September 6, 2019

ಸೋಣೆ ಆರತಿಯ ವಿಶೇಷ

ಸಿಂಹ ಮಾಸದಲ್ಲಿ ದೇವರಿಗೆ ವಿಶೇಷವಾಗಿ ಸಲ್ಲಿಸಲ್ಪಡುವ ಸೇವೆಯೇ ಸೋಣೆ ಆರತಿ. ಸಿಂಹ ಮಾಸದಲ್ಲಿ ಸೂರ್ಯನು ಅತ್ಯಂತ ಪ್ರಖರವಾಗಿ ಬೆಳಗುತ್ತಿರುತ್ತಾನೆ. ಆದ್ದರಿಂದ ರಾತ್ರಿಯ ಸೂರ್ಯನಾದ ದೀಪದ ಬೆಳಕಿನಲ್ಲಿ ಅಥರ್ವ ವೇದದ ವಿಶೇಷವಾದ ೧೦ ಮಂತ್ರಗಳನ್ನು ಹೇಳುತ್ತಾ, ೫ ಮರದ ಹಲಗೆಯಿಂದ ಮಾಡಿದ ಆರತಿಯಲ್ಲಿ ಆರತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಆರತಿ ಬೆಳಗುವುದನ್ನು ಬಿಟ್ಟು ಆರತಿಯನ್ನು ನೇರವಾಗಿ ಹಿಡಿದು ಸೇವಾಕರ್ತರನ್ನು ದೇವರಿಗೆ ತೋರಿಸಲಾಗುತ್ತದೆ. ತನ್ಮೂಲಕ ಸೇವಾಕರ್ತನ ತೇಜಸ್ಸು, ವರ್ಚಸ್ಸುಗಳು ಹೆಚ್ಚಲಿ ಎಂಬ ಉದ್ದೇಶ ಇರುತ್ತದೆ. ಆರತಿಗೆ ತ್ಯಾಗಮಯಿ ಸನ್ಯಾಸಿಯೊಬ್ಬ ಬಳಸಿದ ವಸ್ತ್ರವನ್ನು ಬತ್ತಿಯಾಗಿ ಬಳಸಲಾಗುತ್ತದೆ. ಧೂಪದ ಎಣ್ಣೆ (ಗಣಪತಿ ಕಾಯಿಗಳನ್ನು ಆರಿಸಿ, ಚೆನ್ನಾಗಿ ಕುದಿಸಿ ಎಣ್ಣೆ ಬಿಡುವ ವರೆಗೆ ಬಿಸಿ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಇಂಧನ ಬೇಕಾಗಿರುವುದರಿಂದ ಇದರ ಮೌಲ್ಯ ತುಪ್ಪಕ್ಕಿಂತಲೂ ಹೆಚ್ಚು) ಯನ್ನು ಆರತಿಗೆ ಬಳಸಲಾಗುತ್ತದೆ. ಆರತಿಯ ಬಳಿಕ ಅರ್ಧ ಸುಟ್ಟು ಹೋದ ಬತ್ತಿಗಳನ್ನು ಆರಿಸಿ ಮರುದಿನ ಹೋಮ ಮಾಡಲಾಗುತ್ತದೆ. ಅಲ್ಲಿಗೆ ಸೋಣೆ ಆರತಿಯ ಸೇವೆ ಸಂಪೂರ್ಣವಾದಂತೆ. ಇದು ಕೇಳಿ ತಿಳಿದ ವಿಚಾರ. ಚಿಕ್ಕ - ಪುಟ್ಟ ದೋಷವಿದ್ದರೆ ಕ್ಷಮೆ ಇರಲಿ.