February 6, 2020
ಕೇರಳದವರು ಬಂದು ಅಶುದ್ಧಿಯ ಬಗ್ಗೆ ಹೇಳಲು ಅವರಿಗೆ ಸಿಗುವ ಆಧಾರಗಳೇನು?
ಆಧಾರವೇ ಇಲ್ಲ. ಯಾವುದೋ ಪ್ರದೇಶದ ಜ್ಯೋತಿಷಿ ಬಂದು ನಿಮ್ಮಲ್ಲಿ ಅಶೌಚದವರು ಒಳಗೆ ಹೋಗಿದ್ದಾರೆ, ಅಶುದ್ಧಿಯಾಗಿದೆ ಎಂದೆಲ್ಲ ಹೇಳಿದರೆ ಅದು ಖಂಡಿತ ಅವರ ಕಲ್ಪನೆ. ಸತ್ಯ ಅಲ್ಲ. ಹೇಗೆ ಹೇಳುತ್ತಾರೆ ಎಂದರೆ ಅವರಿಗೆವಾಕ್ ಸ್ವಾತಂತ್ರ್ಯ ಇದೆ. ನೀವು ಕೇಳಿದ್ದಕ್ಕೆ ಪರಿಹಾರ ಕೊಡಲು ಅವರು ಬದ್ಧರೂ ಅಲ್ಲ. ಹೇಳಿ ಹೋಗುವುದು ಮಾತ್ರ. ನಂತರ ಪರಿಹಾರ ಆಗಲಿಲ್ಲ ಎಂದರೂ ಅದಕ್ಕೂ ಅವರು ಜವಾಬ್ದಾರರಲ್ಲ. ಹಾಗಾಗಿ ಅವರಿಗೆ ಹೇಳುವ ಅಧಿಕಾರ ಇದೆ! ನೀವು ಕರೆಸಿರುತ್ತೀರಿ, ಅದ್ಧೂರಿಯಾದ ದಕ್ಷಿಣೆ ಕೊಡುತ್ತೀರಿ. ಅದಕ್ಕವರು ಏನಾದರೂ ಹೇಳಲೇ ಬೇಕು. ನಿಮಗೆ ಭಾಧಕಗಳೂ, ಸಮಸ್ಯೆಗಳೂ ಹೇಳದಿದ್ದರೆ ನಿಮಗೆ ದಕ್ಷಿಣೆ ಕೊಡಲು ಮನಸ್ಸು ಬರುತ್ತದೆಯೇ? ಅದಕ್ಕೆ ಒಂದಿಷ್ಟು ದೋಷಗಳನ್ನು ಹೇಳಿ ದಕ್ಷಿಣೆ ತೆಗೆದುಕೊಂಡು ಹೋಗುವುದು ಪದ್ಧತಿಯಾಗಿದೆ. ಅದು ಈ ಪ್ರದೇಶಕ್ಕೆ ಖಂಡಿತ ಸೂಕ್ತವೂ ಅಲ್ಲ. ಇದನ್ನು ನಾನು ಮಾತ್ರ ಹೇಳಿದ್ದಲ್ಲ. ನಿಮ್ಮ ಗುರುರಾಜ ಭಟ್ಟರು (ಇಲ್ಲಿನ ಇತಿಹಾಸ ಸಂಶೋಧಕರು) ಹೇಳಿದ್ದಾರೆ. ಪ್ರಶ್ನೆ ಮಾರ್ಗ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿದ ಕಬ್ಯಾಡಿ ಜೋಯಿಸರು ಹೇಳಿದ್ದಾರೆ. ಅಷ್ಟಮಂಗಲ ಪ್ರಶ್ನೆ ಎಂದು ಅಲ್ಲಿನವರು ಬಂದು ಮೋಸ ಮಾಡುತ್ತಿದ್ದಾರೆ, ಅವರನ್ನು ನಂಬಬೇಡಿ ಎಂದು ಬರೆದಿದ್ದಾರೆ. ಹಣವನ್ನು ತೆಗೆದುಕೊಂಡು ಹೋಗಲಿಕ್ಕೆ 8-10 ದಿವಸ ಅನಾವಶ್ಯಕವಾಗಿ ಕಾಲವನ್ನು ಕಳೆಯುತ್ತಾರೆ. ಆ ರೀತಿ ವಿಮರ್ಶೆ ಮಾಡಲು ಅವಕಾಶ ಇಲ್ಲ. ಆಗಮ ಶಾಸ್ತ್ರ ಹೇಳಿದಂತೆ ಹೋಗಬೇಕೆ ವಿನಹ ಪ್ರಶ್ನೆಯಿಂದ ಹೋಗುವುದಲ್ಲ. ಹೀಗೆಂದು ಸ್ಪಷ್ಟವಾಗಿ ಅವರ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಈ ಕಡೆಯ ಬಹಳ ಜನ ಚಿಂತಕರು ವಿರೋಧಿಸಿದ್ದರೂ ಏನೋ ಹೊಟ್ಟೆ ಹೊರೆದುಕೊಳ್ಳಲು ದಾರಿಯಾಗುತ್ತದೆ ಎಂದು ನಾವು ಇಟ್ಟುಕೊಂಡಿದ್ದೇವೆ!
---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
Subscribe to:
Post Comments (Atom)
No comments:
Post a Comment