December 7, 2016

ಇನ್ನು ೨೦ ವರ್ಷಗಳಲ್ಲಿ ನನ್ನ ಭಾರತ

ನಮ್ಮ ಹೆಮ್ಮೆಯ ಪ್ರಧಾನಿಯವರ "ಡಿಜಿಟಲ್ ಇಂಡಿಯಾ" ಕನಸು ಸಾಕಾರವಾದರೆ ಮುಂದಿನ ೨೦ ವರ್ಷಗಳಲ್ಲಿ ಭವ್ಯ ಭಾರತವು ಯಾವ ದುಸ್ಥಿತಿಯನ್ನು ತಲುಪಬಹುದು ಎನ್ನುವ ನನ್ನ ಅಭಿಪ್ರಾಯವನ್ನು ಈ ಲೇಖನದ ಮೂಲಕ ವ್ಯಕ್ತಪಡಿಸುತ್ತಾ ಇದ್ದೇನೆ. ಇದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ವಿಶ್ಲೇಷಣೆಗಳು. 


ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾದ ಕಾರಣ ಮೊದಲು ಅಲ್ಲಿ ಆಗಬಹುದಾದ  ಪರಿಣಾಮಗಳನ್ನು ಊಹಿಸಿದ್ದೇನೆ. ಮೂಲ ತಂತ್ರಜ್ಞಾನಗಳಾದ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಗಳು ಮುಚ್ಚಿ ಹೋಗಲಿವೆ (ಅಥವಾ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಲಿವೆ). ಇನ್ನು ಎಲೆಕ್ಟ್ರಾನಿಕ್ಸ್ ಎಂದರೆ ಮೊಬೈಲ್ ಫೋನಿನ ಹಾಗೂ ಗಣಕಯಂತ್ರಗಳ ಉತ್ಪಾದನೆಗಳಿಗೆ ಸೀಮಿತವಾಗಲಿದೆ. ರೊಬೊಟಿಕ್ಸ್ ಅನ್ನೂ ಇದರಲ್ಲಿ ಸೇರಿಸಬಹುದು. ಟೆಲಿ ಕಮ್ಯೂನಿಕೇಷನ್ ವಿಭಾಗವು ಮೊಬೈಲ್ ಕಮ್ಯೂನಿಕೇಷನ್ ಮತ್ತು ಅಂತರ್ಜಾಲ ವ್ಯವಸ್ಥೆಯ ಸುತ್ತ ಗಿರಾಕಿಹೊಡೆಯಲಿವೆ. ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗವು ಮುಂಚೂಣಿಗೆ ಬರಲಿದೆ. ಮೊಬೈಲ್ ಫೋನಿಗೆ ಬೇಕಾದ ತಂತ್ರಾಂಶ, ಇ-ಆಡಳಿತ, ಕೈಗಾರಿಕೆಗಳಲ್ಲಿ ಯಂತ್ರಗಳ ಸ್ವಯಂನಿಯಂತ್ರಣ (ಆಟೋಮೇಷನ್), ಬ್ಯಾಂಕಿಂಗ್ ಮುಂತಾದ  ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಗಣಕೀಕರಣಗೊಳ್ಳಲಿದೆ. ಇದರಿಂದಾಗಿ ಕೋಟ್ಯಂತರ ಸಾಫ್ಟ್ವೇರ್ ಉದ್ಯೋಗಗಳ ಸೃಷ್ಟಿಯಾಗಲಿವೆ. ಇದರಿಂದಾಗಿ ಮುಂದೆ ಇಂಜಿನಿಯರಿಂಗ್ ಎಂದರೆ ಸಾಫ್ಟ್ವೇರ್ ಎನ್ನುವ ಮನೋಭಾವ ಜನರಲ್ಲಿ ಉಂಟಾದರೆ ಅಚ್ಚರಿಯೇನಿಲ್ಲ. 


ಇಂತಹ ತಂತ್ರಾಂಶಗಳ ಜನಕರು ಮುಂದೆ ನಿಜಜೀವನದಲ್ಲಿ ಬಹಳ ತೊಂದರೆಯನ್ನೂ ಅನುಭವಿಸಲಿದ್ದಾರೆ. ಕೌಟುಂಬಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ತಲೆದೋರಲಿವೆ. ಇಂತಹ ಸಮಸ್ಯಗಳು ಈಗಾಗಲೇ ಪ್ರಚಲಿತದಲ್ಲಿರುವುದರಿಂದ ಅವುಗಳನ್ನು ಇಲ್ಲಿ ಪುನರುಲ್ಲೇಖಿಸಿಲ್ಲ. ಅಲ್ಲದೆ ಮೊಬೈಲ್ ಫೋನಿನ ದಾಸರಾಗುವ ಜನರೂ ಹಲವಾರು ಆರೋಗ್ಯ ಸಮಸ್ಯಗಳಿಗೆ ತುತ್ತಾಗಲಿದ್ದಾರೆ. ಮೊಬೈಲ್ ಕ್ರಾಂತಿಯ ಪರಿಣಾಮವಾಗಿ ಕೆಲವೇ ವರ್ಷಗಳಲ್ಲಿ ಜನರು ಪಡುತ್ತಿರುವ ಪಾಡನ್ನು ನೋಡಿದರೆ ಅದು ಜನರ ಭವಿಷ್ಯವನ್ನು ಇನ್ನಷ್ಟು ಕರಾಳವಾಗಿಸುವುದರಲ್ಲಿ ಸಂಶಯವೇ ಇಲ್ಲ. ಇಂತಹ ಆರೋಗ್ಯ ಸಮಸ್ಯೆಗಳಿಗೆ "Biomedical engineering" ಅಥವಾ "Biotechnology" ವಿಭಾಗದ ತಂತ್ರಜ್ಞರು ಹೊಸ ಔಷದ ಉಪಕರಣಗಳ ಸಂಶೋಧನೆಗೆ ಮುಂದಾಗುತ್ತಾರೆ. ಈ ಉಪಕರಣಗಳು ಮನುಷ್ಯನನ್ನು ಒಂದು ಸಂಪೂರ್ಣ ಜೈವಿಕ ಘಟಕ ಎಂದು ಪರಿಗಣಿಸದೆ ಕೇವಲ ಅಂಗಾಂಗಗಳ ಪರಿಶೀಲನೆಗೆ ಒತ್ತು ಕೊಡುತ್ತವೆ. ಇವೆಲ್ಲವೂ ಒಂದಕ್ಕೊಂದು ತಾಳೆ ಇಲ್ಲದ ಚಿಕಿತ್ಸಾವರದಿಗಳನ್ನು ನೀಡಿ ಚಿಕಿತ್ಸೆಯನ್ನು ಸಂಕೀರ್ಣಗೊಳಿಸಲಿವೆ. ತಲೆಗೆ, ಕಿವಿಗೆ, ಕಣ್ಣಿಗೆ, ಮೂಗಿಗೆ, ಬಾಯಿಗೆ, ಗಂಟಲಿಗೆ ಪ್ರತ್ಯೇಕ ವೈದ್ಯರು. ಇನ್ನು ಹೃದಯ, ಶ್ವಾಸಕೋಶ, ಮೂತ್ರಕೋಶ, ಮೂಳೆ, ಇತ್ಯಾದಿ ಎಲ್ಲ ಅಂಗಗಳಿಗೂ ಒಬ್ಬೊಬ್ಬ ವೈದ್ಯ ಹುಟ್ಟಿಕೊಳ್ಳಲಿದ್ದಾನೆ. ಈ ಅಂಗಗಳನ್ನು ಪರೀಕ್ಷಿಸಲು ಹೊಸ ವೈದ್ಯಕೀಯ ಉಪಕರಣಗಳು, ಅದನ್ನು ನಿರ್ವಹಿಸಲು ಪರೀಕ್ಷಾಲಯಗಳು ಹುಟ್ಟಿಕೊಳ್ಳಲಿವೆ. ಈ ಪರೀಕ್ಷಾಲಯಗಳೂ, ಆಸ್ಪತ್ರೆಗಳೂ ಹಾಗೂ ವೈದ್ಯರ ನಡುವೆ ಅನಧಿಕೃತ ಒಳ ಒಪ್ಪಂದಗಳೂ ಏರ್ಪಟ್ಟು ರೋಗಿಯ ಬದುಕನ್ನು ಅಸಹನೀಯಗೊಳಿಸಲಿವೆ. ಇದರ ಜೊತೆಗೆ "ಆರೋಗ್ಯ ವಿಮೆ" ಎಂಬ ಹೆಮ್ಮಾರಿಯೂ ಬೃಹದಾಕಾರ ತಾಳಿ ಜನರ ಆದಾಯದ ಒಂದಷ್ಟು ಪಾಲನ್ನು ನುಂಗಲಿವೆ. ಪ್ರತ್ಯೇಕ ಅಂಗಗಳ ಚಿಕಿತ್ಸಾ ವಿಧಾನವು ರೋಗದ ಸಮಗ್ರ ಚಿತ್ರಣವನ್ನು ನೀಡುವಲ್ಲಿ ವಿಫಲವಾಗುತ್ತವೆ. ಇದರಿಂದ ರೋಗದ ಮೂಲ ಪತ್ತೆಹಚ್ಚುವಿಕೆ ಸಾಧ್ಯವಿಲ್ಲ. ಕೇವಲ ಪರಿಣಾಮಗಳನ್ನು ನೋಡಿ ಒಂದು ರೋಗದ ನಿರ್ಧಾರ ಮಾಡುವುದು ನಿಜವಾಗಿಯೂ ಮೂರ್ಖತನ. ಇದು ಮಲೇರಿಯಾ ಅಥವಾ ಚಿಕನ್ ಗುನ್ಯಾ ಬಂದಾಗ paracetamol ಮಾತ್ರೆ ತಿಂದಂತೆಯೇ ಆದೀತು. 


ಸಾಫ್ಟ್ವೇರ್ ಕ್ರಾಂತಿಯ ಪರಿಣಾಮವಾಗಿ ಜನರು ಕುಳಿತಲ್ಲಿಯೇ ಕೆಲಸ ಮಾಡುವ ಪ್ರವೃತ್ತಿಯು ಹೆಚ್ಚಲಿದೆ. ಅಂಗಡಿಯ ಸಾಮಾನು ಕೊಳ್ಳುವುದು, ವಿದ್ಯುತ್, ದೂರವಾಣಿ ಇತ್ಯಾದಿಗಳ ಕಂತು ಕಟ್ಟುವುದು, ಬ್ಯಾಂಕಿಗೆ ಸಂಬಂಧಪಟ್ಟ ತಿರುಗಾಟ, ಶಿಕ್ಷಣ, ಮನರಂಜನೆ (ಚಲನ ಚಿತ್ರ, ಪುಸ್ತಕ ಇತ್ಯಾದಿ) ಎಲ್ಲವೂ ಕುಳಿತಲ್ಲಿಯೇ ಸಾಧ್ಯವಾಗಲಿವೆ. ಇದರಿಂದ ದೈಹಿಕ ವ್ಯಾಯಾಮ ಕಡಿಮೆಯಾಗಲಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ನಾಂದಿಯಾಗಲಿದೆ. ದೇಹಕ್ಕೆ ಬೊಜ್ಜು ಬರುವುದು, ಪರಿಣಾಮಮವಾಗಿ ಮಧುಮೇಹ, ರಕ್ತದೊತ್ತಡ, ಮಾನಸಿಕ ವ್ಯಾಧಿಗಳು (ಖಿನ್ನತೆ ಇತ್ಯಾದಿ) ಹೆಚ್ಚು ಹೆಚ್ಚಾಗಿ ಜನರಲ್ಲಿ ಕಂಡುಬರಲಿದೆ. ಇನ್ನು ಸಾಮಾಜಿಕ ತಾಣಗಳ ಮೂಲಕ ಮನಸ್ಸಿನ ಶಾಂತಿ ಕದಡುವುದಲ್ಲದೆ ಜನರ ಅಮೂಲ್ಯ ಸಮಯವೂ ವ್ಯರ್ಥವಾಗಲಿವೆ. ಅಲ್ಲದೆ ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. 

ಇನ್ನು ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ಅತಿಯಾದ ಧನದಾಹ ಕಂಡುಬರಲಿದೆ. ಅಲ್ಲದೆ ದಾಂಪತ್ಯ ಜೀವನದ ವೈಫಲ್ಯತೆಗಳು ಹೆಚ್ಚಲಿವೆ. ಹೊಸ ಹೊಸ ಸಾಫ್ಟ್ವೇರ್ ಗಳ ಆಗಮನವು ಹೊಸ ಪೀಳಿಗೆಗೆ ಹೆಚ್ಚಿನ ಅವಕಾಶಗಳನ್ನು ತರಲಿದೆ. ಇದರಿಂದ ಹಿರಿಯ ಸಾಫ್ಟ್ವೇರ್ ಉದ್ಯೋಗಿಗಳ ಕಡೆಗಡನೆ, ಉದ್ಯೋಗದಲ್ಲಿ ಅಸ್ಥಿರತೆ ಕಾಡಲಿದೆ. ಇತರೆ ಕೆಲಸ ಮಾಡಲು ನೈಪುಣ್ಯತೆಯ ಕೊರತೆಯಿಂದಾಗಿ ಅವರ ಜೀವನವು ಅಯೋಮಯ ಸ್ಥಿತಿಯನ್ನು ತಲುಪಲಿದೆ. 

ಬೆಂಗಳೂರಿನಂತಹ ನಗರಗಳು ಹೆಚ್ಚಿದ ಜನಸಂಖ್ಯೆ ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಆಧಿನಿಕ ಯಮಪುರಿಯಾಗಲಿವೆ. ರಸ್ತೆ ತುಂಬಾ ವಾಹನಗಳು ಯಮದೂತರಂತೆ ವಿಹರಿಸಲಿವೆ. ಒಳಚರಂಡಿ, ಕಸ ವಿಲೇವಾರಿ ಸಮಸ್ಯೆಗಳು ಜೀವನವನ್ನು ನಿತ್ಯ ನರಕವಾಗಿಸಲಿವೆ. ವಾಯು, ಜಲ, ಶಬ್ದ ಮಾಲಿನ್ಯಗಳು ಪರಿಸರವನ್ನು ಹದಗೆಡಿಸಿ ಜನರು ಅನಾಗರಿಕ ಬದುಕನ್ನು ನಡೆಸುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. 



ಇದಕ್ಕೆಲ್ಲ ಪರಿಹಾರವನ್ನು ತುರ್ತಾಗಿ ಕಂಡು ಹಿಡಿಯದೇ ಹೋದರೆ ನಮ್ಮ ದೇಶ ಮುಂದುವರೆಯುವುದು ಅಸಾಧ್ಯ. ದಯವಿಟ್ಟು ಚಿಂತಿಸಿ ... ಮುನ್ನಡೆಯಿರಿ. ವಂದೇ ಮಾತರಂ.  

No comments:

Post a Comment