February 6, 2020

ಪ್ರಶ್ನೋತ್ತರ - 2


ಪ್ರಶ್ನೆ: ಸಾಯಂ ಸಂಧ್ಯಾರ್ಘ್ಯವನ್ನು ಪೂರ್ವಾಭಿಮುಖವಾಗಿ ಕೊಡಬೇಕೋ ಅಥವಾ ಪಶ್ಚಿಮಾಭಿಮುಖವಾಗಿ ಕೊಡಬೇಕೋ? ಸ್ವಾಮೀಜಿ: ಯಾವುದೇ ಉಪಾಸನೆಗೆ ಅತಿ ಶ್ರೇಷ್ಠವಾದ ದಿಕ್ಕು ಎಂದರೆ ಪೂರ್ವ. ಅದಿಲ್ಲದಿದ್ದರೆ ಎರಡನೆಯದ್ದು ಉತ್ತರ ದಿಕ್ಕು. ಇಲ್ಲಿ ಅಗಾಧದತೆಯನ್ನು ಕೂಡ ಗೌರವಿಸಬೇಕಾಗುತ್ತದೆ. ಅಗಾಧವಾದ ಜಲರಾಶಿ ಇರುವುದು ಪಶ್ಚಿಮದಲ್ಲಿ. ಆದ್ದರಿಂದ ಇಲ್ಲಿ ಪಶ್ಚಿಮದಲ್ಲಿ ಕುಳಿತು ಮಾಡಿದರೂ ನಿಷೇಧವಲ್ಲ. ಆದರೆ ನಾವು ಘಾಟಿ ಹತ್ತಿ ಪಶ್ಚಿಮದಲ್ಲಿ ಕುಳಿತು ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲಿ ಉತ್ತರ ಅಥವಾ ಪೂರ್ವ ಮಾತ್ರ. ಇಲ್ಲಿ ಇರುವ ಸಮುದ್ರದ ಅಗಾಧತೆ, ಮಾನವನ ಅಳತೆಗೂ ಮೀರಿದ ಅಗಾಧತೆ. ದೇವರು ಎಂದರೂ ಅದೇ. ಹಾಗಾಗಿ ದೇವರಿಗೆ ಸಮ್ಮುಖವಾಗುವುದು ಎಂದರ್ಥ. ದೇವರಿಗೆ ಸಮ್ಮುಖವಾದಾಗ ದಿಕ್ಕಿನ ಪ್ರಶ್ನೆ ಬರುವುದಿಲ್ಲ.

ಪ್ರಶ್ನೆ: ತಲೆಗೆ ಯಾವ ಎಣ್ಣೆ ಹಾಕುವುದು ಒಳ್ಳೆಯದು? ತಲೆಗೆ ಎಣ್ಣೆ ಹಾಕುವುದರಿಂದ ಏನಾದರೂ ಲಾಭ ಇದೆಯೇ? ಸ್ವಾಮೀಜಿ: ಎಲ್ಲರೂ ತಲೆಗೆ ಎಣ್ಣೆ ಹಾಕಬೇಕು. ಈ ಪ್ರದೇಶದಲ್ಲಿ ಉತ್ತಮವಾದದ್ದು ಕೊಬ್ಬರಿ ಎಣ್ಣೆ. ತಿನ್ನುವುದಕ್ಕಾಗಲೀ, ತಲೆಗೆ ಹಾಕುವುದಕ್ಕಾಗಲೀ ಇದೇ ಶ್ರೇಷ್ಠ. ಸಹಜವಾಗಿ ಅದು ಕಣ್ಣಿನ ದೃಷ್ಟಿ ಶಕ್ತಿಯನ್ನು, ಕಿವಿಯ ಶ್ರವಣ ಶಕ್ತಿಯನ್ನು, ನಾಲಗೆಯ ರುಚಿ ಶಕ್ತಿಯನ್ನು, ಇವು ಮೂರನ್ನೂ ಕಾಯ್ದುಕೊಂಡು ಬರುತ್ತದೆ. ಅಷ್ಟೇ ಅಲ್ಲದೆ ತಲೆ ಕೂದಲನ್ನೂ ಚೆನ್ನಾಗಿ ಇಟ್ಟುಕೊಂಡು ಬರುತ್ತದೆ. ಕೃತಕ ಪದಾರ್ಥಗಳನ್ನು ಹಾಕದೇ ಇರುವ ಕೊಬ್ಬರಿ ಎಣ್ಣೆಯನ್ನೇ ಬಳಸಬೇಕು. ಆಹಾರವಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಇಡೀ ದೇಹವನ್ನು ರಕ್ಷಣೆ ಮಾಡುತ್ತದೆ. ರಕ್ತದ ಕೊರತೆ ಇರುವುದಿಲ್ಲ. ಹಾಗೆ ಸಂಧಿವಾತ ಇತ್ಯಾದಿ ಕಾಯಿಲೆಗಳೂ ಬರುವುದಿಲ್ಲ. ಆದರೆ ಈಗಿನ ವೈದ್ಯರು ಕೊಬ್ಬರಿ ಎಣ್ಣೆ ತಿಂದರೆ ಕೊಲೆಸ್ಟಿರೋಲ್ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇತ್ತೀಚಿಗೆ ಅಮೆರಿಕಾ ದೇಶ ಒಂದು ಹೇಳಿಕೆ ನೀಡಿತು. ಕೊಲೆಸ್ಟಿರೋಲ್ ಎಂದು ಹೇಳುವ ಕಲ್ಪನೆಯೇ ಸುಳ್ಳು. ಅದು ನಮ್ಮ ಸಂಶೋಧನೆಯಲ್ಲಿ ಕಂಡುಬಂದ ಸುಳ್ಳು ಎಂದು ಅಧಿಕೃತವಾಗಿ ಅಮೆರಿಕಾ ದೇಶ ಹೇಳಿಕೆ ನೀಡಿತು. ಆದರೆ ಸುಮಾರು ೫೦ ವರ್ಷಗಳಿಂದ ಪ್ರಚಾರ ಮಾಡಿ ಅದರಿಂದ ಜನರಿಗೆ ಮಡಿದ ನಷ್ಟದ ಬಗ್ಗೆ ಮಾತ್ರ ಅಮೆರಿಕಾ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಎಷ್ಟು ನಷ್ಟವಾಗಿರಬಹುದು ಎಂದು ನೀವೇ ಲೆಕ್ಕ ಹಾಕಿ. ಕೊಲೆಸ್ಟಿರೋಲ್ ಎಂದು ಹೇಳುವ ಸುಳ್ಳು ಕಲ್ಪನೆಯನ್ನು ಇಟ್ಟುಕೊಂಡು ಮಾಡಿದ ಮೋಸ, ಅದರಿಂದ ಜನರಿಗೆ ಆದ ನಷ್ಟದ ಬಗ್ಗೆ ಅಮೆರಿಕಾ ಏನೂ ಹೇಳುವುದಿಲ್ಲ. ಆದರೆ ಇತ್ತೀಚಿಗೆ ಅದಕ್ಕೆ ತಿಪ್ಪೆ ಸಾರಿಸಿತು. ತಮ್ಮಿಂದ ಆದ ತಪ್ಪಿಗೆ ಕ್ಷಮೆ ಕೇಳುತ್ತೇವೆ ಎನ್ನುವ ಮಟ್ಟಿಗೆ ಹೇಳಿಕೆಯನ್ನಷ್ಟೇ ಕೊಟ್ಟಿತು. ಆದರೆ ಈ ಪ್ರದೇಶದ ಅತೀ ಉತ್ತಮವಾದ ತೈಲ ಎಂದರೆ ಕೊಬ್ಬರಿ ಎಣ್ಣೆ. ಅದನ್ನು ಆಹಾರ ರೂಪದಲ್ಲಿ ಚೆನ್ನಾಗಿ ಬಳಸಬಹುದು. ಏನೂ ಸಮಸ್ಯೆ ಇಲ್ಲ. ನಂತರ ಎಳ್ಳೆಣ್ಣೆ, ಕಡಲೆ ಕಾಯಿ ಎಣ್ಣೆ, ಇವೆಲ್ಲವನ್ನೂ ಇಲ್ಲಿ ಬೆಳೆಯಲಿಕ್ಕೂ ಸಾಧ್ಯ, ಬಳಸಲಿಕ್ಕೂ ಆಗುತ್ತದೆ. ಆದರೆ ಆಹಾರವಾಗಿ ಬಳಸಲು ಅವು ಯಾವುವೂ ಕೊಬ್ಬರಿ ಎಣ್ಣೆಯ ಸ್ಥಾನಕ್ಕೆ ಬರುವುದಿಲ್ಲ. ತುಪ್ಪಕ್ಕಿಂತಲೂ ಒಂದು ರೀತಿಯಲ್ಲಿ ಶ್ರೇಷ್ಠ ಈ ಕೊಬ್ಬರಿ ಎಣ್ಣೆ. ತುಪ್ಪ ಉತ್ತಮವಾದ ಆಹಾರವಾಗಿರುವುದು ಸತ್ಯವೇ. ಅದು ಏನನ್ನು ದೇಹಕ್ಕೆ ಪೂರೈಸಬಹುದೋ ಅದಕ್ಕಿಂತ ೧೦% ಹೆಚ್ಛೇ ಕೊಬ್ಬರಿ ಎಣ್ಣೆ ಕೊಡಬಲ್ಲದು. ಅದಕ್ಕಾಗಿಯೇ ಕರಾವಳಿ ಪ್ರದೇಶದಲ್ಲಿ ಊಟಕ್ಕೆ ಬಡಿಸುವಾಗ ಪಲ್ಯ ಬಡಿಸಿ ಅದಕ್ಕೆ ಕೊಬ್ಬರಿ ಎಣ್ಣೆ ಹಾಕುವ ಕ್ರಮ ಇದೆ. ತುಪ್ಪವನ್ನಲ್ಲ. ಪಲ್ಯದೊಂದಿಗೆ ಕೊಬ್ಬರಿ ಎಣ್ಣೆ ಹಾಕಿ ಊಟ ಮಾಡುವುದು ಬಹಳ ಆರೋಗ್ಯದಾಯಕ. ಈಗಿನವರಿಗೆ ಊಟ ಮಾಡುವುದು ಹೇಗೆ ಎಂದೇ ತಿಳಿದಿಲ್ಲ. ಸಾಧ್ಯವಾದರೆ ಇಂತಹ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ. ತನ್ಮೂಲಕ ಅರೋಗ್ಯ ವೃದ್ಧಿಸಿಕೊಳ್ಳಿ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಸಾರು ಮಾಡುವಾಗ ತೊಗರಿ ಬೆಳೆಯನ್ನು ಬಳಸುತ್ತಿರಲಿಲ್ಲ. ಇಲ್ಲಿ ಬೆಳೆಯುವ ಬೇಳೆ ಕಾಳುಗಳನ್ನೇ ಬಳಸುತ್ತಿದ್ದರು. ಬಹಳ ವಿಶೇಷ ಸಂದರ್ಭವಾದರೆ, ಮದುವೆ ಇತ್ಯಾದಿ ಇದ್ದರೆ ಮಾತ್ರ ತೊಗರಿ ಬೆಳೆಯನ್ನು ಬಳಸುತ್ತಿದ್ದರು. ಹಾಗಂತ ಇದರರ್ಥ ಸಾರು ಮಾಡಲು ಇಲ್ಲಿಯವರಿಗೆ ಬರುತ್ತಿರಲಿಲ್ಲ ಎಂದಲ್ಲ. ಬಹಳ ರುಚಿಕರವಾದ ಸಾರನ್ನು ಮಾಡುತ್ತಿದ್ದರು. ಒರಿಸ್ಸಾ ಪ್ರದೇಶದ ಸಾರನ್ನು ಬಿಟ್ಟರೆ ನಿಮ್ಮ ದಕ್ಷಿಣ ಕನ್ನಡ ಸಾರೆ ನನಗೆ ತುಂಬಾ ಇಷ್ಟ. ಅವಡೆ, ಅಲಸಂದೆ ಇತ್ಯಾದಿಗಳನ್ನು ಬಳಸಿ ಮಾಡುವ ಸಾರು ಬಲು ರುಚಿಕರ. ಇದರಿಂದ ಹೋಳಿಗೆ, ಹಪ್ಪಳ ಇತ್ಯಾದಿಗಳನ್ನೂ ಕೂಡ ಮಾಡುತ್ತಿದ್ದರು. ಎಲ್ಲಾ ರೀತಿಯಲ್ಲೂ ಬಳಕೆ ಇತ್ತು. ಅದು ತುಂಬಾ ಚೆನ್ನಾಗಿರುವುದು ಮಾತ್ರವಲ್ಲದೆ ಸ್ವರೂಪದಲ್ಲಿ ಮಂದ್ರವಾಗಿ ಜೀರ್ಣವಾಗುವ ಶಕ್ತಿಯನ್ನು ಕೂಡ ಕೊಡುತ್ತಿತ್ತು. ಇವೆಲ್ಲ ಒಳ್ಳೆಯ ಅರೋಗ್ಯ ಪದ್ದತಿಗಳು. ಇವೆಲ್ಲ ಬಿಟ್ಟು ಹೋಗಿವೆ. ಈಗಿನ ಎಷ್ಟೋ ಜನರಿಗೆ ಈ ಪ್ರದೇಶದಲ್ಲಿದ್ದ ಕಪ್ಪೆಸ್ರು (ಕಪ್ಪು ಹೆಸರು) ಎನ್ನವ ಧಾನ್ಯದ ಬಗ್ಗೆ ಗೊತ್ತೇ ಇಲ್ಲ. ಕುಂದಾಪುರದ ಕಡೆ ಈಗಲೂ ಇದ್ದರೂ ಇರಬಹುದು. ಅದು ದೇಹಕ್ಕೆ ಬಹಳ ತಂಪು. ಹೆಸರು ಕಾಳಿಗಿಂತಲೂ ದೇಹಕ್ಕೆ ಹೆಚ್ಚು ತಂಪು ಮತ್ತು ಅಷ್ಟೇ ಸ್ನಿಗ್ಧ. ಹೆಸರು ಕಾಳನ್ನು ಹೆಚ್ಚು ತಿಂದರೆ ಅನಾರೋಗ್ಯ. ಅದು ಅಗ್ನಿ ಮಾಂದ್ಯ ಹುಟ್ಟಿಸುತ್ತದೆ. ಆದರೆ ಕರಿ ಹೆಸರನ್ನು ತಿನ್ನಿ, ನಿಮಗೆ ಏನೂ ಬಾಧಕವಾಗುವುದಿಲ್ಲ. ಅಷ್ಟೊಂದು ಸ್ನಿಗ್ಧ ಶಕ್ತಿಯನ್ನು ಹೊಂದಿದ ಔಷಧ ಅದರಲ್ಲಿದೆ. ಅಂತಹ ಆಹಾರ ಪದ್ದತಿಯನ್ನೆಲ್ಲ ಬಿಟ್ಟುಕೊಳ್ಳುತ್ತಾ ಬಂದಿದ್ದೇವೆ. ಸಾಧ್ಯವಾದರೆ ಆದಷ್ಟು ನಮ್ಮ ಪುರಾತನ ಆಹಾರ ಪದ್ದತಿಯನ್ನು ಬಳಸಿಕೊಂಡರೆ ನಾವು ಮುಂದೆ ಹೋಗಬಹುದು. ಈಗ ಹಿಂದಕ್ಕೆ ಹೋಗುತ್ತಾ ಇದ್ದೇವೆ. ಇನ್ನು ೫೦ ವರ್ಷಗಳಾದ ಮೇಲೆ ಬದುಕಿದ್ದರೂ ಕೂಡ ಯಾರಿಗೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ಆ ಕಡೆ ಒಂದು ಚೀಲ, ಈ ಕಡೆ ಒಂದು ಚೀಲ ಚುಚ್ಚಿರುತ್ತಾರೆ. ಮಲ ಮೂತ್ರ ಹೋಗುವುದಿಲ್ಲ. ಅದನ್ನು ಹೊತ್ತುಕೊಂಡು ತಿರುಗಬೇಕು. ಅಂತಹ ಪರಿಸ್ಥಿತಿ ಮುಂದೆ ಬರಬಹುದು. ಇದಕ್ಕೆಲ್ಲ ಪರಿಹಾರ ನಮ್ಮ ಮೂಲ ಆಹಾರ ಪದ್ದತಿಗೆ ಹೋಗುವಂತಹದ್ದು. ಆಗ ಮಾತ್ರ ನಿಮ್ಮೆಲ್ಲ ಸಮಸ್ಯೆ ಪರಿಹಾರವಾಗುತ್ತದೆ.

ಪ್ರಶ್ನೆ: ತೆಂಗಿನೆಣ್ಣೆಯನ್ನು ತಲೆಗೆ ಹಾಕಬೇಕು ಎಂದು ಹೇಳಿದಿರಿ. ಕೆಲೆವೆಡೆ ಅದನ್ನು ಬ್ರಾಹ್ಮೀ, ಮದರಂಗಿ ಸೊಪ್ಪು ಎಲ್ಲಾ ಹಾಕಿ ಬಿಸಿ ಮಾಡುತ್ತಾರೆ. ಇದು ಸರಿಯೇ? ಸ್ವಾಮೀಜಿ: ಹಿಂದೆ ಇಲ್ಲೆಲ್ಲಾ ತೆಂಗಿನೆಣ್ಣೆ ಗಟ್ಟಿ ಆಗಬಾರದಂತೆ ಕಾಪಾಡುವ ವಿಧಾನ ಗೊತ್ತಿತ್ತು. ಇಂದು ನಿಮಗೆ ಗೊತ್ತಿಲ್ಲ. ಇಲ್ಲಿನ ಉಷ್ಣಾಂಶ ಸಾಮಾನ್ಯವಾಗಿ ೨೩ ಡಿಗ್ರಿಗಿಂತ ಹೆಚ್ಚಾಗಿರುವ ಕಾರಣ ತೆಂಗಿನೆಣ್ಣೆ ಗಟ್ಟಿಯಾಗುವುದಿಲ್ಲ. ಆದರೆ ಈಗ ಬೆಳೆಯುವ ತೆಂಗಿನ ಕಾಯಿಗಳಲ್ಲಿ ಒಂದಿಷ್ಟು ರಾಸಾಯನಿಕ ಅಂಶಗಳು ಹೆಚ್ಚಾಗಿರುತ್ತವೆ. ಬೆಳೆಯಲು ಹಾಕುವ ರಾಸಾಯನಿಕಗಳೇ ಇದಕ್ಕೆ ಕಾರಣ. ಹಾಗಾಗಿ ಗಟ್ಟಿ ಆಗುತ್ತವೆ. ಆದರೆ ಹಿಂದೆ ಏನು ಮಾಡುತ್ತಿದ್ದರೆಂದರೆ ಬಿಸಿ ಮಾಡುತ್ತಿದ್ದರು. ಬಿಸಿ ಮಾಡುವುದು ಎಂದರೆ ಒಲೆಯಲ್ಲಿ ಕಾಯಿಸುವುದಲ್ಲ. ಅಗಲವಾದ ತಟ್ಟೆಗೆ ತೆಂಗಿನೆಣ್ಣೆಯನ್ನು ಹಾಕಿ ವೀಳ್ಯದೆಲೆ, ಒಂದು ಚೂರು ಉಪ್ಪು (ಸೈನ್ಧವ ಲವಣ) ಹಾಗೂ ಮೈತಾಳ ಎನ್ನುವ ಎಲೆಯನ್ನು ಸೇರಿಸಿ, ಎಲೆ ಒಣಗುವ ವರೆಗೆ ಬಿಸಿಲಿನಲ್ಲಿ ಇಡುತ್ತಿದ್ದರು. ಅಷ್ಟು ಎಣ್ಣೆ ಬಿಸಿಯಾಗುತ್ತಿತ್ತು. ಬಿಸಿಯಾದ ಮೇಲೆ ಆ ಎಣ್ಣೆಯನ್ನು ಸೋಸಿ ಇಟ್ಟುಬಿಟ್ಟರೆ ಕೆಳಗೆ ಸ್ವಲ್ಪ ರಜದ ಹಾಗೆ ಪುಡಿ ಸಿಗುತ್ತದೆ. ಅದೇ ಅದರ ಗಟ್ಟಿಯಾಗತಕ್ಕಂತಹ ಗುಣ. ಅದು ಹೋದ ಮೇಲೆ ತೆಂಗಿನೆಣ್ಣೆ ಗಟ್ಟಿಯಾಗುವುದಿಲ್ಲ. ಇದು ಬಿಸಿ ಮಾಡುವುದು ಎಂದರ್ಥ. ಒಲೆಯಲ್ಲಿ ಕಾಯಿಸುವುದಲ್ಲ. ತೆಂಗಿನೆಣ್ಣೆ ಗಟ್ಟಿಯಾಗದಂತೆ ಕಾಪಾಡುವ ಉಪಾಯವೇ ಎಣ್ಣೆ ಬಿಸಿ ಮಾಡುವುದು.

ಪ್ರಶ್ನೆ: ಬೆಲ್ಲದಲ್ಲಿ ಇರುವೆ ಅಥವಾ ನೊಣಗಳಿರುವುದು ಸಾಮಾನ್ಯ. ಅವುಗಳಲ್ಲಿ ಪ್ರತಿಯೊಂದನ್ನೂ ಹುಡುಕಿ ಹುಡುಕಿ ತೆಗೆದು ಹಾಕುವುದು ಸಾಧ್ಯವಿಲ್ಲ. ಪದಾರ್ಥಗಳಿಗೆ ಬೆಲ್ಲ ಹಾಕುವಾಗ ಇವು ಬೆಲ್ಲದೊಟ್ಟಿಗೆ ಹೋಗಿಬಿಡುತ್ತದೆ. ಹಾಗೆ ಮಾಡಿದ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಬಹುದೇ ಅಥವಾ ಭಕಾರ್ಥಿಗಳಿಗೆ ಬಡಿಸಬಹುದೇ? ಹಾಗೆಯೆ ಕೆಲವು ಧಾನ್ಯಗಳಲ್ಲಿ ಕ್ರಿಮಿ ಕೀಟಗಳು ಬರಬಹುದು. ಅದರಿಂದ ದೋಷವಿದೆಯೇ? ಸ್ವಾಮೀಜಿ: ಶಾರ್ನ್ಗಾಧರ ಒಂದಿಷ್ಟು ಮಾತುಗಳನ್ನು ಹೇಳಿದ್ದಾನೆ. ಅವು ಗುಜರಾತಿ ಭಾಷೆಯಲ್ಲಿವೆ. ಕನ್ನಡದಲ್ಲಿಯೂ ಕೆಲವೊಂದಿಷ್ಟು ಮಾತುಗಳು ಚಾಲ್ತಿಯಲ್ಲಿವೆ. ಹಣ್ಣಿನ ಹುಳ ಕಣ್ಣಿಗೆ ಒಳ್ಳೆಯದು. ಅದರಥವೇನು? ಹಣ್ಣಿನ ಹುಳವನ್ನು ತೆಗೆದು ಕಣ್ಣಿಗೆ ಹಚ್ಚಬೇಕೆಂದೇ? ಅಲ್ಲ. ಹಣ್ಣಿನಲ್ಲಿ ಹುಳವಿದೆ ಎನ್ನುವ ನಿಮ್ಮ ಕಲ್ಪನೆಯೇ ತಪ್ಪು. ಹಣ್ಣಿನಲ್ಲಿರುವುದು ಹುಳ ಅಲ್ಲ ಎಂದು ಅದರ ಅರ್ಥ. ನಾವು ಯಾವುದು ಸ್ವಭಾವತಃ ಸಹಜ ಚಲನೆ ಇದೆ ಅದನ್ನು ಹುಳ ಎಂದು ತಿಳಿದುಕೊಂಡಿದ್ದೇವೆ. ನಮಗೆ ಹುಳದ ಕಲ್ಪನೆ ಇಲ್ಲ. ಹುಳದ ಸ್ಪಷ್ಟತೆ ಇದ್ದರೆ ಇದಾಗುವುದಿಲ್ಲ. ಹಣ್ಣು ಯಾವಾಗ ಜೀವಶಕ್ತಿಯನ್ನು ಹೊಂದುತ್ತದೆಯೋ ಅವಾಗ ಅದು ನಿಮಗೆ ಹುಳದಂತೆ ಭಾಸವಾಗುತ್ತದೆ. ಶಾರ್ನ್ಗಾಧರ ಇದನ್ನು ಬಹಳ ಸ್ಪಷ್ಟಪಡಿಸಿದ್ದಾನೆ. ಅದು ಜೀವ ಶಕ್ತಿ. ಅದು ತಿನ್ನುವುದಕ್ಕೆ ಅರ್ಹ ಎಂದರ್ಥ. ಆಯುರ್ವೇದ ಶಾಸ್ತ್ರದಲ್ಲೂ ಎಲ್ಲೂ ಹೇಳಿಲ್ಲ. ಕೆಲವೊಂದು ಕಷಾಯ ಮಾಡಿ ಇಟ್ಟರೆ ಭೂಮಿಯಲ್ಲಿ ಇಷ್ಟು ದಿನ ಇರಬೇಕು ಎಂದಿದೆ. ಅದು ಕಷಾಯ ಎಂದು ಗೊತ್ತಾಗುವುದು ಹೇಗೆಂದರೆ ಅದರಲ್ಲಿ ಹುಳ ಆದಾಗ ಮಾತ್ರ. ಆಯುರ್ವೇದ ಹೇಳುವುದು ಅದನ್ನೇ. ಜೀವ ಶಕ್ತಿ ಉತ್ಪಾದನೆ ಆದರೆ ಮಾತ್ರ ಅದು ಕಷಾಯ. ಅಲ್ಲದಿದ್ದರೆ ಅದು ಕಷಾಯವಲ್ಲ. ಅಷ್ಟು ಸ್ಪಷ್ಟತೆ ಆಯುರ್ವೇದದಲ್ಲಿ ಇದೆ. ಇತ್ತೀಚಿಗೆ ಈ ಹುಳ ಎಂಬಂತಹ ಪ್ರವೃತ್ತಿಗಳು ಹೆಚ್ಚುತ್ತಾ ಹೋದದ್ದು. ಮುಂಚೆ ಇರಲಿಲ್ಲ. ಮನೆಯಲ್ಲಿ ಉಪ್ಪಿನಕಾಯಿ ಮಾಡಿಟ್ಟಿರುತ್ತೀರಿ, ಒಲೆಯ ಮೇಲೆ ಅಟ್ಟ ಇರುತ್ತದೆ, ಅಟ್ಟದ ಮೇಲೆ ಉಪ್ಪಿನ ಕಾಯಿ ಭರಣಿ ಇರುತ್ತದೆ. ಕತ್ತಲೆಯ ಜಾಗ. ಅಲ್ಲಿ ಹುಳ ಆಗಿರುತ್ತದೆ. ನಿಮಗೆ ಗೊತ್ತಿರುವುದಿಲ್ಲ. ನೀವು ತಿನ್ನುತ್ತೀರಿ. ನಿಮಗೆ ಏನೂ ಆಗಿರುವುದಿಲ್ಲ. ಮರುದಿನ ಹುಳ ಆಗಿದೆ ಎಂದು ಗೊತ್ತಾದಮೇಲೆ ಪುನಃ ತಿಂದರೆ, ನಿಮಗೆ ಏನೂ ಆಗುವುದಿಲ್ಲ ಅಲ್ಲವೇ? ನೀವು ನಿಮ್ಮ ಕಲ್ಪನೆಯಿಂದ ವಾಂತಿ ಮಾಡುತ್ತೀರಿ ಅಷ್ಟೇ, ಎಲ್ಲರ ಮನೆಯ ಉಪ್ಪಿನ ಕಾಯಿಯಲ್ಲಿಯೂ ೬ ತಿಂಗಳ ಬಳಿಕ ಹುಳ ಆಗಿಯೇ ಆಗುತ್ತದೆ. ಆದರೆ ಅದು ಹುಳ ಅಲ್ಲ. ಅಷ್ಟು ತೀಕ್ಷವಾಗಿ ಕ್ಷಾರಗಳನ್ನು ಸಂಯೋಜನೆ ಮಾಡಿದ್ದರೂ ಅಲ್ಲಿ ಜೀವ ಶಕ್ತಿ ಉತ್ಪನ್ನವಾಗಿದೆ ಎಂದರ್ಥ. ಸತ್ತ ಆಹಾರವನ್ನು ಖಂಡಿತವಾಗಿಯೂ ತಿನ್ನಬಾರದು. ಯಾವುದು ಕೊಳೆಯುತ್ತದೆ, ಸಾಯುತ್ತದೆ ಅದನ್ನು ತಿನ್ನಬಾರದು. ಸತ್ತಾಗ ಬರುವ ಹುಳ ಬೇರೆ. ಅನ್ನ ಮಾಡಿಟ್ಟು ಎರಡು ದಿನ ಬಿಟ್ಟರೆ ಅದರಲ್ಲಿ ಹುಳ ಬರುತ್ತದೆ. ಅದನ್ನು ತಿನ್ನಬಾರದು. ಅದು ಸತ್ತ ಆಹಾರದಲ್ಲಿ ಹುಟ್ಟಿದ ಹುಳ. ಅದು ಆಹಾರವನ್ನು ಬಳಸಿ ಉತ್ಪನ್ನವಾದ ಕ್ರಿಮಿ. ಅದು ವಿಷ. ಅದನ್ನು ತಿನ್ನಬಾರದು. ಅದು ಸ್ವಭಾವ ಸಹಜವಾಗಿ ಜೀವಂತವಿದ್ದಾಗ ಅದು ಜೀವ ಶಕ್ತಿ ಅಂದರ್ಥ ಅದು ನಿಷೇಧವಲ್ಲ. ಹಾಲಿನಲ್ಲಿ ಹುಳ ಇಲ್ಲವೇ? ನೀವು ಹಾಲಿಗೆ ಹೆಪ್ಪು ಹಾಕಿದಾಗ ಹೇಗೆ ಮೊಸರಾಗುತ್ತದೆ? ಅದು ಬ್ಯಾಕ್ಟೀರಿಯಾಗಳ ಸಂಯೋಜನೆ. ಅದು ನಿಮಗೆ ಕಾಣಿಸುವುದಿಲ್ಲ. ಹಾಗಾಗಿ ನಿಮಗೆ ಹಾಲು ಶುದ್ಧ. ಹಾಲನ್ನು ಎರಡು ದಿನ ಹಾಗೇ ಇಡೀ. ಹುಳಗಳು ನಿಜವಾಗಿ ಕಾಣಿಸತೊಡಗುತ್ತವೆ. ಮೊದಲು ಗೊತ್ತಾಗುವುದಿಲ್ಲ ಅಷ್ಟೇ. ಯಾವುದು ಜೀವ ಶಕ್ತಿ, ಯಾವುದು ವಿಷ ಎಂದು ಗುರುತಿಸುವುದನ್ನು ಬೆಳೆಸಿಕೊಳ್ಳಬೇಕು. ವಿಷವಾದ್ದನ್ನು ಬಳಸಬಾರದು. ಕೊಳೆತ ಕಾರಣದಿಂದ ಅಗತಕ್ಕಂತಹ ಕ್ರಿಮಿಯು ನಿಷೇಧ. ಸ್ವಾಭಾವಿಕ ಪರಿವರ್ತನೆ ಕಾರಣದಿಂದ ಅಗತಕ್ಕಂತಹ ಕ್ರಿಮಿಯಿಂದ ತೊಂದರೆ ಇಲ್ಲ. ಬಳಸಬಹುದು. ಬೆಲ್ಲದ ವಿಚಾರ ಬಂದಾಗ ನೊಣ ಕುಳಿತುಕೊಳ್ಳುತ್ತದೆ ಎಂದು ಹೇಳಿದಿರಲ್ಲ. ಬೆಲ್ಲ ತಯಾರು ಮಾಡುವ ಕಾರ್ಖಾನೆಯಲ್ಲೇ ಅದನ್ನು ಪ್ರತ್ಯೇಕಿಸಿ, ಶುದ್ಧ ಮಾಡಿ ಕಳಿಸುವುದು ಅವನ ಕೆಲಸ. ಆದರೆ ನೀವೇ ಪ್ರಸಾದ ಮಾಡುವಾಗ, ನೈವೇದ್ಯ ಮಾಡುವಾಗ ನೊಣ ಹೆಕ್ಕಿ ಹಾಕಿದರೆ ಒಳ್ಳೆಯದು. ಹಾಗೇ ಇರುವುದಲ್ಲ ಎಂದು ಸುರಿದು ಪಾಯಸ ಮಾಡುವುದು ಒಳ್ಳೆಯದಲ್ಲ. ಯಾಕೆಂದರೆ ಅದು ಕ್ರಿಮಿ. ಹುಳ ಅಲ್ಲ. ಅದು ಅಲ್ಲಿ ಹುಟ್ಟಿದ್ದಲ್ಲ. ಬೇರೆಕಡೆಯಲ್ಲಿ ಹುಟ್ಟಿ ತನ್ನ ಆಹಾರಕ್ಕಾಗಿ ಬೆಲ್ಲವನ್ನು ಆಶ್ರಯಿಸಿದ್ದು. ಆದರೆ ಹಣ್ಣಿನಲ್ಲಿರುವ ಹುಳ ಅಲ್ಲೇ ಹುಟ್ಟಿದ್ದು. ಈ ವ್ಯತ್ಯಾಸವನ್ನು ನೀವು ಅರಿಯಬೇಕು. ಹಾಗೆಯೆ ಬೇರೆ ಯಾವುದೊ ಇರುವೆ, ಅದು ಬೇರೆ ಕಡೆಯಲ್ಲಿ ಹುಟ್ಟಿ ತನ್ನ ಆಹಾರಕ್ಕಾಗಿ ಅಲ್ಲಿಗೆ ಬಂದಿದೆ. ಹಾಗಾಗಿ ಅದು ಕೂಡ ಕ್ರಿಮಿ. ಆದ್ದರಿಂದ ಯಾವುದು ಜೀವ ಅದು ನಿಷೇಧವಲ್ಲ, ಯಾವುದು ಕ್ರಿಮಿ ಅದು ನಿಷೇಧ. ಅದನ್ನು ತೆಗೆಯಬೇಕು. ಆದ್ದರಿಂದ ಬೆಲ್ಲವನ್ನು ಶುದ್ಧ ಮಾಡಿ ಹಾಕಿ. ಅಕ್ಕಿಯಲ್ಲೂ ಕೂಡ ೬ ತಿಂಗಳ ಬಳಿಕ ಸಹಜವಾಗಿ ಹುಳವಾಗುತ್ತದೆ. ಅದನ್ನು ತೊಳೆಯುವುದರ ಮುಖೇನ ಶುದ್ಧ ಮಾಡಬೇಕು. ಅಕ್ಕಿಯನ್ನು ಒಂದು ಸಾರಿ, ಎರಡು ಸಾರಿ ಅಥವಾ ಮೂರು ಸಾರಿ ತೊಳೆಯಬೇಕೆಂದು ಹೇಳಿದೆ. ಶ್ರಾದ್ಧಕ್ಕೆ ಹವಿಸ್ಸು ಮಾಡುವುದಿದ್ದರೆ ಒಂದೇ ಸಾರಿ ತೊಳೆಯಬೇಕು. ಅಲ್ಲಿ ಹುಳ ಇದೆಯೋ ಇಲ್ಲವೋ ಎಂದು ನೋಡುವ ಅಗತ್ಯ ಇಲ್ಲ. ಒಂದು ಸಾರಿ ತೊಳೆದಾಗ ಯಾವುದು ನೀರಿನ ಮೂಲಕ ಹೋಗಬಲ್ಲದೋ ಅದು ಹುಳ. ಹುಳ ಮತ್ತೂ ಉಳಿದಿದ್ದರೆ ಅದನ್ನು ತೊಳೆಯಬೇಕೆಂದಿಲ್ಲ. ನಿಮಗೋಸ್ಕರ ಅಡುಗೆ ಮಾಡುವಾಗ ಎರಡು ಸಲ ತೊಳೆಯಬೇಕು. ಎರಡು ಸಲ ತೊಳೆದಾಗ ಹೋದ ಹುಳ ಹೋಯಿತು. ಅದು ಹುಳ. ಉಳಿದದ್ದನ್ನು ಹೆಕ್ಕುವ ಅಗತ್ಯ ನಿಮಗೆ ಖಂಡಿತ ಇಲ್ಲ. ಅದು ಮೈಲಿಗೆ ಅಲ್ಲ. ಅದೇ ದೇವರ ನೈವೇದ್ಯಕ್ಕೆ, ವಿಶೇಷ ಅತಿಥಿಗಳ ನೈವೇದ್ಯಕ್ಕೆ, ಶ್ರಾದ್ಧ ಭೋಜನಕ್ಕೆ ಊಟ ತಯಾರಿಸುವಾಗ ಮೂರು ಸಲ ತೊಳೆಯಬೇಕು. ಈ ರೀತಿಯ ೧,೨,೩ ಬಾರಿಯ ತೊಳೆಯುವಿಕೆಗೂ ಸ್ಪಷ್ಟವಾದ ಕಾರಣವಿದೆ. ಶ್ರಾದ್ಧದಲ್ಲಿ ಪಿತೃಗಳನ್ನು, ಪಿತೃ ಸ್ವರೂಪದಲ್ಲಿ ಬ್ರಾಹ್ಮಣರನ್ನು ಕೂರಿಸಿ ಅವರ ಮೇಲೆ ಪಿತೃಗಳನ್ನು ಆಹ್ವಾನ ಮಾಡಿರುತ್ತೀರಿ. ಅವರು ನಿಮ್ಮ ಹಿರಿಯರು. ಈ ಋಣ ಕರ್ಮಭೂಮಿಯಿಂದ ನಿವೃತ್ತಿ ಪಡೆದು ಹೋದವರು. ಅವರಿಗೆ ಈ ಹುಳ ಎನ್ನುವುದು ಪ್ರವೃತ್ತಿ ಧರ್ಮ. ಆ ಪ್ರವೃತ್ತಿ ಧರ್ಮದ ಋಣವನ್ನು ಆರೋಪಿಸಬಾರದು ಎಂದು ೩ ಸಲ ತೊಳೆದು ಶುದ್ಧ ಮಾಡಬೇಕು ಎಂದರು. ಹಾಗಾಗಿ ಶ್ರಾದ್ಧ ಭೋಜನಕ್ಕೆ, ದೇವರ ನೈವೇದ್ಯಕ್ಕೆ ಮಾಡುವ ಅಕ್ಕಿಯಲ್ಲಿ ಹುಳ ಇಲ್ಲದಂತೆ ಹೆಕ್ಕಬೇಕು. ಯಾಕೆಂದರೆ ಈ ಋಣ ಅವರಿಗೆ ಆರೋಪಿಸಬಾರದು ಎಂದು. ಸಹಜ ಸ್ವಾಭಾವಿಕವಾಗಿ ಮನುಷ್ಯ ಭೂಮಿಯಲ್ಲಿ ಬದುಕುತ್ತಾನೆಂದರೆ ಅವನಿಗೆ ಋಣ ಇದೆಯೆಂದು ಅರ್ಥ. ಬದುಕಿದ್ದಷ್ಟು ದಿನ ಋಣ ಇದ್ದೇ ಇರುತ್ತದೆ. ಸತ್ತರೆ ಮಾತ್ರ ಋಣ ಇಲ್ಲ ಎಂದರ್ಥ. ಹಾಗಾಗಿ ೨ ಸಲ ತೊಳೆದರೆ ಸಾಕು, ಋಣ ಉಳಿದರೆ ಅಡ್ಡಿ ಇಲ್ಲ. ಅದೇ ಪಿಂಡಕ್ಕೆ ಹವಿಸ್ಸನ್ನು ಮಾಡುವ ಅಕ್ಕಿಯನ್ನು ಒಂದೇ ಸಲ ತೊಳೆದರೆ ಸಾಕು. ಏಕೆಂದರೆ ನೀವು ಕೊಡುವುದು ನಿಮ್ಮ ಋಣ -ಕರ್ಮಗಳನ್ನು. ಋಣ -ಕರ್ಮಗಳ ರೂಪದ ಪಿಂಡವನ್ನು ಅಲ್ಲಿ ಸ್ಥಾಪಿಸುತ್ತೀರಿ. ಈ ಋಣ -ಕರ್ಮಗಳ ಶ್ರಮದಿಂದಲೇ ಜ್ಞಾನ ಬರುವುದು. ಕರ್ಮವಿಲ್ಲದೆ ಜ್ಞಾನವಿಲ್ಲ. ಕರ್ಮದ ಮಂಥನದಿಂದಲೇ ಜ್ಞಾನ ಉದ್ಭವವಾಗುವುದು. ಆ ಜ್ಞಾನವನ್ನು ಪಡೆಯುವುದಕ್ಕಾಗಿ ಋಣ -ಕರ್ಮಗಳ ಸಹಿತವಾದ ಪಿಂಡವನ್ನು ಇಡುತ್ತೀರಿ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment