February 6, 2020

ಪ್ರದಕ್ಷಿಣೆಯಾಗಿ ಸುತ್ತು - ಅರ್ಧ ಸುತ್ತು

ಔಷಧಿಗೆ ಈಶ್ವರನೇ ಅಧಿಪತಿ. ಹಿಂದೆ ಕೆಲವು ಭಾಗಗಳಲ್ಲಿ ಚಿಕಿತ್ಸಾಲಯವಾಗಿ ಶಿವಾಲಯಗಳನ್ನು ಕಟ್ಟುತ್ತಿದ್ದರು. ಅಲ್ಲಿ ಪಶುಪತಿ ದೇವರು. ಪಶುಪತಿಯ ರೂಪದಲ್ಲಿ ಶಿವನ ಆರಾಧನೆಯಾಗುತಿತ್ತು. ಅಲ್ಲಿ ಲಿಂಗ ಮತ್ತು ಒಳಪ್ರಾಕಾರದಷ್ಟು ಭಾಗದ ಕೆಳಗೆ ದೊಡ್ಡ ಒಂದು ಚಾವಡಿ ಇರುತಿತ್ತು. ಗರ್ಭಗುಡಿಯ ನಾಳ ಒಂದು ಮಾತ್ರ ಮೇಲೆ ಹೋಗುವುದು ಬಿಟ್ಟರೆ ಉಳಿದೆಲ್ಲ ಭಾಗ ಚಾವಡಿಯಂತೆ ಇರುತಿತ್ತು. ಅಲ್ಲಿ ಕೆಲವೊಂದಿಷ್ಟು ರೋಗಗಳಿಗೆ ಸರಳವಾದ ಚಿಕಿತ್ಸೆ ಕೊಡುವುದು ಸಾಧ್ಯವಿತ್ತು. ಅಂತಹ ವ್ಯವಸ್ಥೆ ಮಾಡಿದ್ದರು. ಅದರ ಬಿರಡೆ ಇದ್ದದ್ದು ನೀವು ಈಗ ಅರ್ಧ ಸುತ್ತು ಬಂದು ಚಂಡೇಶ್ವರನಿಗೆ ಸುತ್ತು ಹಾಕಿ ಹೋಗುತ್ತೀರಲ್ಲ ಆ ಪ್ರದೇಶದಲ್ಲಿ. ಅದನ್ನು ತಿರುಗಿಸಿದರೆ ಕೆಳಗೆ ಹೋಗಲು ಮೆಟ್ಟಿಲು ಸಿಗುತ್ತದೆ. ಅಲ್ಲಿಂದ ರೋಗಿಗಳನ್ನು ಕೆಳಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕುಳ್ಳಿರಿಸಿ ಮೇಲೆ ಆಗತಕ್ಕಂತಹ ರುದ್ರ ಪಾರಾಯಣ ಇತ್ಯಾದಿಗಳನ್ನು ಸಂಯೋಜಿಸಿ ಚಿಕಿತ್ಸೆ ಕೊಡುತ್ತಿದ್ದರು. ಯಾವುದೇ ವೆಚ್ಚ ಇರುತ್ತಿರಲಿಲ್ಲ. ಮನೋರೋಗಗಳಿಗಂತೂ ಅದು ಉತ್ತಮವಾದ ಚಿಕಿತ್ಸೆಯಾಗಿತ್ತು. ಅದು ಪಶುಪತಿ ಕಲ್ಪದಲ್ಲಿ ಪ್ರತಿಷ್ಟೆಯಾದ ದೇವಸ್ಥಾನಗಳಲ್ಲಿ ಮಾತ್ರ. ನಂತರ ಅದರ ನ್ಯಾಸ ರೂಪವಾಗಿ ಇಡುವ ಕ್ರಮ ಬಂತು. ಎಲ್ಲ ಶಿವಾಲಯಗಳಲ್ಲೂ ತಂತ್ರೋಕ್ತವಾಗಿ ಬಲಿ ಕಲ್ಲುಗಳನ್ನು ಪ್ರತಿಷ್ಟಾಪನೆ ಮಾಡುವಾಗ ಚಂಡೇಶ್ವರ ಎಂದು ಅಲ್ಲಿ ಇಡುವ ಕ್ರಮ ಬಂತು. ಆ ಪಶುಪತಿ ದೇವಾಲಯವಾದರೆ ಆ ಕಲ್ಲಿನ ಮೇಲೆ ಓಡಾಡಲು ಬರುವುದಿಲ್ಲ. ಅಲ್ಲಿನ ಬಾಗಿಲಿನ ಕಲ್ಲಿನ ಬಿರಡೆ ತಿರುಗಿಸಿದರೆ ಮೇಲಕ್ಕೆ ಹೋಗುತ್ತದೆ ಮತ್ತು ಬಿರಡೆ ತಿರುಗಿಸಿದರೆ ಕೆಳಕ್ಕೆ ಹೋಗುತ್ತದೆ. ಅದರ ಮೇಲೆ ಓಡಾಡಿದಾಗ ಅಕಸ್ಮಾತ್ ಕೆಳಕ್ಕೆ ಬೀಳುವ ಸಂಭವ ಇರುತ್ತದೆ. ಅದಕ್ಕೆ ಅದರ ಮೇಲೆ ಓಡಾಡಬಾರದು ಎಂದು ಅಲ್ಲಿಯ ವರೆಗೆ ಬಂದು ವಾಪಾಸು ಹೋಗುವ ಕ್ರಮ ಪಶುಪತಿ ದೇವಸ್ಥಾನದಲ್ಲಿ ಮಾತ್ರ ಇದ್ದದ್ದು. ಈ ನ್ಯಾಸ ಇದ್ದಲ್ಲೆಲ್ಲ ಓಡಾಡಬಾರದು ಎಂದೇನಿಲ್ಲ. ಆದರೆ ಅಲ್ಲಿ ಇದೆಯಲ್ಲ ಎಂದು ಇಲ್ಲೂ ಅನುಸರಿಸುವ ಕ್ರಮ ಬಂದಿತು. ಅದು ಖಂಡಿತ ಪೂರ್ಣ ಅಲ್ಲ. ಪೂರ್ಣ ಪ್ರದಕ್ಷಿಣೆ ಬರಬೇಕು. ಅಲ್ಲಿ ಯಾವುದೋ ಆಡಳಿತ ಮಂಡಳಿ ಇದೆ, ಅದು ನಿರ್ದೇಶನ ಮಾಡಿದೆ ಎಂದರೆ ಅಲ್ಲಿ ಅದು ಅನಿವಾರ್ಯ, ನೀವು ವಾಪಾಸು ತಿರುಗಿ ಬನ್ನಿ. ಜಗಳ ಮಾಡಬೇಡಿ ಅಥವಾ ಹೋಗಲೇಬೇಡಿ. ಆದರೆ ನೀವು ನಿಮ್ಮ ದೇವಸ್ಥಾನದಲ್ಲಿ ಪೂರ್ಣ ಪ್ರದಕ್ಷಿಣೆ ಬನ್ನಿ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment