November 16, 2009

ಭಾರತೀಯ ಭಾಷಾ ಕಂಪ್ಯೂಟಿಂಗ್‌ ಪ್ರವರ್ತಕರಲ್ಲಿ ಮೊದಲಿಗ - ಕನ್ನಡಿಗ ಕೆ.ಪಿ. ರಾವ್


{ದಿ. ೧೨-೧೧-೨೦೦೯ ರಂದು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ, IEEE ವಿಧ್ಯಾರ್ಥಿ ಸಂಘದ ಆಶ್ರಯದಲ್ಲಿ ಈ ಮಹಾನ್ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಅವರ ಬಗ್ಗೆ http://bhashaindia.com/Patrons/SuccessStories/kn/pages/KPRao.aspx ನಲ್ಲಿ ಪ್ರಕಟಿತ ಲೇಖನವನ್ನು ಯಥಾವತ್ತಾಗಿ ನೀಡುತ್ತಿದ್ದೇನೆ. ಮೋಲ ಲೇಖಕರಿಗೆ ಧನ್ಯವಾದಗಳು}

ಭಾರತ ದೇಶದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದ ಬಳಕೆ, ಭಾರತೀಯ ಭಾಷಾ ಲಿಪಿಗಳ ಫೋಟೋಕಂಪೋಸಿಂಗ್ ಮೂಲಕ ಸುಂದರ ಮುದ್ರಣದ ಕುರಿತು ಹತ್ತು ಹಲವು ಪ್ರಯೋಗಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರಲ್ಲಿ ಶ್ರೀ ಕೆ.ಪಿ ರಾವ್ರವರು ಪ್ರಮುಖರು. ಕನ್ನಡದ ಕಂಪ್ಯೂಟರ್ ಕ್ಷೇತ್ರದ ಹಲವು ಪ್ರಥಮಗಳಿಗೆ ಇವರು ಕಾರಣರಾಗಿ, ಭಾರತೀಯ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಬಳಸಿ ಪಡಿಮೂಡಿಸುವ ತಂತ್ರಜ್ಞಾನಕ್ಕೆ ಇವರು ನೀಡಿರುವ ಕೊಡುಗೆಯಿಂದಾಗಿ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಕೀರ್ತಿಯನ್ನು ತಂದಿತ್ತಿದ್ದಾರೆ. ಇವರು ಪ್ರಸ್ತುತ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ನಲ್ಲಿ ಗೌರವ ಪ್ರಾಧ್ಯಾಪಕರಾಗಿ `ಸೈಂಟಿಫಿಕ್ ಕಮ್ಯುನಿಕೇಷನ್'ನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.

೧೯೮೮ರಲ್ಲಿಯೇ ಕನ್ನಡಕ್ಕೆ ಪ್ರಪ್ರಥಮವಾಗಿ ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಸಬಹುದಾದ `ಸೇಡಿಯಾಪು' ಎಂಬ ಹೆಸರಿನ ತಂತ್ರಾಂಶವನ್ನು (ಡಾಸ್ ಎಡಿಟರ್) ಇವರು ಸಿದ್ಧಪಡಿಸಿದ್ದಾರೆ. ಆ ಕಾಲಕ್ಕೆ ಲಭ್ಯವಿದ್ದ ತಂತ್ರಜ್ಞಾನಗಳನ್ನು ಬಳಸಿ ದೇವನಾಗರಿ, ಕನ್ನಡ, ತುಳು ಮತ್ತು ತೆಲುಗು ಭಾಷೆಗಳ ಫಾಂಟ್ಗಳನ್ನು ಪ್ರಥಮವಾಗಿ ಸಿದ್ಧಪಡಿಸಿದ್ದಾರೆ. ತಾವೇ ಸಿದ್ಧಪಡಿಸಿದ ಕನ್ನಡ ಲಿಪಿಯ ಫಾಂಟ್ನ್ನು ಸುಲಭವಾಗಿ ಕಂಪ್ಯೂಟರ್ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ ವಿನ್ಯಾಸವನ್ನು ಮೊಟ್ಟಮೊದಲ ಬಾರಿಗೆ ಆವಿಷ್ಕರಿಸಿದ ದಾಖಲೆ ಕೆ.ಪಿ ರಾವ್ ರವರದು. ಈ ಕೀಲಿಮಣೆ ವಿನ್ಯಾಸವು ಕನ್ನಡದ ಅಧಿಕೃತ ವಿನ್ಯಾಸ ಎಂದು ಕರ್ನಾಟಕ ಸರಕಾರದಿಂದ ಮಾನ್ಯತೆಯನ್ನು ಪಡೆದಿದೆ. ಇತರೆ ಭಾರತೀಯ ಭಾಷೆಗಳ ಲಿಪಿಯನ್ನು ಕಂಪ್ಯೂಟರ್‌ನಲ್ಲಿ ಸುಲಭವಾಗಿ ಮೂಡಿಸಲು ಇದೇ ಕೀಲಿಮಣೆ ವಿನ್ಯಾಸವು ಬಳಕೆಯಲ್ಲಿದ್ದು ಅತ್ಯಂತ ಜನಪ್ರಿಯವಾಗಿದೆ.

ಇವರು ಕನ್ನಡದ ಫೋಟೋಟೈಪ್ನ್ನು ಮೊದಲಿಗೆ ಸಿದ್ಧಪಡಿಸಿದ್ದಾರೆ. ಆಧುನಿಕ ಲೇಸರ್ಟೈಪ್ಸೆಟ್ಟರ್ ಯಂತ್ರಗಳಿಗೆ ಅಕ್ಷರ ಮೂಡಿಸುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ನಲ್ಲಿ ಕನ್ನಡ ಲಿಪಿ ಮುದ್ರಣಕ್ಕಾಗಿ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ಗಳು ಮತ್ತು ಆಧುನಿಕ ಮುದ್ರಣಶಾಸ್ತ್ರ ಕುರಿತು ಸ್ವಲ್ಪಕಾಲ ಬೋಧಿಸಿದ ಇವರು ಚಂದೀಗಡದಲ್ಲಿನ ಕ್ವಾರ್ಕ್ ಎಕ್ಸ್ಪ್ರೆಸ್ ಮತ್ತು ಅಡೋಬಿ ಸಿಸ್ಟಂಸ್ಗೆ ಸಲಹೆಗಾರರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ

ಇವರ ಪೂರ್ಣ ಹೆಸರು ಕನ್ನಿಕಂಬಳ ಪದ್ಮನಾಭ ರಾವ್. ಮಂಗಳೂರು ಬಳಿಯ ಕನ್ನಿಕಂಬಳ ಎಂಬ ಚಿಕ್ಕಹಳ್ಳಿಯಲ್ಲಿ ಜನನ. ಮೈಸೂರು ವಿ.ವಿ.ಯಿಂದ ವಿಜ್ಞಾನ ಪದವಿ. ಮುದ್ರಣಾಲಯದಲ್ಲಿ ಅಕ್ಷರ ಜೋಡಿಸುವ ಅರೆಕಾಲಿಕ ಕೆಲಸದಿಂದ ವೃತ್ತಿಜೀವನ ಆರಂಭ. ಪ್ರತಿಷ್ಠಿತ ಟಾಟಾ ಪ್ರೆಸ್‌ನಲ್ಲಿ ಫೋಟೋಕಂಪೋಸಿಂಗ್ನ್ನು ಮೊದಲಿಗೆ ಆರಂಭಿಸಿದ ಕೀರ್ತಿಗೆ ಭಾಜನ. ಸತತ ಪರಿಶ್ರಮದ ಮೂಲಕ ಮೊನೋಟೈಪ್ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಬಡ್ತಿ - ಇವು ಅವರ ಸಾಧನೆಯ ಮೆಟ್ಟಿಲುಗಳು.

ಕೆಲವು ವಿಚಾರಗಳ ಕುರಿತು ಕೆ.ಪಿ ರಾವ್‌ಹೀಗೆನ್ನುತ್ತಾರೆ ತಮ್ಮ ನೂತನ ಆವಿಷ್ಕಾರವಾದ ಧ್ವನ್ಯಾತ್ಮಕ ಕೀಲಿಮಣೆ ಎಲ್ಲ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವುದರ ಕುರಿತು - ಎಲ್ಲಾ ಭಾರತೀಯ ಭಾಷೆಗಳೂ ಸಹ ಬಹುತೇಕ ಒಂದೇ ರೀತಿಯಾಗಿರುವುದರಿಂದ ಕನ್ನಡಕ್ಕೆ ತಾವು ಸಿದ್ಧಪಡಿಸಿದ ಧ್ವನ್ಯಾತ್ಮಕ, ತರ್ಕಬದ್ಧವಾದ ಕೀಲಿಮಣೆಯು ಎಲ್ಲಾ ಭಾರತೀಯ ಭಾಷಾ ಲಿಪಿಗಳ ಸುಲಭವಾದ ಬೆರಳಚ್ಚಿಗೆ ಅನುಕೂಲ ಕಲ್ಪಿಸಿದ್ದರಿಂದ ಇದೇ ವಿನ್ಯಾಸವು ಎಲ್ಲಾ ಭಾರತೀಯ ಭಾಷೆಗಳಲ್ಲಿ ಹೆಚ್ಚು ಬಳಕೆಗೆ ಬಂದಿದೆ ಎನ್ನುತ್ತಾರೆ. ಭಾರತೀಯ ಭಾಷೆಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಸುವ ಕುರಿತು - ತಂತ್ರಜ್ಞಾನಕ್ಕೆ ಭಾಷೆಯನ್ನು ಸಜ್ಜುಗೊಳಿಸುವತ್ತ ಭಾಷೆ ಮತ್ತು ಲಿಪಿ ಸುಧಾರಣೆಯ ಕಸರತ್ತು ಅರ್ಥವಿಲ್ಲದ್ದು, ತಂತ್ರಜ್ಞಾನವನ್ನು ನಮ್ಮ ಭಾಷೆಗೆ ಒಗ್ಗಿಸಬೇಕೆ ಹೊರತು ತಂತ್ರಜ್ಞಾನಕ್ಕಾಗಿ ಭಾಷೆಯನ್ನು ಬದಲಿಸಲಾಗದು ಎನ್ನುತ್ತಾರೆ.

ಯುನಿಕೋಡ್‌ ಕನ್ನಡಕ್ಕೆ ಅಗತ್ಯ ಮತ್ತು ಉಪಯುಕ್ತ ಆಸ್ಕಿ ಎನ್‌ಕೋಡಿಂಗ್‌ನಿಂದ ಯುನಿಕೋಡ್‌ ಮಾನಕಕ್ಕೆ ಎಲ್ಲರೂ ವಲಸೆ ಹೋಗುವುದರಿಂದ ಆಗುವ ಪ್ರಯೋಜನಗಳನ್ನು ಕುರಿತು - ಯುನಿಕೋಡ್ ಎನ್ನುವುದು ಇಂಗ್ಲಿಷ್ ಸೇರಿದಂತೆ ಬಹುತೇಕ ಎಲ್ಲಾ ವಿಶ್ವ ಭಾಷೆಗಳನ್ನು ಕಂಪ್ಯೂಟರ್ನಲ್ಲಿ ಗೊಂದಲವಿಲ್ಲದೆ ಪ್ರತಿನಿಧಿಸುವ, ಬಳಸಲು ಸಾಧ್ಯವಾಗಿಸುವ ಒಂದು `ಎನ್ಕೋಡಿಂಗ್' ಸ್ಟ್ಯಾಂಡರ್ಡ್ ಎಂದು ವಿವರಿಸುತ್ತಾರೆ. ಅತ್ಯಾಧುನಿಕ ಎನ್ಕೋಡಿಂಗ್ ಸ್ಟ್ಯಾಂಡರ್ಡ್ ಆಗಿ ವಿಶ್ವ ಮಟ್ಟದಲ್ಲಿ ಒಪ್ಪಲಾಗಿರುವ ಈ ಯುನಿಕೋಡ್ ಈಗ ಕನ್ನಡಕ್ಕೂ ಸಹ ಅತ್ಯಗತ್ಯ. ಕನ್ನಡಕ್ಕೆ ಯುನಿಕೋಡ್ನ ಅಳವಡಿಕೆಯಿಂದಾಗಿ ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆಯಲ್ಲಿರುವ ಬಹುತೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವ ಅವರು, ಆಸ್ಕಿ ಎನ್ಕೋಡಿಂಗ್ ಇರುವ ಕನ್ನಡದ ಪಠ್ಯವನ್ನು ಅಂತರಜಾಲದಲ್ಲಿ ಹುಡುಕಲು (`ಸರ್ಚ್' ಮಾಡಲು) ಸಾಧ್ಯವಾಗುವುದಿಲ್ಲ ಎಂಬ ಅಂಶಗಳತ್ತ ಗಮನ ಸೆಳೆಯುತ್ತಾರೆ. ನಾವೇ ಬೆರಳಚ್ಚಿಸಿ ಸಿದ್ಧಪಡಿಸಿರುವ ಡಾಕ್ಯುಮೆಂಟ್ ಫೈಲ್ಗಳಲ್ಲಿ ಮಾಹಿತಿ ಹುಡುಕುವುದು ಕಷ್ಟಕರ. ಪಠ್ಯವು `ಯುನಿಕೋಡ್'ನಲ್ಲಿದ್ದರೆ, ಹುಡುಕುವುದು ಅತಿ ಸುಲಭ. ಯುನಿಕೋಡ್ ಬಂದ ನಂತರ ಕನ್ನಡಕ್ಕೆ ತನ್ನದೇ ಆದ ಸ್ಥಾನ-ಮಾನ ದೊರೆತಿದೆ. ಇದರಿಂದಾಗಿ, ಹಲವಾರು ಡಿಸ್ಪ್ಲೇ ಸಮಸ್ಯೆಗಳು, ಪಠ್ಯ ಇದ್ದರೂ ಅವನ್ನು ಹುಡುಕಲಾಗದ ಸಮಸ್ಯೆಗಳು ಮತ್ತು ಜಂಕ್ ಕ್ಯಾರೆಕ್ಟರ್ ಮೂಡುವ ಸಮಸ್ಯೆಗಳು ಹಾಗೂ ಅಕಾರಾದಿ ವಿಂಗಡಣೆ ಮಾಡಲಾಗದಿರುವ ಸಮಸ್ಯೆಗಳು - ಇವೆಲ್ಲವು ಪರಿಹಾರ ಕಂಡಿವೆ ಎನ್ನುತ್ತಾರೆ.

ಯುನಿಕೋಡ್‌ನ ಉಪಯೋಗ ಕುರಿತು ಎಲ್ಲರಲ್ಲಿ ಅರಿವು ಮೂಡಬೇಕು. ಕನ್ನಡ ಭಾಷೆಯಲ್ಲಿ ಕಂಪ್ಯೂಟರ್‌ ತಂತ್ರಾಂಶಗಳನ್ನು ಬಳಸುವವರು ತಮಗೂ ಅಂತಹ ಯುನಿಕೋಡ್ ಅಳವಡಿಸಲಾದ ತಂತ್ರಾಂಶಗಳೇ ಬೇಕು ಎಂದು ಒತ್ತಾಯಿಸುವ ಮೂಲಕ ಯುನಿಕೋಡ್‌ನ ಪ್ರಯೋಜನವನ್ನು ಎಲ್ಲಾ ಕನ್ನಡಿಗರೂ ಸಹ ಪಡೆದುಕೊಳ್ಳಬಹುದು. ಯುನಿಕೋಡ್ ಅಳವಡಿಸಿದ ತಂತ್ರಾಂಶಗಳನ್ನು ಬಳಸುವ ಮೂಲಕ ಕನ್ನಡದ ಅಥವಾ ಯಾವುದೇ ಭಾರತೀಯ ಭಾಷೆಯ ದೊರೆಯುವ ಮಾಹಿತಿಗಳನ್ನು ಕಂಪ್ಯೂಟರ್ನಲ್ಲಿಯೇ ವಿಶ್ವಮಟ್ಟದಲ್ಲಿ ಪರಸ್ಪರ ಹೋಲಿಸುವುದು, ಹುಡುಕುವುದು, ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಹಲವು ಸಾಧನೆಗಳನ್ನು ಮಾಡಿರುವ ಇವರು ತಮ್ಮ ಕಾರ್ಯಕ್ಷೇತ್ರದಲ್ಲಿ ತಾವು ಹೆಚ್ಚೇನೂ ಸಾಧಿಸಿಲ್ಲ, ಸದಾ ಹೊಸತೇನನ್ನಾದರೂ ಮಾಡುವ ಪ್ರವೃತ್ತಿಯಿತ್ತು. ಹಾಗಾಗಿ ಇಷ್ಟರ ಮಟ್ಟಿಗೆ ಮಾತ್ರ ಸಾಧನೆ ಸಾಧ್ಯವಾಯಿತು. ಇದನ್ನೆಲ್ಲಾ ನನ್ನ ಆತ್ಮತೃಪ್ತಿಗಾಗಿ ಮಾಡಿದ್ದೇನೆ ಹೊರತು ಹಣಕ್ಕಾಗಿ ಮಾಡಿದ್ದಲ್ಲ ಎಂದು ಅವರು ವಿನಮ್ರವಾಗಿ ನುಡಿಯುತ್ತಾರೆ.