಿಟ್ಟು ನೃತ್ಯ ಮಾಡುತ್ತಾರೆ, ಧ್ಯಾನ, ಜಪ, ತಪ, ಅನುಷ್ಠಾನ, ಪಾರಾಯಣ (ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ, ವಿಷ್ಣು ಸಹಸ್ರನಾಮ ಇತ್ಯಾದಿ), ಸತ್ಸಂಗ ಮಾಡುತ್ತಾರೆ. ನಾನೂ ನರಸಿಂಹನ (ಹರಿಯ) ಪರಮ ಭಕ್ತ (ಪ್ರಹ್ಲಾದನ ನಂತರ!). ನಾನೂ ಇವೆಲ್ಲವನ್ನೂ ಮಾಡುತ್ತೇನೆ.  ಮುದ್ರಾಧಾರಣೆಯನ್ನು ಏಕೆ ಮಾಡಬೇಕು? "ಮುದ್ರಾಧಾರಣೆಯ ಹಿಂದಿರುವ ಸತ್ಯ ಪಾಪಗಳನ್ನು ಸುಡುವಿಕೆ" - ಪಾಪ ಮಾಡಿದರೆ ತಾನೇ ಸುಡಬೇಕು? ಪಾಪ ಏಕೆ ಮಾಡುತ್ತೀರಿ ಸ್ವಾಮಿ?

ವಾದ ೩: "ಏಕಾದಶಿಯಂದು ಉಪವಾಸ ಮಾಡಿ ದೇಹಕ್ಕೆ ಸಾತ್ವಿಕ ರೀತಿಯ ದಂಡನೆಕೊಡುವುದೆ ತಪ್ತ ಮುದ್ರಾಧಾರಣೆಯ ಉದ್ದೇಶ"

ದೇಹಕ್ಕೆ ದಂಡನೆ ಕೊಡುವುದು ಏಕಾದಶಿಯ ಉದ್ದೇಶ ಅಲ್ಲ. ಏಕಾದಶಿಯಂದು  ಚಂದ್ರಮ ಮನಸ್ಸಿಗೆ ಚೈತನ್ಯ ನೀಡುವ ಕಲೆಯನ್ನು ಹೊಂದುತ್ತಾನೆ. ಚಂದ್ರನ ೧೫ ಕಲೆಗಳಲ್ಲಿ ಇದೊಂದು ವಿಶೇಷವಾದ ಕಲೆ. ಆಗ ದೇಹಕ್ಕೆ ಆಹಾರದ ಅಗತ್ಯ ಇರುವುದಿಲ್ಲ. ಸದ್ಗುರು ಜಗ್ಗಿ ವಾಸುದೇವ ಅವರು ಇದನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಯುಟ್ಯೂಬ್ ನಲ್ಲಿ ಹುಡುಕಿ ನೋಡಿ, ವಿವರಣೆ ತಿಳಿಯುತ್ತದೆ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಸಂಬಂಧ ಕಲ್ಪಿಸಬೇಡಿ. ಕೆಲವರು ಈಗಾಗಲೇ ಸಂಬಂಧ ಕಲ್ಪಿಸಿ ಅಗ್ಗಿದೆ. ಮುಂಬರುವ ಅಷ್ಟಮಿಯಲ್ಲಿ ಉಡುಪಿಗೆ ಏನು ಕಾದಿದೆಯೋ ದೇವರೇ ಬಲ್ಲ. 

ವಾದ ೪: "ಸುದರ್ಶನ ಹೋಮ ಮಾಡಿ ಅದರ ಜ್ವಾಲೆಯಲ್ಲಿ ಶಂಖ ಚಕ್ರಗಳನ್ನು ಇಟ್ಟು ಮುದ್ರಾಧಾರಣ ಮಾಡಿಕೊಳ್ಳಬೇಕೆಂಬ ಶಾಸ್ತ್ರವಿದೆ"

ಎಲ್ಲಿದೆ? ಆಧಾರ ನೀಡಿ. ಸುದರ್ಶನ ಹೋಮ ಅಲ್ಲ. ಅದು ಅಸ್ತ್ರ ಪ್ರಯೋಗ - ತಾಂತ್ರಿಕ ಆಚರಣೆ. ಅದನ್ನು ಎಲ್ಲೆಂದರಲ್ಲಿ, ಯಾರ್ಯಾರೋ ಮಾಡುವಂತಿಲ್ಲ. ಅಸ್ತ್ರ ಪ್ರಯೋಗಕ್ಕೆ ನ್ಯಾಸ, ಕೀಲಕ, ಪ್ರಯೋಗ ಮತ್ತು ಉಪಸಂಹಾರ ಗೊತ್ತಿರಬೇಕು. 

ವಾದ ೫: "ವಾದಿರಾಜರು ಸಹ ತಮ್ಮ ಕೀರ್ತನೆಗಳಲ್ಲಿ ತಪ್ತ ಸುದರ್ಶನ ಶಂಖವ ಭುಜಯುಗದೊಳು ಧರಿಸಿ ಎಂದು ಉಲ್ಲೇಖಿಸಿದ್ದಾರೆ"

ಯಾವ ಗ್ರಂಥ? ಸರಿಯಾದ ಉತ್ತರ ಕೊಡಿ. ವಾದಿರಾಜರು ನಿಗಮಾಗಮಗಳಲ್ಲಿ ನಿಪುಣರು, ಅವರ ತಂತ್ರದ ಭಾಗವಾಗಿ ಇದು ಇದೆ ಅಷ್ಟೇ. 

ವಾದ ೫: "ಉಡುಪಿಯಲ್ಲಿ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾಚಾರ್ಯರು ನಾರಾಯಣ ಅಷ್ಟಾಕ್ಷರ ಜಪಾಸಕ್ತ ಬ್ರಾಹ್ಮಣರನ್ನು ಭೇಟಿ ಮಾಡಿ ಅವರಿಗೆ ಊರ್ಧ್ವ ಪುಂಡ್ರಧಾರಣೆ ಪಂಚಮುದ್ರಾಂಕನ ನಾರಾಯಣ ಅಷ್ಟಾಕ್ಷರ ಹಾಗು ವಿಷ್ಣು ಪಂಚಾಯತನ ಪೂಜೆಯನ್ನು ಬೋಧಿಸಿದರೆಂದು ಶಂಕರವಿಜಯದಲ್ಲಿ ಉಲ್ಲೇಖವಿದೆ. ಆದ್ದರಿಂದ ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ. "

ಹಸ್ತಾಮಲಕಾಚಾರ್ಯರು ಹೇಳಿದ್ದು ಪಂಚಾಯತನ ಪೂಜೆ ಪೂಜೆ. ಅವರು ಮಹಾನ್ ಭಾಗವತರು. ಹರಿ-ಹರರಲ್ಲಿ ಭೇದ ಕಾಣದವರು. ಅನಂತೇಶ್ವರ (ಶಿವ)ನ ಬಳಿ ಸಾಲಿಗ್ರಾಮ ಇಟ್ಟು ಪೂಜೆ ಮಾಡಿ ಎಂದು ಅವರು ಹೇಳಲಿಲ್ಲ. ದಯವಿಟ್ಟು ಪಂಚಾಯತನ ಪೂಜೆ ಪೂಜೆ ಬಗ್ಗೆ ಅಧ್ಯಯನ ಮಾಡಿ ನನ್ನಲ್ಲಿ ಚರ್ಚೆಗೆ ಬನ್ನಿ. "ಭಾಗವತ ಸಂಪ್ರದಾಯದ ಬ್ರಾಹ್ಮಣರು ಪ್ರಧಾನವಾಗಿ ವಿಷ್ಣುವನ್ನು ಆರಾಧಿಸುವವರು ಏಕಾದಶಿ ಉಪವಾಸ ಆಚರಣೆ ಹಾಗು ತಪ್ತ ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುತ್ತಾರೆ" - ಎನ್ನುವುದು ಮಹಾನ್ ಸುಳ್ಳು, ಘೋರ ಅಪರಾಧ. ಭಾಗವತ ಸಂಪ್ರದಾಯದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮಠಕ್ಕೆ ನೀವೊಮ್ಮೆ ಬನ್ನಿ. ನೀವು ಹೇಳುತ್ತಿರುವುದು ಸುಳ್ಳು ಎಂದು ನಿಮಗೇ ಗೊತ್ತಾಗುತ್ತದೆ. 

ವಾದ ೬ : "ಊರ್ಧ್ವ ಪುಂಡ್ರವು ನಾವು ಊರ್ಧ್ವ ಗತಿಯನ್ನು ಹೊಂದಬೇಕೆಂಬ ಲಾಂಛನವಾಗಿದೆ‌. ಹಾಗು ನಮ್ಮ ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ. ಅದನ್ನು ಜಾಗೃತಗೊಳಿಸಲೆಂದೆ ಊರ್ಧ್ವ ಪುಂಡ್ರವನ್ನು ಧರಿಸುತ್ತಾರೆ"

ನಿಮ್ಮ ಸಂಪೂರ್ಣ ಲೇಖನದಲ್ಲಿ ಇದೊಂದು ವಾಕ್ಯ (ಮೊದಲನೇ ವಾಕ್ಯ) ಸತ್ಯವಿದ್ದರೂ ಇರಬಹುದು. "ದೇಹದಲ್ಲಿರುವ ಷಟ್ ಚಕ್ರಗಳು ಸಹ ಊರ್ಧ್ವವಾಗಿದೆ" - ಇದೊಂದು ನಿರಾಧಾರ ಹೇಳಿಕೆ. ಚಕ್ರಗಳು ಯಾವತ್ತಾದರೂ ಊರ್ದ್ವಮುಖವಾಗಿರಲು ಸಾಧ್ಯವೇ ಸ್ವಾಮಿ?? ಅದನ್ನು ಜಾಗ್ರತಗೊಳಿಸುವುದು ಕೇವಲ  "ಊರ್ಧ್ವ ಪುಂಡ್ರವನ್ನು ಧರಿಸುವುದರಿಂದ" ಸಾಧ್ಯವೇ? ಬಹಳ ಹಾಸ್ಯಾಸ್ಪದವಾಗಿದೆ. 

July 5, 2017

ತಪ್ತ ಮುದ್ರಾ ಧಾರಣೆ - ಒಂದು ವಿಶ್ಲೇಷಣೆ

ಮಾಧ್ವ ಸಂಪ್ರದಾಯದವರು ವರ್ಷಕ್ಕೊಮ್ಮೆ ನಡೆಸುವ ತಪ್ತ ಮುದ್ರಾ ಧಾರಣೆಯ ಬಗ್ಗೆ ನಡೆಸಿದ ಸಣ್ಣದೊಂದು ಅಧ್ಯಯಯನದ ಫಲವೇ ಈ ಕಿರು ಲೇಖನ. ಸಾಮಾನ್ಯ ಭಾಷೆಯಲ್ಲಿ ತಪ್ತ ಮುದ್ರಾ ಧಾರಣೆ ಎಂದರೆ ಬಿಸಿಯಾದ ಸೌಟೊಂದನ್ನು ಕಾಯಿಸಿ ಮೈಮೇಲೆ ಬರೆ ಎಳೆದುಕೊಳ್ಳುವುದು. ಏಕೆ ಹೀಗೆ ಮಾಡುತ್ತಾರೆಂದು ಅವರನ್ನು ಕೇಳಿದರೆ ಅದು ನಮ್ಮ ಸಂಪ್ರದಾಯ, ಅದರಿಂದ ಕೆಲವು ಖಾಯಿಲೆ ವಾಸಿಯಾಗುತ್ತದೆ, ಮುಂತಾದ ಆಧಾರ ರಹಿತ ಕಾಗಕ್ಕ - ಗುಬ್ಬಕ್ಕನ ಕಥೆ ಕಟ್ಟುತ್ತಾರೆ. ಇದರ ಬಗ್ಗೆ ವೈಜ್ಞಾನಿಕ ಆಧಾರಗಳಿದ್ದರೆ ಅಂತಹವರು ದಯವಿಟ್ಟು ಒದಗಿಸಿ.

 

ಇನ್ನು ವಿಷಯಕ್ಕೆ ಬರೋಣ. ಅದ್ವೈತ ಸಿದ್ಧಾಂತವೇ ಹಿಂದೂ ಧರ್ಮದ ಮೂಲ ಇರಬಹುದೇ ಎನ್ನುವುದು ಮೊದಲ ಪ್ರಶ್ನೆ. ಆಚಾರ್ಯ ಶಂಕರರದ್ದು ೬ನೇ ಶತಮಾನ. ಅದಕ್ಕೂ ಮೊದಲಿದ್ದ ಸಿದ್ಧಾಂತ ಯಾವುದು? ಅದೇ "ಭಾಗವತ ಸಂಪ್ರದಾಯ" - ನಮ್ಮ ಸಂಪ್ರದಾಯ. ವಸಿಷ್ಠರ ಅಂಶವಾದ ನೋಧಾ ಗೌತಮ (ಶ್ರೀ ಅಣ್ಣಪ್ಪಯ್ಯ) ರು ಇದನ್ನು ಭಾರತದಾದ್ಯಂತ ಪಸರಿಸಿದರು. ಅವರ ಕಾಲಮಾನ ಕ್ರಿ. ಪೂ. ೩ನೇ ಶತಮಾನ. ಸುಮಾರು ೮೦೦ ವರ್ಷಗಳ ಕಾಲ ಬದುಕಿ ಬಾಳಿದ ಈ ಮಹಾನ್ ಸಾಧಕ ಬೌದ್ಧ, ಜೈನ ಮತ್ತಿತರ ಮತಗಳಲ್ಲಿ ಒಡಂಬಡಿಕೆಯನ್ನುಂಟುಮಾಡಿ, ಜಾತಿ-ಮತ-ಧರ್ಮಗಳ ಸಂಕೋಲೆಯನ್ನು ಕಳಚಿ ಸಮಾನತೆಯನ್ನು ತಂದರು - ಅದೇ  "ಭಾಗವತ ಸಂಪ್ರದಾಯ". ನಂತರ ಬಂದ ಶ್ರೀ ಶಂಕರರು (ಶಿವನ ಅಂಶ) ಅಣ್ಣಪ್ಪಯ್ಯನವರ ಆಶಯದಂತೆ ಅಧಿಕೃತವಾಗಿ ಅದ್ವೈತ ತತ್ವವನ್ನು ಪ್ರಚುರಪಡಿಸಿದರು. ಬಳಿಕ ೧೨ನೇ ಶತಮಾನಕ್ಕೆ ಬಂದವರು ಆಚಾರ್ಯ ಮಧ್ವರು. ಆಗ ಪ್ರಚಲಿತದಲ್ಲಿದ್ದ ನಂಬಿಕೆಗಳಿಗೆ ವಿರುದ್ಧವಾದ ದ್ವೈತ ತತ್ವನ್ನು ಪ್ರತಿಪಾದಿಸಲು ಅವರು ಬಹಳಷ್ಟು ಶ್ರಮಪಡಬೇಕಾಯಿತು. ಈ ಸಂದರ್ಭದಲ್ಲಿ ತಮ್ಮ ಮತಾನುಯಾಯಿಗಳನ್ನು ಗುರುತಿಸಲು ಕೈಗೊಂಡ ಉಪಕ್ರಮವೇ ಈ ತಪ್ತ ಮುದ್ರಾ ಧಾರಣೆ. ಇದರಿಂದ ಅವರಿಗೆ ಅವರ ಅನುಯಾಯಿಗಳನ್ನು ದೂರದಿಂದಲೇ ಗುರುತಿಸುವುದು ಸಾಧ್ಯವಾಗುತ್ತಿತ್ತು. ಅಪಾಯದ ಸೂಚನೆ ಎದುರಾದಾಗ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿತ್ತು. ಆದರೆ ಈಗಲೂ ಅವರ ಅನುಯಾಯಿಗಳು ಮೈ-ಕೈ ಸುಟ್ಟುಕೊಳ್ಳುವ ಕಾರಣವೇ ತಿಳಿಯುತ್ತಿಲ್ಲ. ತಿಳಿದಿದ್ದರೆ ದಯವಿಟ್ಟು ತಿಳಿಸಿ.