April 7, 2018

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 1&2


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೧

ಯತಿ ಮತ್ತು ಯಯಾತಿ

ಇವರಿಬ್ಬರು ಸಹೋದರರು. ಅಣ್ಣ ಯತಿಯು ವಿದ್ವಾಂಸನೂ, ಶೂರನೂ, ತ್ಯಾಗಿಯೂ ಆಗಿದ್ದು ವಿನಯಶೀಲನಾಗಿದ್ದನು. ತಮ್ಮ ಯಯಾತಿ ಶೂರ, ಧೀರನಾಗಿದ್ದರೂ ಮಹತ್ವಾಕಾಂಕ್ಷಿಯಾಗಿದ್ದನು. ಅವನು ಚಿಕ್ಕವನಾದರೂ ತಾನೇ ಅಧಿಕಾರಕ್ಕೆ ಬರಬೇಕೆಂದಾಗ ಅಣ್ಣನಾದ ಯತಿಯು ಸಂತೋಷದಿಂದ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟು ದೇಶವನ್ನೇ ಬಿಟ್ಟು ತೆರಳಿದನು. ಯತಿಯು ಅಲ್ಪತೃಪ್ತನಾಗಿ ಯೋಗಿಯಾಗಿ, ಭೋಗಜೀವನವನ್ನು ಬಿಟ್ಟು ಸದಾ ಶಿವಧ್ಯಾನಯಲ್ಲೇ ಇರುತ್ತಾ, ಸಾರೂಪ್ಯ ಮುಕ್ತಿಯನ್ನು ಪಡೆದ. ಶಿವನ ಒಂದು ರೂಪಕ್ಕೆ ಯತಿ ಎಂಬ ಹೆಸರಿದೆ.

ಆದರೆ ಯಯಾತಿಯು ರಾಜ್ಯವಾಳುತ್ತಾ ಭೋಗಪ್ರಿಯನಾಗಿ, ಬೇಕುಗಳ ಹಿಂದೆ ಓಡಿ ಓಡಿ ದಣಿದು, ಹಲವು ಮದುವೆಯಾಗಿ, ನಾನಾ ಮಕ್ಕಳನ್ನು ಪಡೆದು ಇನ್ನೂ ಸಾಕಾಗದೆ, ತನ್ನ ಮಗನ ಯೌವನವನ್ನೇ ಪಡೆದರೂ ತೃಪ್ತನಾಗದೇ, ನಾನಾ ಕಷ್ಟ ಕೋಟಲೆಗಳಿಗೆ ಸಿಲುಕಿ ತನ್ನ ಪ್ರಾಣ ಬಿಡುತ್ತಾನೆ. ಯತಿಯು ಶಾಶ್ವತನಾದ, ಯಯಾತಿಯು ಮೃತ್ಯುವಶನಾದ. ಇದು ಅತಿಲೋಭತನದ ಪರಿಣಾಮವಾಗಿದೆ. ಹಾಗೆಯೆ ನಿಯಮ ಬಾಹಿರ ಜೀವನ ಪಥವನ್ನು ಅನುಸರಿಸುವುದು ಅಪಕಾರಿ ಎಂಬುದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಒಂದು ನಿಯಮ ಸೂತ್ರದ ಅಡಿಯಲ್ಲಿ ಜನಮಾನಸವಿರಬೇಕಾಗುತ್ತದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೨

ಅಣಿಮಾಂಡವ್ಯ

ಒಂದಾನೊಂದು ಕಾಲದಲ್ಲಿ ಮಾಂಡವ್ಯನೆಂಬ ಮಹಾನ್ ತಪಸ್ವಿಯೂ, ತ್ಯಾಗಿಯೂ, ಉದಾರಿಯೂ ಆದ ಋಷಿಯೊಬ್ಬನಿದ್ದನು. ಅವನ ಕೊರತೆಯೆಂದರೆ ಅವನ ಆಸನ ಭಾಗದಲ್ಲಿ ಒಂದು ಉಕ್ಕಿನ ಶೂಲ ಅಂಟಿಕೊಂಡಿದ್ದು, ಅವನು ಯಾವಾಗಲೂ ನಿಂತುಕೊಂಡೇ ಇರಬೇಕಾಗಿತ್ತು. ಒಂದು ದಿನ ಕೆಲವು ಋಷಿಗಳು ಅವನಲ್ಲಿಗೆ ಬಂದರು. ಅವನು ಅವರನ್ನು ನಿಂತುಕೊಂಡೇ ಸತ್ಕರಿಸಿದನು. ಆಗ ಋಷಿಗಳು "ಅಯ್ಯಾ ಮಾಂಡವ್ಯನೇ ನಿನ್ನ ಸ್ಥಿತಿ ನಮಗೆ ಅರ್ಥವಾಗಿದೆ. ನಿನಗೆ ಅದರಿಂದ ಬಿಡುಗಡೆ ಕೊಡುವ ಉದ್ದೇಶದಿಂದ ನಾವು ಬಂದಿದ್ದೇವೆ. ನೀನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಈ ಶಿಕ್ಷೆ ಕೊಡಲ್ಪಟ್ಟಿದೆ. ಅದನ್ನು ನೀನು ನಮಗೆ ಹೇಳಿದರೆ ನಿನಗೆ ಅದರಿಂದ ಮುಕ್ತಿ ಕೊಡುತ್ತೇವೆ" ಎಂದರು.

ಆಗ ಮಾಂಡವ್ಯನು ತನ್ನ ಬಾಲ್ಯದ ಕಥೆ ಹೇಳಲಾರಂಭಿಸಿದ. "ನಾನು ಚಿಕ್ಕಂದಿನಿಂದಲೂ ಹಿಂಸಾತ್ಮಕ ಪ್ರವೃತ್ತಿಯವನಾಗಿದ್ದೆ. ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ವಿಕೃತ ತರಂಗ ಸೃಷ್ಟಿಸಿ ಹಾರದಂತೆ ಮಾಡಿ, ಹಿಡಿದು, ಮುಳ್ಳು ಚುಚ್ಚಿ ಹಿಂಸೆ ಕೊಡುತ್ತಿದ್ದೆ. ಋಷಿ ಶ್ರೇಷ್ಠರು ಉಪದೇಶಿಸಿದ ಮಂತ್ರಗಳನ್ನೆಲ್ಲ ಬಾಲ್ಯ ಚೇಷ್ಟೆಗೆ ಬಳಸುತ್ತಿದ್ದೆ. ಇದನ್ನರಿತ ನನ್ನ ತಂದೆ "ನಿನಗೆ ಸಿದ್ಧಿಸಿದ ಮಂತ್ರಗಳೆಲ್ಲ ಸ್ಮರಣೆಯಿಂದ ಮಾಯವಾಗಲಿ" ಎಂದು ಶಪಿಸಿದರು. ತಂದೆಯ ಬಳಿ ಕ್ಷಮೆ ಕೇಳಿದಾಗ ಪ್ರಾಯಶ್ಚಿತ್ತಕ್ಕಾಗಿ ದೇಶಪರ್ಯಟನೆ ಮಾಡು ಎಂದರು. ಅಂದಿನಿಂದ ೮೦೦ ವರ್ಷ ದೇಶಪರ್ಯಟನೆ ಮಾಡಿದೆ. ಅಲ್ಲೆಲ್ಲ ಜನರು ಹಲವು ರೀತಿಯ ಹಿಂಸೆ ಕೊಟ್ಟರು. ಅದನ್ನೆಲ್ಲ ಸಹಿಸಿಕೊಂಡೆ. ಮುಂದೆ ಕೌಶಂಬಿ ನಗರಕ್ಕೆ ಬಂದಾಗ ಏನಕೇನ ಪ್ರಕಾರೇಣ ಕಳ್ಳತನದ ಆರೋಪ ಬಂತು. ರಾಜಭಟರು ಪ್ರಶ್ನೆ ಕೇಳಿದಾಗ ಮೌನಿಯಾಗಿದ್ದೆ. ರಾಜನಿಗೆ ಸಿಟ್ಟು ಬಂದು ಶೂಲಕ್ಕೆ ಏರಿಸಿದರು. ನೋವು ಅನುಭವಿಸಿದರೂ ಸಾಯಲಿಲ್ಲ. ಪ್ರಣವೋಪಾಸನೆ ಮಾಡುತ್ತ ಬದುಕಿದ್ದೆ. ೧೫ ನೇ ದಿನ ರಾಜನಿಗೆ ಯಮನು ಕನಸಿನಲ್ಲಿ ಬಂದು ಅವನು ಅಪರಾಧಿಯಲ್ಲ, ಅವನನ್ನು ನೀನು ಸಾಯಿಸಲಾರೆ, ಬಿಡಿಸು ಎಂದನು. ಆದರೆ ನಾನು ಶೂಲಕ್ಕೆ ಅಂಟಿಕೊಡದ್ದರಂದ ನನ್ನನ್ನು ಬಿಡಿಸಲು ಆಗಲಿಲ್ಲ. ಕೊನೆಗೆ ಶೂಲ ಸಮೇತ ನನ್ನನ್ನು ಇಳಿಸಿ ಶೂಲವನ್ನು ದೇಹದ ಅಂಚಿನವರೆಗೆ ಬಿಟ್ಟು ಕತ್ತರಿಸಿದರು. ಅದರ ಅಣಿ ಅಥವಾ ಮೊನೆ ದೇಹದಲ್ಲೇ ಇರುವುದರಿಂದ ಕುಳಿತುಕೊಳ್ಳಲಾರೆ, ಆ ನೋವಿನಲ್ಲೇ ಬದುಕುತ್ತಿದ್ದೇನೆ " ಎಂದನು. ಆಗ ಋಷಿಗಳು ಧರ್ಮ ವಿಧಿಸಿದ ಶಿಕ್ಷೆ ಇದು. ಇದರ ಅವಧಿ ಮುಗಿದಿದೆ ಎಂದು "ಸಮಗಾನ"ವನ್ನು ಹಾಡಿದಾಗ ಅಣಿಯು ಜಾರಿ ಕೆಳಗೆ ಬಿತ್ತು. ಹಾಗಾಗಿ ಒಂದು ಸಣ್ಣ ಕೀಟಕ್ಕೂ ಹಿಂಸೆ ಕೊಟ್ಟಲ್ಲಿ ಮುಂದೆ ಅದು ಕಾಡುತ್ತದೆ ಎಂದು ತಿಳಿಯಬಹುದು. ಅಲ್ಲದೆ ಸಾಮದ ಮಹತ್ವವನ್ನೂ ಅರಿಯಬಹುದು.

No comments:

Post a Comment