August 20, 2010

ಮಹಾರಾಷ್ಟ್ರದ ಮುಖಂಡರಲ್ಲೊಂದು ಮನವಿ

ಮಹಾರಾಷ್ಟ್ರದ ನನ್ನ ಬಂಧುಗಳೆ,
ಮಹಾರಾಷ್ಟ್ರ ತನ್ನ ಹೆಸರಿಗೆ ತಕ್ಕಂತೆ ವಿಸ್ತೀರ್ಣದಲ್ಲಿ ನಮ್ಮ ದೇಶದ ಮೂರನೆಯ ಅತಿ ದೊಡ್ಡ ಹಾಗೂ ಜನಸಂಖ್ಯೆಯಲ್ಲಿ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ. ಅಲ್ಲದೆ ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿದ್ದು, ೧೫% ಕೈಗಾರಿಕಾ ಉತ್ಪತ್ತಿ ಇಲ್ಲಿಂದಲೇ ಬರುವುದಲ್ಲದೆ, ಇದು ನಮ್ಮ ದೇಶದ GDP ಯ ೧೩.೨% ರಷ್ಟಾಗುತ್ತದೆ. ಇಷ್ಟು ಸಂಪದ್ಭರಿತ ರಾಜ್ಯವು ಭಾರತದ ೯,೮೪% ಭೂಭಾಗವನ್ನು ಹೊಂದಿದ್ದರೂ "ನಮ್ಮ ಬೆಳಗಾವಿ"ಯ ಹಿಂದೆ ಬಿದ್ದಿರುವುದು ನಿಮಗೆ ಅತಿ ಆಸೆ ಎಂದೆನಿಸುವುದಿಲ್ಲವೆ?
ಭಾರತದ ಕೇವಲ ೫.೮೩% [ಮಹಾರಾಷ್ಟ್ರದ ಅರ್ಧದಷ್ಟು] ಭೂಭಾಗ ಹೊಂದಿರುವ ಕರ್ನಾಟಕ ಈಗಾಗಲೇ ಕಾಸರಗೋಡನ್ನು ಕಳೆದುಕೊಂಡು ಒಂದು ಕಾಲಿನಲ್ಲಿ ಕುಂಟುತ್ತಿದ್ದರೆ, ತನ್ನ ಎಡ ಕೈ ಬಳ್ಳಾರಿ, ಎಡಕಾಲು ಚಾಮರಾಜನಗರ [ಹೊಗೇನಕಲ್] ವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಇನ್ನು ಬಲ ಕೈ ಬೆಳಗಾವಿಯನ್ನೂ ನೀವು ಕೇಳಿದರೆ ನಾವು ಬದುಕುವುದು ಹೇಗೆ ಸ್ವಾಮೀ? ಹೃದಯವಾದ ಬೆಂಗಳೂರೊಂದು ಸಾಕೆ?
ತಾವು ಹಿರಿಯಣ್ಣನಂತೆ  ನಮಗೆ ನ್ಯಾಯಯುತವಾಗಿ ಸೇರಬೇಕಾದ ಕೊಲ್ಲಾಪುರ, ರತ್ನಗಿರಿ, ಸೋಲ್ಲಾಪುರಗಳನ್ನು ನೀಡಿ, ಸಮೃದ್ಧಿಯಿಂದ ಬಾಳು ತಮ್ಮ ಎಂದು ಆಶೀರ್ವದಿಸಬೇಕು.ಅದನ್ನು ಬಿಟ್ಟು ದಾಯಾದಿಗಳಂತೆ ವರ್ತಿಸುವುದು ತಮ್ಮ ಘನತೆಗೆ ತಕ್ಕುದಾದುದೆ? ಛತ್ರಪತಿ ಶಿವಾಜಿ ಮಹಾರಾಜರು ಆಳಿದ ನಿಮ್ಮ ಭವ್ಯನಾಡು ಭಾರತದ ಐಕ್ಯತೆಗೆ ಎಷ್ಟೆಷ್ಟೋ ತ್ಯಾಗಗಳನ್ನು ಮಾಡಿರುವಾಗ ಬೆಳಗಾವಿಯ ವಿಚಾರ ಕ್ಷುಲ್ಲಕವೆನಿಸುವುದಿಲ್ಲವೆ?
ಯೋಚಿಸಿ ನನ್ನ ಪ್ರಿಯ ಬಂಧುಗಳೆ,
ವಂದೇ ಭಾರತ ಮಾತರಂ.