ಕೆಲವು ವರ್ಷಗಳ ಹಿಂದೊಮ್ಮೆ ಮಾತಿನ ಮಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಕೇಳಿದ್ದೆ. ಆರ್. ಎಸ್. ಎಸ್ ನ ಪ್ರಚಾರಕರಂತೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ಹುಳುಕುಗಳನ್ನು ವೈಭವೀಕರಿಸಿ ಹೇಳುತ್ತಾ ಚಪ್ಪಾಳೆಗಿಟ್ಟಿಸುತ್ತಿದ್ದ ಬಿಸಿರಕ್ತದ ಆ ಯುವಕನನ್ನು ಇಂದು ನೀವು ಕಾಣಲು ಸಾಧ್ಯವಿಲ್ಲ. ಇತ್ತೀಚಿಗೆ ಉಡುಪಿ ಜಿಲ್ಲೆಯ ಬಾಳೆಕುದ್ರುವಿನ ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನಕಾರನಾಗಿ ಕಾಣಿಸಿದ ವ್ಯಕ್ತಿ ಬೇರೆಯವನೇ ಏನೋ ಎಂದು ಹೇಳುವಷ್ಟು ಬದಲಾಗಿದ್ದಾರೆ ಚಕ್ರವರ್ತಿ. ಮಾತಿನ ತೀಕ್ಷತೆ, ಮೊನಚು, ಉದಾಹರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಪರಿಯಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗದೆ ಇದ್ದರೂ ಕೂಡ, ವಿಷಯ ಮಂಡನೆಯಲ್ಲಿ, ವೈಚಾರಿಕತೆಯಲ್ಲಿ ಪ್ರೌಢಿಮೆಯನ್ನು ತೋರಲಾರಂಭಿಸಿದ್ದಾರೆ. ತಾವು ನಂಬಿರುವ ತತ್ವ ಸಿದ್ಧಾಂತಗಳಿಗೆ ರಾಷ್ಟ್ರೀಯತೆಯ ಸೊಗಡನ್ನು ತುಂಬುತ್ತಿದ್ದಾರೆ. ಹಿಂದೆಲ್ಲ ಬರಿಯ ಮಾತಿನಿಂದಲೇ ಮಂಟಪವನ್ನು ಕಟ್ಟುತ್ತಿದ್ದವರು ಈಗ ಕೃತಿಯಲ್ಲೂ ಅದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಕ್ರವರ್ತಿ ಬದಲಾಗಿದ್ದಾರೆ. ಸಮಾಜಕ್ಕೆ ಇನ್ನೂ ಉತ್ತಮವಾದದ್ದನ್ನು ಕೂಡುವ ಸಂಕಲ್ಪದಿಂದ ಬದಲಾಗಿದ್ದಾರೆ ಎನ್ನಬಹುದೇನೋ.
"ಮಿಥುನ್ ಚಕ್ರವರ್ತಿ" - ಹೀಗೆಂದಾಗ ಹಿಂದಿ ಚಲನಚಿತ್ರದ ನಟನೊಬ್ಬನ ನೆನಪಾಗಿರಬೇಕಲ್ಲ! ಅದೇ ನಾಮಧೇಯದ ಸೂಲಿಬೆಲೆ ಎಂಬ ಊರಿನ ಮಹತ್ವಾಕಾಂಕ್ಷೆಯ ಹುಡುಗನೊಬ್ಬ ದೇಶಭಕ್ತಿಯ ಭಾವಗಳನ್ನು ಮನದಲ್ಲಿ ತುಂಬಿಕೊಂಡು ಆರ್. ಎಸ್. ಎಸ್ ಸೇರುತ್ತಾನೆ. ಅಲ್ಲಿ ಸಂಘದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುತ್ತಾನೆ. ಸಂಘದ ಕೆಲವೊಂದು ನೀತಿ ನಿಯಮಗಳು ಯುವಕ ಮಿಥುನ್ ನ ಕ್ಷಿಪ್ರ ಬೆಳವಣಿಗೆಯ ಕನಸುಗಳಿಗೆ ಅಡ್ಡಗಾಲಾಗಿ ಪರಿಣಮಿಸುತ್ತವೆ. ಈ ಹೊತ್ತಿಗಾಗಲೇ ಇಂಜಿನಿಯರಿಂಗ್ ಪದವಿಯನ್ನು ಪೂರ್ತಿಗೊಳಿಸಿದ್ದ ಮಿಥುನ್, ತನ್ನ ಮಹತ್ವಾಕಾಂಕ್ಷೆಯನ್ನು ಪೋಷಿಸುವ, ಅದನ್ನು ಈಡೇರಿಸಲು ಸಹಕರಿಸುವ ಇತರ ಸಂಘಟನೆಯನ್ನು ಅರಸುತ್ತಿರುತ್ತಾನೆ. ಅದು ೯೦ ರ ದಶಕದ ಕೊನೆಯ ಭಾಗ. ರಾಷ್ಟ್ರಬಂಧು ಶ್ರೀ ರಾಜೀವ ದೀಕ್ಷಿತರು "ಆಜಾದಿ ಬಚಾವೋ ಆಂದೋಲನ"ದ ಮೂಲಕ ಮನೆಮಾತಾಗಿದ್ದ ಕಾಲವದು. ಗಾಂಧೀಜಿಯ ರಾಮರಾಜ್ಯದ ಕನಸನ್ನು ನೆನಸು ಮಾಡಲು, ಸ್ವದೇಶೀ ಚಳುವಳಿಯನ್ನು ದೇಶದ ಉದ್ದಗಲಕ್ಕೂ ಪಸರಿಸಲು, ತಮ್ಮ ಆಕರ್ಷಕ ಶೈಲಿಯ ಭಾಷಣದ ಮೂಲಕ ದೇಶದ ಹಳ್ಳಿ ಹಳ್ಳಿಗಳಿಗೂ ಸಂಚಾರ ಕೈಗೊಳ್ಳುತ್ತಿದ್ದರು. ಹಿಂದಿ ಭಾಷಣಕಾರರಾದ ಅವರಿಗೆ ಕರ್ನಾಟಕದ ಹಳ್ಳಿಗಳನ್ನು ತಲುಪಲು ಸಮರ್ಥ ಭಾಷಾಂತರಕಾರನ ಅವಶ್ಯಕತೆ ಇತ್ತು. ಅಷ್ಟೋತ್ತಿಗಾಗಲೇ ಮಿಥುನ್ "ವೀರ ಸಾವರ್ಕರ್" ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿಯಾಗಿತ್ತು. ಆಜಾದಿ ಬಚಾವೋ ಆಂದೋಲನದಲ್ಲಿ ತನ್ನ ಆಕಾಂಕ್ಷೆಗಳ ಪೂರೈಕೆಗೆ ಇರುವ ಅವಕಾಶಗಳನ್ನು ಅರ್ಥಮಾಡಿಕೊಂಡ ಮಿಥುನ್, ರಾಜೀವ್ ದೀಕ್ಷಿತರಿಗೆ ಭಾಷಾಂತರಕಾರನಾಗಿ ಸೇರಿಕೊಳ್ಳುತ್ತಾನೆ. ಸುಮಾರು ೭ ವರ್ಷಗಳ ಕಾಲ ಆಜಾದಿ ಬಚಾವೋ ಆಂದೋಲನದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಮಿಥುನ್, ರಾಜೀವ್ ದಿಕ್ಷಿತರಿಂದ ಭಾಷಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಈ ಸಮಯದಲ್ಲಿ ಅವನ ಆಕಾಂಕ್ಷೆಗಳಿಗೆ ತಣ್ಣೀರು ಸುರಿಯುವ ಕಾರ್ಯ ಆಂದೋಲನದಲ್ಲಿ ನಡೆದು ಹೋಗುತ್ತದೆ. ಪ್ರಮುಖವಾಗಿ ರಾಜೀವ್ ದೀಕ್ಷಿತರ ಭಾಷಣದ ವೇದಿಕೆಯಲ್ಲಿ ಮಿಥುನ್ ಕೇವಲ ಭಾಷಾಂತರಕಾರನಾಗಿಯೇ ಉಳಿದುಹೋಗುತ್ತಾನೆ. ಸ್ವಂತ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಆ ವೇದಿಕೆ ಸಹಾಯ ಮಾಡುವುದೇ ಇಲ್ಲ. ಹೀಗಾಗಿ ಕ್ರಮೇಣ ಆ ಆಂದೋಲನದಿಂದ ದೂರ ಸರಿಯುತ್ತಾ ಕೊನೆಗೆ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ "ಜಾಗೊ ಭಾರತ್" ಎನ್ನುವ ರಾಷ್ಟ್ರಪ್ರೇಮವನ್ನು ಸಾರುವ ವಿಶಿಷ್ಟವಾದ ಕಾರ್ಯಕ್ರಮ ಮಿಥುನ್ ಚಕ್ರವರ್ತಿ ಅಥವಾ ಚಕ್ರವರ್ತಿ ಸೂಲಿಬೆಲೆಯಿಂದ ಆರಂಭವಾಗುತ್ತದೆ. ಅಂದರೆ ಆರ್. ಎಸ್. ಎಸ್. ನಿಂದ ಹೊರಬಂದು "ಜಾಗೊ ಭಾರತ್" ಆರಂಭಿಸುವ ಕಾಲಘಟ್ಟದಲ್ಲಿ ಆಜಾದಿ ಬಚಾವೋ ಆಂದೋಲನವನ್ನು ಮಿಥುನ್ ಚಿಮ್ಮು ಹಲಗೆಯಾಗಿ ಮಾತ್ರ ಬಳಸಿಕೊಳ್ಳುತ್ತಾನೆ ಎಂದರೂ ತಪ್ಪಿಲ್ಲ. ಮಿಥುನ್ ಹೊರಬಂದ ನಂತರ ಕರ್ನಾಟಕದಲ್ಲಿ ಆಜಾದಿ ಬಚಾವೋ ಆಂದೋಲನವು ಮುಂದೆ "ಹಿಂದ್ ಸ್ವರಾಜ್ ಅಭಿಯಾನ" ಎನ್ನುವ ಹೆಸರಿನಿಂದ ಕುಂಟುತ್ತಾ ಸಾಗಿ, ರಾಜೀವ್ ದೀಕ್ಷಿತರು ಬಾಬಾ ರಾಮದೇವರೊಂದಿಗೆ ರಾಜಕೀಯ ಪಕ್ಷದ ಸಂಕಲ್ಪ ಕೈಗೊಂಡ ನಂತರ ಕಣ್ಮರೆಯಾಗುತ್ತದೆ. ಈಗಲೂ ಆ ಅಭಿಯಾನದ ಕೆಲವು ಕಾರ್ಯಕರ್ತರು ಮೈಸೂರಿನಲ್ಲಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ರಾಜೀವ್ ದೀಕ್ಷಿತರು ತಮ್ಮ ಪ್ರಿಯವಾದ ಉಪನ್ಯಾಸದ ಸಂದರ್ಭದಲ್ಲಿ ಹೃದಯಾಘಾತ ಅನುಭವಿಸುತ್ತಾರೆ. ಅವರ ಜೀವವನ್ನು ಉಳಿಸಬಹುದಾಗಿದ್ದ ಚುಚ್ಚುಮದ್ದನ್ನು ಕೇವಲ ವಿದೇಶಿ ಔಷಧ ಎನ್ನುವ ಕಾರಣಕ್ಕೆ ನಿರಾಕರಸಿ ಬಳಿಕ ಕೀರ್ತಿಶೇಷರಾಗುತ್ತಾರೆ.
ಆಜಾದಿ ಬಚಾವೋ ಆಂದೋಲನದಿಂದ ಹೊರಬಂದ ಸಮಯದಲ್ಲಿ ಮಿಥುನ್ ಗೆ ಆರ್ಥಿಕ ಅಭದ್ರತೆ ಕಾಡುತ್ತದೆ. ಆಗ ಹುಟ್ಟಿದ್ದು "ಜಾಗೊ ಭಾರತ್". ಆಕಾಶವಾಣಿಯ ಕಲಾವಿದರನ್ನು ಕಟ್ಟಿಕೊಂಡು, ರಾಜೀವ್ ದೀಕ್ಷಿತರ ಜೀವನಾನುಭವಗಳನ್ನು ಬಳಸಿಕೊಂಡು, ದುಬಾರಿಯಾದ ಶುಲ್ಕವನ್ನು ನಿಗದಿಪಡಿಸಿ ಸಿದ್ಧಗೊಳಿಸಲ್ಪಟ್ಟ "ಜಾಗೊ ಭಾರತ್" ಕರ್ನಾಟಕದಾದ್ಯಂತ ಸಂಚಲನ ಮೂಡಿಸಿತು. ಇದು ಮಿಥುನ್ ಗೆ ಆರ್ಥಿಕ ದೃಢತೆಯನ್ನು ನೀಡಿದ್ದಲ್ಲದೆ "ಚಕ್ರವರ್ತಿ ಸೂಲಿಬೆಲೆ ಶ್ರೇಷ್ಠ ವಾಗ್ಮಿ" ಎಂಬ ಖ್ಯಾತಿಯನ್ನೂ ತಂದುಕೊಟ್ಟಿತು. ಮಹತ್ವಾಕಾಂಕ್ಷೆಯ ಮಿಥುನ್ ಗೆ ಇದೂ ಕೂಡ ತೃಪ್ತಿ ನೀಡದೆ ಇದ್ದಾಗ ಕಂಡದ್ದು ಶ್ರೀ ನರೇಂದ್ರ ಮೋದಿಯವರು. ೨೦೧೩ರಲ್ಲಿ "ನಮೋ ಬ್ರಿಗೇಡ್" ಆರಂಭವಾಯಿತು, ಭಾಜಪದ ಸಖ್ಯವೂ ಬೆಳೆಯಿತು. ಆರ್. ಎಸ್. ಎಸ್ ನ ಪ್ರಚಾರಕನಂತೆ ಮಾತನಾಡುತ್ತಿದ್ದ ಮಿಥುನ್ ಭಾಜಪದ ಪ್ರಚಾರಕನಂತೆ ಮಾತನಾಡತೊಡಗಿದನು. ಮಾತೆತ್ತಿದರೆ ಹಿಂದೂ, ಹಿಂದುತ್ವದ ವಿಚಾರಗಳು. ರಾಷ್ಟ್ರಬಂಧು ರಾಜೀವ್ ದೀಕ್ಷಿತರ ಗಾಂಧೀವಾದದ ಮಾತುಗಳ ಬದಲಾಗಿ ಆರ್. ಎಸ್. ಎಸ್ ನ ಸಂಕುಚಿತ ವಿಚಾರಧಾರೆಗಳು "ನಮೋ ಬ್ರಿಗೇಡ್" ನ ಮೂಲಕ ಕೇಳಲಾರಂಭಿಸಿದವು. ಮುಂದೆ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ "ನಮೋ ಬ್ರಿಗೇಡ್" ಹೋಗಿ "ಯುವ ಬ್ರಿಗೇಡ್" ಸ್ಥಾಪನೆಯಾಯಿತು. ಕ್ರಮೇಣ ಮಿಥುನ್ ನ ಭಾಷಣದಲ್ಲಿದ್ದ ಉಗ್ರ ಹಿಂದುತ್ವದ ವಿಚಾರಗಳು ಮೊನಚನ್ನು ಕಳೆದುಕೊಳ್ಳುತ್ತಾ ಬಂದವು. ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ಹಾಗೂ ಅವರ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎನ್ನಬಹುದು. ಮೋದಿಯವರು ಕೇವಲ "ಹಿಂದೂಗಳ ಪ್ರಧಾನಿ"ಯಾಗದೆ "ಭಾರತೀಯರ ಪ್ರಧಾನಿ" ಯಾದರು. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎನ್ನುವುದೇ ಮಂತ್ರವಾಯಿತು. ಇದರಿಂದಾಗಿ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರೂ ಕೂಡ ರಾಷ್ಟ್ರೀಯವಾದಿಗಳಾಗುವ ಅನಿವಾರ್ಯತೆ ಉಂಟಾಯಿತು. ಇದೇ ಕಾರಣಕ್ಕೆ ನಾನು ಹೇಳಿದ್ದು "ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!".
ಗಾಂಧೀಜಿಯ ಮಾನವತಾವಾದ, ಸರ್ವರನ್ನೂ ಸಮನಾಗಿ ಕಾಣುವ ಭಾವ, ಇವುಗಳನ್ನು ರಾಜೀವ ದೀಕ್ಷಿತರು ಸಂಪೂರ್ಣ ಭಾರತದಲ್ಲಿ ಕಾಣಲು ಬಯಸಿದ್ದರು. ಈಗ ಅದೇ ವಿಚಾರಗಳನ್ನು ಸೂಲಿಬೆಲೆಯವರು ಪುನರುಚ್ಚರಿಸಲಾರಂಭಿಸದ್ದಾರೆ. ಬಾಳೆಕುದ್ರು ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಭಾಷಣದಲ್ಲಿ ಕೂಡ ನನಗೆ ಪ್ರಮುಖವಾಗಿ ಕೇಳಿಸಿದ್ದು ಈ ವಿಚಾರಗಳೇ. ಎಲ್ಲ ಭಾರತೀಯರೂ ಒಂದೇ. ನಾನು ಯಾರನ್ನೂ ಜಾತಿಯಿಂದ ಗುರುತಿಸಲು ಬಯಸುವುದಿಲ್ಲ. ಅವರವರ ಕಾರ್ಯದಿಂದಲೇ ಅವರವರ ವರ್ಣಗಳ ನಿರ್ಧಾರವಾಗುತ್ತದೆ. ನಾನು ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದ ಕೆಲಸಗಳಿಂದಾಗಿ ನಾನು ಶೂದ್ರ ವರ್ಣಕ್ಕೆ ಸೇರಿದವನು ಎಂದು ಬ್ರಾಹ್ಮಣನಾಗಿ ಹುಟ್ಟಿರುವ ಸೂಲಿಬೆಲೆ ಹೇಳುತ್ತಿರುವಾಗ ನಿಜಕ್ಕೊ ಅವರು ಬದಲಾಗಿದ್ದಾರೆ ಎಂದು ಅನ್ನಿಸಿತು. "ಯುವ ಬ್ರಿಗೇಡ್" ನ ಉತ್ತಮವಾದ ಕೆಲಸಗಳ ಮೂಲಕ ಸೂಲಿಬೆಲೆಯವರು ತಾವು ಕೇವಲ ಮಾತುಗಾರ ಮಾತ್ರವಲ್ಲ, ಹೇಳಿದ್ದನ್ನು ಮಾಡಿ ತೋರಿಸುವ ತಾಕತ್ತು ಕೂಡ ಇದೆ ಎಂದು ಸಾಬೀತು ಮಾಡುತ್ತಿದ್ದಾರೆ. ಮಠದ ಕಲ್ಯಾಣಿಯನ್ನು ಉಚಿತವಾಗಿ ಸ್ವಚ್ಚಗೊಳಿಸುವ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ. ಹೀಗೆ ಒಂದೇ ತತ್ವ ಸಿದ್ಧಾಂತಕ್ಕೆ ಜೋತು ಬೀಳದೆ "ಮೊದಲು ಮಾನವನಾಗು" ಎಂಬ ದಿಸೆಯಲ್ಲಿ ಅವರು ಮುನ್ನಡೆದರೆ ದೇಶಕ್ಕೊಬ್ಬ ಆದರ್ಶ ಪುರುಷ ಸಿಗುವುದರಲ್ಲಿ ಸಂಶಯವಿಲ್ಲ. ವಂದೇ ಮಾತರಂ.
(ಲೇಖಕರು ಮಣಿಪಾಲ ತಾಂತ್ರಿಕ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಲ್ಲಿ ಪ್ರಾಧ್ಯಾಪಕರು. ಹಿಂದೆ ಆಜಾದಿ ಬಚಾವೋ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು)