October 15, 2018

ಅಮೆ-ಸೂತಕದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ಇದೆ. ಇದು ಸರಿಯೆ?


ಮೈಲಿಗೆ ಅಂತ ಬಂದಾಗ ಒಂದೊಂದಾಗಿ ನಿರ್ಬಂಧಗಳು ಹೊಸ ಹೊಸ ರೀತಿಯಲ್ಲಿ ಹುಟ್ಟಿಕೊಂಡವು. ನಾವು ಒಂದು ಸ್ಪಷ್ಟತೆಯನ್ನು ಮಾಡಿಕೊಳ್ಳಬೇಕು. ವ್ಯಾವಹಾರಿಕ ಜೀವನವು ಒಂದು ಭಾಗ. ಸಾಮಾಜಿಕ ಜೀವನವು ಇನ್ನೊಂದು ಭಾಗ. ಸಾಮಾಜಿಕ ಜೀವನದಲ್ಲಿ ಒಂದು ದೇವಾಲಯ ಎಂದರೆ ಅದಕ್ಕೆ ಅದರದ್ದೇ ಆದ ನಿರ್ಬಂಧಗಳೇನಾದರೂ ಇದ್ದರೆ ಆ ನಿರ್ಬಂಧವನ್ನು ನಮ್ಮ ದೋಷದಿಂದ ಹಾಳಾಗದಂತೆ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ. ಏಕೆಂದರೆ ಅದು ಸಮಾಜದ್ದು, ನಮ್ಮದ್ದಲ್ಲ. ನಮಗೂ ಅಲ್ಲಿ ಭಾಗವಿದೆ, ಅಷ್ಟು ಬಿಟ್ಟರೆ ನಮ್ಮಿಂದಾಗಿ ದೇವಸ್ಥಾನ ಅಶುದ್ಧಿಯಾಗಬಾರದು ಎನ್ನುವುದು ನಿಯಮ. ಈ ಪ್ರದೇಶದಲ್ಲಿ ದೇವಸ್ಥಾನದ ಗರ್ಭಗುಡಿಗೆ ಅರ್ಚಕನಿಗೆ ಮಾತ್ರ ಪ್ರವೇಶ ಎಂದು ಚಾಲ್ತಿಯಲ್ಲಿದೆ. ಎಲ್ಲರೂ ಗರ್ಭಗುಡಿಗೆ ಹೋಗುವ ಹಾಗಿಲ್ಲ. ಅಲ್ಲಿನ ಶೌಚ, ಶುದ್ಧತೆ ಕಾಪಾಡಿಕೊಳ್ಳಲಿಕ್ಕೆ ಇದು ಬಲು ಮುಖ್ಯ. ಏಕೆಂದರೆ ಇಲ್ಲಿ ಅತಿ ಹೆಚ್ಚು ಸೆಖೆ ಇರುತ್ತದೆ. ಎಲ್ಲರೂ ಒಳಗೆ ನುಗ್ಗಿದರೆ ಅಲ್ಲಿ ಮನುಷ್ಯರು ಇರಲಿಕ್ಕೆ ಖಂಡಿತ ಸಾಧ್ಯ ಇಲ್ಲ. ಒಂದು ಹನಿ ಬೆವರು ಕೂಡಾ ಗರ್ಭಗುಡಿಯಲ್ಲಿ ಬಿದ್ದರೂ ಶುದ್ಧಿ ಮಾಡಿಕೊಳ್ಳಬೇಕು ಎಂದು ಆಗಮ ಶಾಸ್ತ್ರ ಹೇಳುತ್ತದೆ. ಇದೆಲ್ಲ ಸಮಸ್ಯೆಗಳಿರುವುದರಿಂದ ಈ ನಿಯಮ ಮಾಡಲಾಗಿದೆ. ಅಶುದ್ಧಿ ಆಗಬಾರದು ಎನ್ನುವ ಕಾರಣದಿಂದ ಈ ರೀತಿಯ ಹಲವಾರು ಆಚರಣೆಗಳಿವೆ. ನೀವು ಅಶುದ್ಧಿ ಎಂದು ಇದರ ಅರ್ಥ ಅಲ್ಲ. ಅಶುದ್ಧಿ ಆಗಬಾರದು ಎನ್ನುವುದು ಆಗಮದ ನಿಯಮ. ಒಳಗಿನ ನಡೆ ಅಥವಾ ಶುಕನಾಸಿ ಹೀಗೆ ಬೇರೆ ಬೇರೆ ಪ್ರದೇಶಗಳನ್ನು ಹೇಳುತ್ತದೆ. ಆಯಾಯ ಪ್ರದೇಶಗಳಲ್ಲಿ ಎಷ್ಟೆಷ್ಟು ಶುದ್ಧಿ ಇರಬೇಕು ಎನ್ನುವುದು ಕೂಡ ಹೇಳುತ್ತದೆ. ಆ ಶುದ್ಧಿಯನ್ನು ಹೇಳುವಾಗ ಶುದ್ಧತೆಯ ಪ್ರಧಾನತೆಯನ್ನು ಕೊಟ್ಟು ಹೇಳುತ್ತದೆ ಬಿಟ್ಟರೆ ಒಬ್ಬ ಸೂತಕನು ಬಂದರೆ ಅಶುದ್ಧಿಯಾಗುತ್ತದೆ ಎಂದೇನೂ ಹೇಳಿಲ್ಲ. ಆದರೆ ಸಮಾಜದಲ್ಲಿ ಸೂತಕನು ಅಶುದ್ಧಿ ಎಂದಿರುವ ಕಾರಣ ನೀನು ಬರಬೇಡ ಎನ್ನುವ ವಾಕ್ಯ ಬಂದಿರುತ್ತದೆ. ಆದರೆ ಆಗಮದಲ್ಲಿ ಎಷ್ಟೆಷ್ಟು ಶುದ್ಧತೆಯಿಂದ ಪ್ರಕಾರವನ್ನು ಉಳಿಸಿಕೊಳ್ಳಬೇಕೆಂದು ಮಾತ್ರ ಹೇಳಿದೆ. ಯಾವುದೇ ವ್ಯಕ್ತಿಯನ್ನಾಗಲೀ, ಯಾರ ಮನೆಯಲ್ಲಿ ಸಾವಾಗಿದೆಯೋ ಅವನು ಬಂದಾಗ ಅಶುದ್ಧಿಯಾಗುತ್ತದೆ ಎಂದಾಗಲೀ ಹೇಳಿಲ್ಲ. ನಿಮ್ಮ ಮನೆಯಲ್ಲಿ ಸಾವಾದಾಗ ಅಶುದ್ಧಿ ಎಂದು ಸಮಾಜವು ನಿಮ್ಮನ್ನು ನಿರ್ಭಂಧಿಸಿದ ಮೇಲೆ ನೀವು ಇಲ್ಲಿ ಬಂದಾಗ ಅಶುದ್ಧಿ ಆಗುವುದಿಲ್ಲವೇ, ಅದಕ್ಕೆ ಬರಬೇಡ ಎಂದರು. ಇದು ಬಂದದ್ದು ಹೀಗೆ, ಆಗಮದಲ್ಲಿ ಇದನ್ನು ಹೇಳಿಲ್ಲ. ನಂತರ ಸಾಮಾಜಿಕ ವ್ಯವಸ್ಥೆಯಲ್ಲಿ ಬಂದಾಗ ನೀನು ಅಶುದ್ಧಿಯಲ್ಲ ಇವತ್ತು ದೇವಸ್ಥಾನಕ್ಕೆ ಬರಬೇಡ ಎಂದು ಹೇಳಿದ್ದಕ್ಕೆ ಆಗಮವು ಜವಾಬ್ದಾರವಲ್ಲ.

ಆಗಮ ಮಾತ್ರ ಸ್ಪಷ್ಟ ಪಡಿಸುತ್ತದೆ. ದೇವಾಲಯಕ್ಕೆ ಬರುವ ಭಕ್ತನ ಮನಸ್ಸು ಶುದ್ಧವಾಗಿರಬೇಕು. ಅವನು ಸದಾಚಾರವನ್ನು ರೂಢಿಸಿಕೊಂಡಿರಬೇಕು. ಸದಾಚಾರಗಳೆಂದರೆ ಬೆಳಿಗ್ಗೆ ಬೇಗನೆ ಏಳುವುದು, ಎದ್ದ ತಕ್ಷಣ ಸ್ನಾನ ಇತ್ಯಾದಿ ಸಹಜ ಶೌಚಾದಿಗಳನ್ನು ಮಾಡಿಕೊಳ್ಳುವುದು. ಸಾಧ್ಯವಾದಷ್ಟು ದೇವಭಕ್ತನಾಗಿರಬೇಕು. ಅವನದ್ದೇ ಆದ ದೇವಪೂಜೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು. ನಂತರ ಅವನು ದೇವಾಲಯಕ್ಕೆ ಬಂದರೆ ಯಾವುದೇ ಪ್ರವೇಶ ನಿರ್ಬಂಧ ಇಲ್ಲ. ಸದಾಚಾರಗಳನ್ನು ಹೊಂದಿದವನಾಗಿರಬೇಕು, ಇದನ್ನು ಗೌರವಿಸುವವನಾಗಿರಬೇಕು. ಅವನಿಗೆ ದೇವಾಲಯದ ಪ್ರವೇಶವಿದೆ ಎಂದು ಆಗಮ ಹೇಳಿದೆ. ಸಾಮಾನ್ಯ ಎಲ್ಲ ಶಾಸ್ತ್ರಗಳಲ್ಲೂ ಕೂಡ ಈ ಹಿನ್ನಲೆಯಲ್ಲಿ ಕೆಲವೊಂದಿಷ್ಟು ನಿರ್ಬಂಧಗಳನ್ನು ಹೇಳುತ್ತದೆ. ಉದಾಹರಣೆಗೆ ಜ್ಯೋತಿಷ್ಯದ ಆರಂಭ ಶ್ಲೋಕವೇ ಹೀಗೆ ಹೇಳುತ್ತದೆ. ಜ್ಯೋತಿಷ್ಯವನ್ನು ಗೌರವಿಸುವವನಾಗಿರಬೇಕು, ಇಲ್ಲದಿದ್ದರೆ ಅವನಿಗೆ ಪ್ರಶ್ನೆ ಹೇಳಲೇ ಬೇಡ ಎಂದು ಹೇಳುತ್ತದೆ. ಕುಹಕನೋ, ಚಿಂತಕನೋ, ಈ ರೀತಿಯಲ್ಲಿ ಬಂದು ಪ್ರಶ್ನೆಯನ್ನು ಕೇಳಿದರೆ ಹೇಳಲೇಬೇಡ ಎಂದು ಶ್ಲೋಕವು ಸ್ಪಷ್ಟಪಡಿಸಿದೆ. ಜ್ಯೋತಿಷ್ಯದ ಮೇಲೆ ನಂಬಿಕೆ ಇದ್ದರೆ ಮಾತ್ರ ಅವನಿಗೆ ಜ್ಯೋತಿಷ್ಯ ಹೇಳು ಎನ್ನಲಾಗಿದೆ. ಪರೀಕ್ಷೆ ಮಾಡಲು ಬರುವವರಿಗೆ ಅವಕಾಶವೇ ಇಲ್ಲ. ಹಾಗೆಯೇ ಯಾವ ಶಾಸ್ತ್ರದಲ್ಲಾದರೂ ತನ್ನ ಒಂದು ಬದ್ಧತೆ, ಅದರ ರಕ್ಷಣೆಯ ದೃಷ್ಟಿಯಿಂದ ಮೊದಲೇ ನಿರ್ಬಂಧ ಮಾಡಿಕೊಂಡಿರುತ್ತದೆ. ಹಾಗೆಯೇ ಇಲ್ಲೂ ಆಗಮ ಹೇಳಿದ್ದಷ್ಟೇ, ಇಂತಿಷ್ಟು ಪ್ರಾಕಾರಗಳಲ್ಲಿ ಈ ರೀತಿಯ ನಿಯಮಗಳಿವೆ, ನಿಯಮಗಳಿಗೆ ಅಶುದ್ಧಿಯಗದಂತೆ ಕಾದುಕೊಂಡು ಬರಬೇಕಾದ್ದು ಆಗಮದ ನಿಯಮ. ಆದರೆ ಅದನ್ನು ನಿರ್ವಹಿಸುವಾಗ, ಅಶುದ್ಧಿಯೆಂದರೆ ಏನೆಂದು ಕಲ್ಪನೆ ಸ್ಪಷ್ಟವಾಗದೆ ಇದ್ದಾಗ, ನಿಮ್ಮನ್ನು ಅಶುದ್ಧಿಯೆಂದು ಸಮಾಜ ತಿರಸ್ಕರಿಸಿರುವಾಗ, ನೀನು ಅಶುದ್ಧಿಯಾದ್ದರಿಂದ ಒಳಗೆ ಬರಬೇಡ, 10 ದಿವಸ ಕಳೆದು ಬಾ ಎಂದು ಆದೇಶ ಕೊಡಲಾಗುತ್ತದೆ. ಇದರಲ್ಲಿ ಆಡಳಿತ ಮಂಡಳಿಯ ತಪ್ಪೂ ಇಲ್ಲ ಅಥವಾ ಆಗಮದ ತಪ್ಪೂ ಅಲ್ಲ. ಇದು ಸಮಾಜ ಮಾಡಿರುವ ವ್ಯವಸ್ಥೆ. ಸಮಾಜವನ್ನೇ ನೀವು ಸರಿಪಡಿಸಿ. ಆಗ ಈ ಸಮಸ್ಯೆ ಇರುವುದಿಲ್ಲ. ಇಂತಹ ಪರಿವರ್ತನೆಗಳಿಗೆ ಕ್ರಾಂತಿ ಆಗಲೇ ಬೇಕು.

ಈಗ ಪರಿಸ್ಥಿತಿ ಹೇಗಿದೆ ಎಂದರೆ ಅಕಸ್ಮಾತ್ ಅಶೌಚದಲ್ಲಿ ಯಾರಾದರೂ ದೇವಾಲಯಕ್ಕೆ ಹೋದರೆ ದೇವಾಲಯ ಅಶುದ್ಧಿಯಾಗಿದೆ ಎಂದು ಕೇರಳದಿಂದ ಅಷ್ಟಮಂಗಲ ಪ್ರಶ್ನೆ ಹೇಳಲು ಬರುವವರು ಹೇಳಬೇಕು! ಇಲ್ಲದಿದ್ದರೆ ಗೊತ್ತೇ ಆಗುವುದಿಲ್ಲ. ಆದರೆ ಜನರಿಗೆ ಭಯ ಹುಟ್ಟುವುದಿದೆ. ನಾನು ಅಶುದ್ಧಿಯಾಗಿ ದೇವಸ್ಥಾನಕ್ಕೆ ಹೋಗಿಬಿಟ್ಟರೆ ನನಗೆ ಸಾವಾಗಿಬಿಡುತ್ತದೆ ಎನ್ನುವಷ್ಟು ಜೀವಭಯ ಹುಟ್ಟಿಬಿಟ್ಟಿದೆ, ಅದನ್ನು ಹೋಗಲಾಡಿಸಬೇಕಿದ್ದರೆ ಒಂದಿಷ್ಟು ಕ್ರಾಂತಿ ಆಗಲೇ ಬೇಕು. ಏನೂ ಆಗುವುದಿಲ್ಲ ಎಂದು ಜನರಿಗೆ ತೋರಿಸಬೇಕು. ಕ್ರಾಂತಿ ಮಾಡಿದರೆ ತಪ್ಪಲ್ಲ. ಆದರೆ ಆ ಕ್ರಾಂತಿ ಮಾಡುವ ಉದ್ದೇಶದಿಂದ ಯಾವುದೇ ವಿಪ್ಲವ, ವಿವಾದಕ್ಕೆ ಹೋಗುವ ಕ್ರಾಂತಿ ಮಾಡಬೇಡಿ. ಪರಸ್ಪರ ಸಹಕಾರದಿಂದ ಕ್ರಾಂತಿ ಮಾಡಿ, ಕ್ರಾಂತಿಯೂ ಒಳ್ಳೆಯದೇ. ಪರಿವರ್ತನೆ ಮಾಡಿ ತೋರಿಸಿ. ಖಂಡಿತ ದೋಷ ಇಲ್ಲ. ಆಗಮ ನಿಷೇಧಿಸಿಲ್ಲ.

-ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment