February 6, 2020

ಪ್ರಶ್ನೋತ್ತರಗಳು - 5


ಪ್ರಶ್ನೆ: ಗುರುಗಳೇ, ತೆಂಗಿನ ಕಾಯಿಯ ವಿಶೇಷತೆ ನೀವು ಹೇಳಿದಿರಿ. ಹಾಗೆಯೇ ಅಡಿಕೆಯ ವಿಶೇಷತೆ ಹೇಳುವಿರಾ? ಸ್ವಾಮೀಜಿ: ಔಷಧಿಗಾಗಿ ತುಂಬಾ ಬಳಕೆ ಆಗುತ್ತದೆ. ಔಷಧಿಯ ಗುಣದ ಬಗ್ಗೆ ಈಗ ಹೇಳುವುದು ಕಷ್ಟಸಾಧ್ಯ. ಏಕೆಂದರೆ ಅದಕ್ಕೆ ಸುಮಾರು ೨-೩ ಗಂಟೆ ಬೇಕಾಗುತ್ತದೆ. ಆಧ್ಯಾತ್ಮಿಕವಾಗಿ ಒಂದಿಷ್ಟು ಭಾಗದಲ್ಲಿ ಅಡಿಕೆಗೆ ಮಹತ್ವ ಇದೆ. ಅದರ ಗಂಧ ಅಂದರೆ ಪರಿಮಳ. ಅಡಿಕೆಯಲ್ಲಿ ಏನು ಪರಿಮಳ ಇದೆ, ಅಡಿಕೆ ಹೂವಿಗೂ ಒಂದು ಪರಿಮಳ ಇದೆ. ಆ ಎರಡು ಪರಿಮಳಗಳೂ ಕೂಡ ಆಧ್ಯಾತ್ಮಿಕವಾಗಿ ಮನಸ್ಸನ್ನು ಲಾದವಾಗಿಸುತ್ತದೆ. ಪೂಗ ಪುಷ್ಪದ ಪರಿಮಳವನ್ನು ಲಾದಿನಿ ಗಂಧ ಎನ್ನುತ್ತಾರೆ. ಅದು ಮನಸ್ಸನ್ನು ಒಂದು ಹಿತಮಿತವಾದ ರೀತಿಯಲ್ಲಿ, ಸುಸಂಸ್ಕೃತವಾದ ರೀತಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಹಾಗಾಗಿ ಒಬ್ಬರು ಶ್ರೇಷ್ಠರು, ಸುಸಂಸ್ಕೃತರನ್ನು ಕಂಡಾಗ ಅವರಿಗೆ ತಾಂಬೂಲವನ್ನು ಅರ್ಪಿಸುವುದು ಇದೇ ಕಾರಣಕ್ಕಾಗಿ. ಎಲೆ ಅಡಿಕೆ ತಿನ್ನುವವರು ಸುಸಂಸ್ಕೃತರು ಎನ್ನುವ ಭಾವನೆ ಹಿಂದೆ ನಮ್ಮಲ್ಲಿತ್ತು. ಅಡಿಕೆಯಿಂದ, ಪೂಗ ಪುಷ್ಪದಿಂದ ಅವನಲ್ಲಿ ಸುಸಂಸ್ಕೃತನೆಂಬ ಭಾವವನ್ನು ಹುಟ್ಟಿಸಲು ಸಾಧ್ಯ. ಲಾದ ಭಾವವನ್ನು ಅದು ಹುಟ್ಟಿಸುತ್ತದೆ. ಹಾಗೆ ಅಡಿಕೆಯ ಬಳಕೆ ಆಧ್ಯಾತ್ಮಿಕವಾಗಿಯೂ, ದೈಹಿಕವಾಗಿಯೂ ಅರೋಗ್ಯ ದೃಷ್ಟಿಯಿಂದ ಉತ್ತಮ. ಹಾಗೆಯೇ ಕರ್ಮ ವಿಭಾಗದಲ್ಲಿಯೂ, ಕರ್ತವ್ಯ ನಿರ್ವಹಣೆಯಲ್ಲೂ ಮತ್ತೊಂದು ವಿಶಿಷ್ಟತೆಯನ್ನು ಅಡಿಕೆಗೆ ಹೇಳಿದ್ದಾರೆ. ಈಗೆಲ್ಲ ಚಾಲ್ತಿಯಲ್ಲಿ ಇಡೀ ಅಡಿಕೆಯನ್ನು ಇಡುತ್ತಾರೆ. ನಿಜವಾಗಿಯೂ ಇಡೀ ಅಡಿಕೆಯಲ್ಲ. ಅಡಿಕೆಯನ್ನು ಒಡೆದು, ಅದರ ಹಿಂಬದಿಯ ಹೊದಿಕೆಯನ್ನೆಲ್ಲ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಬೇಕು. ಇಡೀ ಅಡಿಕೆಯನ್ನು ಇಡಬಾರದು ಎಂದೇ ಹೇಳಿದೆ. ಇಡೀ ಫಲವನ್ನು ಕೆಲವು ವಿಶಿಷ್ಟ ಸಂಪ್ರದಾಯಗಳಲ್ಲಿ ತಾಂಬೂಲ ಕೊಡುವಾಗ ಮಾತ್ರ ಬಳಸಬೇಕು. ಆದರೆ ಕರ್ಮ ಸಮುಚ್ಚಯದಲ್ಲಿ ಅಡಿಕೆಯನ್ನು ೨೦ ಅಥವಾ ಅದಕ್ಕಿಂತ ಹೆಚ್ಚು ಚೂರು ಮಾಡಬೇಕು ಎಂದು ಹೇಳಿದೆ. ೨೧ ವಿಭಾಗ ಮಾಡಿ ನಾವು ಮಾಡತಕ್ಕ ಯಾವುದೇ ಒಂದು ಕರ್ಮಾನ್ಗದಲ್ಲಿ ಬಳಸಲ್ಪಡಬೇಕು. ಇನ್ನೊಂದು ಅಡಿಕೆಯನ್ನು ಚೂರು ಮಾಡುವ ಅವಶ್ಯಕತೆ ಇರುವುದಿಲ್ಲ. ಅಷ್ಟರಲ್ಲೇ ಮುಕ್ತಾಯ ಆಗಬೇಕು. ಏಕೆಂದರೆ ಈ ಕರ್ಮ ಸಮುಚ್ಛಯಗಳ ಸಾಮಾನ್ಯ ಜೀವನ ವಿಧಾನವನ್ನು ಘೋಷಿಸುವ ಕಾಲ ಯಾವಾಗ ಎಂದರೆ ಬಹಳ ಹಿಂದೆ ಚಾಕ್ಷುಷ ಮನ್ವಂತರ ಇತ್ತು. ಆ ಕಾಲದಲ್ಲಿ ಮಾನವರಿಗೆ ಜೀವನ ವಿಧಾನಕ್ಕೆ ನಿರ್ದಿಷ್ಟ ರೀತಿ ಬೇಕು ಎನ್ನುವ ಕಲ್ಪನೆ ಸುರೋಧ ಎನ್ನುವ ರಾಜನಿಗೆ ಹುಟ್ಟಿತು. ಅವನು ಅದನ್ನು ಚಿಂತನೆ ಮಾಡುತ್ತಾನೆ, ಒಂದು ನಿರ್ದಿಷ್ಟ ಪ್ರಮಾಣದಲ್ಲಿಯೇ ಮನುಷ್ಯ ಬದುಕಬೇಕು ಎಂದು ಹೇಗೆ ಸೂಚಿಸುವುದು ಎಂದು. ಹಲವು ಋಷಿ ಮುನಿಗಳನ್ನು ಸಮಾಲೋಚಿಸುತ್ತಾನೆ. ಆ ಕಾಲದಲ್ಲಿ ಅದಕ್ಕೆ ಸಂಬಂಧಪಟ್ಟ ಕರ್ಮ ಸಿದ್ಧಾಂತಗಳಿಗೆಲ್ಲ ಒಬ್ಬೊಬ್ಬರಿಂದ ಒಂದೊಂದು ಚಿಂತನೆ ಬರುತ್ತದೆ. ಇಂತಿಂತಹ ಸಂಸ್ಕಾರಗಳನ್ನು ಕೊಡಬೇಕು, ಇಂತಿಂತಹ ವೃತಗಳನ್ನು ಆಚರಿಸಬೇಕು, ಇಂತಿಂತಹ ಪೂಜೆಗಳನ್ನು ಮಾಡಬೇಕು, ಮಳೆಗಾಗಿ ಯಾವ ರೀತಿಯ ಯಜ್ಞ-ಯಾಗಗಳನ್ನು ಮಾಡಬೇಕು, ಇವೆಲ್ಲ ಚಿಂತನೆ ಆಗುತ್ತದೆ. ಅಂತಹ ಚಿಂತನೆಗಳಲ್ಲೆಲ್ಲ ಪ್ರತಿಯಿಂದರಲ್ಲೂ ಫಲಾಕಾಂಕ್ಷೆ ಇದ್ದೇ ಇರುತ್ತದೆ. ಫಲಾಕಾಂಕ್ಷೆ ಹೇಗಿರಬೇಕು ಎನ್ನುವುದು, ಮಾಡುವ ಕರ್ಮವು ನಾರೀಕೇಳ - ಫಲವು ಪೂಗ ಫಲ ಎಂದು ಹೇಳುತ್ತದೆ. ಇದನ್ನು ಹೇಳಿದ್ದು ಜಮದಗ್ನಿ. ಅವನಿಗೆ ಅದು ಅನುಭವಕ್ಕೆ ಬಂದಿದೆ. ಮಾಡುವ ಕಾರ್ಯವು ನಾರೀಕೇಳವಾದರೆ ಫಲವು ಪೂಗ ಫಲದಷ್ಟು ಎಂದು ಹೇಳುತ್ತಾರೆ. ಹಾಗಾಗಿ ಮಾಡುವ ಕರ್ಮದಲ್ಲಿ ಒಂದೇ ಪೂಗ ಫಲವನ್ನು ಬಳಕೆ ಮಾಡುವುದನ್ನು ಸೂತ್ರಗಳು ಹೇಳಿಕೊಂಡು ಹೋಗುತ್ತವೆ. ಒಂದು ಪೂಜೆಯಲ್ಲಿ ನಿಮಗೆ ಎಷ್ಟು ಕಡೆ ತಾಂಬೂಲ ಬರಬಹುದು ಅಷ್ಟು ಹೂಳುಗಳನ್ನು ಒಂದು ಅಡಿಕೆಯಲ್ಲಿ ಮಾಡಿಟ್ಟುಕೊಂಡರೆ ಸಾಕಾಗುತ್ತದೆ. ಅಷ್ಟು ಮಿತ ವ್ಯಯವನ್ನು ಅದು ಹೇಳುತ್ತದೆ ಮತ್ತು ನಿಮಗೆ ಅಷ್ಟೇ ಕರ್ಮಾನ್ಗದಲ್ಲಿ ಸಿಕ್ಕುವುದು. ನೀವು ಯಾವುದೇ ಮಹಾ ಯಜ್ಞವನ್ನು ಬೇಕಾದರೆ ಮಾಡಿ, ಮಾಡಿದವನಿಗೆ ಸಿಗುವ ಫಲ ಎಷ್ಟು ಎಂದರೆ, ಇಷ್ಟೇ. ಉಳಿದದ್ದೆಲ್ಲ ಬೇರೆ ಬೇರೆ ಜಾಗಗಳಿಂದ ಸಿಗುವ ಸಂಬಾರ, ಪರಿಕರ, ದೇವರು, ದೇವತೆಗಳು, ರಾಜರು, ಎಲ್ಲರಿಗೂ ಹಂಚಿ ಹೋಗಿ ಅವನಿಗೆ ಸಿಗುವುದು ಒಂದು ಪೂಗ ಫಲದಷ್ಟು ಮಾತ್ರ. ಅಷ್ಟನ್ನು ಅವನು ಭುಂಜಿಸಬೇಕು, ಅನುಭವಿಸಬೇಕು ಎಂದರ್ಥ. ಇಲ್ಲಿಯೇ ನಡೆದ ಒಂದು ಯಾಗದಲ್ಲಿ ಎಲ್ಲರಿಗೂ ಒಂದೊಂದು ಪೂಗ ಫಲ ಕೊಟ್ಟು, ಅದನ್ನು ನಿಮ್ಮ ಮನೆಯಲ್ಲಿ ನೆಟ್ಟು ಬೆಳೆಸಿ ಎಂದಿದ್ದೆವು. ಅವರಿಗೆ ಫಲ ಅದು ಎಂದರ್ಥ. ಹಾಗಾಗಿ ಕೊಡಲ್ಪಟ್ಟಿತು.

ಪ್ರಶ್ನೆ: ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ತುಳಸಿಕಟ್ಟೆಯ ಅಗತ್ಯತೆ ಏನು? ಅವುಗಳ ಆಯಾಮ, ನಿಯಮಗಳೇನು? ಸ್ವಾಮೀಜಿ: ಸಂಪ್ರದಾಯದಲ್ಲಿ ವಿಶಿಷ್ಟವಾದ ಗುಣ ಎನ್ನುವ ಕಾರಣಕ್ಕೆ, ಔಷಧೀಯ ವಸ್ತು, ಅದರ ಗಾಳಿಯಿಂದ ವಾತಾವರಣ ಶುದ್ಧವಾಗುತ್ತದೆ ಎನ್ನುವ ಕಾರಣಕ್ಕೆ ಬೆಳೆಸುವ ಪದ್ಧತಿ ಬಂದಿತು. ಆದರೆ ತುಳಸಿ ಮಾತ್ರವಲ್ಲ. ಈ ಪ್ರದೇಶದಲ್ಲಿ ತುಳಸಿಗೆ ಮಹತ್ವ ಬಂದದ್ದು ಮಾಧ್ವ ಸಂಪ್ರದಾಯ ಪ್ರಸಿದ್ದಿಗೆ ಬಂದ ಮೇಲೆ. ಹಾಗಾಗಿ ಎಲ್ಲ ಮನೆಯಲ್ಲೂ ತುಳಸೀ ಕಟ್ಟೆ ಇರಲೇಬೇಕು ಎಂದು ಬಂದಿತು. ತುಳಸಿ ಕಟ್ಟೆ ಮಾತ್ರವಲ್ಲ, ನೀವು ಗಮನಿಸಿರಬಹುದು, ಎಷ್ಟೋ ಮನೆಗಳಲ್ಲಿ ಮನೆ ಎದುರು ಕಟ್ಟೆ ಇರುತ್ತದೆ ಆದರೆ ಅದರಲ್ಲಿ ನೀವು ಕೇಪಳ ಎಂದು ಹೇಳುತ್ತೀರಲ್ಲ ಆ ಗಿಡ ಇರುತ್ತದೆ. ಅದು ತುಳಸಿಯಷ್ಟೇ ಸಮರ್ಥವಾದ ಗಿಡ. ಅಷ್ಟೇ ಮನೆಗೆ ರಕ್ಷಣೆಯೂ ಹೌದು. ಕೆಲವು ಮನೆಗಳಲ್ಲಿ ನೆಲ್ಲಿ ಗಿಡ ಇರುತ್ತದೆ. ತುಳಸೀ ಪೂಜೆ ದಿನ ನೀವು ನೆಲ್ಲಿಗಿಡವನ್ನು ಇಟ್ಟೇ ಪೂಜೆ ಮಾಡುತ್ತೀರಿ. ಇದು ಕೆಲವು ಸಂಪ್ರದಾಯಗಳಲ್ಲಿ ಇಲ್ಲ, ಕೆಲವು ಸಂಪ್ರದಾಯಗಳಲ್ಲಿ ಇದೆ. ಇನ್ನು ಕೆಲವು ಕಡೆ ಬಿಲ್ವ ಪತ್ರೆ ಇರುತ್ತದೆ. ಹೀಗೆ ಬೇರೆ ಬೇರೆ ಸುಮಾರು ಹೆಚ್ಚು ಕಡಿಮೆ ಹದಿಮೂರು ರೀತಿಯ ಬೇರೆ ಬೇರೆ ಗಿಡಗಳು ಬಳಕೆಯಲ್ಲಿವೆ. ತುಳಸಿ ಮಾತ್ರವಲ್ಲ. ತುಳಸಿ ಮಾತ್ರ ಅಂತ ಪ್ರಾಧಾನ್ಯತೆ ಬಂದದ್ದು ಇತ್ತೀಚಿಗೆ. ಸುಮಾರು ೭೦೦-೮೦೦ ವರ್ಷಗಳ ಈಚೆಗೆ. ಅಲ್ಲದೆ ಅತೀ ಎತ್ತರವಾಗಿ ಬೆಳೆಯುವ ಗಿಡ ಅದಲ್ಲ. ಹಾಗಾಗಿ ಎಲ್ಲಿ ನೆಟ್ಟರೂ ಸುಲಭದಲ್ಲಿ ಪೋಷಿಸಲು ಆಗುತ್ತದೆ ಎನ್ನುವ ಕಾರಣದಿಂದಾಗಿಯೂ ಅದು ಬಳಕೆಗೆ ಬಂದಿತು. ಇನ್ನೂ ಕೆಲವು ಕಡೆಗೆಲ್ಲ ನೀವು ಹೋದರೆ ತುಳಸಿ ಕಟ್ಟೆಯ ಹಾಗೇ ಇರುವ ಕಟ್ಟೆಯಲ್ಲಿ ಜಾಜಿ ಗಿಡ ನೆಟ್ಟಿರುತ್ತಾರೆ. ಕಳಸ ಕಡೆ ಹೋದರೆ ಇದು ಕಾಣಸಿಗುತ್ತದೆ. ಹಾಗೇ ಕೋಲಾರ ಕಡೆ ಹೋದರೆ ಅಲ್ಲಿ ಬಿಲ್ವ ಪತ್ರೆ ಗಿಡ ಇರುತ್ತದೆ. ಅದಕ್ಕೆ ಈಗಿನ ಧರ್ಮದ ಮತೀಯ ಚಿಂತನೆ ಮಾಡಬೇಡಿ. ಅವರು ಲಿಂಗಾಯತರು ಹಾಗಾಗಿ ಪತ್ರೆಯ ಗಿಡ ನೆಡುತ್ತಾರೆ ಎಂದು ಅರ್ಥವಲ್ಲ. ಅಲ್ಲಿನ ಸಂಪ್ರದಾಯವೇ ಹಾಗಿತ್ತು, ಹಾಗಾಗಿ ಅವರು ಅದನ್ನೇ ನೆಡುತ್ತಿದ್ದರು. ಈ ಎಲ್ಲಾ ಗಿಡಗಳೂ ಅತಿ ವಿಶಿಷ್ಟ ಔಷಧೀಯ ಗುಣ ಹೊಂದಿರುವಂತಹವು. ಅದರಲ್ಲಿ ಸುಲಭವಾಗಿ ಬೆಳೆಸಲು ಸಾಧ್ಯವಿರುವಂತಹದ್ದು ತುಳಸಿ. ತುಳಸಿ ಗಿಡ ನೆಡುವುದು ಖಂಡಿತವಾಗಿಯೂ ಒಳ್ಳೆಯದು. ಅದಕ್ಕೆ ಆಯ ಎನ್ನುವುದು ಮನೆಯ ಮುಂಭಾಗ. ಅಲ್ಲಿರುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಮನೆಯ ಮುಂಭಾಗ ಎಂದರೆ ಗಮನಿಸಬೇಕು, ಮನೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಕಟ್ಟಿರಬೇಕು. ಆಗ ಮಾತ್ರ ಅದರ ಗಾಳಿ ಮನೆಯನ್ನು ಪ್ರವೇಶಿಸುತ್ತದೆ. ಯಾವುದೊ ದಿಕ್ಕಿಗೆ ಮನೆಯನ್ನು ಕಟ್ಟಿದಾಗ ಅದರ ಉಪಯೋಗ ನಿಮಗೆ ಸಿಗುವುದಿಲ್ಲ. ಆದರೂ ಕೂಡ ನೀವು ಒಂದು ತುಳಸಿ ಗಿಡವನ್ನು ನೆಡಿ. ನಿಮ್ಮಲ್ಲಿ ನೆಟ್ಟ ತುಳಸಿಯ ಗಾಳಿಯ ಉಪಯೋಗ ನಿಮ್ಮ ಪಕ್ಕದ ಮನೆಯವರಿಗೆ ಸಿಕ್ಕಿದರೆ ಈ ಕಡೆಯ ಮನೆಯವರು ನೆಟ್ಟ ತುಳಸಿ ಗಿಡದ ಗಾಳಿ ನಿಮ್ಮ ಮನೆಗೆ ಬಂದೇ ಬರುತ್ತದೆ. ಪರಸ್ಪರ ಸಹಕಾರ. ಹೊಂದಾಣಿಕೆ ಮಾಡಿಕೊಳ್ಳುವುದು. ಹಾಗಾಗಿ ಎಲ್ಲರೂ ತುಳಸಿ ಗಿಡ ನೆಟ್ಟರೆ ಒಳ್ಳೆಯದು. ತುಳಸಿ ಗಿಡಗಳ ಸಂಖ್ಯೆ ಹೆಚ್ಚುತ್ತಾ ಬಂದಾಗಲೆಲ್ಲ ವಾತಾವರಣದ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು. ಅದರಲ್ಲೂ ವಿಶಿಷ್ಟವಾಗಿ ನಿಮ್ಮ ನಂದೀಕೂರಿನ ಕೊಡುಗೆಯು ತುಂಬಾ ಜನರಿಗೆ ಬಹಳ ಅನರ್ಥಕಾರೀ ರೋಗಗಳಿಗೆ ಕಾರಣವಾಗುತ್ತಿದೆ. ಸಾಧ್ಯವಾದರೆ ತುಳಸಿ ಮತ್ತು ಬಿಲ್ವಪತ್ರೆಯ ಗಿಡಗಳನ್ನು ಹೆಚ್ಚು ಬೆಳೆಸಿದರೆ ಅದು ಒಂದಷ್ಟು ಉಪಶಮನ ಆಗಬಹುದು. ನಂದೀಕೂರಿನ ಸಮಸ್ಯೆಯನ್ನಂತೂ ನಿಮ್ಮ ಕೈಯಲ್ಲಿ ಓಡಿಸಲಿಕ್ಕೆ ಆಗುವುದಿಲ್ಲ. ನೀವು ಬೇಕಾದಷ್ಟು ಹೋರಾಟ ಮಾಡಿದ್ದೀರಿ, ಏನೂ ಆಗಿಲ್ಲ. ಆದರೆ ನೀವು ನಿಮ್ಮ ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದು ಹೇಗೆ ಎಂದರೆ ಮನೆಯ ಹತ್ತಿರ ಒಂದಷ್ಟು ತುಳಸೀ ಗಿಡ, ಅವಕಾಶವಿದ್ದಲ್ಲಿ ಬಿಲ್ವಪತ್ರೆ ಗಿಡಗಳನ್ನು ನೆಟ್ಟರೆ ಅವು ಆಕಾಶದಲ್ಲಿ ಹಾರಿ ಬರುವ ಬೂದಿಯ ವಿಕಿರಣವನ್ನು ಕಡಿಮೆ ಮಾಡಿ ಅದನ್ನು ಉಪಶಮನ ಮಾಡುತ್ತವೆ. ನೀವು ಗಮನಿಸಿರಬಹುದು, ಪತ್ರೆಯ ತುಂಬಾ ಬೂದಿಯ ಸಂಗ್ರಹವಾಗಿರುತ್ತದೆ. ಯಾವುದೇ ಬಿಲ್ವಪತ್ರೆಯನ್ನು ನೋಡಿ, ಅದರ ಮೇಲೆ ಬೂದಿಯಂತಹ ವಸ್ತು ಸಂಗ್ರಹವಾಗಿರುತ್ತದೆ. ಅದು ಬರಿಯ ಧೂಳಲ್ಲ. ವಿಷಕಾರಿ ವಸ್ತುಗಳನ್ನು ಅದು ಆಕರ್ಷಿಸಿ ಹಿಡಿದಿಡುವಂತಹುದು. ಅದಕ್ಕಾಗಿ ಪತ್ರೆಯನ್ನು ತೊಳೆದೇ ಬಳಸಬೇಕು ಎನ್ನುವುದು. ತುಳಸಿಯಲ್ಲೂ ಇರುತ್ತದೆ, ಅದನ್ನೂ ತೊಳೆದೇ ಬಳಸುವ ಪದ್ಧತಿ ಇರುವುದು. ವಾತಾವರಣದ ವಿಕಿರಣವನ್ನು ಸುಲಭವಾಗಿ ಎಳೆಯುವ ಶಕ್ತಿ ಅದಕ್ಕೆ ಇದೆ. ಅದಕ್ಕಾಗಿ ತುಳಸಿ ಮತ್ತು ಬಿಲ್ವಪತ್ರೆಯನ್ನು ಈ ಪ್ರದೇಶದ ಎಲ್ಲೆಡೆ ಆದಷ್ಟು ಹೆಚ್ಚಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ನನ್ನ ಮತಿಯಲ್ಲಿ ಸಲಹೆ ಕೊಡುತ್ತೇನೆ.

ಪ್ರಶ್ನೆ: ವಸತಿಸಮುಚ್ಚಯ, ಫ್ಲ್ಯಾಟ್, ಗಳಲ್ಲಿ ಸಾಮೂಹಿಕ ತುಳಸೀಕಟ್ಟೆಯನ್ನು ಮಾಡಬಹುದೇ? ಸ್ವಾಮೀಜಿ: ಸಾಮೂಹಿಕವಾಗಿ ಮಾಡುವುದಕ್ಕಿಂತ ವಸತಿ ಸಮುಚ್ಚಯದ ಪ್ರತೀ ಮನೆಯಲ್ಲೂ ಪ್ರವೇಶದ್ವಾರವನ್ನು ಬಿಟ್ಟು ಒಂದಿಷ್ಟು ವರಾಂಡ ಎನ್ನುವ ಬಿಸಿಲು ಬೀಳುವ ಪ್ರದೇಶ ಇರುತ್ತದೆ. ಪ್ರವೇಶ ದ್ವಾರದಲ್ಲಿ ಬಿಸಿಲು ಬೀಳುವುದಿಲ್ಲ, ಅಲ್ಲಿ ತುಳಸಿ ಗಿಡ ಸಾಧ್ಯವಿಲ್ಲವಾದರೆ ಗಾಳಿ ಬರತಕ್ಕಂತಹ ಭಾಗವನ್ನು ಎಲ್ಲಾ ಮನೆಗೂ ಕೊಟ್ಟಿರುತ್ತರೆ. ಆ ರೀತಿಯ ವಸ್ತು ಸಂಯೋಜನೆಯನ್ನು ಅವರು ಮಾಡಿರುತ್ತಾರೆ. ಆ ಪ್ರದೇಶದಲ್ಲಿ ಬಿಸಿಲೂ ಕೂಡ ಬರುತ್ತದೆ. ಅಲ್ಲಿ ತುಳಸಿ ಗಿಡವನ್ನು ನೆಟ್ಟು ಬೆಳೆಸಿದರೆ ಮನೆಗೆ ತುಂಬಾ ಒಳ್ಳೆಯದು. ಅಲ್ಲದೆ ಅಲ್ಲಿ ಎತ್ತರ ಎತ್ತರಕ್ಕೆ ತುಳಸಿ ಗಿಡ ಬೆಳೆಯುವುದರಿಂದ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ತುಳಸಿ ಗಿಡಗಳನ್ನು ನೆಡಿ. ಇದರಿಂದ ವಾತಾವರಣವನ್ನು ಹೆಚ್ಚಾಗಿ ನಿಯಂತ್ರಿಸಲು ದೊಡ್ಡ ಅಸ್ತ್ರವಾಗಿಯೂ ಕೂಡ ಇದು ಪ್ರಯೋಗವಾಗಬಹುದು. ಎಲ್ಲ ಮನೆಗಳಲ್ಲೂ ಇದನ್ನು ಮಾಡಿ. ಸಾಮೂಹಿಕವಾಗಿ ಒಂದನ್ನು ನೆಟ್ಟು ಮುಗಿಸುವುದು ಬೇಡ.

ಪ್ರಶ್ನೆ: ಸ್ವಾಮೀಜಿ, ಈ ಪ್ರಶ್ನೆ ಪ್ರದಕ್ಷಿಣೆ ಬರುವುದು ಮತ್ತು ತುಳಸಿಕಟ್ಟೆಯ ಬಗ್ಗೆ. ಮಗು ನಡೆಯಲಿಕ್ಕೆ ಕಲಿಯುವಾಗ ಅದನ್ನು ತುಳಸಿ ಕಟ್ಟೆಯ ಹತ್ತಿರ ಬಿಟ್ಟರೆ ಮನೆಯವರು ಪ್ರದಕ್ಷಿಣೆಯಾಗಿ ಸುತ್ತುತ್ತಿದ್ದರೂ ಅದು ಅಪ್ರದಕ್ಷಿಣೆಯಾಗಿಯೇ ಸುತ್ತುತ್ತದೆ. ಪ್ರಯತ್ನಪೂರ್ವಕವಾಗಿ ಅದನ್ನು ಸರಿ ಮಾಡಬೇಕಾಗುತ್ತದೆ. ಏಕೆ? ಸ್ವಾಮೀಜಿ: ಸ್ವಭಾವ ಸಹಜವಾಗಿ ಮಕ್ಕಳಿಗೆ ಎಡಭಾಗವೇ ಪ್ರಧಾನ. ಹಾಗಾಗಿ ಅಪ್ರದಕ್ಷಿಣವಾಗಿ ತಿರುಗುತ್ತವೆ. ನಿಧಾನವಾಗಿ ಸಂಪ್ರದಾಯ, ಶಿಷ್ಟತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಅವು ಪ್ರದಕ್ಷಿಣವನ್ನು ಬಳಸುತ್ತವೆ. ಸಹಜವಾಗಿ ಎಡ ಭಾಗವೇ ಪ್ರಧಾನ. ಹಿಂದೆಯೇ ಅದರ ಬಗ್ಗೆ ಹೇಳಿದ್ದೇನೆ. ಅದು ಸಹಜ. ತುಳಸಿಗಿಡಕ್ಕೆ ಅಪ್ರದಕ್ಷಿಣೆ ಸುತ್ತಿದ ತಕ್ಷಣ ದೋಷ ಆಯಿತು ಎಂದು ಅರ್ಥವಲ್ಲ. ಸಹಜ ಸ್ವಭಾವ ಜನ್ಯ ಗುಣವದು. ಎಡಭಾಗವನ್ನು ಬಳಸುವುದು ದೊಡ್ಡ ದೋಷವೇನಲ್ಲ. ಬಲಭಾಗವನ್ನೇ ಬಳಸುವುದು ಏಕೆಂದರೆ ಎಡ ಭಾಗಕ್ಕೆ ಅತೀವ ಶಕ್ತಿ ಇದೆ. ಅದನ್ನು ಬಳಸುತ್ತಾ ಹೋದಾಗ ಅತಿಮಾನುಷ ಶಕ್ತಿಯಾಗಬಹುದು. ಮನುಷ್ಯನು ಮನುಷ್ಯನ ಶಕ್ತಿಯಷ್ಟೇ ಸಾಧಿಸಿಕೊಂಡರೆ ಖಂಡಿತ ದೇವರಾಗುತ್ತಾನೆ. ಮನುಷ್ಯ ಯಾವಾಗ ಮನುಷ್ಯನ ಶಕ್ತಿಗಿಂತ ಹೆಚ್ಚಿನದನ್ನು ಸಾಧಿಸುತ್ತಾನೆ, ಅವನು ಕೆಟ್ಟವನಾಗುವುದು. ನಮ್ಮ ಸೂತ್ರಕಾರರ ಉದ್ದೇಶ ಮನುಷ್ಯನು ಮನುಷ್ಯನಾಗಿಯೇ ಬದುಕಬೇಕು, ಸಾತ್ವಿಕನಾಗಿರಬೇಕು, ಅವನು ದೇವರಾಗಬೇಕು ಎಂದಿರುತ್ತದೆ. ದೇವನಾಗಬೇಕಾದರೆ ಕೆಟ್ಟವನಾಗಿರಬಾರದು. ಅದಕ್ಕಾಗಿ ಎಡಭಾಗದ ಬಳಕೆಯನ್ನು ಕಡಿಮೆಮಾಡಿ ಬಲಭಾಗದ ಬಳಕೆಗೆ ಸೂತ್ರಕಾರರು ಪ್ರಾಧಾನ್ಯತೆ ಕೊಟ್ಟರು. ಆಗ ಸಜ್ಜನನಾಗಿ ಬದುಕಲು ಸಧ್ಯ ಎಂದರ್ಥ.

ಪ್ರಶ್ನೆ: ಪತಿವೃತೆ ಎಂದರೆ ಹೇಗಿರಬೇಕು? ಅವಳ ಜೀವನ ಕ್ರಮ ಹೇಗಿರಬೇಕು? ಅವಳ ಮನಸ್ಸಿನ ಸ್ಥಿತಿ ಹೇಗಿರಬೇಕು? ಸ್ವಾಮೀಜಿ: ಇದನ್ನು ವಿವರಿಸಲು ೨ ಗಂಟೆಗಳು ಬೇಕು. ಏಕೆಂದರೆ ಈಗಿನ ಕಾಲಮಾನ ಸ್ಥಿತಿಯನ್ನು ಉದಾಹರಿಸುತ್ತಾ ಅದನ್ನು ಹೇಳಬೇಕಾಗುತ್ತದೆ. ಗೃಹಸ್ಥ ಧರ್ಮವನ್ನು ಪಾಲಿಸುವುದಕ್ಕೆ ಗಂಡನಿಗೆ ಅನುವರ್ತಿಯಾಗಿ ಇರತಕ್ಕಂತಹ ವಿಧಿ ವಿಧಾನಗಳನ್ನು ಹೇಳುವುದಕ್ಕೆ ತುಂಬಾ ಇದೆ. ಅದು ಪತಿವೃತಾ ಧರ್ಮ. ಅದು ಬಿಟ್ಟು ನಂತರ ವೃತ್ತಿಧರ್ಮದಲ್ಲಿ ಹೊರಟಾಗ ಕೆಲವೊಂದಿಷ್ಟು ಬಾಹ್ಯ ಪ್ರಪಂಚದ ಚಲನೆ, ಬಾಹ್ಯ ಪ್ರಪಂಚದ ಸಂಬಂಧ ಇವೆಲ್ಲ ಹುಟ್ಟುತ್ತಾ ಬಂದು ಕೆಲವೊಂದಿಷ್ಟು ವಿಕೃತಿಯಾದಾಗ ಬೇರೆ ಬೇರೆ ಆಚರಣೆಗಳನ್ನು ಹೇಳಿಕೊಂಡು ಬರುತ್ತಾರೆ. ಆ ನಿರ್ಬಂಧಗಳ ಒಂದು ಪಟ್ಟಿಯೇ ಸುಮಾರು ಮುನ್ನೂರರಷ್ಟಿದೆ. ಇವೆಲ್ಲ ಇಲ್ಲಿ ತಾಳ ತಪ್ಪಿದ್ದರಿಂದ ಆದದ್ದು. ಮೂಲದಲ್ಲಿ ತಾಳ ತಪ್ಪದೇ ಇದ್ದರೆ ಆ ನಿರ್ಬಂಧದ ಅಗತ್ಯ ಇಲ್ಲ. ಮೂಲದಲ್ಲಿ ತಾಳ ತಪ್ಪಿದ್ದರಿಂದ ನಿರ್ಬಂಧಗಳನ್ನು ಹೇರುತ್ತಾ ಬಂದರು. ನಿರ್ಬಂಧಗಳನ್ನು ಸಡಿಲಗೊಳಿಸುವುದು, ಬಿಗಿಗೊಳಿಸುವುದು, ಆಯಾಯ ಕಾಲಧರ್ಮವನ್ನು ಆಧರಿಸಿ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಗಂಡ ಸತ್ತ ತಕ್ಷಣ ಹೆಂಡತಿ ಬದುಕಿರಲು ಅವಕಾಶವೇ ಇರಲಿಲ್ಲ. ಗಂಡನ ಜೊತೆ ಚಿತೆ ಏರಿಬಿಡಬೇಕಿತ್ತು. ಏಕೆಂದರೆ ಅದು ಆ ಕಾಲಕ್ಕಿದ್ದ ಸಮಸ್ಯೆ. ವಿದೇಶೀಯರ ಆಕ್ರಮಣ ನಡೆಯುತ್ತಿತ್ತು. ಆಶ್ರಯ ಇಲ್ಲದಂತಹ ಒಂದು ಹೆಣ್ಣು ಗೌರವಯುತವಾಗಿ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇತ್ತು. ಹಾಗಾಗಿ ಗಂಡನ ಜೊತೆ ಚಿತೆ ಏರುವಂತಹ ಪದ್ಧತಿ ಬಂದಿತು. ಇಂತಹ ಕಾಲ ದೇಶವನ್ನಾಧರಿಸಿದ ಎಷ್ಟೋ ವಿಕೃತ ಆಚರಣೆಗಳು ಬಂದದ್ದು ಇವೇ ಕಾರಣಗಳಿಗಾಗಿ. ನೀವು ಇನ್ನೊಂದು ದೊಡ್ಡ ಸಭೆ ಮಾಡಿ ಕಡಿಮೆ ಎಂದರೆ ೬ ರಿಂದ ೮ ಗಂಟೆಗಳಷ್ಟು ನನಗೆ ಸಮಯ ನೀಡಿ. ಸಂಪೂರ್ಣವಾಗಿ ವಿವರಿಸುತ್ತೇನೆ. ತುಂಬಾ ಸರಳ ಈ ಪತಿವೃತಾ ಧರ್ಮ. ಆದರೆ ಈ ಸಮಸ್ಯೆಯನ್ನು ಹೇಳದೆ ಅದನ್ನು ಹೇಳಿದರೆ ಏನೂ ಪ್ರಯೋಜನವಿಲ್ಲ. ಇವನ್ನೆಲ್ಲ ತೋರಿಸಿಕೊಟ್ಟು ಇವೆಲ್ಲ ಎಷ್ಟು ಬಾಲಿಶ, ಇದೆಷ್ಟು ಸತ್ಯ ಎಂದು ತೋರಿಸಿಕೊಡಬೇಕು. ಈಗ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ಒಂದು ತರಹ ವಿಕೃತವಾಗಿ ಪತಿವೃತಾ ಧರ್ಮವನ್ನು ಹೇಳಲಾಗುತ್ತಿದೆ. ಒಂದು ಹೆಣ್ಣು ಗೌರವಯುತವಾಗಿ ಬದುಕುತ್ತಿದೆ ಎಂದರೆ ಈಗ ವ್ಯಾಖ್ಯಾನ ಮಾಡುತ್ತಿರುವ ಧರ್ಮದಲ್ಲಿ ಅದಕ್ಕೆ ಅವಕಾಶವಿಲ್ಲ. ಆ ರೀತಿ ಬದುಕುವುದನ್ನು ಕೆಟ್ಟದ್ದಾಗಿ ಚಿಂತನೆ ಮಾಡುವ ವಿಧಿ ಇದೆ. ಅವನ್ನೆಲ್ಲ ತೋರಿಸಿ ಕೊಡದೆ ಸುಮ್ಮನೆ ಪತಿವೃತಾ ಧರ್ಮ ಹೀಗೆ ಎಂದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. ನನಗೆ ಒಂದು ವೇದಿಕೆ ಒದಗಿಸಿ ಕೊಟ್ಟು, ಆದಷ್ಟು ಜನ ನೀವೆಲ್ಲ ಸೇರಿ, ೬ ರಿಂದ ೮ ಗಂಟೆ ಸಮಯ ನನಗೆ ನೀಡಿದರೆ ಪತಿವೃತಾ ಧರ್ಮ ಎಂದರೆ ಏನು? ಅದರ ಮುಖೇನ ಗ್ರಹಸ್ಥನ ಉನ್ನತಿ ಹೇಗೆ ಸಾಧ್ಯ? ಎನ್ನುವುದನ್ನು ನಿಮಗೆ ವಿವರಿಸಿ ಹೇಳಿಕೊಡುತ್ತೇನೆ. "ಆಶ್ರಮ ಧರ್ಮ ದೀಪಿಕೆ"ಯಲ್ಲಿ ಸ್ಥೂಲವಾಗಿ ಒಂದಿಷ್ಟು ಬರೆದಿದ್ದೇನೆ. ಅದನ್ನು ಪೂರ್ಣವಾಗಿ ವಿವರಿಸಬೇಕೆಂದು ನನಗೂ ಅಸೆ ಇದೆ. ಒಂದಿಷ್ಟು ಅವಕಾಶ ಮಾಡಿಕೊಡಿ. ವಿವರಿಸೋಣ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment