April 26, 2017

ಬಾಳೆ ಎಲೆ ಊಟದ ಮಹತ್ವ

ಬಾಳೆಯೆಲೆಯಲ್ಲಿ ದಿನವೂ ಊಟಮಾಡುವುದರಿಂದ ಶೇ. ೬೦ ರಿಂದ ೭೦ ರಷ್ಟು ಚರ್ಮರೋಗಗಳಿಂದ ಮುಕ್ತಿಯನ್ನು ಪಡೆಯಬಹುದು. ಬಾಳೆ ಎಲೆಯನ್ನು ಬಿಸಿ ಮಾಡಿದಾಗ (ಬಿಸಿಯಾದ ಅನ್ನ ಸಾರನ್ನು ಹಾಕಿದಾಗ ಕೂಡ) ಹಲವು ಉಪಯುಕ್ತ ರಾಸಾಯನಿಕಗಳ ಉತ್ಪತ್ತಿಯಾಗುತ್ತವೆ. ಅವು ಹಲವು ಬಗೆಯ ಚರ್ಮರೋಗಗಳನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿವೆ. ಪುತ್ತೂರು-ಕಾಸರಗೋಡು ಕಡೆ ನೀವು ಹೋದರೆ ಬಾಳೆ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಬಾಡಿಸಿ ನಂತರ ಬಡಿಸುವ ಕ್ರಮ ಇರುವುದು ಇದೇ ಕಾರಣಕ್ಕೆ. ಊಟಮಾಡಿದ ಬಳಿಕ ಬಾಡಿದ ಎಲೆಯ ಮೇಲೆ "ಮಡೆಸ್ನಾನ" ಮಾಡುವುದೂ ಇದಕ್ಕೇನೆ. ಈ ವಿಚಾರ ಗೊತ್ತಿಲ್ಲದ "ಬುದ್ಧಿ ಜೀವಿಗಳು" ಸುಮ್ಮನೆ ಗುಲ್ಲೆಬ್ಬಿಸುತ್ತಾರೆ ಅಷ್ಟೇ. ಸಧ್ಯದಲ್ಲೇ ಇದನ್ನು ನಾವು ಆಧುನಿಕ ವಿಜ್ಞಾನ ರೀತ್ಯಾ ದೃಢೀಕರಿಸಲಿದ್ದೇವೆ.

April 24, 2017

“ಶ್ರೀ ಅಣ್ಣಪ್ಪಸ್ವಾಮಿ” ಸ್ವಾನಿಕರ ಮೂಲ ಪುರುಷ - ಸಂಶೋಧನಾ ಪ್ರಬಂಧ

ಪ್ರಸ್ತಾವನೆ:
೨೦೧೫ನೇ ಇಸವಿಯಲ್ಲಿ ಪ್ರಕಟಿತ ಡಾ. ಕೆ. ಜಿ. ವಸಂತ ಮಾಧವ ಅವರ ಕರ್ನಾಟಕದ ಸಂಸ್ಕೃತಿಕ ಚರಿತ್ರೆಯಲ್ಲಿ ಸ್ಥಾನಿಕರ ಚಾರಿತ್ರಿಕ ಮಹತ್ವ ಕೃತಿಯಲ್ಲಿ ೧೧ ರಿಂದ ೧೮ನೇ ಶತಮಾನದವರೆಗಿನ ಸ್ಥಾನಿಕರ ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಅದ್ಭುತವಾಗಿ ನಿರೂಪಿಸಲಾಗಿದೆ. ಇಲ್ಲಿಯವರೆಗೆ  ಸ್ಥಾನಿಕರ ಕುರಿತು ಬಂದ ಕೃತಿಗಳಲ್ಲೆ ಅತ್ಯಂತ ವೈಜ್ಞಾನಿಕವಾಗಿ, ಅಧ್ಯಯನಪೂರ್ವಕವಾಗಿ ಹಾಗೂ ಆಧಾರ ಸಹಿತವಾಗಿ  ಕೃತಿಯು ವಿಶ್ಲೇಷಿಸಲ್ಪಟ್ಟಿದೆ. ನಾನು ಈಗ ಹೇಳಹೊರಟಿರುವುದು ಅದಕ್ಕೂ ಪೂರ್ವದ ವಿಚಾರಗಳನ್ನು. ದಯವಿಟ್ಟು ಮೇಲೆ ಹೇಳಿದ ಕೃತಿಯನ್ನು ಓದಿದ ಬಳಿಕ ಲೇಖನವನ್ನು ಓದಿದರ ವಿಷಯಗಳು ಇನ್ನಷ್ಟು ಸ್ಪಷ್ಟವಾಗಬಹುದು. ಈ ಲೇಖನವು ನನ್ನ ಸ್ವಂತ ಅಧ್ಯಯನದ ಫಲವೇ ಹೊರತು ಯಾವುದೇ ಪೂರ್ವಾಗ್ರಹಗಳಿಂದ ಕೂಡಿರುವುದಿಲ್ಲ. ಇದೊಂದು ತರ್ಕಬದ್ಧ (logical) ಅಂಶಗಳನ್ನೊಳಗೊಂಡ, ಸುಧೀರ್ಘ ಅಧ್ಯಯನ, ಚಿಂತನೆ ಹಾಗೂ ಜಿಜ್ಞಾಸುಗಳೊಡನೆ ನಡೆಸಿದ ಚರ್ಚೆಯಿಂದ ಮೂಡಿಬಂದ ಲೇಖನವಾಗಿದೆ. ಇದೊಂದು ಪರಿಪೂರ್ಣ ಸತ್ಯಶೋಧನೆಯೆಂದು ಹೇಳಲಾರೆ. ಇದರಲ್ಲಿ ಕುಂದುಗಳು, ತಪ್ಪುಗಳು ಕಾಣಿಸಿದಲ್ಲಿ ಚರ್ಚೆಗೆ ಸಂಪೂರ್ಣ ಅವಕಾಶವಿದೆ.

ಬಾಳೆಕುದ್ರು ಮಠದ ಸ್ವಾಮಿಗಳು:

ಬಾಳೆಕುದ್ರುವಿನ "ಶ್ರೀಮಠ" ಇತಿಹಾಸವನ್ನು ಗಮನಿಸಿದಾಗ ಸುಮಾರು ೨೩೦೦ ವರ್ಷಗಳ ಹಿಂದೆ ವರದಾಶ್ರಮರೆಂಬ ಯೋಗಿವರೇಣ್ಯರು ಈಗಿನ ಬನ್ನಾಡಿ ಪ್ರದೇಶದಲ್ಲಿ ಜನಿಸಿ, ತಪೋನಿಷ್ಠರಾಗಿ ಜನಹಿತ ಚಿಂತಿಸಿ, ಆಗಿನ ಕಾಲದ ಸಾಮಾಜಿಕ ಅಭದ್ರತೆಯನ್ನು (ಜೈನ - ಬೌದ್ಧರ ಆಡಳಿತ) ಹೋಗಲಾಡಿಸುವ ಉದ್ದೇಶದಿಂದ  ಕಾಲದಲ್ಲಿದ್ದ ಭಾಗವತ ಸಂಪ್ರದಾಯದ ಸ್ಮಾರ್ತ, ಶ್ರೌತ ಬ್ರಾಹ್ಮಣರನ್ನು ಒಗ್ಗೂಡಿಸಿ ಒಂದು ಏಕತೆಯನ್ನು ತರುವ ಪ್ರಯತ್ನ ಮಾಡಿದರು ಎನ್ನುವ ವಿಷಯ ತಿಳಿದುಬರುತ್ತದೆ. ಇವರು ಶ್ರೀ ಅಣ್ಣಪ್ಪಯ್ಯನವರ ಸಮಕಾಲೀನರು. ಶ್ರೀ ಅಣ್ಣಪ್ಪಯಯನವರು ಪ್ರತಿಪಾದಿಸಿದ ಭಾಗವತ ಸಂಪ್ರದವಯದ ಪ್ರಭಾವಕ್ಕೆ ಒಳಗಾದವರು ಎನ್ನಬಹುದು. ವರದಾಶ್ರಮ ಸ್ವಾಮಿಗಳು ತಮ್ಮ ಗುರುಕುಲದ ಪರಿಸರದ ಜನರಲ್ಲಿ ಹಂಚಿಹೋದ ಕೆಲವು ಶಕ್ತಿ ಉಪಾಸನಾ ತತ್ವ, ಶೈವ ಉಪಾಸನಾ ತತ್ವ, ಗಾಣಪತ್ಯ ಉಪಾಸನಾ ತತ್ವ, ಕಾಲ ಉಪಾಸನಾ ತತ್ವಗಳನ್ನು ಜನರಿಗೆ ಮನವರಿಕೆ ಮಾಡಿಸುತ್ತಾ  ಏಕತ್ರ ಒಂದು ವ್ಯವಸ್ಥೆಯಲ್ಲಿ ಎಲ್ಲರೂ ಒಗ್ಗೂಡಬೇಕೆಂದು, ವರ್ಣಾಶ್ರಮ - ಧರ್ಮ ವೃತ್ತಿಗನುಗುಣವಾಗಿರಬೇಕೆಂದೂ, ಜೀವನದಲ್ಲಿ ಎಲ್ಲರೂ ಭಾಗವದ್ಭಕ್ತರೆಂದೂ, "ಭಾಗವತ"ರೆಂದೂ ಮನಮುಟ್ಟುವಂತೆ ಪ್ರವಚನಗಳನ್ನು ನೀಡಿ, ಒಂದು ಬದ್ಧತೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿದರು. ತನ್ಮೂಲಕ ಭಾಗವತ ಸಿದ್ಧಾಂತಕ್ಕೆ ಕರಾವಳಿ ಪ್ರದೇಶದಲ್ಲಿ ಒಂದು ಉತ್ತಮ ಬುನಾದಿ ಹಾಕಿಕೊಟ್ಟರು. ಆಗಿನ ಬ್ರಾಹ್ಮಣ ಪಂಗಡಗಳ ಉಲ್ಲೇಖ ಮಾಡುತ್ತಾ [] ದ್ರಾವಿಡ, ಸ್ಮಾರ್ತ, ಕೋಟ, ಕಂದಾವರ, ಶಿವಳ್ಳಿ, ಪಂಚಗ್ರಾಮ, ಚಿತ್ಪಾವನ, ಮೂಲಕೋಡು ಎಂಬ ವಿಭಾಗಗಳು ಕಂಡುಬರುತ್ತವೆ. ಆದರೆ "ಸ್ಥಾನಿಕ" ಎಂಬ ಪಂಗಡದ ವಿಚಾರ ಎಲ್ಲೂ ಕಂಡುಬರುವುದಿಲ್ಲ. ಏಕೆ ಹೀಗೆ ಎಂದು ಪರಿಶೀಲಿಸಿದಾಗ, ಸ್ಥಾನಿಕ ಎನ್ನುವುದು ಜಾತಿ ಸೂಚಕವಲ್ಲ, ಅದು ಉದ್ಯೋಗ (ಸ್ಥಾನ) ಸೂಚಕ ಪದ ಎಂದು ತಿಳಿಯಿತು. ಹೇಗೆ ತಹಶೀಲ್ದಾರ್, ಅಮಲ್ದಾರ್ ಎನ್ನುವ ಜಾತಿಗಳಿಲ್ಲವೋ ಹಾಗೆಯೇ ಸ್ಥಾನಿಕ ಎನ್ನುವ ಜಾತಿ ಇರುವುದಿಲ್ಲ ಹಾಗೂ ಇರಲೂಬಾರದು!! ಜೈನರು, ವೈಷ್ಣವರು ಹಾಗೂ ಕಾಳಾಮುಖರಲ್ಲೂ "ಸ್ಥಾನಿಕ" ಎನ್ನುವ ಪದ ರೂಢಿಯಲ್ಲಿತ್ತು ಎಂದು ತಿಳಿದುಬರುತ್ತದೆ [೧೩]. ಆದ್ದರಿಂದ ಸ್ಥಾನಿಕ ಜಾತಿ ಎಂದು ಸಂಭೋದಿಸುವುದೇ ತಪ್ಪಲ್ಲವೇ?

ಸ್ಥಾನಿಕರು ಮತ್ತು ಭಾಗವತ ಸಂಪ್ರದಾಯ:

ಸ್ಥಾನಿಕ ಎಂದರೆ "ಸ್ಥಾನಾಧ್ಯಕ್ಷ" (ಗವರ್ನರ್) ಎಂದರ್ಥ []. ಆರಂಭದ ಕಾಲದಲ್ಲಿ (ಸುಮಾರು ೨೩೦೦ ವರ್ಷಗಳ ಹಿಂದೆ - ಮೌರ್ಯರ ಕಾಲದಲ್ಲಿ) ರಾಜಾಶ್ರಯದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಆಡಳಿತ ಅಧಿಕಾರಗಳನ್ನು ಹೊಂದಿದ್ದವರನ್ನು "ಸ್ಥಾನಿಕರು" ಎಂದು ಕರೆಯಲಾಗುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ "ಸ್ಥಾನಿಕ" ರಿಗೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ದಂಡಾಧಿಕಾರಿಗೆ ಸಮನಾದ ಸ್ಥಾನಮಾನವನ್ನು ನೀಡಲಾಗಿದೆ. ಇಂತಹ  ಉದ್ಯೋಗವನ್ನು ಮಾಡಲು ಓದು-ಬರಹ, ವಿದ್ಯೆ ಹಾಗೂ ಜಾಣ್ಮೆಗಳನ್ನು ಉಳ್ಳ ಉತ್ತಮ ವರ್ಗದ ಜನರನ್ನು ನೇಮಕ ಮಾಡಲಾಗುತ್ತಿತ್ತು (ಇಂದು ಅಂತಹವರನ್ನು ಬ್ರಾಹ್ಮಣರು ಎಂದು ಕರೆಯಲಾಗುತ್ತದೆ, ಜಾತಿ ಸೂಚಕವಾಗಿ ಅಲ್ಲ!). ಅವರೇ ಮುಂದೆ ಸ್ಥಾನಿಕ ಬ್ರಾಹ್ಮಣರು ಎಂದು ಸಂಭೋದಿಸಲ್ಪಟ್ಟಿರಬೇಕು. ಕಾಲ ಕಳೆದಂತೆ ಇವರ ಅಧಿಕಾರವನ್ನು ಧಾರ್ಮಿಕ ಆಡಳಿತಕ್ಕೆ ಸೀಮಿತಗೊಳಿಸಲಾಯಿತು. ದೇವಳದ ಆಡಳಿತ ಮಾತ್ರವಲ್ಲದೆ, ಅರ್ಚಕ, ತಂತ್ರಿ, ನ್ಯಾಯತೀರ್ಮಾನ, ಆಧ್ಯಾತ್ಮಿಕ ಚಿಂತನ-ಮಂಥನಗಳ ಜವಾಬ್ದಾರಿಯೂ ಸ್ಥಾನಿಕರ ಮೇಲಿತ್ತು. ಇವರೆಲ್ಲ ಸಾಂಪ್ರದಾಯಿಕ ಬ್ರಾಹ್ಮಣರಾಗಿದ್ದು, ತತ್ವಜ್ಞಾನಿಗಳೂ ಹಾಗೂ ತಂತ್ರಶಾಸ್ತ್ರ ಕೋವಿದರಾಗಿದ್ದರು. ಇದಕ್ಕೆಲ್ಲ ಅಣ್ಣಪ್ಪಯ್ಯನವರ ತಪಸ್ಸ್ಶಕ್ತಿಯೇ ಕಾರಣ ಎಂದು ಸೋದಾಹರಣವಾಗಿ ಮುಂದೆ ವಿವರಿಸಲಿದ್ದೇನೆ. ಶ್ರೀ ಅಣ್ಣಪ್ಪಯ್ಯನವರು ಬೋಧಿಸಿದ ಭಾಗವತ ಸಂಪ್ರದಾಯದ ಆಚರಣೆಗಳೇ ೨೩೦೦ ವರ್ಷಗಳ ಬಳಿಕವೂ ಸ್ಥಾನಿಕ ಸಮಾಜ ಉಳಿದು-ಬೆಳೆದಿರುವುದಕ್ಕೆ ಕಾರಣ. ಸ್ಥಾನಿಕರ ಕುರಿತಾದ ಗ್ರಂಥ ಒಂದರಲ್ಲಿ () " ಕರಾವಳಿ ಕರ್ನಾಟಕದಲ್ಲಿ ಸಾಮಾಜಿಕ ಏಕತೆಯನ್ನು ಸಾಧಿಸುವಲ್ಲಿ ಸ್ಥಾನಿಕರ ಪಾತ್ರ ದೊಡ್ಡದು. ಸಾಂಪ್ರದಾಯಿಕ ಕಲಿಕೆಯ ರೀತಿನೀತಿಗಳ, ಪಾರಂಪರಿಕ ಸಂಸ್ಥೆಗಳ, ಆಚರಣೆಗಳ, ಕಟ್ಟುಕಟ್ಟಳೆಗಳ ಸಂರಕ್ಷಕರೂ, ಪಾಲಕರೂ ಆಗಿದ್ದರು" ಎಂದಿದೆ. ಅಲ್ಲದೆ "ಭಾಗವತ ಸಂಪ್ರದಾಯವೆಂದರೆ ವಿಷ್ಣು ಹಾಗೂ ಶಿವ ಇಬ್ಬರನ್ನೂ ಆರಾಧಿಸುವವರು. ಕರಾವಳಿ ಕರ್ನಾಟಕದ ಬ್ರಾಹ್ಮಣರು ಸಾಮಾನ್ಯವಾಗಿ ಸಂಪ್ರದಾಯದವರು. ಸಾಮಾನ್ಯವಾಗಿ ದೇವಾಲಯದ ಅರ್ಚಕರು. ಭಟ್ಟನಾಗಬೇಕಾದರೆ ಆತ ಕೆಲವು ಅರ್ಹತೆಗಳನ್ನುಗಳಿಸಿರಬೇಕು. ಉತ್ತರ ಮೇರು (ತಮಿಳುನಾಡಿನ ಚಂಗಲಪೇಟೆ ಜಿಲ್ಲೆ) ಶಾಸನದ ಪ್ರಕಾರ ಭಟ್ಟನು ಸಾಮವೇದಿಯ ಉದರದಲ್ಲಿ ಜನಿಸಿರಬೆಕು. ಇತರ ವೇದಗಳಲ್ಲಿ ಪಾರಂಗತನಾಗಿರಬೇಕು. ಎರಡು ವೇದಗಳನ್ನು ಕಲಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಪಾಣಿನಿಯ ಅಷ್ಟಾಧ್ಯಾಯಿ ಹಾಗೂ ಅಲಂಕಾರ ಶಾಸ್ತ್ರಗಳನ್ನು ಕಳಿಸುವವನಿರಬೇಕು. ಇಪ್ಪತ್ತು ಅಧ್ಯಾಯಗಳ ಮೀಮಾಂಸೆಯನ್ನು ವಿಶ್ಲೇಷಿಸುವ ಶಕ್ತಿ ಇರಬೇಕು. ಅವನು ಹಳ್ಳಿಯವನಾಗಿರಬಾರದು. ಆತ ನಾಲ್ಕು ಮಂದಿ ಶಿಷ್ಯರನ್ನು ಸ್ವೀಕರಿಸಿ ಅವರಿಗೆ ಒಂದು ಒಂದು ಹೊತ್ತು ಅನ್ನಹಾಕಿ, ಮೇಲೆ ಹೇಳಿದ ವಿಷಯವನ್ನು ಲಿಸಿ ಅವರನ್ನು ಪಾರಂಗತರನ್ನಾಗಿ ಮಾಡಬೇಕು" ಎಂದಿದೆ
​​
​​
ಶ್ರೀಮಠ ಬಾಳೆಕುದ್ರುವಿನ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮಿಗಳ ಅಭಿಪ್ರಾಯದಂತೆ "ದ್ವೈತಾದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತಗಳಿಗೂ ಮುಕುಟಪ್ರಾಯವಾದದ್ದು ಭಾಗವತ ಸಂಪ್ರದಾಯ. ಸಮಾಜದ ಸಮಷ್ಟಿಯನ್ನು ಕಾಯ್ದುಕೊಂಡು, ತರ-ತಮ ಅಳಿಸಿ, ರಾಷ್ಟ್ರೋನ್ನಯನದ ವಾಹಿನಿಯಲ್ಲಿ ಒಂದಾಗಿ ಕೊಂಡೊಯ್ಯುವ ಶ್ರೇಷ್ಠ ಸಂಪ್ರದಾಯವೇ ಭಾಗವತ ಸಂಪ್ರದಾಯ" []. ಇವೆಲ್ಲ ಪುರಾವೆಗಳೊಂದಿಗೆ ಸ್ಥಾನಿಕರ ಆಗಿನ-ಈಗಿನ ನಡವಳಿಕೆ, ಜೀವನ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಭಾಗವತ ಸಂಪ್ರದಾಯದ ಅನುಯಾಯಿಗಳು ಎಂದು ಸ್ಪಷ್ಟವಾಗಿ ತಿಳಿಯಬಹುದು. ಭಾಗವತ ಸಂಪ್ರದಾಯದ ಬಗ್ಗೆ ಈಗ ನಮಗೆ ತಿಳಿದಿರುವುದು ಇಷ್ಟೇ. ಸದ್ಯದಲ್ಲೇ ಭಾಗವತ ಸಿದ್ಧಾಂತ ಮತ್ತು ಮೂರು ಸಮುಚ್ಚಯಗಳು ಅಧಿಕೃತವಾಗಿ ಪರಿಷತ್ತಿನಲ್ಲಿ ಮಂಡಣೆಗೊಂಡು ಅನುಮೋದನೆ ಪಡೆದು ವೇದ ಕೃಷಿಕ ಶ್ರೀ ಕೆ. ಎಸ್. ನಿತ್ಯಾನಂದರಿಂದ ಪ್ರಕಟಣೆಗೊಳ್ಳಲಿವೆ. ಆಗ ಇನ್ನಷ್ಟು ಸ್ಪಷ್ಟ ಚಿತ್ರಣಗಳು ನಮಗೆಲ್ಲರಿಗೂ ಸಿಗಲಿವೆ. 

ಮೊದಲಿಗೆ ನಮ್ಮಲ್ಲಿ ಭಾಗವತ ಸಂಪ್ರದಾಯದ ಆಚರಣೆ ಇದ್ದರೂ ಕೂಡ, ಆದಿಗುರು ಶ್ರೀ ಶಂಕರರ ಬಳಿಕ ಅದ್ವೈತ ತತ್ವಕ್ಕೆ ಬದ್ಧರಾಗಬೇಕಾಯಿತು []. ಬಳಿಕ ಬಂದ ಶ್ರೀ ಮಧ್ವರ ತತ್ವಗಳಿಂದ ( ಬಳಿಕ ಶ್ರೀ ವಾದಿರಾಜರಿಂದ) ಪ್ರೇರಿತರಾದ ಕೆಲವು ಮಂದಿ ದ್ವೈತ ತತ್ವಾನುಯಾಯಿಗಳಾದರು. ಕೆಲವರು ತಮ್ಮನ್ನು ಶಿವ ಬ್ರಾಹ್ಮಣರೆಂದೂ, ಇನ್ನು ಕೆಲವರು ವೈಷ್ಣವರೆಂದೂ ಕರೆದುಕೊಂಡರು. ಆದರೆ ಸ್ಥಾನಿಕರು ಮಾತ್ರ ನಿಜ ಅರ್ಥದಲ್ಲಿ ಭಾಗವತರು. ಸ್ಥಾನಿಕ ಒಂದು ಪದವಿಯೇ ಹೊರತು ಜಾತಿಯಲ್ಲ []. ಸ್ಥಾನಿಕ ಎಂಬ ಪಟ್ಟವನ್ನು ನಾಲ್ವಡಿ ಕೃಷ್ಣದೇವರಾಯನ ಕಾಲದ ಬಳಿಕ ತೆಗೆದು ಹಾಕಲಾಯಿತಾದರೂ ಕರಾವಳಿಯ ಜಿಲ್ಲೆಗಳಲ್ಲಿ ಮಾತ್ರ ಕೆಲವು ಸ್ಥಾಪಿತ ಹಿತಾಸಕ್ತಿಗಳು ಜಾತಿಯ ರೂಪದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಬ್ರಿಟಿಷರ ಕುತಂತ್ರವೇ ಮೂಲ ಕಾರಣ. ಬ್ರಿಟಿಷರ ವಸಾಹತು ವಿರೋಧಿಯಾಗಿದ್ದ ಸ್ಥಾನಿಕ ಪಂಗಡವನ್ನು ಮೂಲೆಗುಂಪು ಮಾಡಲು ಸ್ಟೇಟ್ ಸರಕಾರ ಸ್ಥಾನಿಕ ಎಂಬ ಹೆಸರಿನ ಉದ್ಯೋಗವನ್ನೇ ವಜಾಮಾಡಿತು. ಸ್ಥಾನಿಕ ಪದದ ಬದಲು ಮಣೆಗಾರ, ಶ್ಯಾನುಭೋಗ, ಮೊಕ್ತೇಸರದಂತಹ ಪದಗಳ ಬಳಕೆ ಆರಂಭವಾಯಿತು. ಆದರೆ ಕರಾವಳಿಯ ಜಿಲ್ಲೆಗಳಲ್ಲಿ ಮಾತ್ರ ಸ್ಥಾನಿಕ ಎಂಬ ಪದವನ್ನು ಚಾಲ್ತಿಯಲ್ಲಿಟ್ಟು ಅವರ ನೈತಿಕ ಸ್ಥೈರ್ಯವನ್ನು ಕುಂದಿಸುವ ಪ್ರಯತವನ್ನು ಬ್ರಿಟಿಷರು ವ್ಯವಸ್ಥಿತವಾಗಿ ಮಾಡಿದರು. ಸ್ಥಾನಿಕ ಪದವನ್ನು ಸ್ಥಾನಿಕ ಜಾತಿಯಾಗಿ ಮಾಡಿದ ಕೀರ್ತಿಯೂ ಅವರಿಗೆ ಸಲ್ಲಬೇಕು. ಅಷ್ಟೇ ಅಲ್ಲದೆ ಕಪೋಲ ಪಲ್ಪಿತ ಪುರಾಣವನ್ನು ಸೃಷ್ಟಿಸಿ ಸ್ಥಾನಿಕರು "ಪತಿತ" ಬ್ರಾಹ್ಮಣರು ಎಂದು ೧೮೯೪ ರಲ್ಲಿ ಪ್ರಕಟವಾದ ಡಿಸ್ಟ್ರಿಕ್ಟ್ ಮಾನ್ಯುಯಲ್ ನಲ್ಲಿ ನಮೂದಿಸಿ ದೇವರ ಪೂಜೆಯ ಅಧಿಕಾರವನ್ನು ನಿರಾಕರಿಸಲಾಯಿತು. ಬ್ರಾಹ್ಮಣ ಎಂದೆನಿಸಿಕೊಂಡಮೇಲೆ "ಪತಿತ" ನೆಂದಾಗಲು ಹೇಗೆ ಸಾಧ್ಯ? ಹಣೆಪಟ್ಟಿಯನ್ನು ಕಳಚಿಕೊಳ್ಳಲು ಕೆಲವರು ತಮ್ಮನ್ನು "ಶಿವ ಬ್ರಾಹ್ಮಣ"ರೆಂದು ಕರೆದುಕೊಳ್ಳಲಾರಂಭಿಸಿದರು. 

ಇತರ ಪಂಗಡಗಳು ಹಾಗೂ ಬ್ರಿಟಿಷರು ಸ್ಥಾನಿಕರನ್ನು ವಿರೋಧಿಸಲು ಕಾರಣಗಳು ಹಲವು. ಒಂದು ಉದಾಹರಣೆಯನ್ನು ಕೊಡುತ್ತೇನೆ. ದ್ವೈತಾದ್ವೈತಗಳ ಸಂಕ್ರಮಣ ಕಾಲದಲ್ಲಿ ಉಡುಪಿ (ಉಡುಪರ ಉಡುಪಿ - ರಜತಪುರ) ಮೂಲದೇವರಾದ ಅನಂತೇಶ್ವರ ದೇವಾಲಯದ ಆಡಳಿತ ನಡೆಸುತ್ತಿದ್ದ ಸ್ಥಾನಿಕರು ಶ್ರೀ ಕೃಷ್ಣಮಠ ಹಾಗೂ ಮಧ್ವಸರೋವರವನ್ನು ಸ್ಥಾಪಿಸಲು ಅವಕಾಶ ನಿರಾಕರಿಸಿದ್ದು ಬ್ರಾಹ್ಮಣ ಪಂಗಡಗಳ ನಡುವಿನ ವೈಮನಸ್ಯಕ್ಕೆ ದಾರಿಮಾಡಿಕೊಟ್ಟಿತ್ತು. ಇಂತಹುದೇ ಉದಾಹರಣೆಗಳನ್ನು ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ದೇವಾಲಯದ ಬಗ್ಗೆಯೂ ಕೊಡಬಹುದು. ಭಾರತದ ರಾಜಮನೆತನಗಳ ಅಧಿಕಾರ ಹೋಗಿ ಬ್ರಿಟಿಷರ ಆಳ್ವಿಕೆ ಆರಂಭವಾಗುವ ನಡುವಿನ ಕಾಲಘಟ್ಟದಲ್ಲಿ ರೀತಿಯ ಸಂಘರ್ಷಗಳು ತಾರಕಕ್ಕೇರಿದವು. ಕಾಲದ ವಿಶಿಷ್ಟ ಸಾಮಾಜಿಕ, ಧಾರ್ಮಿಕ ಸನ್ನಿವೇಶಗಳಿಂದಾಗಿ ಸ್ಥಾನಿಕರು ಪ್ರಭಾವಶಾಲಿ ಭೂಮಾಲೀಕರಾಗಿ ಮೂಡಿಬಂದರು. ಅವರು ಆಸ್ತಿಪಾಸ್ತಿಯ ಕ್ರಯವಿಕ್ರಯ, ಪರಭಾರೆ ಇತ್ಯಾದಿ  ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಇಂತಹ ನ್ಯಾಯ ಸಮ್ಮತ ಕಾರ್ಯಗಳು ಕುಟಿಲ ಬುದ್ಧಿಯ ಬ್ರಿಟಿಷರಿಗೆ ಅಸಹನೀಯವೆನಿಸಿ ಅವರನ್ನು ತುಳಿಯಲು ಡಿಸ್ಟ್ರಿಕ್ಟ್ ಮಾನ್ಯುಯಲ್ ನಲ್ಲಿ ಕೆಟ್ಟದಾಗಿ ಬಿಂಬಿಸಿದರು. ಒಮ್ಮೆ ಹೀನ ಕುಲದವರೆಂದು ಬಿಂಬಿತರಾದಮೇಲೆ ಸ್ಥಾನಿಕರು ಚೆದುರಿ ಮೂಲೆಗುಂಪಾದರು. 

ಸ್ಥಾನಿಕರಿಗೆ ಸಂಬಂಧಿಸಿದ ಕೆಲವೊಂದು ಧಾಖಲೆಗಳಲ್ಲಿ [] ಅವರನ್ನು ಎಲ್ಲಿಂದಲೋ ಬಂದು ಕರಾವಳಿಯಲ್ಲಿ ನೆಲೆನಿಂತವರೆಂದು ದಾಖಲಿಸಲಾಗಿದೆ. ಉತ್ತರ ಭಾರತದವರೆಲ್ಲ ಉತ್ತಮರು, ದಕ್ಷಿಣದವರೆಲ್ಲ ಅಧಮರೆಂಬ ಪಾಶ್ಚಾತ್ಯ ಕುಹಕ ಬುದ್ಧಿ ಪ್ರೇರಿತ ಸಂಶೋಧನೆಗಳ ಫಲವಾಗಿ ಅಭಿಪ್ರಾಯಕ್ಕೆ ಬರಲಾಗಿದೆ. ಇವುಗಳಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಆರ್ಯ - ದ್ರಾವಿಡ ಸಂಸ್ಕೃತಿಗಳ ತಿಕ್ಕಾಟ ಬರಿಯ ಸುಳ್ಳುಗಳ ಕಂತೆ ಎಂದು ಈಗಾಗಲೇ ಸಾಬೀತಾಗಿದೆ [೧೪]. ಇದಕ್ಕೆ ವಿರುದ್ಧವಾಗಿ, ಕರ್ಮಭೂಮಿಯಾದ ಭಾರತದಿಂದ ಪೌರಾತ್ಯ ಹಾಗೂ ಪಾಶ್ಚಿಮಾತ್ಯ ದೇಶಗಳಿಗೆ ಉತ್ತಮ ಜನರು (ಆರ್ಯರು) ವಲಸೆ ಹೋಗಿ ಅಲ್ಲಿ ನವ ಸಂಸ್ಕೃತಿಗಳ ನಿರ್ಮಾತೃಗಳಾದುದ್ದನ್ನು ಪ್ರಾಚ್ಯ ಸಂಶೋಧಕರು ಒಪ್ಪಿಕೊಂಡು ಆಗಿದೆ. ಅಂತಹದ್ದರಲ್ಲಿ ದಕ್ಷಿಣ ಭಾರತಕ್ಕೆ ಸ್ಥಾನಿಕರು ವಲಸೆ ಬಂದರು ಎನ್ನುವುದು ಹಾಸ್ಯಾಸ್ಪದ ಎನ್ನಿಸುತ್ತದೆ ಅಲ್ಲವೇ. ಸ್ಥಾನಿಕ ಪದವು "ಸ್ಥಳೀಕ" ಪದಕ್ಕೆ ಹತ್ತಿರ ಇರುವ ಕಾರಣ ಅವರನ್ನು ಪ್ರದೇಶದ ಮೂಲನಿವಾಸಿಗಳು ಎನ್ನುವುದೇ ಸೂಕ್ತವಲ್ಲವೇ! [೧೨]. 
ಸ್ಥಾನಿಕರು ಎಂದರೆ ಯಾರು ಎಂದು ನೋಡೋಣ. ಒಂದು ಉದಾಹರಣೆ - ನನ್ನ ಪಿಜ್ಜ ಶ್ರೀ ನಾಗಪ್ಪಯ್ಯನವರು ಶ್ಯಾನುಭೋಗರಾಗಿದ್ದಲ್ಲದೆ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಳದ ಆಡಳಿತ ಮುಕ್ತೇಸರರಾಗಿದ್ದವರು. ಅಲ್ಲದೆ ಅವರ ಮೊಮ್ಮಗ (ನನ್ನ ತಂದೆ) ಕೂಡ ಶ್ಯಾನುಭೋಗರಾಗಿದ್ದವರು. ಆದ್ದರಿಂದಲೇ ನಮ್ಮದು ಸ್ಥಾನಿಕ ಕುಟುಂಬ. ಅದಕ್ಕೂ ಹಿಂದಿನ ನಮ್ಮ ತಲೆಮಾರು ಹೆಜಮಾಡಿಯ ಮಹಾಲಿಂಗೇಶ್ವರ ದೇವಳದ ಆಡಳಿತ ನಡೆಸುತ್ತಿತ್ತಂತೆ! ನನ್ನ ತಾಯಿ ಕಡೆಯ ಹೊಯ್ಗೆಗುಡ್ಡೆ ಕುಟುಂಬ (ತಂತ್ರ, ವೈದ್ಯ), ಧರ್ಮಸ್ಥಳಕ್ಕೆ ಸಂಬಂಧಿಸಿದ ದೇಲಂಪಾಡಿತ್ತಾಯ ಕುಟುಂಬ (ನ್ಯಾಯ ತೀರ್ಮಾನ), ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂಧಿಸಿದ ನಟ್ಟೋಜ, ಮೊರಾಜ ಹಾಗೂ ಕುಕ್ಕೋಜ ಕುಟುಂಬಗಳು (ಮಾನಸಿಕ ಚಿಕಿತ್ಸೆ), ಹಿರಿಯಡ್ಕದ ಸ್ಥಾನಿಕ ಕುಟುಂಬಗಳು (ನ್ಯಾಯ ತೀರ್ಮಾನ), ಕಾಸರಗೋಡಿನ ಕೂಡ್ಲು ಮನೆತನ (ದೇವಸ್ಥಾನ ಆಡಳಿತ, ಶ್ಯಾನುಭೋಗಿಕೆ), ಹಾಗೆಯೇ ಪಾದೂರು ಗುರುರಾಜಭಟ್ಟರ ಕುಟುಂಬ (ತಂತ್ರ), ಬಾಳೆಕುದ್ರು ಮಠಕ್ಕೆ ಸಂಬಂಧಿಸಿದ ಮಂಜರ ಕುಟುಂಬ (ಮಠದ ಆಡಳಿತ ಹಾಗೂ ತಂತ್ರ), ಇಷ್ಟು ಮಾತ್ರವಲ್ಲ ಎಲ್ಲ ದೇವ-ದೈವಸ್ಥಾನಗಳ ಅರ್ಚಕ, ತಾಂತ್ರಿಕ, ಆಡಳಿತ ವರ್ಗದವರೂ ಸ್ಥಾನಿಕರೇ. ಬಾಳೆಕುದ್ರು ಶ್ರೀಮಠದ ಯತಿಗಳು ಗೋವಾದಿಂದ ತಿರುವನಂತಪುರದವರೆಗೆ ನಾನಾ ಪ್ರದೇಶಗಳಲ್ಲಿ ಗುರುಕುಲಗಳ ಸ್ಥಾಪನೆ ಮಾಡಿ ಸನಾತನ ಧರ್ಮದ ರಕ್ಷಣೆಗೆ ಪ್ರಯತ್ನಿಸಿದ್ದರು []. ಅವುಗಳಲ್ಲಿ ಕುಂದಾಪುರದ ಆಸುಪಾಸಿನ ನಾಲ್ಕು ಆವರಗಳು (ಕಂದಾವರ, ನೀಲಾವರ, ಕಾಳಾವರ, ಕ್ರೋಢಾವರ (ಶಂಕರ ನಾರಾಯಣ)), ಮಾತ್ರವಲ್ಲ ಉಳ್ಳೂರ, ಬಾರ್ಕೂರು, ಬೆಲ್ಲ, ಹೂವಿನಕೆರೆ, ಉಪ್ಪೂರು, ಕುಕ್ಕೆಹಳ್ಳಿ ಮುಂತಾದ ಸ್ಥಳಗಳು ವೇದ - ತಂತ್ರ ಪಾಠಶಾಲೆಗಳಾಗಿ, ಸ್ಥಾನಿಕರ ಬಾಹುಳ್ಯ ಉಳ್ಳ ಸ್ಥಳಗಳಾಗಿ ಪ್ರಸಿದ್ಧವಾಗಿದ್ದವು. ಸ್ಥಾನಿಕರ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ [] (೧೮-೧೯ ನೇ ಶತಮಾನದ್ದು) ಸಂಕಷ್ಟದ ದಿನಗಳಲ್ಲಿ ಸ್ಥಾನಿಕರು ನಿಟ್ಟೂರು (ಉಡುಪಿ), ತ್ರಿಶಿಲೇಶ್ವರ (ಮಂಗಳೂರು), ಕಬ್ಬಿನಾಲೆ (ಕಾರ್ಕಳ) ಹಾಗೂ ಸುಬ್ರಹ್ಮಣ್ಯ (ಪುತ್ತೂರು) ಗಳಲ್ಲಿ ನಾಲ್ಕು ಗುಂಪುಗಳಾಗಿ ಚೆದುರಿ ಹೋದರು [೧೧]. ಇನ್ನು ಶ್ರೀಮಠದ ಗುರು ಪರಂಪರೆಯ ೯ನೇ ಗುರುಗಳಾದ ಈಶಾಶ್ರಮ ಸ್ವಾಮಿಗಳು ಕಬ್ಬಿನೆಲೆಗೆ ಬಂದು ನೆಲೆಸಿ ೧೮ ವರ್ಷಗಳ ಕಾಲ ಪಾಠಶಾಲೆ ನಡೆಸಿದ್ದರು. ಹಾಗಾಗಿಯೇ ಕಬ್ಬಿನಾಲೆಯಲ್ಲಿ ಭಾಗವತ ಸಂಪ್ರದಾಯದ ಸ್ಥಾನಿಕ ಕುಟುಂಬಗಳು ಅಷ್ಟೊಂದು ಸಂಖ್ಯೆಯಲ್ಲಿ ವಾಸವಾಗಿರುವುದು. ಎಲ್ಲ ಸಂಬಂಧಗಳಿಂದಾಗಿಯೇ ಶ್ರೀಮಠದಲ್ಲಿ ಸ್ಥಾನಿಕರಿಂದಲೇ ವರದಾಶ್ರಮ ಸ್ವಾಮಿಗಳ ವೃಂದಾವನವನ್ನೂ ಹಾಗೂ ಸಂಗಮೇಶ್ವರನ ಗುಡಿಯನ್ನು ಜೀರ್ಣೋದ್ದಾರಗೊಳಿಸಲಾಗಿದೆ. ಯಾರು ಗುರುಗಳಿಗೆ ಅತ್ಯಂತ ಪ್ರಿಯರೋ ಅವರಿಂದಲೇ ಗುರುಪೀಠದ ಜೀರ್ಣೋದ್ಧಾರ ಮಾಡಿಸುವುದು ಸಾರ್ಥಕವಲ್ಲವೇ!     

ಶ್ರೀಮದ್ವಾದಿರಾಜರು ಹುಟ್ಟಿದ್ದು ನಮ್ಮೂರಿನ ಪಕ್ಕದ ಹೂವಿನ ಕೆರೆ (ಹಿಂದೆ ಬಾಳೆಕುದ್ರು ಮಠದ ವೇದ - ತಂತ್ರ ಪಾಠಶಾಲೆಯ ವಿಷಯದಲ್ಲಿ ಇದನ್ನು ಉಲ್ಲೇಖಿಸಿದೆ) ಬಳಿಕ ಸ್ಥಾನಿಕ ಕುಟುಂಬದಲ್ಲಿ. ಮಾಧ್ವರಿಗೆ ತಂತ್ರವಿದ್ಯೆಯ ಅಧಿಕಾರ ಇಲ್ಲದ ಕಾರಣ ಬಡ ಸ್ಥಾನಿಕ ಕುಟುಂಬದ ವಟುವನ್ನು ಆರಿಸಿ ಶಿರಸಿಯ ಬಳಿಯ ಸೋದೇಗೆ ಕರೆದೊಯ್ದು, ಸಕಲ ಶಾಸ್ತ್ರ ಕೋವಿದನನ್ನಾಗಿ ಮಾಡಿ ಸ್ಥಾನಿಕರ ವಿರುದ್ಧವೇ ಕೆಲಸ ಮಾಡಲು ಪ್ರೇರೇಪಿಸಲಾಯಿತು. ತಂತ್ರ ವಿದ್ಯೆಯಲ್ಲಿ ಪರಿಣತರಾದ ವಾದಿರಾಜರು ಉಡುಪಿಯ ಆಸುಪಾಸಿನಲ್ಲಿ "ಮಟ್ಟು ಗುಳ್ಳಾ", "ಶಂಕರಪುರ ಮಲ್ಲಿಗೆ" ಇತ್ಯಾದಿ ಅಮೂಲ್ಯ ಉತ್ಪನ್ನಗಳ ಬೆಳವಣಿಗೆಗೆ ಕಾರಣರಾದರು. ಉಡಪಿಯ "ಮುಖ್ಯಪ್ರಾಣ", "ಅಕ್ಷಯ ಪಾತ್ರೆ" ಗಳ ಹಿಂದಿನ ತಂತ್ರವೂ ಸ್ಥಾನಿಕ ವಾದಿರಾಜರದ್ದೇ. ಈಗಲೂ ಅವರಿಗೆ ಸಂಬಂಧಿಸಿದ ಕುಂಭಾಸಿ ಮಠದಲ್ಲಿ ಹರಿಹರ (ಮಹಾಲಿಂಗೇಶ್ವರ) ದೇವರ ಪೂಜೆಯು ಅವರ ಕುಟುಂಬಿಕರಿಂದಲೇ ನಡೆಯುತ್ತಿದೆ. ಹರಿಹರನ ಪೂಜೆ ಎಂದರೆ "ಭಾಗವತ". ಇದೂ ಕೂಡ ನನ್ನ ಸ್ಥಾನಿಕ - ಬಾಳೆಕುದ್ರು - ಭಾಗವತ - ಅಣ್ಣಪ್ಪಯ್ಯ ಸಂಬಂಧಗಳಿಗೆ ಪುಷ್ಟಿಯನ್ನು ಕೊಡುತ್ತದೆ. ಇನ್ನು ಉತ್ತರ ಭಾರತದ ಸ್ಥಾನಿಕರ ಬಗ್ಗೆ ಹೆಚ್ಚು ಪರಿಚಯ ನನಗೆ ಇಲ್ಲದೆ ಇದ್ದರೂ, ಒಂದು ಕುಟುಂಬದ ಬಗ್ಗೆ ತರ್ಕಬದ್ಧವಾಗಿ ವಿಶ್ಲೇಷಿಸಿದಾಗ ಸಂಗತಿ ಬೆಳಕಿಗೆ ಬಂದಿರುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ "ವಾಜಪೇಯಿ" ಎನ್ನುವ ಉಪನಾಮ ಬರಲು ಅವರ ಹಿರಿಯರು ನಡಿಸಿದ ವಾಜಪೇಯ ಯಾಗ ಕಾರಣ [೧೫]. ಅವರ ತಾತ ಶ್ಯಾಮಲಾಲ್ ವಾಜಪೇಯಿ ಅವರು ಸಂಸ್ಕೃತ ವಿದ್ವಾಂಸರೂ, ಕವಿಗಳೂ, ಶಾಸ್ತ್ರ ಕೋವಿದರೂ ಆಗಿದ್ದು, ಭಾಗವತ ವಾಚನದ ಮೂಲಕ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದರು. ನಿಜವಾದ ಅರ್ಥದಲ್ಲಿ ಅವರು ಭಾಗವತರು. ವಾಜಪೇಯ ಯಾಗ ಮಾಡಲು ಭಾಗವತರಿಂದ ಮಾತ್ರ ಸಾಧ್ಯ. ಅದು ಕಲ್ಲಡ್ಕದ ವಾಜಪೇಯ ಯಾಗದಲ್ಲಿ ನಮ್ಮ ಎಲ್ಲರ ಗಮನಕ್ಕೂ ಬಂದಿದೆ

ಸ್ಥಾನಿಕರು ತುಳುನಾಡಿನ ಮೂಲ ಬ್ರಾಹ್ಮಣರು. ಅವರಿಗೆ ೨೦೦೦ ವರ್ಷಗಳ ಇತಿಹಾಸವಿದೆ []. ಪೂಜ್ಯ ಸ್ವಾಮೀಜಿಯವರು ಬರೆದ "ಶ್ರೀ ಅಣ್ಣಪ್ಪಯ್ಯ ಚರಿತ್ರೆ" ಯೂ ಕೂಡ  ಅಣ್ಣಪ್ಪಯ್ಯನವರನ್ನು ೨೦೦೦ ವರ್ಷಗಳ ಹಿಂದಿನವರೆಂದು ಉಲ್ಲೇಖಿಸಿದೆ. ಆಗ ಇದ್ದ ಬ್ರಾಹ್ಮಣ ಕುಟುಂಬ (ಅದು ಸ್ಥಾನಿಕ ಕುಟುಂಬವೇ ಇರಬೇಕು) ಒಂದರಲ್ಲಿ ಅವರ ಜನನವಾಗುತ್ತದೆ. ಅದಕ್ಕಿಂತ ಪೂರ್ವದಲ್ಲಿದ್ದ ಸ್ಥಾನಿಕರ ಪರಿಚಯ ನಮಗೆ ಈಗ ಇಲ್ಲದೆ ಇರುವ ಕಾರಣ ಶ್ರೀ ಅಣ್ಣಪ್ಪಯ್ಯನವರನ್ನು ಸ್ಥಾನಿಕರ ಮೂಲ ಪುರುಷ ಎಂದು ಖಂಡಿತವಾಗಿಯೂ ಹೇಳಬಹುದು. ಇದನ್ನು ಪುಷ್ಟೀಕರಿಸುವುದಕ್ಕೆ ಇನ್ನಷ್ಟು ಪುರಾವೆಗಳನ್ನು ಮುಂದೆ ನೀಡಲಿದ್ದೇನೆ

ಶ್ರೀ ಅಣ್ಣಪ್ಪಯ್ಯನವರು

೨೦೦೦ ವರ್ಷಗಳ ಹಿಂದೆ ಭಾರತೀಯರನ್ನು ಕಾಡುತ್ತಿದ್ದ ಜೈನ, ಬೌದ್ಧಾದಿ ಧರ್ಮಗಳನ್ನು ಮೆಟ್ಟಿ ನಿಂತು, ವೇದ ನಿಂದಕರನ್ನು ಬಗ್ಗು ಬಡಿದು ಸನಾತನ ಧರ್ಮದುದ್ಧಾರ ಮಾಡಿದವರು ಶ್ರೀ ಅಣ್ಣಪ್ಪಯ್ಯನವರು. ಪ್ರಪಂಚದಾದ್ಯಂತ ಸಂಚರಿಸಿ, ಜನರ ದುಃಖಗಳಿಗೆ ಸ್ಪಂದಿಸಿ, ಧರ್ಮಜಾಗೃತಿ ಮೂಡಿಸಿದರು. ಅಷ್ಟು ಮಾತ್ರವಲ್ಲದೆ ಸತ್ಯ, ಧರ್ಮ, ನ್ಯಾಯವೇ ದೇವರು ಎಂದು ತೋರಿಸಿ, ಅವು ಸ್ಥಿರವಾಗಿರಲೆಂದು ತಂತ್ರ ಸೂತ್ರಗಳನ್ನು ಅಳವಡಿಸಿದರು. ಇಂತಹದೇ ತಂತ್ರ ಸೂತ್ರಗಳು ಸ್ಥಾನಿಕರಲ್ಲಿಯೂ ಬಳಕೆಯಲ್ಲಿತ್ತು []. ತಂತ್ರಗಳ ಅಧಿಕಾರ ಸ್ಥಾನಿಕರ ಕೈಯಲ್ಲೇ ಇದೆ. ಆದ್ದರಿಂದ ಶ್ರೀ ಅಣ್ಣಪ್ಪಯ್ಯನವರನ್ನು ಸ್ಥಾನಿಕರ ಮೂಲ ಪುರುಷ ಎನ್ನಲಡ್ಡಿಯಿಲ್ಲ. 

ಇನ್ನೊಂದು ಪುರಾವೆ ನೀಡುವುದಾದರೆ, ಶ್ರೀ ಅಣ್ಣಪ್ಪಯ್ಯನವರು ಸ್ಥಾಪಿಸಿರುವ ಹಲವಾರು ನ್ಯಾಯ ದಾನ ಯಂತ್ರಗಳಲ್ಲಿ ಕೆಲವು ಕರಾವಳಿ ಜಿಲ್ಲೆಯಳಲ್ಲಿವೆ. ಅವುಗಳಲ್ಲಿ ಧರ್ಮಸ್ಥಳ, ಹಿರಿಯಡ್ಕ ಹಾಗೂ ಮಾರಣಕಟ್ಟೆ ಮುಖ್ಯವಾದವು. ಅಲ್ಲಿ ಈಗಲೂ ನ್ಯಾಯ ತೀರ್ಮಾನ ಮಾಡಲು ಸ್ಥಾನಿಕರು ಬೇಕೇಬೇಕು. ಸುಮಾರು ೨೦೦೦ ವರ್ಷಗಳ ಹಿಂದೆ ಭಾರತದಲ್ಲಿ ಚಾರ್ವಾಕ ಮತದ ಸುಮೇರುವಿನ ಆಳ್ವಿಕೆಯಲ್ಲಿ ಸನಾತನ ಧರ್ಮಕ್ಕೆ ಕಂಟಕ ಎದುರಾದಾಗ ಶ್ರೀ ಅಣ್ಣಪ್ಪಯ್ಯನವರು ತಮ್ಮ ಮಂತ್ರ - ತಂತ್ರ -ಸಿದ್ಧಿಗಳ ಮೂಲಕ ಪರಿಹಾರಕ್ಕೆ ಮುಂದಾಗುತ್ತಾರೆ. ಅದಕ್ಕಾಗಿ ದೇಶ ಸಂಚಾರಕ್ಕೆ ಹೋರಟ ಮಹಾಮಹಿಮರು ದೇಶದಾದ್ಯಂತ ಕೆಲವು ಮುಖ್ಯರಿಗೆ ತಂತ್ರ ರಹಸ್ಯ ಭೋದಿಸಿ ತನ್ಮೂಲಕ ಧರ್ಮ ರಕ್ಷಣೆಗೆ ಕಾರಣರಾಗುತ್ತಾರೆ. ಮುಖ್ಯರಿಗೆ ಲೋಕಹಿತವನ್ನು ಕಾಯುವ, ಸತ್ಯ, ಧರ್ಮ, ನ್ಯಾಯವನ್ನು ಬೋಧಿಸುವ ವೃತ್ತಿಯಲ್ಲಿ ನೇಮಿಸುತ್ತಾರೆ []. ಅವರೇ ಮುಂದೆ ಸಮಕಾಲೀನನಾದ ಕೌಟಿಲ್ಯನ ಸಮಯದಲ್ಲಿ ಸ್ಥಾನಿಕ ಪದವಿಯನ್ನು ಗಳಿಸಿರಬೇಕು. ಇವರೇ ಸ್ಥಾನಿಕರು. ಮುಂದೆ ಶಂಕರಾಚಾರ್ಯರ ಕಾಲದಲ್ಲಿ ಎಲ್ಲ ಧಾರ್ಮಿಕ ಅಧಿಕಾರದೊಂದಿದೆ ತಂತ್ರ ವಿದ್ಯೆಗಳೂ ಕೂಡ  ದುರ್ಬಳಕೆಯ ಭಯದಿಂದ ಶೃಂಗೇರಿ ಪೀಠದ ಸುಪರ್ದಿಗೆ ಕೊಡಲ್ಪಟ್ಟಿತು. ಅದಕ್ಕೆ ಜಗದ್ಗುರುಗಳಿಗೆ ಸ್ಥಾನಿಕರೆಂದರೆ ಅಚ್ಚಮೆಚ್ಚು. ಇಂದೂ ಕೂಡ ತಂತ್ರಿಯಾಗಬಯಸುವವರು ಶೃಂಗೇರಿ ಪೀಠದ ಅನುಜ್ಞೆ ಪಡೆಯಲೇ ಬೇಕು .   

​​ಉಪಸಂಹಾರ:

೨೦೧೨ರಲ್ಲಿ ನಡೆದ "ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣರ ಸಮಾವೇಶ" ವಿಚಾರಗೋಷ್ಠಿಗಳ ಸಂಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೆಲವು ಮಹತ್ವದ ಸಂಗತಿಗಳನ್ನು ನಂಬಲರ್ಹ ಮೂಲಗಳಿಂದ ಕಲೆಹಾಕಿದ್ದು ಅವು ಲೇಖನದ ತಯಾರಿಯಲ್ಲಿ ನೆರವಾಗಿರುತ್ತವೆ. ಅಲ್ಲದೇ ನನ್ನ ಅಣ್ಣ + ಅಪ್ಪ ಹಾಗೂ ಗುರುಗಳ ಮಾರ್ಗದರ್ಶನವನ್ನು ಕೂಡ ಮರೆಯುವಂತಿಲ್ಲ. ಲೇಖನವು ಸ್ಥಾನಿಕರ ಸ್ವಾಭಿಮಾನವನ್ನು ಎತ್ತಿ ತೋರಿಸುವ ಪ್ರಯತ್ನವಾಗಿದೆಯೇ ಹೊರಡು ಇತರರನ್ನು ಕೀಳಾಗಿ ಕಾಣುವ ಉದ್ದೇಶವನ್ನು ಹೊಂದಿಲ್ಲ. ಏಕೆಂದರೆ ನಾವು ಸ್ಥಾನಿಕರು ಭಾಗವತರು, ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಉಳ್ಳವರು. ಅದಕ್ಕಾಗಿಯೇ ಸ್ಥಾನಾಧ್ಯಕ್ಷ  (ಗವರ್ನರ್) ನಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಇಂತಹ ಆದರ್ಶಪ್ರಾಯವಾದ ವಿಚಾರಗಳು ಅಲ್ಲ ಮತ, ಪಂಗಡಗಳಲ್ಲಿ ಕಂಡುಬಂದರೆ ಗಾಂಧೀಜಿಯ ರಾಮರಾಜ್ಯದ ಕನಸು ಅತಿಶೀಘ್ರದಲ್ಲಿ ನನಸಾಗುವುದರಲ್ಲಿ ಸಂಶಯವಿಲ್ಲ. ಶ್ರೀ ಅಣ್ಣಪ್ಪಯ್ಯನವರ ಸತ್ಯ, ಧರ್ಮ, ನ್ಯಾಯದ ವಿಚಾರಧಾರೆಗಳು ನಮ್ಮನ್ನು ಮುನ್ನಡೆಸಲಿ ಎಂದು ಲೇಖನದ ಮೂಲಕ  ಹಾರೈಸುತ್ತೇನೆ. ವಂದೇ ಮಾತರಂ.   

ದಾಖಲೆಗಳು:

ಕೆಳಗಿನ ದಾಖಲೆಗಳ ಕಂಪ್ಯೂಟರ್ನಲ್ಲಿ ಓದಬಹುದಾದ ಪ್ರತಿಗಳು ನನ್ನ ಬಳಿ ಇದ್ದು, ಆಸಕ್ತರು ನನಗೆ ಮಿಂಚಂಚೆ (email) ಮಾಡಿ ಅದರ ಪ್ರತಿಯನ್ನು ಪಡೆಯಬಹುದು. ನನ್ನ ಮಿಂಚಂಚೆ  ವಿಳಾಸ write2sk@gmail.com.
[] ಶ್ರೀ ಅಣ್ಣಪ್ಪಯ್ಯ ಚರಿತ್ರೆ , ಲೇಖಕರು ಶ್ರೀ ಕೆ. ಎಸ್. ನಿತಾನಂದ
[] "ತುಳುನಾಡಿನ ಇತಿಹಾಸದಲ್ಲಿ ಸ್ಥಾನಿಕರು", ಪಾದೂರು ಗುರುರಾಜ್ ಭಟ್
[] ಕರ್ನಾಟಕದ ಸಂಸ್ಕೃತಿಕ ಚರಿತ್ರೆಯಲ್ಲಿ ಸ್ಥಾನಿಕರ ಚಾರಿತ್ರಿಕ ಮಹತ್ವ”, ಡಾ. ಕೆ. ಜಿ. ವಸಂತ ಮಾಧವ
[] Sthanikas of Kanara district (North and South) (North of Kumbla and up to Gokarna)” by Chera Nattoja Shiva Rao, Puttur, 21st January, 1944, Mangalore Press
[] Journal of the University of Bombay, July 1938, Vol VII, Part I
[] "ಸ್ಟಾನಿಕ" ಬ್ರಾಹ್ಮಣರು - ಕನ್ನಡ ಜಿಲ್ಲೆಯ ಬ್ರಾಹ್ಮಣರ ಐತಿಹಾಸಿಕ ಪರಿಚಯ, ಶ್ರೀ .ಕೆ. ಶ್ರೀನಿವಾಸ ರಾವ್, ೧೯೫೭, ಸ್ಕೂಲ್ ಬುಕ್ ಕಂಪೆನಿ, ಮಂಗಳೂರು
[] "ಅಂತಸ್ಥ" - ಅಖಿಲ ಭಾರತ ಸ್ಥಾನಿಕ ಸಮಾವೇಶ ಸಮಿತಿ - ೨೦೧೨.
[] ಋತ್ವಿಕ್ ವಾಣಿ, ಸಂಪುಟ ೧೨, ಸಂಚಿಕೆ , ಜುಲೈ ೨೦೧೨.
[] "ಕೌಟಿಲ್ಯನ ಅರ್ಥಶಾಸ್ತ್ರ", ಕ್ರಿ. ಪೂ. . ೩೨೦
[೧೦] The Sthanikas and their Historical Importance by Dr. B.A. Saletore, M.A, Ph. D, D. Phil., Former Director, National Archives of India, New Delhi.
[೧೧] Studies in the History of IIIrd Dynesty of Vijayanagar by N. Venkataramayya
[೧೨] Ancient Karnataka Vol I, History of Tuluva by B. A .Saletore, M.A. Ph. D, Professor of History, Sri Parasharamba College, Poona
[೧೩] Castes and tribes of South India by E. Thurston, Part A, pages: 176-183
[೧೪] Studies in Ancient Hindu Politics by Narendranath M.A.
[೧೫] "ಅಜಾತಶತ್ರು", ವಿಶ್ವೇಶ್ವರ ಭಟ್, ಸ್ವಪ್ನ ಪಬ್ಲಿಕೇಷನ್ಸ್, ೧೯೯೮