February 6, 2020
ಶಿವ ದೇವಸ್ಥಾನಗಳಲ್ಲಿ ಸಾಲಿಗ್ರಾಮ ಇಟ್ಟು ಪೂಜೆ
ಅವೆಲ್ಲಾ ಇತ್ತೀಚೆಗೆ ಹುಟ್ಟಿಕೊಂಡಂತಹ ಕೆಲವೊಂದಿಷ್ಟು ಸಮಸ್ಯೆಗಳು. ಅದು ಯಾವುದೂ ಆಗಮ ಶಾಸ್ತ್ರಕ್ಕೆ ಸಂಬಂಧಪಟ್ಟದ್ದಲ್ಲ. ಶಿವಲಿಂಗವನ್ನು ನೇರವಾಗಿ ಪೂಜೆ ಮಾಡಬಾರದು ಎಂದು ಎಲ್ಲೂ ಹೇಳಿಲ್ಲ. ಎಲ್ಲ ದೇವರ ಮೊದಲ ಸ್ವರೂಪವೂ ಅದೇ. ನಂತರ ಅದಕ್ಕೆ ಆಕಾರ ಕೊಟ್ಟಾಗ ಬೇರೆ ಬೇರೆ ನಾಮಕರಣ. ಅಷ್ಟು ಬಿಟ್ಟರೆ ಇರುವುದೆಲ್ಲಾ ಸ್ತಾರವಾಗಲೀ, ಭರ್ಗವಾಗಲೀ ಎಲ್ಲ ಸ್ವರೂಪ ನಿರಾಕಾರ. ಎಲ್ಲ ದೇವರೂ ನಿರಾಕಾರ ಸ್ವರೂಪವೇ. ನಂತರ ಅದಕ್ಕೆ ಆಕಾರ ಕೊಟ್ಟು ರೂಪ ಕೊಡುವಂತದ್ದು. ಅದಕ್ಕೆ ಮತ್ತೊಂದು ಆ ರೀತಿಯ ನಿರಾಕಾರ ಸ್ವರೂಪದ ಸಾಲಿಗ್ರಾಮವನ್ನು ಇಡಬೇಕಾದ ಅಗತ್ಯ ಇಲ್ಲ. ಅಲ್ಲಿ ಸಾಲಿಗ್ರಾಮವನ್ನು ಇಡುವುದೇ ನಿರಾಕಾರ ಸ್ವರೂಪ ಎನ್ನುವ ದೃಷ್ಟಿಯಿಂದ. ನಿರಾಕಾರ ಶಿವಲಿಂಗ ಇರುವಾಗ ಮತ್ತೊಂದು ನಿರಾಕಾರ ಏಕೆ ಅಲ್ಲಿ ಇಡಬೇಕು? ಆಗಮದಲ್ಲಿ ಅದಕ್ಕೆ ವಿಶೇಷವಾದ ಮಹತ್ವವನ್ನು ಕೊಟ್ಟಿಲ್ಲ. ಏಕೆಂದರೆ ಆಗಮ ಶಾಸ್ತ್ರ ಬರೆಯುವ ಕಾಲದಲ್ಲಿ ಇವೆಲ್ಲ ಸಮಸ್ಯೆ ಇರಲಿಲ್ಲ. ನಂತರ ಹುಟ್ಟಿಕೊಂಡ ಸಮಸ್ಯೆಗಳಿಗೆ ಯಾರ್ಯಾರೋ ತಾತ್ಕಾಲಿಕ ಪರಿಹಾರದ ವಿಧಿಯನ್ನು ಹೇಳಿದಾಗಲೂ ಕೂಡ ಹೇಳುವುದೇನೆಂದರೆ ಶಿವಲಿಂಗವೇ ನಿರಾಕಾರಾವಾದ್ದರಿಂದ ಸಾಲಿಗ್ರಾಮ ಪ್ರಸ್ತುತ ಅಲ್ಲ. ಎರಡು ನಿರಾಕಾರಗಳನ್ನು ಇಟ್ಟ ಹಾಗೆ ಆಗುತ್ತದೆ ಅಷ್ಟೇ. ಅದರಿಂದ ಏನೂ ಆಗುವುದೂ ಇಲ್ಲ, ಅಗತ್ಯವೂ ಇಲ್ಲ. ಎರಡೂ ಒಂದೇ ಆಗಿದೆ. ಇವು ಇತ್ತೀಚೆಗೆ ಹುಟ್ಟಿಕೊಂಡ ಕೆಲವು ಅವರವರದ್ದಾದ ಹೆಚ್ಚುಗಾರಿಕೆ ತೋರಿಸುವ ಪ್ರಯತ್ನಗಳಾಗಿವೆ. ಅಷ್ಟು ಬಿಟ್ಟರೆ ಸತ್ಯ ಅಲ್ಲ.
ಇತ್ತೀಚೆಗೆ ವಿದೇಶವನ್ನು ಸುತ್ತಿಕೊಂಡು ಬಂದವರೊಬ್ಬರು ಕೇಳುತ್ತಿದ್ದರು. ವಿದೇಶದಲ್ಲಿ ಒಂದು ಕ್ಷೇತ್ರ ಇದೆ. ಅದು ಈಶ್ವರನ ಆರಾಧನಾ ಸ್ಥಳ ಎಂದು ಒಂದಿಷ್ಟು ಜನ ಹೇಳುತ್ತಾರೆ. ಹಾಗೇ ಒಂದಷ್ಟು ಜನ ಅದು ಮೊಹಮ್ಮದೀಯರ ದೈವಿಕ ನಂಬಿಕೆಯ ಕ್ಷೇತ್ರ ಎಂದು ಹೇಳುತ್ತಾರೆ. ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾರೆ. ಇದು ಸರಿಯೇ ಎಂದು ಕೇಳಿದರು. ಅದು ಹೇಗೆಯೇ ಇರಲಿ. ಒಂದು ನಿರ್ಮಾಣ, ಒಂದು ಕಟ್ಟಡವಂತೂ ಅಲ್ಲಿದೆ. ಒಳಗೆ ಏನಿದೆ ಎನ್ನುವುದು ಮುಖ್ಯವಲ್ಲ. ಯಾವುದೇ ಒಂದು ನಿರ್ಮಾಣ ಕಟ್ಟಡವೇ ಇದ್ದರೂ ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾ ಇದ್ದರೆ ಆ ಒಂದು ನಂಬಿಕೆಯನ್ನು ಬೆಳೆಸಿಕೊಂಡು ಬಂದಿರುವ ಮನುಷ್ಯನ ಮನಸ್ಸೆಲ್ಲವೂ ಕ್ರೂರವಾಗುತ್ತಾ ಹೋಗುತ್ತದೆ. ಅದೇ ಪ್ರದಕ್ಷಿಣೆ ತಿರುಗಿದರೆ ಶಾಂತವಾಗುತ್ತಾ, ಸುಪ್ತವಾಗುತ್ತಾ ಹೋಗುತ್ತದೆ. ಕ್ರೂರವಾಗುತ್ತಾ ಹೋಗುತ್ತದೆ ಎನ್ನುವುದಕ್ಕೆ ನಿಮಗೆ ಆಧಾರಗಳು ಬೇಕಿಲ್ಲ ಎಂದು ನನ್ನ ಭಾವನೆ. ಹಾಗೆಯೇ ಕ್ರೂರವಾಗುತ್ತಾ ಹೋಗಲಿ, ಅದಕ್ಕೊಂದು ಪರಿಹಾರ ಆಗ ಸಿಗುತ್ತದೆ. ರಾವಣ ಮುಂತಾದ ಎಷ್ಟೆಲ್ಲ ರಾಕ್ಷಸರು ಕ್ರೂರಿಗಳಾದರು, ಕಂಸನೂ ಕ್ರೂರಿಯಾಗಿ ಹುಟ್ಟಿ ಎಷ್ಟೆಲ್ಲ ಕಷ್ಟಗಳನ್ನು ನೀಡಿದ. ಏನಾದರೂ ಆಯಿತೇ? ಕಡೆಗೆ ಎಲ್ಲವೂ ಸರಿಯಾಯಿತಲ್ಲವೇ? ಅಲ್ಲಿಯವರೆಗೆ ಕಾಯೋಣ.
---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
Subscribe to:
Post Comments (Atom)
No comments:
Post a Comment