February 6, 2020

ಪ್ರಶ್ನೋತ್ತರ - 3


ಪ್ರಶ್ನೆ: ಬಾಳೆ ಎಲೆಯನ್ನು ಹರಿಯಬಾರದು ಎನ್ನುತ್ತಾರೆ ಏಕೆ? ಸ್ವಾಮೀಜಿ: ಬಾಳೆ ಎಲೆಯು ಒಂದು ಒಳ್ಳೆಯ ಪರಿಕರ. ಈಗ ಊಟಕ್ಕೆ ಬಳಸುವುದಕ್ಕೆ ಮಾತ್ರ ಚಾಲ್ತಿಯಲ್ಲಿದೆ. ಹಿಂದೆ ಅಲ್ಯೂಮಿನಿಯುಮ್, ಸ್ಟೀಲ್ ನಿಂದ ಮಾಡಿದ ಪರಿಕರಗಳು ಇರಲಿಲ್ಲ. ಹಿತ್ತಾಳೆ, ತಾಮ್ರಗಳಿದ್ದರೂ ಬೇಕಾದಷ್ಟು ತಟ್ಟೆ, ದೊನ್ನೆ,ಲೋಟ ಮಾಡಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ ಬಾಳೆ ಎಲೆಯಿಂದ ಮಾತ್ರ ಇವೆಲ್ಲವನ್ನೂ ಮಾಡಿಕೊಳ್ಳಬಹುದಾಗಿತ್ತು. ಹಾಗಾಗಿ ಹರಿದು ಹಾಳು ಮಾಡುವುದಲ್ಲ, ಸಾಧ್ಯವಿದ್ದರೆ ಬಾಳೆ ಎಲೆಯನ್ನು ಶಾಖಕ್ಕೆ ಒಳಪಡಿಸಿ್ದರೆ ಬಾಡುತ್ತದೆ. ಮೃದುವಾಗುತ್ತದೆ. ದೊನ್ನೆ ಕಟ್ಟಿ ಇಟ್ಟರೆ ಚಹಾ-ಕಾಫಿ ಕುಡಿಯಲು ಬರುತ್ತದೆ. ಹರಿದರೆ ಹಾಳಾಗಿ ಹೋಗುತ್ತದೆ. ಮಿತವಾದ ಬಳಕೆ, ಹಿತ ಬಳಕೆಯ ದೃಷ್ಟಿಯಿಂದ ಬಾಳೆ ಎಲೆ ಹರಿಯಬಾರದು ಎಂದು ಬಂದಿತು. ಬೇರೆ ಚಾಲ್ತಿಯಲ್ಲಿ ಹೇಳುವ ದರಿದ್ರ, ಅನಿಷ್ಟ ಎಂದು ಹೇಳುವುದಲ್ಲ. ಯಾವುದನ್ನೇ ಆಗಲಿ ಹಿತ ಮಿತವಾಗಿ ಬಳಸಬೇಕು, ಅದು ಸದ್ವಿನಿಯೋಗ ಆಗಬೇಕು ಎನ್ನುವ ಉದ್ದೇಶದಿಂದ ಬಾಳೆ ಎಲೆ ಹರಿಯಬಾರದು.

ಪ್ರಶ್ನೆ: ಬಾಳೆ ಎಲೆಯಲ್ಲಿ ಊಟ ಮಾಡುವುದರ ವಿಶೇಷತೆ ಏನು? ಸ್ವಾಮೀಜಿ: ಬಾಳೆ ಎಲೆ ಒಂದು ವಿಶಿಷ್ಟವಾದ ಸಹಜ ಸ್ವಭಾವದ, ಪ್ರಾಕೃತಿಕ ರಾಸಾಯನಿಕ ವಸ್ತುವನ್ನು ಹೊಂದಿದೆ. ನಮ್ಮ ದೇಹದ ಚರ್ಮ ರೋಗವನ್ನು (ಸುಮಾರು ೬೦% ಚರ್ಮ ರೋಗಗಳು) ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಿವಾರಿಸಲು ಸಾಧ್ಯವಿದೆ. ತೀರಾ ಗಂಭೀರವಾದ ಚರ್ಮ ರೋಗಗಳೂ ಕೂಡ ಬಾಳೆ ಎಲೆಯನ್ನು ಕೆಲವೊಂದು ಹಂತದವರೆಗೆ ಬಿಸಿಮಾಡಿದಾಗ, ಅದರ ಮೇಲೆ ಉರುಳುವುದರಿಂದ ಕೂಡ ಗುಣ ಆಗುತ್ತದೆ. ನಿಮ್ಮಲ್ಲಿ ಮಡೆ ಸ್ನಾನ ಎಲ್ಲ ಬಂದದ್ದು ಇದೇ ಕಾರಣಕ್ಕಾಗಿ. ಬಿಸಿ ಅನ್ನ ಹಾಕಿದಾಗ ಬಾಳೆ ಎಲೆ ಒಂದು ಸ್ವಲ್ಪ ಬೇಯುವುದನ್ನು ನೀವು ನೋಡಿರಬಹುದು. ಆ ಕಾಲದಲ್ಲಿ ಚರ್ಮರೋಗಗಳನ್ನು ಗುಣಪಡಿಸುವ ರಾಸಾಯನಿಕಗಳು ಬಾಳೆ ಎಲೆಯಿಂದ ಬಿಡುಗಡೆಯಾಗುತ್ತವೆ. ಆಗ ಅದರ ಮೇಲೆ ಉರುಳುವುದರಿಂದ ಅದು ಮೈಯ್ಯ ಮೇಲೆ ಲೇಪಿಸಲ್ಪಡುತ್ತವೆ. ಹಾಗಾಗಿ ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಮಡೆ ಸ್ನಾನ ಬಳಕೆಗೆ ಬಂತು. ಹಾಗೇ ಊಟ ಮಾಡುವುದರಿಂದ ಈ ರಾಸಾಯನಿಕಗಳು ನಮ್ಮ ಹೊಟ್ಟೆ ಸೇರುತ್ತದೆ. ಅವು ಚರ್ಮಕ್ಕೆ ಬರುವ ಹಲವಾರು ರೋಗಗಳನ್ನು ಪರಿಹಾರ ಮಾಡಿ ಬಿಡುತ್ತವೆ. ಅದಕ್ಕಾಗಿ ಬಾಳೆ ಎಲೆ ಊಟಕ್ಕೆ ಬಹಳ ಮಹತ್ವ ನೀಡಿದರು. ಪೂರ್ವ ಹಾಗೂ ಪಶ್ಚಿಮ ಕರಾವಳಿ ಎರಡೂ ಕಡೆ ಬಾಳೆ ಎಲೆ ಊಟದ ಕ್ರಮ ಇದೆ. ಅತೀ ಹೆಚ್ಚು ತಮಿಳುನಾಡಿನಲ್ಲಿ ಇದೆ. ಇಲ್ಲಿಯಾದರೂ ತಟ್ಟೆಯಲ್ಲಿ ಊಟದ ಪದ್ಧತಿ ಇದೆ. ವಿಶೇಷ ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕುತ್ತಾರೆ. ಆದರೆ ತಮಿಳುನಾಡಿನಲ್ಲಿ ಯಾರೇ ಬಂದರೂ ಬಾಳೆ ಎಲೆಯಲ್ಲೇ ಊಟ. ಏಕೆಂದರೆ ಅದು ಎರಡು ಸಮುದ್ರಗಳು ಕೂಡುವ ಪ್ರದೇಶ. ಕರಾವಳಿ ಜಾಸ್ತಿ. ಅಲ್ಲಿ ಚರ್ಮ ರೋಗ ಭಾಧೆಗಳೂ ಹೆಚ್ಚು. ಚರ್ಮ ಸುಡುವುದೂ ಹೆಚ್ಚು. ಅದಕ್ಕೇ ಅಲ್ಲಿನ ಜನ ಕಪ್ಪಗಿರುತ್ತಾರೆ. ಸುಡುವಿಕೆಯಿಂದ ರೋಗಗಳ ಆಕ್ರಮಣ ಹೆಚ್ಚಾಗುವುದು ಸಾಮಾನ್ಯ. ಅದಕ್ಕಾಗಿ ಬಾಳೆ ಎಲೆ ಉಪಸಂಹಾರ, ಒಂದು ಪರಿಹಾರ. ಅದಕ್ಕಾಗಿ ಬಾಳೆ ಎಲೆ ಊಟವನ್ನು ವಿಶೇಷವಾಗಿ ಹೇಳಿದರು. ಆ ಕಡೆ ಬಂಗಾಳದ ವರೆಗೂ ಬಾಳೆ ಎಲೆ ಇದ್ದರೆ, ಈ ಕಡೆ ಗುಜರಾತಿನ ವರೆಗೂ ಬಾಳೆ ಎಲೆ ಊಟ ಇದೆ. ಆದ್ದರಿಂದ ಇಲ್ಲಿಯ ವಾತಾವರಣದ ಪರಿಣಾಮವನ್ನು ಯಾವುದೇ ಚಿಕಿತ್ಸೆ ಇಲ್ಲದೆ ಪರಿಹರಿಸಬಹುದಾಗಿದೆ.

ಪ್ರಶ್ನೆ: ಉತ್ತರ ಭಾರತದ ಕಡೆ ಹೋದರೆ ಯಾವುದೇ ಧಾರ್ಮಿಕ ಕಾರ್ಯ ಮಾಡುವಾಗಲೂ, ದೇವಸ್ಥಾನಕ್ಕೆ ಹೋಗುವಾಗಲೂ ಅಂಗಿ ಧರಿಸಬಹುದು. ದಕ್ಷಿಣ ಭಾರತದಲ್ಲಿ ಈ ಕ್ರಮ ಇಲ್ಲ. ಏಕೆ? ಸ್ವಾಮೀಜಿ: ಇವೆಲ್ಲ ಪ್ರಾದೇಶಿಕ ವಾತಾವರಣ ಕಾರಣವಾದ ನಿಯಮಗಳು. ಉತ್ತರ ಭಾರತಕ್ಕೆ ನೀವು ತಿರುಗಾಡಲು, ಪ್ರವಾಸಕ್ಕೆ ಹೋಗುವಾಗ ಪ್ರವಾಸಿ ಏಜೇಂಟ್ ಗಳ ಸಲಹೆ ಪಡೆದೇ ಹೋಗಿರುತ್ತೀರಿ. ಅವರು ಪ್ರಶಸ್ತವಾದ, ಅನುಕೂಲಕರವಾದ ವಾತಾವರಣ ಇದ್ದಾಗ ಮಾತ್ರ ಹೋಗಲು ಸಲಹೆ ನೀಡುತ್ತಾರೆ. ಹಾಗಾಗಿ ನೀವು ಹೋಗುವಾಗ ಆ ಪ್ರದೇಶಗಳು ಹಿತಕರವಾಗಿಯೇ ಇರುತ್ತವೆ. ನಿಮಗೆ ವಾತಾವರಣದ ವೈಪರೀತ್ಯಗಳ ಬಗ್ಗೆ ಅರಿವು ಉಂಟಾಗುವುದಿಲ್ಲ. ಉತ್ತರ ಭಾರತದಲ್ಲಿ ತೀರಾ ಶೀತ, ಕೆಲವೊಮ್ಮೆ ಮನುಷ್ಯ ಮರಗಟ್ಟಿ ಹೋಗುವ ಸಂದರ್ಭಗಳೂ ಬರುತ್ತವೆ. ಹಾಗಾಗಿ ಆಚ್ಚಾದನೆ ಬಹಳ ಅಗತ್ಯ. ಯಾವುದೇ ಒಂದು ಪೂಜೆ ಮಾಡಬೇಕಾದರೆ ಮೊದಲಿಗೆ ಬೇಕಾದ್ದು ಮನಸ್ಸಿಗೆ ಹಿತ, ದೇಹಕ್ಕೆ ಹಿತ. ಅದಿಲ್ಲದೆ ಪೂಜೆ ಮಾಡುವುದು ಸಾಧ್ಯವಿಲ್ಲ. ಉದಾಹರಣೆಗೆ ಮಂಗಳಾರತಿ ಎತ್ತುವಾಗ ಮೈ ತುರಿಕೆ ಉಂಟಾದರೆ ಗಂಟೆಯನ್ನು ಬಿಟ್ಟು ಮೈ ತುರಿಸಿಕೊಳ್ಳುತ್ತೇವೆ. ಏಕೆಂದರೆ ಅಲ್ಲಿ ಮೈಗೆ ಹಿತವಾಗಲಿಲ್ಲ. ಮೈಗೆ, ಮನಸ್ಸಿಗೆ ಹಿತವಾಗುವಾಗ ಮಾತ್ರ ಶ್ರದ್ಧೆ ಮೂಡಲಿಕ್ಕೆ ಸಾಧ್ಯ. ಹಾಗಾಗಿ ಉತ್ತರ ಭಾರತದಲ್ಲಿ ಆಚ್ಚಾದನೆ ಇದ್ದರೆ ಚಳಿಯ ಭಾಧೆಯ ಸಮಸ್ಯೆಯಾಗುವುದಿಲ್ಲ. ಹಾಗಾಗಿ ಅವನಿಗೆ ಮೈಗೆ ಹಿತವಾಗುತ್ತದೆ. ಹಾಗೆಯೆ ಮನಸ್ಸಿಗೂ ಹಿತವಾಗಿರುತ್ತದೆ. ಹಾಗಾಗಿ ಬಟ್ಟೆ ಇದ್ದರೆ ಆಕ್ಷೇಪ ಇಲ್ಲ. ಅದೇ ಇಲ್ಲಿ ಸೆಖೆ ಇರುವಾಗ ಮೇಲಿನ ಬಟ್ಟೆ ಕಳಚಿ ಪೂಜೆ ಮಾಡಿದರೆ ದೇಹಕ್ಕೆ ಹಿತವೆನ್ನಿಸುತ್ತದೆ. ಹಾಗಾಗಿ ಇಲ್ಲಿನ ವಾತಾವರಣದಿಂದಾಗಿ ಆಚ್ಚಾದನೆಯಿಂದ ಮೈ ಬೆವರುತ್ತದೆ. ಆ ಬೆವರು ದುರ್ಗಂಧಯುಕ್ತವಾಗಿರಬಹುದು. ಇತರರಿಗೂ ಹಿಂಸೆಯಾಗುತ್ತದೆ. ಅವನಿಗೂ ಹಿಂಸೆಯಾಗುತ್ತದೆ. ಹಾಗಾಗಿ ಒಂದು ಸಾರಿ ಚೆನ್ನಾಗಿ ಸ್ನಾನ ಮಾಡಿಕೊಂಡು ಪೂಜೆಗೆ ಹೊರಡುತ್ತಾರೆ. ಇಲ್ಲಿ ಸ್ನಾನವು ಮುಖ್ಯ, ಆದರೆ ಉತ್ತರ ಭಾರತದಲ್ಲಿ ಹಲವು ಪೂಜೆಗಳಲ್ಲಿ ಸ್ನಾನವೇ ಮಾಡುವುದಿಲ್ಲ. ಬಂದ ಕೂಡಲೇ ಪೂಜೆ ಮಾಡಿಸುತ್ತಾರೆ. ಸ್ನಾನ ಮಾಡಿದ್ದೀಯಾ ಎಂದು ಕೇಳ್ಳುವುದೇ ಇಲ್ಲ. ಆದರೆ ಇಲ್ಲಿ ಮೈಗೆ ಹಿತವಾಗಲಿ ಎಂದು ಮೊದಲು ಸ್ನಾನ ಮಾಡಿಕೊಂಡು ಬಾ ಎನ್ನುತ್ತಾರೆ. ಮನಸ್ಸಿಗೆ ಪ್ರಫುಲ್ಲತೆ, ಆಹ್ಲಾದತೆ ಬರುತ್ತದೆ. ಆಗ ಪೂಜೆಯಲ್ಲಿ ಶ್ರದ್ಧೆ ಬರುತ್ತದೆ ಎಂದರ್ಥ. ಈ ಬಟ್ಟೆಗಳ ವಿಷಯ ತಂತ್ರದ ನಿರ್ಬಂಧವಲ್ಲ.

ಪ್ರಶ್ನೆ: ಕೋಪ ತಾಪಗಳ ನಿಯಂತ್ರಣ ಹೇಗೆ ಸಾಧ್ಯ? ಸ್ವಾಮೀಜಿ: ಏನೇನೋ ಮಾಡುತ್ತೇನೆ ಎಂದು ಬಹಳ ಎತ್ತರಕ್ಕೆ ಏರಿದ ಸಾಧು-ಸಂತರಿಗೇ ಆಗಲಿಲ್ಲ. ಅವರೇ ಅದನ್ನು ಬಹಳ ಕಷ್ಟ ಎಂದು ಹೇಳಿಬಿಟ್ಟಿದ್ದಾರೆ. ಕೋಪವೆಂಬುದ ತಿಳಿ ಪಾಪದ ನೆಲೆಗಟ್ಟು ಎಂದರು. ಅಷ್ಟು ಬಿಟ್ಟರೆ ಅದಕ್ಕೆ ಪರಿಹಾರ ಏನು ಎಂದು ಹೇಳಲೇ ಇಲ್ಲ. ಕೋಪ ಕಡಿಮೆ ಮಾಡಿಕೊಳ್ಳಬಹುದು ಆದರೆ ಹೇಗೆ ಎಂದು ಹೇಳಲೇ ಇಲ್ಲ. ಯಾವಾಗ ಅಸಹನೆಗೆ ಕಾರಣವಾಗುವ ಪರಿಸರ ಇರುತ್ತದೆ, ಅದು ಸಹಜವಾಗಿ ಕೋಪವನ್ನು ಉತ್ತೇಜಿಸುತ್ತದೆ. ನಮ್ಮ ಪೂರ್ವಿಕರು ಅದಕ್ಕೆ ಬೇಕಾದಷ್ಟು ಸಂಶೋಧನೆಗಳನ್ನು ಮಾಡಿ ಕೆಲವು ಸಾತ್ವಿಕ ಆಹಾರಗಳನ್ನು ತಿಳಿಸಿದರು. ಅಲ್ಲಿಯೂ ಕೂಡ, ಅವು ನರಗಳನ್ನು ಪ್ರಚೋದಿಸುವುದಿಲ್ಲ. ಆದ ಕಾರಣದಿಂದ ಕೋಪ ಬರುವುದಿಲ್ಲ ಎಂದರು. ಹಾಗಾಗಿ ಸಾತ್ವಿಕ ಆಹಾರಗಳಿಗೆ ಬಲು ಪ್ರಾಮುಖ್ಯತೆಯನ್ನು ಕೊಟ್ಟರು. ಸಾತ್ವಿಕ ಕಾಲಗಳನ್ನು ಹೇಳಿದರು. ಬೆಳಿಗ್ಗೆ ಬೇಗ ಪೂಜೆಗಳನ್ನು ಮಾಡುವಂತಹದ್ದು ಅಥವಾ ಸೂರ್ಯ ಮುಳುಗಿದ ಪ್ರಥಮ ಮುಹೂರ್ತ ಕಾಲದಲ್ಲಿ, ಅಂದರೆ ಗೋಧೂಳಿಯಲ್ಲಿ ಪೂಜೆ ಮಾಡುವಂತಹದ್ದು. ಆಗಲೂ ಕೂಡ ಸಾತ್ವಿಕತೆ ಇರುತ್ತದೆ ಎನ್ನುವ ಅರ್ಥದಲ್ಲಿ. ಯಾವುದೇ ಪೂಜಾ ಕೈಂಕರ್ಯಗಳನ್ನು ಮಾಡುವಾಗ ಸಿಟ್ಟು ಖಂಡಿತ ಬರಬಾರದು. ಆದರೆ ಸ್ವಭಾವ ಸಹಜವಾಗಿ ಸಿಟ್ಟು ಬಂದುಬಿಡುತ್ತದೆ. ಇದಕ್ಕೆ ಕಾರಣ ಮನಸ್ಸಿಗೆ ಅಗತಕ್ಕ ಕಿರಿಕಿರಿ. ಅದನ್ನು ಸರಿಪಡಿಸಲು ಬೇಕಾದ ವ್ಯವಸ್ಥೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ನಮ್ಮಲ್ಲಿ ಕರ್ಮ ಸಮುಚ್ಚಯದಲ್ಲಿ ಪೂರ್ವ ಸಿದ್ಧತೆಯ ಬಗ್ಗೆ ಬಹಳ ವಿಸ್ತಾರವಾಗಿ ಹೇಳುತ್ತದೆ. ಏಕೆಂದರೆ ಎಲ್ಲ ಸಿದ್ಧವಾಗಿದ್ದರೆ ಅಲ್ಲಿ ಅಲಾಪದ ಚಿಂತನೆ ಬರುವುದಿಲ್ಲ. ಹಾಗಾಗಿ ಸಿಟ್ಟು ಬರುವುದಿಲ್ಲ ಎಂದು. ಎಷ್ಟು ಹೂ ಬೇಕು, ಎಷ್ಟು ಗಂಧ ಬೇಕು ಇತ್ಯಾದಿ ಎಲ್ಲವನ್ನೂ ಪೂರ್ವದಲ್ಲೇ ಸಿದ್ಧಮಾಡಿಟ್ಟುಕೊಂಡು ಪೂಜೆಗೆ ಕೂರಬೇಕು ಎಂದು ಹೇಳುತ್ತದೆ. ಈ ಹಿನ್ನಲೆಯಲ್ಲಿ ಒಂದು ವಸ್ತು ಇಲ್ಲ ಎಂದಾಗ ಸಹಜವಾಗಿ ಖೇದವಾಗುತ್ತದೆ, ಅದನ್ನು ತಂದು ಕೊಡಬೇಕಾದವನು ತಂದು ಕೊಡಲಿಲ್ಲ ಎನ್ನುವ ಭಾವ ಹುಟ್ಟುತ್ತದೆ. ಅದರಿಂದಾಗಿ ಸಿಟ್ಟು ಬರಲು ಸಾಧ್ಯವಾಗುತ್ತದೆ. ಒಟ್ಟಾರೆ ಇವೆಲ್ಲ ಸಾಧ್ಯವಾದಷ್ಟು ಪೂರ್ವ ಸಿದ್ಧತೆಯಿಂದ, ಸಾಧನೆಯಿಂದ ಸಿಟ್ಟನ್ನು ಉಪಶಮನ ಮಾಡಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಅಷ್ಟು ಬಿಟ್ಟರೆ ಸಿಟ್ಟನ್ನು ಗೆಲ್ಲುವುದಕ್ಕೆ ಮದ್ದು ಇಲ್ಲ. ಯಾವುದೇ ಔಷಧದಿಂದ ಸಿಟ್ಟನ್ನು ಗೆಲ್ಲಲಿಕ್ಕೆ ಸಾಧ್ಯವಿಲ್ಲ ಅಥವಾ ಒಂದು ಸರಳವಾದ ಸೂತ್ರ ಎಂಬುವುದಿಲ್ಲ. ಶ್ರಮದಿಂದ ಷಡ್ ವೈರಿಗಳನ್ನು ಜಯಿಸಿಕೊಳ್ಳಬೇಕು. ದೇವರನ್ನು ಕಾಣಬೇಕು ಎಂದು ಹೇಳುತ್ತದೆ. ಷಡ್ ವೈರಿಗಳನ್ನು ಜಯಿಸಿದರೆ ದೇವರನ್ನು ಸುಲಭವಾಗಿ ಕಾಣಬಹುದು. ಆದರೆ ಷಡ್ ವೈರಿಗಳನ್ನು ಜಯಿಸುವುದು ಮಾತ್ರ ಬಲು ಕಷ್ಟ.

ಪ್ರಶ್ನೆ: ಏಕಾಗ್ರತೆಯನ್ನು ಹೊಂದಲು ಏನಾದರೂ ಉಪಾಯ ಇದೆಯೇ? ಸ್ವಾಮೀಜಿ: ಏಕಾಗ್ರತೆಯನ್ನು ಸಾಧನೆ ಮಾಡುವಂತಹ ಬೇರೆ ಬೇರೆ ವಿಧಾನಗಳನ್ನು, ಧ್ಯಾನ ಇತ್ಯಾದಿ ಪ್ರಕ್ರಿಯೆಗಳನ್ನೆಲ್ಲ ಏಕಾಗ್ರತೆ ಸಾಧಿಸುವ ವಿಧಾನದಲ್ಲಿ ಹೇಳಿಕೊಂಡು ಹೋಗುತ್ತದೆ. ಹಾಗೆಯೆ ಮನನವು ಕೂಡ ಏಕಾಗ್ರತೆಯನ್ನು ಕೊಡುತ್ತದೆ ಎಂದು ಹೇಳುತ್ತದೆ. ನಾನು ಕಂಡಂತೆ ಮನನವು ಬಹಳ ಸುಲಭವಾಗಿ ಏಕಾಗ್ರತೆಯನ್ನು ತಂದು ಕೊಡುತ್ತದೆ. ನೀವೊಂದು ಭಜನೆಯನ್ನು ಮೊದಲು ಓದಿ ಬಾಯಿಪಾಠ ಮಾಡಿಕೊಳ್ಳಿ. ಅದನ್ನು ಅಕ್ಷರ ಅಕ್ಷರವಾಗಿ ಬಿಡಿಸಿ ಹೇಳಿಕೊಳ್ಳುವಷ್ಟು ಬಾಯಿಪಾಠ ಮಾಡಿಕೊಳ್ಳಬೇಕು. ನಂತರ ಅದನ್ನು ಬಾಯಿಯಲ್ಲಿ ಹೇಳಬಾರದು. ಮನಸ್ಸಿನಲ್ಲಿ ಆ ಭಜನೆಯನ್ನು ಕಲ್ಪಿಸಿಕೊಳ್ಳುತ್ತಾ ಹೋಗಬೇಕು. ಆಗ ಏಕಾಗ್ರತೆ ಸಿಗುತ್ತದೆ. ಏಕೆಂದರೆ ಮನಸ್ಸಿಗೆ ಬೇರೆ ಕಡೆ ಹೋಗಲಿಕ್ಕೆ ಆಗುವುದಿಲ್ಲ. ಆಲೋಚನೆ ಮಾಡಿ ನೋಡಿ. ತುಂಬಾ ಸರಳವಾಗಿ ಮನನದಿಂದ ಸಾಧ್ಯ ಎನ್ನುವುದನ್ನು ಹಲವು ಕಡೆ ಪ್ರಯೋಗ ಮಾಡಿ ಕೂಡ ನೋಡಿದ್ದೇನೆ. ಯಾವುದೇ ಒಂದು ವಿಚಾರವನ್ನು ನೀವು ಸ್ಪಷ್ಟವಾಗಿ ಹೇಳುವಷ್ಟು ಕಳಿತಿಕೊಳ್ಳಬೇಕು. ನಂತರ ಅದನ್ನು ಬಾಯಿಯಲ್ಲಿ ಉಚ್ಚರಿಸದೆ ಮನಸ್ಸಿನಲ್ಲೇ ಹೇಳುವ ಅಭ್ಯಾಸವನ್ನು ಮಾಡಿದರೆ ಆಗ ಮಾತ್ರ ಮನಸ್ಸನ್ನು ಕೇಂದ್ರೀಕರಿಸಲು ಆಗುತ್ತದೆ. ಇಡೀ ಬಾಹ್ಯ ಪ್ರಪಂಚದ ಎಲ್ಲ ಶಬ್ದ ವಿಕಾರಗಳನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ಬೇರೆ ಯಾವುದರಿಂದ ಸಾಧ್ಯವಾಗದ್ದೂ ಇದರಿಂದ ಸಾಧ್ಯವಿದೆ. ಪ್ರಯತ್ನಿಸಿ ನೋಡಿ.

ಪ್ರಶ್ನೆ: ಪ್ರತಿದಿನ ದೇವರ ಧ್ಯಾನ ಮಾಡುವುದು ಉತ್ತಮವೇ? ಅಥವಾ ಕ್ಷೇತ್ರಗಳಿಗೆ ಹೋಗುವುದು ಉತ್ತಮವೇ? ಸ್ವಾಮೀಜಿ: ನಾವು ನೆಲೆಸಿದ ಊರು ಕ್ಷೇತ್ರ ಎಂದು ಅರ್ಥವಲ್ಲ. ಅದು ಕ್ಷೇತ್ರವೇ ಆಗಿದ್ದರೂ ಆ ಊರಿನಲ್ಲಿರುವ ದೇವಸ್ಥಾನಕ್ಕೆ ಹೋಗುವುದು ನಮ್ಮ ಕರ್ತವ್ಯ. ಅದು ಕ್ಷೇತ್ರ ಯಾತ್ರೆ ಆಗುವುದಿಲ್ಲ. ಹಾಗೆಯೆ ನೀವು ನಿಮ್ಮ ಮನೆಯಲ್ಲಿ ಮಾಡುವ ಪೂಜೆಯು ಕೂಡ ನಿಮ್ಮ ಕರ್ತವ್ಯ. ಅದು ಫಲದಾಯಕವಲ್ಲ. ಅಷ್ಟು ಮಾತ್ರವಲ್ಲ. ಹಿಂದೆಲ್ಲ ಗೋಮಾಳಗಳಿದ್ದವು. ಅಲ್ಲಿಗೆ ಹೋಗುವುದು ಕೂಡ ಕರ್ತವ್ಯವಾಗಿತ್ತು. ಹಿಂದೆ ಅಗ್ರಹಾರಗಳಿದ್ದವು. ಉಪಾಸನೆಗಳನ್ನು ನಿರಂತರವಾಗಿ ಮಾಡುವ ಬ್ರಾಹ್ಮಣರಿದ್ದರು. ಬ್ರಹ್ಮ ವೃತ್ತಿಯನ್ನೇ ಅನುಸರಣೆ ಮಾಡುವ, ಉಪಾಸನೆಗಳನ್ನು ಮಾಡುವ ಜನರನ್ನು ಪ್ರತ್ಯೇಕವಾಗಿ ಇಡುತ್ತಿದ್ದರು. ಅದನ್ನು ಅಗ್ರಹಾರ ಎನ್ನುತ್ತಿದ್ದರು. ಅಲ್ಲಿಗೂ ಹೋಗಬೇಕಿತ್ತು. ಅದು ಸಾರ್ವಜನಿಕರ ಕರ್ತವ್ಯವಾಗಿತ್ತು. ಅಲ್ಲೆಲ್ಲ ಒಂದೊಂದು ರೀತಿಯ ಕರ್ತವ್ಯಗಳನ್ನು ಹೇಳಿದ್ದಾರೆ. ಅಗ್ರಹಾರಕ್ಕೆ ಹೋದರೆ ಅಲ್ಲಿನ ಉಪಾಸನೆಗೆ ಬೇಕಾದ ವಸ್ತುಗಳ ಅಗತ್ಯ ಇದೆಯೇ, ಏನಾದರೂ ಸಾಮಗ್ರಿಗಳು ಬೇಕೇ ಎಂದು ಕೇಳಿ ಪೂರೈಸುವುದು ಸಮಾಜದ ಜವಾಬ್ದಾರಿಯಾಗಿತ್ತು. ಹಾಗೆಯೆ ಮನೆ ದೇವರ ಪೂಜೆ ಮಾಡುವುದು ಮನೆಯಲ್ಲಿ ಎಲ್ಲರಿಗೆ ರಕ್ಷಣೆ ಕೊಡುವ ಯಜಮಾನನಿಗೆ ರಕ್ಷಣೆ ಬೇಡುವುದಕ್ಕಾಗಿ. ಆತ ದೇವರನ್ನೇ ಕೇಳಬೇಕು, ಆತನಿಗೆ ಆಪತ್ತು ಬಂದಾಗ ಕೇಳಲಿಕ್ಕೆ ಯಾರೂ ಇಲ್ಲ. ಹೆಂಡತಿ, ಮಕ್ಕಳು, ಆಶ್ರಿತರೆಲ್ಲರೂ ಸಮಸ್ಯೆ ಬಂದಾಗ ಯಜಮಾನನನ್ನು ಕೇಳಬಹುದು. ಆದರೆ ಯಜಮಾನನಿಗೆ ಸಮಸ್ಯೆ ಬಂದಾಗ ಅವನು ದೇವರನ್ನೇ ಕೇಳಬೇಕಾಗುತ್ತದೆ. ಹಾಗಾಗಿ ದೇವರ ಪೂಜೆ ತನ್ನ ವಯಕ್ತಿಕ ಅಗತ್ಯಕ್ಕಾಗಿ ಬೇಕು. ಹಾಗೆಯೇ ಗ್ರಾಮ ದೇವರ ಪೂಜೆ. ಇಡೀ ಗ್ರಾಮದಲ್ಲಿ ಅಗತಕ್ಕ ಯಾವುದೇ ಉತ್ಪಾತವೂ ಗ್ರಾಮದ ಸದಸ್ಯನಾಗಿ ಆತನಿಗೂ ತಟ್ಟಬಹುದು. ನೆರೆ, ಜ್ವಾಲಾಮುಖಿ ಇತ್ಯಾದಿಗಳು ಅವನಿಗೂ ಭಾಧಕವಾಗಬಹುದು. ಅದನ್ನು ತಡೆಯಲಿಕ್ಕೆ ಇರುವಂತಹವು ಗ್ರಾಮ ದೇವಸ್ಥಾನಗಳು. ಹಾಗಾಗಿ ಪ್ರತಿಯೊಬ್ಬ ಸಾರ್ವಜನಿಕನೂ ನಿತ್ಯವೂ ಹೋಗಿ ಆ ರೀತಿ ಉತ್ಪಾತಗಳು ಆಗದಂತೆ ಬೇಡಿಕೊಳ್ಳುವುದೇ ಯಾವುದೇ ದೇವಸ್ಥಾನದ ನಿರ್ಮಾಣದ ಉದ್ದೇಶವಾಗಿದೆ. ಅಲ್ಲಿ ವಯಕ್ತಿಕ ಲಾಭದ ಉದ್ದೇಶ ಇಲ್ಲ. ಅಲ್ಲಿ ಎಲ್ಲರ ಕ್ಷೇಮವನ್ನು ಬಯಸಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಎಲ್ಲರೂ ಎನ್ನುವಾಗ ನಾನೂ ಇರುತ್ತೇನೆ ಎಂದು ಅರ್ಥ. ಲೋಕಾ ಸಮಸ್ತಾ ಸುಖಿನೋ ಭವಂತು ಎಂದಾಗ ನನ್ನನ್ನು ಬಿಟ್ಟು ಎಂದು ಹೇಳಿರುವುದಿಲ್ಲ. ನಾನೂ ಲೋಕದಲ್ಲಿ ಇರುವುದರಿಂದ ನನಗೂ ಕ್ಷೇಮ ಆಗುತ್ತದೆ ಎಂದು ಅರ್ಥ. ಹಾಗೆಯೇ ಸಮೃದ್ಧಿಯ ಸಂಕೇತವಾದ ಗೋಮಾಳ. ಅಲ್ಲಿಗೂ ಕೂಡ ದಿವಸವೂ ಭೇಟಿ ಕೊಡಬೇಕು ಎಂದು ಹೇಳಲಾಗಿದೆ. ಎಷ್ಟೇ ಮುಂದುವರಿದ ಜ್ಞಾನ, ತಿಳುವಳಿಕೆ ಇದ್ದರೂ ಪ್ರಕೃತಿಯಲ್ಲಾಗುವ ಕೆಲವು ಏರು ಪೇರುಗಳು, ಆಹಾರ ಇತ್ಯಾದಿ ಸಹಜವಾಗಿ ಸಿದ್ಧಿಯಾಗಬೇಕಾದ ವಸ್ತುಗಳ ಕೊರತೆ ಉಂಟಾಗುವುದು, ಮೊದಲು ಕಂಡು ಬರುವುದು ಗೋಮಾಳದಲ್ಲಿ. ಯಾರು ಗೋವನ್ನು ದಿನವೂ ನೋಡುತ್ತಾನೋ ಅವನಿಗೆ ಇನ್ನು ಆರು ವರ್ಷಗಳ ನಂತರ ಬರಬಹುದಾದ ಬರದ ಸೂಚನೆ ಮೊದಲೇ ಗೊತ್ತಾಗಿರುತ್ತದೆ. ತಿನ್ನಲಿಕ್ಕೆ ಅನ್ನ ಸಿಗಲಿಕ್ಕೆ ಇಲ್ಲ ಎಂದು ಮೊದಲೇ ಗೊತ್ತಾಗುತ್ತದೆ. ಅಷ್ಟು ಮಟ್ಟಿಗೆ ಗೋಮಾಳ ಪ್ರದೇಶ ಜ್ಞಾನವನ್ನು ಕೊಡುತ್ತದೆ. ಅದಕ್ಕೆ ಗ್ರಾಮಸ್ಥರು ಪ್ರತಿನಿತ್ಯ ಗೋಮಾಳಕ್ಕೆ ಭೇಟಿ ಕೊಡಬೇಕೆಂದಿತ್ತು. ಮುಂದೆ ಈ ಪದ್ಧತಿ ಬೇರೆ ಬೇರೆ ಆಚರಣೆಗಳಲ್ಲಿ ಕಂಡು ಬಂತು. ಕೊನೆಗೆ ಬೆಳಗೆದ್ದು ಶೌಚಕ್ಕೆ ಗೋಮಾಳಕ್ಕೆ ಹೋಗುವುದು ಎಂದಾಯಿತು. ಹಿಂದೆ ತಾಮ್ರದ ಪಾತ್ರೆಯನ್ನು ಹಿಡಿದುಕೊಂಡು ದೂರ ಗೋಮಾಳ ಪ್ರದೇಶಕ್ಕೆ ಶೌಚಕ್ಕಾಗಿ ಹೋಗುತ್ತಿದ್ದರು. ಈ ದೃಷ್ಟಿಯಿಂದಲಾದರೂ ಜನ ಒಮ್ಮೆ ಗೋಮಾಳಕ್ಕೆ ಹೋಗಿ ಬರಲಿ ಎಂಬುದು ಕಾರಣವಾಗಿತ್ತು. ಈಗ ಶೌಚಾಲಯ ಮನೆಯಲ್ಲೇ ಇದೆ. ಆದ್ದರಿಂದ ಗೋಮಾಳಕ್ಕೆ ಹೋಗುವ ಪದ್ಧತಿ ಇಲ್ಲ. ಇಂತಹ ಜ್ಞಾನಾರ್ಜನೆಯನ್ನು ಬಿಟ್ಟದ್ದು ನಾವು ಮಾಡಿಕೊಂಡ ನಷ್ಟವೇ ಆಗಿದೆ. ಈಗಿನ ಕಾಲದಲ್ಲಿ ಗೋಮಾಳ ವ್ಯವಸ್ಥೆ ಇಲ್ಲ. ಎಲ್ಲಾ ದೊಡ್ಡ ಬಿಲ್ದರ್ ಗಳ ಪಾಲಾಗಿದೆ. ಸಾಧ್ಯವಾದರೆ ನಿಮ್ಮ ಸುತ್ತ ಮುತ್ತ ಯಾರಾದರೂ ದನ ಸಾಕುವವರಿದ್ದಾರೆ ದಿನವೂ ಒಂದು ಸಾರಿ ದನದ ಮುಖ ನೋಡಿ ಬಂದರೆ ಖಂಡಿತವಾಗಿಯೂ ಯಾವುದಾದರೊಂದು ಸಂದರ್ಭದಲ್ಲಿ ಅದು ರಕ್ಷಣೆ ಕೊಟ್ಟು ಬಿಡುತ್ತದೆ. ಆಪತ್ತಿನಿಂದ ಕಾಯುತ್ತದೆ. ಆದ್ದರಿಂದ ನಾಲ್ಕೂ ಸತ್ಸಂಪ್ರದಾಯಗಳನ್ನು ಪಾಲಿಸಬೇಕು. ಜೊತೆಗೆ ಮನೆಗೆ ಬಂದ ಮೇಲೆ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ ಅವರ ಅಗತ್ಯತೆಗಳನ್ನು ವಿಚಾರಿಸಿ, ಅವರಿಗೆ ನಮಸ್ಕರಿಸಿ ತನ್ನ ಕಾರ್ಯದಲ್ಲಿ ತೊಡಗಬೇಕು. ಇದೂ ಕೂಡ ಸದಾಚಾರಗಳಲ್ಲಿ ಸೇರುತ್ತವೆ. ಇದನ್ನು ಸೇರಿಸಿ ಪಂಚಾಚಾರಗಳು ಎನ್ನುತ್ತಾರೆ. ಪಂಚಾಚಾರಗಳಿಗೆ ತುಂಬಾ ಮಹತ್ವವನ್ನು ನೀಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅದನ್ನು ಬಿಡಬೇಡಿ. ಸಾಧ್ಯವಾದಷ್ಟು ಪಾಲಿಸಿ.

ಪ್ರಶ್ನೆ: ಹೆಣ್ಣುಮಕ್ಕಳು ಶನಿವಾರ ಮತ್ತು ಸೋಮವಾರ ತಲೆಗೆ ಸ್ನಾನ ಮಾಡಬಾರದು ಹಾಗೇ ವರದ ಕೆಲವು ದಿನ ತಲೆಗೆ ಎಣ್ಣೆ ಹಾಕಬಾರದು ಎಂದು ಹೇಳುತ್ತಾರಲ್ಲ, ಏಕೆ? ಸ್ವಾಮೀಜಿ: ನಿತ್ಯವೂ ತಲೆಗೆ ಸ್ನಾನ ಹೆಣ್ಣಿಗೆ ಮಾತ್ರವಲ್ಲ ಯಾರಿಗೂ ಸೂಕ್ತವಲ್ಲ. ಕೆಲವರಿಗೆ ನಿತ್ಯ ತಲೆ ಸ್ನಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅವರು ಪ್ರಮಾಣ ಬದ್ಧವಾದ ಶಿಖೆಯನ್ನು ಬಿಟ್ಟುಕೊಂಡಿರಬೇಕು ಅಥವಾ ಆ ತಲೆಸ್ನಾನದಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಬಹುದಾದ ಕೆಲವೊಂದಿಷ್ಟು ಜಪ ಅಥವಾ ಚಿಕಿತ್ಸಾ ಪ್ರಕ್ರಿಯೆಗಳನ್ನು ತಿಳಿದುಕೊಂಡು ಬಳಸಬೇಕು. ಇಲ್ಲದಿದ್ದರೆ ನಿತ್ಯ ತಲೆ ಸ್ನಾನ ಯಾರಿಗೂ ಒಳ್ಳೆಯದಲ್ಲ. ವಾರದಲ್ಲಿ ಮೂರು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ಹೆಚ್ಚಿಗೆ ಮಾಡಬಾರದು. ಅಲ್ಲದೆ ಅತಿಯಾದ ಬಿಸಿ ನೀರಿನಿಂದಲೂ ತಲೆ ಸ್ನಾನ ಮಾಡಬಾರದು. ಮೈಗೆ ಬೇಕಾದರೆ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ಆದರೆ ತಲೆಗೆ ಮಾತ್ರ ಬೇಕಿದ್ದರೆ ವಾತಾವರಣದ ಉಷ್ಣತೆಗಿಂತ ಸ್ವಲ್ಪ ಬಿಸಿಯಾಗಿರುವ ನೀರನ್ನು ಬಳಸಬಹುದು. ಅದಕ್ಕಿಂತ ಹೆಚ್ಚಿನ ಬಿಸಿನೀರಿನ ಬಳಕೆ ಸಲ್ಲದು. ಈಗ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಮಾರ್ಜಕಗಳನ್ನು ತಲೆಗೆ ಬಳಸಬೇಡಿ. ಉಜ್ಜಿದರೆ ಲೋಳೆ ಬರುವಂತಹ ಸಾಕಷ್ಟು ಸಸ್ಯಗಳು ನಿಮ್ಮ ಸುತ್ತಮುತ್ತಲು ಬೆಳೆಯುತ್ತವೆ. ಅವನ್ನು ತೆಗೆದುಕೊಂಡು ಲೋಳೆ ಮಾಡಿ ತಲೆಗೆ ಹಾಕಿ ಸ್ವಲ್ಪ ಹೊತ್ತು ಕೈಯ್ಯಲ್ಲಿ ಉಜ್ಜಿ್ದರೆ ನಿಮ್ಮ ತಲೆ ಸಂಪೂರ್ಣವಾಗಿ ಶುದ್ಧವಾಗುತ್ತದೆ. ವಿದ್ಯುತ್ ಕಾಂತೀಯ ತರಂಗಗಳು ಹುಟ್ಟುವುದೇ ಇಲ್ಲ. ಬ್ರೈನ್ ಹೆಮರೇಜ್ ಎನ್ನುವ ಕಾಯಿಲೆಯೇ ಇರುವುದಿಲ್ಲ. ಈಗ ಮೆದುಳಿನಲ್ಲಿ ರಕ್ತಸ್ರಾವವಾಗುವ ಖಾಯಿಲೆ ಎಲ್ಲೆಡೆ ಹರಡುತ್ತಿದೆ. ಅದಕ್ಕೆ ರಕ್ಷಣೆ ತೆಗೆದುಕೊಳ್ಳಬೇಕಿದ್ದರೆ ಶಾಂಪೂ ಇತ್ಯಾದಿಗಳ ಬಳಕೆ ಬಿಡಿ. ಒಳ್ಳೆಯ ಸೀಗೆ ಪುಡಿ ಬಳಸುತ್ತೇನೆ ಎಂದೂ ಹೋಗಬೇಡಿ. ಸೀಗೆ ಪುಡಿಯೂ ಬೇಡ. ಏಕೆಂದರೆ ಈಗಿನ ಕಾಲದಲ್ಲಿ ತಲೆಗೆ ಮಾರ್ಜಕದ ಅಗತ್ಯ ಇಲ್ಲ. ಹೆಚ್ಚೆಂದರೆ ಲೋಳೆ. ದಾಸವಾಳದ ಸೊಪ್ಪನ್ನು ಪುಡಿ ಮಾಡಿ ಹಿಚುಕಿದರೆ ಲೋಳೆಯಾಗುತ್ತದೆ. ಅದನ್ನು ನೀರಿಗೆ ಹಾಕಿ ಅರ್ಧ ಗಂಟೆ ಬಿಟ್ಟು ತಲೆಯನ್ನು ತೊಳೆಯಬೇಕು. ಹೀಗೆ ಕೆಲವು ಬಾರಿ ಮಾಡಿದರೆ ತಲೆ ಹೊಟ್ಟು ಎನ್ನುವುದು ಅವನಿಗೆ ಜೀವಮಾನದಲ್ಲಿ ಬರುವುದಿಲ್ಲ. ತಲೆ ಹೊಟ್ಟು ಬರುವುದೇ ಮಾರ್ಜಕದ (ಶಾಂಪೂ) ಕಾರಣದಿಂದ. ಅದು ಚರ್ಮವನ್ನು ಸುಡುತ್ತದೆ. ಸುಡುವುದರಿಂದ ಹೊಟ್ಟಾಗಿ ಎದ್ದು ಬರುತ್ತದೆ. ಈ ತಲೆ ಹೊಟ್ಟಿನ ಖಾಯಿಲೆಗೆ ಶಾಂಪೂ ಬಳಸುವುದರಿಂದ ಅದು ಹೆಚ್ಚಾಗುತ್ತದೆಯೇ ವಿನಃ ಕಮ್ಮಿ ಆಗುವುದಿಲ್ಲ. ಈ ಸ್ನಾನವನ್ನೇ ಪರಮಾವಧಿ ಎಂದರೆ ಮೂರು ಸಲ ಸ್ನಾನ ಮಾಡಿ. ಅದಕ್ಕಿಂತ ಹೆಚ್ಚು ಬೇಡ. ಈಗಿನ ಕಾಲದಲ್ಲಿ ನಾವು ಮೆದುಳಿಗೆ ಹೆಚ್ಚಿನ ಕೆಲಸ ಕೊಡುತ್ತಾ ಇಲ್ಲ. ಬಹಳ ಕಡಿಮೆ ಕೆಲಸ ಕೊಡುತ್ತಾ ಇದ್ದೇವೆ. ಹಿಂದೆಲ್ಲ ಮೆದುಳಿಗೆ ತುಂಬಾ ಕೆಲಸ ಇತ್ತು. ಹಾಗಾಗಿ ತಲೆಯ ಭಾಗ ಒಂದಿಷ್ಟು ಶ್ರಮಭರಿತ ದುಡಿಮೆಯಿಂದ ಸಹಜವಾಗಿ ಶಕ್ತವಾಗಿರುತ್ತಿತ್ತು. ಈಗ ಮೆದುಳು ತೀರಾ ನಿಶ್ಯಕ್ತವಾಗುತ್ತಿದೆ. ಮೆದುಳಿನ ಎಲ್ಲಾ ನರಗಳೂ ಕ್ಷೀಣವಾಗುತ್ತಿವೆ. ನೀವು ಅತೀ ತಂಪಾದ ನೀರನ್ನು ತಲೆಗೆ ಹೊಯ್ದರೂ ಕೂಡ ಅಲ್ಲಿಯೇ ರಕ್ತಸ್ರಾವವಾಗಿ ಬಿಡಬಹುದು. ಅದೇ ಬಿಸಿಯಾಗಿದ್ದರೂ ಕೂಡ ಆಗಬಹುದು. ಅಲ್ಲದೆ ಎತ್ತರದಿಂದ ಬಿದ್ದರೂ ಕೂಡ ಅದೇ ಏಟಾಗಿ ರಕ್ತಸ್ರಾವವಾಗಿ ಬಿಡಬಹುದು. ಹೀಗೆ ಮೆದುಳಿನ ಒಳಗೆ ಉಂಟಾದ ರಕ್ತಸ್ರಾವವವು ಖಾಯಿಲೆಯಾಗಿ ಪರಿವರ್ತನೆ ಆಗಬಹುದು. ಆದ್ದರಿಂದ ವಾರಕ್ಕೆ ಮೂರು ಬಾರಿ ಸ್ನಾನ, ಲೋಳೆಯ ಬಳಕೆ ಮಾಡಿದರೆ ತಲೆ ಹೊಟ್ಟು ಬರುವುದಿಲ್ಲ, ಮೆದುಳಿನ ರಕ್ತಸ್ರಾವವಾಗುವುದಿಲ್ಲ, ತಲೆ ಕೂದಲು ಚೆನ್ನಾಗಿ ಬರುತ್ತದೆ. ಕೊಬ್ಬರಿ ಎಣ್ಣೆಯನ್ನೇ ತಲೆಗೆ ಹಾಕಿ. ಎಣ್ಣೆ ತೊಳೆದು ಹೋಗಬೇಕು ಎಂಬ ಕಲ್ಪನೆ ಬೇಡ. ಲೋಳೆಯು ಎಣ್ಣೆಯ ಜಿಡ್ಡಿನ ಅಂಶವನ್ನು ತೆಗೆಯುತ್ತದೆ. ಕೂದಲು ರೇಷ್ಮೆಯಷ್ಟು ಚೆನ್ನಾಗಿ ಇರುತ್ತದೆ. ಇವೆಲ್ಲದರಿಂದ ನಿಮ್ಮೆಲ್ಲರ ಆರೋಗ್ಯವನ್ನು ಕಾಪಾಡಿಕೊಂಡು ಬರಲಿಕ್ಕೆ ಸಾಧ್ಯ. ಇನ್ನು ಪುರುಷರ ಸ್ನಾನ. ಕೆಲವರಿಗೆ ಕೆಲವೊಂದಿಷ್ಟು ನಿರ್ಬಂಧಗಳಿರುತ್ತವೆ. ದೇವಸ್ಥಾನದ ಅರ್ಚಕ. ಅವನು ಅನಿವಾರ್ಯವಾಗಿ ಮೂರು ಹೊತ್ತೂ ತಲೆ ಸ್ನಾನ ಮಾಡಬೇಕು. ಅದು ಆಗಮೋಕ್ತ ಬದ್ಧತೆಯಲ್ಲಿದ್ದಾನೆ. ಕೆಲವರಿಗೆ ಕಡಿಮೆ ತಲೆಗೂದಲು ಹುಟ್ಟುವ ಲಕ್ಷಣಗಳಿದ್ದರೆ ಅವರಿಗೆ ಮೂರು ಹೊತ್ತೂ ತಲೆಸ್ನಾನ ಅಷ್ಟು ಬಾಧಕವಾಗುವುದಿಲ್ಲ. ತೀರಾ ನಿಬಿಡವಾಗಿ ಕೂದಲು ಹುಟ್ಟುವ ತಲೆಯಾದರೆ ಅವರು ಹಾಗೆಯೇ ಸ್ನಾನ ಮಾಡಲೇಬಾರದು. ನೆತ್ತಿಗೆ ಒಂದು ಚೂರು ಎಣ್ಣೆ ಹಚ್ಚಿ ನಂತರ ತಲೆಗೆ ನೀರು ಹೊಯ್ದುಕೊಳ್ಳಬೇಕು. ಆಗ ಎಣ್ಣೆ ಕೆಳಕ್ಕೆ ಇಳಿಯುತ್ತದೆ, ನೀರು ಹೊರಕ್ಕೆ ಇಳಿದು ಹೋಗುತ್ತದೆ. ಆಗ ಸಮಸ್ಯೆ ಆಗುವುದಿಲ್ಲ. ಇಲ್ಲದಿದ್ದರೆ ಸ್ವಲ್ಪ ದಿನಗಳಲ್ಲಿ ಅವನ ಬುದ್ಧಿ ಮತ್ತೆ ಕೆಡುತ್ತಾ ಬರುತ್ತದೆ. ತೀರಾ ಬುದ್ಧಿ ಕೆಟ್ಟವರಿಗೂ ಕೂಡ ಆಯುರ್ವೇದದಲ್ಲಿ ಜಲಚಿಕಿತ್ಸೆಯೇ ಇದೆ. ನೀರು ಮನಸ್ಸನ್ನು ಪರಿವರ್ತಿಸುತ್ತೆ ಅಥವಾ ಮನಸ್ಸಿನ ಮೇಲೆ ಪರಿಣಾಮ ಉಂಟುಮಾಡುತ್ತದೆ ಎನ್ನುವುದೇ ಇದಕ್ಕೆ ಕಾರಣ. ಇನ್ನು ಕಂಠದವರೆಗೆ ಸ್ನಾನ. ದಿನಕ್ಕೆ ೨೫ ಬಾರಿ ಮಾಡಿದರೂ ಏನೂ ದೋಷವಿಲ್ಲ. ವಾತಾವರಣ ಬದಲಾಗುವ ಕಾಲದಲ್ಲಿ (ಉದಾ: ಚಳಿಗಾಲದಿಂದ ಬೇಸಿಗೆ ಕಾಲ) ಅತಿ ಹೆಚ್ಚು ಕಂಠ ಸ್ನಾನ ಸಲ್ಲದು. ಆಗ ಕಟಿ ಸ್ನಾನ ಎನ್ನುತ್ತಾರೆ. ನಾಭಿಯವರೆಗೆ ಮಾತ್ರ ನೀರು ಹಾಕಿಕೊಂಡು ಸ್ನಾನ. ವಾತಾವರಣ ಬದಲಾಗುವ ಕಾಲದಲ್ಲಿ ನಮ್ಮ ದೇಹವು ಅದಕ್ಕೆ ಹೊಂದಿಕೊಳ್ಳಲು ಬೇಕಾದ ಕೆಲವು ಪ್ರಕ್ರಿಯೆಗಳನ್ನು ಮಾಡುತ್ತದೆ. ನೀವು ಅದರ ಜ್ಞಾನವನ್ನು ನಿರಂತರ (ದಿನಕ್ಕೆ ಮೂರ್ನಾಲ್ಕು ಬಾರಿ) ಮೈಮೇಲೆ ನೀರು ಹಾಕಿಕೊಂಡಾಗ ಅದು ವಾತಾವರಣವನ್ನು ಗ್ರಹಿಸುವ ಶಕ್ತಿ ಕಡಿಮೆ ಆಗುತ್ತದೆ. ಹಾಗಾಗಿ ಋತುಮಾನಗಳು ಬದಲಾಗುವ ಸಮಯದಲ್ಲಿ ಕಟಿ ಸ್ನಾನ ಮಾಡಬೇಕು. ಮನೆಯಲ್ಲಿ ಗೀಸರ್ ಹಾಕಿದೆ, ಎಷ್ಟು ಬೇಕಾದರೂ ಬಿಸಿನೀರು ಬರುತ್ತದೆ ಎಂದು ದಿನಕ್ಕೆ ಎರಡು ಮೂರು ಬಾರಿ ಸ್ನಾನ ಮಾಡಲೇಬೇಡಿ. ಕೆಲವೊಂದಿಷ್ಟು ಪ್ರಕ್ರಿಯೆಗಳಲ್ಲಿ ಕರ್ತವ್ಯಗಳಿರುತ್ತವೆ. ಕರ್ತವ್ಯ ಬದ್ಧತೆಗೆ ಆಧರಿಸಿದ್ದರೆ ಮಾತ್ರ ಹಲವು ಸ್ನಾನಗಳು. ಇಲ್ಲದಿದ್ದರೆ ದಿನಕ್ಕೆ ಒಂದೇ ಸ್ನಾನ ಸಾಕು. ಹೆಂಗಸರು ಕಂಠ ಸ್ನಾನ ಮಾಡಬೇಕು. ಮುಖಕ್ಕೆ ನೀರು ಹಾಕಿ ತೊಳೆದುಕೊಳ್ಳಬೇಕು. ಕಿವಿಯ ಹಾಲೆಗಳನ್ನು ಉಜ್ಜಿಕೊಳ್ಳಬೇಕು. ಯಾವುದೇ ಪೂಜೆಗೂ ಅವರು ಅನರ್ಹರಲ್ಲ. ಕರ್ಮ ಸಮುಚ್ಚಯಗಳಲ್ಲಿ ಸ್ತ್ರೀಯರಿಗೆ ವಿಶಿಷ್ಟ ಸ್ಥಾನಗಳನ್ನು ನೀಡಲಾಗಿದೆ. ಶ್ರಾದ್ಧದ ಸಮಯದಲ್ಲಿ ಪೂರ್ಣಾಧಿಕಾರಿಣಿ ಗೃಹಿಣಿ. ಅವಳು ತಲೆಗೆ ಸ್ನಾನ ಮಾಡಬೇಕು. ಕರ್ಮಾಂಗ ನಿರ್ದೇಶಾನುಸಾರ ಇಂತಹ ಸಂದರ್ಭಗಳಲ್ಲಿ ತಲೆಸ್ನಾನ ಮಾಡಲೇಬೇಕು. ಅರ್ಚಕನಿಗೆ ಹೇಗೆ ಬರುತ್ತದೋ ಹಾಗೇ ಗೃಹಿಣಿಗೂ ಇಂತಹ ನಿರ್ಬಂಧಗಳು ಬರುತ್ತವೆ. ಮಾಸಿಕ ಋತು ಸಂಬಂಧ ತಿಂಗಳಿನ ನಾಲ್ಕು ದಿನಗಳೂ ಅವಳು ತಲೆಸ್ನಾನ ಮಾಡಬೇಕು. ಅದು ಅನಿವಾರ್ಯ. ಅಗಲೆಲ್ಲ ತಲೆಗೆ ಎಣ್ಣೆ ಹಾಕಿಕೊಂಡು ಸ್ನಾನ ಮಾಡಬೇಕು ಎಂದು ನಿಯಮ ಇದೆ. ತಲೆಗೆ ಎಣ್ಣೆ ಹಾಕದೆ ಸ್ನಾನ ಮಾಡಲೇ ಬಾರದು.

ಪ್ರಶ್ನೆ: ಕುಂಬಳಕಾಯಿ ಮತ್ತು ಬಾಳೆಕಾಯಿ ಪದಾರ್ಥವನ್ನು ಮಂಗಳವಾರ ಮತ್ತು ಶುಕ್ರವಾರ ಮಾಡಬಾರದು ಎನ್ನುತ್ತಾರೆ. ಹಾಗೆಯೇ ಹೆಂಗಸರು ಕುಂಬಳಕಾಯಿಯನ್ನು ತುಂಡು ಮಾಡಬಾರದು ಎನ್ನುತ್ತಾರೆ. ಏಕೆ? ಸ್ವಾಮೀಜಿ: ಅದೆಲ್ಲ ಸ್ವಭಾವವನ್ನು ಚಿಂತಿಸಿ ಪರಿವರ್ತನೆಯನ್ನು ಮಾಡುವ ದೃಷ್ಟಿಯಿಂದ ಹೇಳಿದ್ದು ಬಿಟ್ಟರೆ, ನೀವು ಕುಂಬಳಕಾಯಿಯನ್ನು ವರ್ಷದ ಎಲ್ಲಾ ದಿನ ತಿನ್ನಿ, ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ. ತರಕಾರಿಗಳಲ್ಲೇ ಅತೀ ಶ್ರೇಷ್ಠವಾದಂತಹ ತರಕಾರಿಯೆಂದರೆ ಕುಂಬಳಕಾಯಿ. ಅದನ್ನು ಕತ್ತರಿಸುವ ವಿಧಾನ ಎಂದಾಗ ಅದರ ಆಕಾರ, ಕತ್ತರಿಸಲು ಬಳಸಬೇಕಾದ ಬಲ ಪ್ರಯೋಗವು ಒಂದು ರೀತಿಯಯಲ್ಲಿ ಮನುಷ್ಯನನ್ನು ಕೊಚ್ಚಿದ ಹಾಗೇ ಆಗುತ್ತದೆ. ಆ ಭಾವ ಹೆಣ್ಣಿನಲ್ಲಿ ಹುಟ್ಟಬಾರದು. ಹೆಣ್ಣಿನಲ್ಲಿ ಯಾವತ್ತೂ ಸಾತ್ವಿಕ ಪ್ರವೃತ್ತಿ ಇರಬೇಕು ಎಂದು ಗಂಡ ತೆಗೆದುಕೊಳ್ಳುತ್ತಾನೆ. ತಾಯಿಯ ಗುಣ ಸದಾ ಇರಲಿ ಎನ್ನುವ ದೃಷ್ಟಿಯಿಂದ.

ಪ್ರಶ್ನೆ: ಅಪ್ಪ ಜೀವಂತ ಇದ್ದರೆ ಕುಂಬಳಕಾಯಿಯನ್ನು ಹಾಗೇ ಕತ್ತರಿಸಬಾರದು ಎನ್ನುತ್ತಾರೆ. ನಿಜವೇ? ಸ್ವಾಮೀಜಿ: ಇಲ್ಲ ಇಲ್ಲ. ಕರಾವಳಿ ಪ್ರದೇಶದವರು ಬಹಳ ಬುದ್ಧಿವಂತರು. ಮೈಸೂರು ಪ್ರದೇಶದಲ್ಲಿ ಗೌಡರು ಯಾರೂ ಕುಂಬಳಕಾಯಿ ತಿನ್ನುವುದೇ ಇಲ್ಲ. ಅವರಿಗೆ ಅದು ನಿಷೇಧ. ಅದನ್ನು ಇಲ್ಲಿಯವರೇ ಹೇಳಿದ್ದು. ಉತ್ತಮ ಪೌಷ್ಟಿಕ, ರುಚಿಕರವಾದ ತರಕಾರಿಯನ್ನು ನಮಗೆ ತಂದು ಕೊಡಲಿ ಎಂದು ಹಾಗೆ ಹೇಳಿದ್ದಾರೆ. ಬ್ರಾಹ್ಮಣರ ಮನೆಯಲ್ಲಿ ಇದರಿಂದ ಮೃಷ್ಟಾನ್ನ ಭೋಜನ! ಮಾಂಸಾಹಾರ ತಿನ್ನುವ ಅವರು ಇದನ್ನಾದರೂ ನಮಗೆ ತಂದು ಕೊಡಲಿ ಎನ್ನುವ ಭಾವ!

ಪ್ರಶ್ನೆ: ಸ್ನಾನ ಮಾಡುವಾಗ ತಲೆಗೆ ಮತ್ತು ಮೈಗೆ ಕಡಲೆ ಹಿಟ್ಟು ಹಾಕಬಹುದೇ? ಸ್ವಾಮೀಜಿ: ಕಡ್ಲೆ ಹಿಟ್ಟು, ಹೆಸರು ಹಿಟ್ಟು ಮತ್ತು ಉದ್ದಿನ ಹಿಟ್ಟು ಇವು ಮೂರು ಕೂಡ ಮಾರ್ಜಕವಾಗಿ ಬಳಕೆಗೆ ಬರುತ್ತವೆ. ಉದ್ದಿನ ಹಿಟ್ಟು ಈ ಕರಾವಳಿ ಪ್ರದೇಶಕ್ಕೆ ತುಂಬಾ ಒಳ್ಳೆಯದು. ಅದನ್ನು ಮಾಡಿಕೊಳ್ಳುವ ವಿಧಾನ ಏನೆಂದರೆ ಉದ್ದಿನ ಬೆಳೆಯನ್ನು ಮೊದಲು ಹುರಿದುಕೊಳ್ಳಬೇಕು. ಹೆಸರು ಹಿಟ್ಟು ಮತ್ತು ಕಡ್ಲೆ ಹಿಟ್ಟು ಈ ಪ್ರದೇಶಕ್ಕೆ ವಿಶೇಷವಲ್ಲ. ಆದರೂ ಅದನ್ನು ಬಳಸಬಹುದು. ಆದರೆ ಮಾರ್ಜಕದ ಅಗತ್ಯ ನಿಮಗೆ ಬರುವುದೇ ಇಲ್ಲ. ಅದು ನಿಮ್ಮ ಕಲ್ಪನೆ ಅಷ್ಟೇ. ನಾಲ್ಕು ದಿನ ಅಭ್ಯಾಸ ಮಾಡಿ ನೋಡಿ, ಆಗ ಈ ಸೋಪು ಇವು ಯಾವುದರ ಅಗತ್ಯವೂ ನಿಮಗೆ ಕಾಣುವುದಿಲ್ಲ. ಅದರ ಉಪಯೋಗ ಇಲ್ಲದೇನೆ ನೀವು ಆರಾಮವಾಗಿ ಇರಬಹುದು. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment