April 2, 2018

ಮೂರ್ಖರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಭಾಗ ೩ - ಫೇಸ್ಬುಕ್, ಗೂಗಲ್ ಗಳು ಉಚಿತವಲ್ಲ!


ಇತ್ತೀಚಿಗೆ ಎಲ್ಲರೂ ಫೇಸ್ಬುಕ್ ನಲ್ಲಿ ಗೆಳೆಯರನ್ನು ಮಾಡಿಕೊಳ್ಳುವುದು, ಗೂಗಲ್ ನಲ್ಲಿ ಹುಡುಕಾಡುವುದು ಹೆಚ್ಚಾಗಿದೆ. ಎಲ್ಲರೂ ಅದು ಉಚಿತವೆಂದೇ ತಿಳಿದಿದ್ದಾರೆ. ಆದರೆ ಅವು ಹೇಗೆ ಹಣ ಸಂಪಾದನೆ ಮಾಡುತ್ತವೆ ಎಂದು ಆಲೋಚಿಸಿದ್ದೀರಾ? ಒಮ್ಮೆ ಅಂತರ್ಜಾಲವೆಂಬ ಮಾಯಾಜಾಲದ ಒಳಗೆ ಹೊಕ್ಕು ನೋಡಿ. ಈ ಸೇವೆಗಳೆಲ್ಲ ನಿಜವಾಗಿಯೂ ಉಚಿತವಲ್ಲವೆಂಬ ಸತ್ಯದ ಅರಿವು ನಿಮಗಾಗಲಿದೆ. ನೀವು ನಿಮ್ಮ ಆಂತರಿಕ ಗುರುತು, ಸ್ವಂತ ವ್ಯಕ್ತಿತ್ವವನ್ನು ಅವರಿಗೆ ಪಾವತಿ ಮಾಡುತ್ತಿದ್ದೀರಿ! ನೀವು ಫೇಸ್ಬುಕ್ ಬಳಸುವಾಗ ಅವರು ನಿಮ್ಮ ಎಲ್ಲ ವ್ಯವಹಾರಗಳನ್ನು ದಾಖಲು ಮಾಡಿಕೊಳ್ಳುತ್ತಾರೆ. ನೀವು "ಲೈಕ್" ಮಾಡುವ ಪುಟಗಳು, ನೀವು ಸಂವಹನ ನಡೆಸುವ ವ್ಯಕ್ತಿಗಳು, ನೀವು ಸ್ಟೇಟಸ್ ನಲ್ಲಿ ಬಳಸಿರುವ ಶಬ್ಧಗಳು ಎಲ್ಲವೂ ಅವರ ಸಂಗ್ರಹದಲ್ಲಿ ದಾಖಲಾಗುತ್ತವೆ. ನಂತರ ಅವರು ಈ ಮಾಹಿತಿಯನ್ನು ವಿಶ್ಲೇಷಿಸಿ ನೀವು ಏನೆಂಬುವುದರ ಬಗ್ಗೆ ಒಂದು ವಿಸ್ತೃತ ದಾಖಲೆ ನಿರ್ಮಾಣ ಮಾಡುತ್ತಾರೆ. ಈ ಮೂಲಕ ಅವರು ನಿಮ್ಮ ಹವ್ಯಾಸವೇನು? ನಿಮ್ಮ ಆಯ್ಕೆಗಳೇನು? ನಿಮ್ಮ ಪ್ರಾಶಸ್ತ್ಯಗಳೇನು? ನಿಮ್ಮ ಅಪಾಯ ಸಹಿಷ್ಣುತೆ ಎಷ್ಟು? ಅಷ್ಟೇ ಅಲ್ಲ ನಿಮ್ಮ ಲೈಂಗಿಕ ದೃಷ್ಟಿಕೋನವೇನು ಎಂಬುದನ್ನೂ ಅರಿತಿರುತ್ತಾರೆ. ಇದನ್ನು ಅವರು ಜಾಹೀರಾತುದಾರರಿಗೆ ಬಹಳ ದೊಡ್ಡ ಮೊತ್ತಕ್ಕೆ ಮಾರುತ್ತಾರೆ. ಇತ್ತೀಚಿಗೆ ಚುನಾವಣಾ ಸಂಬಂಧಿಯಾಗಿ ಮತದಾರರನ್ನು ಪ್ರೇರೇಪಿಸಲು ಇಂತಹುದೇ ತಂತ್ರ ಬಳಸಿರುವುದು ನಿಮಗೆ ತಿಳಿದೇ ಇದೆ. ನೀವು ಮನದಲ್ಲೇ ಎಣಿಸಿದಂತಹ ಅಥವಾ ಮಿತ್ರರೊಂದಿಗೆ ಅನಿಸಿಕೆ ಹಂಚಿಕೊಂಡಂತಹ ವಸ್ತುವಿನ ಜಾಹೀರಾತು ಪದೇ ಪದೇ ಫೇಸ್ಬುಕ್ ನಲ್ಲಿ ಅಥವಾ ಗೂಗಲ್ ನಲ್ಲಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕಾಗಿ. ಫೇಸ್ಬುಕ್ ಇದಕ್ಕಿಂತಲೂ ಆಳದಲ್ಲಿ ಬೇರೂರಿದೆ. ನೀವೆಲ್ಲಾದರೂ ಇಂತಹ ಒಂದು ಜಾಹೀರಾತಿನ ಮೋಡಿಗೆ ಒಳಗಾದದ್ದು ಫೇಸ್ಬುಕ್ ಗೆ ಗೊತ್ತಾದರೆ, ಅಂತಹುದೇ ಮತ್ತು ಅಂತಹ ವಸ್ತುವಿಗೆ ಸಂಬಂಧಪಟ್ಟ ನೂರಾರು ಜಾಹೀರಾತುಗಳನ್ನು ನಿಮ್ಮ ಪುಟಕ್ಕೆ ಪಂಪ್ ಮಾಡುತ್ತದೆ. ಈ ಮೂಲಕ ಫೇಸ್ಬುಕ್ ತನ್ನಷ್ಟು ತೀವ್ರ ಪರಿಣಾಮಕಾರಿಯಾದ ಜಾಹೀರಾತುದಾರ ಇನ್ನೊಂದಿಲ್ಲ ಎಂದು ಸಾಬೀತುಪಡಿಸಿದೆ. ಅದು ತನ್ನ ಜಾಹೀರಾಹಿತಿಗೆ ಮನಸೋಲಬಲ್ಲ ವ್ಯಕ್ತಿಯನ್ನು ಬಹುಸುಲಭವಾಗಿ ಪತ್ತೆ ಹಚ್ಚಬಲ್ಲದು.

ಇಷ್ಟು ಆಘಾತಕಾರಿಯಾದ ಫೇಸ್ಬುಕ್ ನಿಂದ ನೀವೇನೋ ಸುಲಭವಾಗಿ ಹೊರಗೆ ಬರಬಹುದು, ಆದರೆ ಗೂಗಲ್ ನಿಂದ ಅಲ್ಲ. ನೀವು ಗೂಗಲ್ ನಲ್ಲೆ ಇರಲಿ ಅಥವಾ ಯಾವುದೇ ಇತರ ಅಂತರ್ಜಾಲ ತಾಣದಲ್ಲೇ ಇರಲಿ, ಗೂಗಲ್ ನಿಮ್ಮನ್ನು ಟ್ರ್ಯಾಕ್ ಮಾಡಬಲ್ಲದು. ಅದರ ಟ್ರಾಕಿಂಗ್ ತಂತ್ರಾಂಶ ಒಂದು ಕೋಟಿಗೂ ಅಧಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇವು ವೈದ್ಯಕೀಯ ಜಾಲತಾಣಗಳನ್ನೂ ಒಳಗೊಂಡಿವೆ. ಆದ್ದರಿಂದ ಅರೋಗ್ಯ ಸಂಬಂಧೀ ಜಾಲತಾಣಗಳನ್ನು ನೀವು ಖಾಸಗಿ ಎಂದು ಭಾವಿಸಿ ನೋಡುತ್ತಿದ್ದರೆ ಗೂಗಲ್ ಅದನ್ನು ಟ್ರ್ಯಾಕ್ ಮಾಡಿ, ನಿಮ್ಮ ಅರೋಗ್ಯ ನ್ಯೂನತೆಗೆ ಪರಿಹಾರ ನೀಡುವ ಜಾಹೀರಾತುಗಳನ್ನು ಪ್ರದರ್ಶಿಸಲಾರಂಭಿಸುತ್ತದೆ. ಇದು ನಿಮ್ಮನ್ನು ಹಲವು ಬಾರಿ ಮುಜುಗರಕ್ಕೆ ಈಡುಮಾಡಬಹುದು. ಅಷ್ಟೇ ಅಲ್ಲ, ನೀವು ಪ್ರತಿಬಾರಿ ಗೂಗಲ್ ನ ಮಿಂಚಂಚೆ ಬರೆದಾಗ, ಯೂಟ್ಯೂಬ್ ನಲ್ಲಿ ವೀಡಿಯೊ ನೋಡಿದಾಗ, ಗೂಗಲ್ ಮ್ಯಾಪ್ ನೋಡಿದಾಗ, ಅದು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತದೆ. ನಮಗೆ ಇನ್ನೂ ಗೂಗಲ್ ಮತ್ತು ಫೇಸ್ಬುಕ್ ಕಲೆಹಾಕುತ್ತಿರುವ ಮಾಹಿತಿಗಳ ಪ್ರಮಾಣದ ಅರಿವಿಲ್ಲ. ಆದರೆ ಅವು ಈ ಮಾಹಿತಿಯನ್ನು ಬಳಸಿ ನೂರಾರು ಕೋಟಿ ಲಾಭ ಗಳಿಸುತ್ತಿರುವುದಂತೂ ಸತ್ಯ. ಇದು ಅವುಗಳ ನಿಜವಾದ ವ್ಯವಹಾರ ನೀತಿ. ಅವರು ನಮ್ಮ ಖಾಸಗಿ/ವಯಕ್ತಿಕ ವಿಷಯಗಳ ಮೂಲಕ ಹಣಗಳಿಸುತ್ತಿದ್ದಾರೆ. ನಾವು ಅವರ ಜಾಲತಾಣ ಬಳಸುವಾಗ ಅವರ ಗ್ರಾಹಕರಲ್ಲ, ನಾವು ಅವರ ಉತ್ಪನ್ನಗಳು.

MIT ಸೆಂಟರ್ ಫಾರ್ ಸಿವಿಕ್ ಮೀಡಿಯಾದ ನಿರ್ದೇಶಕರಾದ ಈಥೇನ್ ಝುಕರ್ಮ್ಯಾನ್ ಅವರ ಪ್ರಕಾರ, ಈ ಜಾಲತಾಣಗಳು ಉಚಿತವಾಗಿರುವುದೇ ದೊಡ್ಡ ಸಮಸ್ಯೆ. ಯಾವಾಗ ಅಂತರ್ಜಾಲದ ನಿರ್ಮಾಣವಾಯಿತೋ ಆಗ ನಾವು ಅದು ಉಚಿತವಾಗಿರಬೇಕೆಂದು ಬಯಸಿದೆವು. ಅದರ ಸೇವೆಗಳಿಗೆ ಹಣತೆರುವುದು ಸೂಕ್ತವಲ್ಲ ಎಂದೆಣಿಸಿದೆವು. ಈ ಕಾರಣವಾಗಿ ಜಾಲತಾಣಗಳು ಸಂಪನ್ಮೂಲಕ್ಕಾಗಿ ಜಾಹೀರಾತನ್ನು ಅವಲಂಬಿಸಬೇಕಾಯಿತು. ಈಗ ಅವು ನಮ್ಮ ಅಗತ್ಯತೆಗಳನ್ನು ಹಾಗೂ ನಮ್ಮ ನಡವಳಿಕೆಗಳನ್ನು ಅನುಸರಿಸಿ ಜಾಹೀರಾತುಗಳನ್ನು ತೂರಿ ಬಿಡುತ್ತಿವೆ. ಇದರ ಅರ್ಥ ನಾವು ಉಚಿತ ಅಂತರ್ಜಾಲ ಸೇವೆಗಳಿಗಾಗಿ ನಿರಂತರವಾಗಿ ಇತರರ ಕಣ್ಗಾವಲಿನಲ್ಲಿ ಇದ್ದೇವೆ ಎಂದು. ಇಂದು ಪ್ರಪಂಚದ ಪ್ರತಿ ಆರು ಜನರಲ್ಲಿ ಒಬ್ಬ ಫೇಸ್ಬುಕ್ ನಲ್ಲಿ ಇದ್ದಾನೆ. ಅವರು ಜಗತ್ತಿನಲ್ಲಿ ಎಲ್ಲರೂ ಬಳಸುವ ಅಂತರ್ಜಾಲ ಸಮಯದ ೨೦% ರಷ್ಟನ್ನು ಬಳಸುತ್ತಾರೆ. ಅಂದರೆ ಪ್ರತೀ ದಿನ ೧೬ ಕೋಟಿ ಜನರು ಯಾವುದಾದರೊಂದು ದೊಡ್ಡ ಜಾಲತಾಣದ ಕಣ್ಗಾವಲಿನಲ್ಲಿ ಬದುಕುತ್ತಿದ್ದಾರೆ ಎಂದರ್ಥ. ನಿಮಗೆ ಗೊತ್ತೇ, ಪ್ರತಿಯೊಬ್ಬ ಮನುಷ್ಯನ ಫೇಸ್ಬುಕ್ ನಲ್ಲಿ ಸಂಗ್ರಹಿತ ಮಾಹಿತಿಯ ಬೆಲೆ ಕೇವಲ ೮೦೦ ರೂಪಾಯಿಗಳಷ್ಟು! ನಿಮ್ಮ ಆಸಕ್ತಿಗಳು, ನಿಮ್ಮ ವ್ಯಕ್ತಿತ್ವ, ನಿಮ್ಮ ಸಂಬಂಧಗಳು, ನಿಮ್ಮ ಖಾಸಗಿತನ ನಿಜವಾಗಿಯೂ ಅಮೂಲ್ಯವಾದವು. ಅದಕ್ಕೆ ಕೇವಲ ೮೦೦ ರೂಪಾಯಿ ಬೆಲೆಕಟ್ಟಲಾಗುತ್ತದೆ. ಆದ್ದರಿಂದ ಅಂತರ್ಜಾಲದಿಂದ ಆದಷ್ಟು ದೂರವಿರುವುದೇ ಲೇಸು. ಸ್ವನಿಯಂತ್ರಣ ಅನಿವಾರ್ಯ!

ಇತ್ತೀಚಿನ ವಿದ್ಯಮಾನವೊಂದರಲ್ಲಿ, ಕಳ್ಳನೊಬ್ಬ ಓರ್ವರ ಫೇಸ್ಬುಕ್ ಸ್ಟೇಟಸ್ ಗಳನ್ನು ನೋಡಿ ಮನೆಗೆ ಕಣ್ಣ ಹಾಕಿದ್ದಾನೆ. ನಾವು ಇಂತಹದಿನ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಸ್ಟೇಟಸ್ ಹಾಕಿ, ಆಮೇಲೆ ಪ್ರವಾಸೀ ತಾಣದ ಸುಂದರ ಚಿತ್ರಗಳನ್ನು ಹಾಕಿದ್ದಾರೆ. ಕಳ್ಳನಿಗೆ ಮಾತ್ರವಲ್ಲ ಎಲ್ಲರಿಗೂ ಮನೆ ಖಾಲಿಯಾಗಿರುವುದು ಖಾತ್ರಿಯಾಗಿದೆ. ಬಳಿಕ ಕಳ್ಳ ಮನೆ ದೋಚಿದ್ದಾನೆ. ಹೇಗಿದೆ ನೋಡಿ ಫೇಸ್ಬುಕ್ ಮಹಿಮೆ.

No comments:

Post a Comment