February 6, 2020

ಪ್ರಶ್ನೋತ್ತರಗಳು - 4


ಪ್ರಶ್ನೆ: ಒಬ್ಬ ವ್ಯಕ್ತಿಗೆ ಅವನಿಗೆ ಇಟ್ಟಿರುವ ಹೆಸರಿನಿಂದ ಅವನ ವ್ಯಕ್ತಿತ್ವ ಬದಲಾಗುತ್ತದೆಯೇ? ಉದಾಹರಣೆಗೆ ಸಂಪತ್ ಎನ್ನುವ ವ್ಯಕ್ತಿಯನ್ನು ಹಾಗೆ ಕರೆಯುತ್ತಾ ಇದ್ದರೆ ಅವನಲ್ಲಿ ಅಂತಹ ಅಸೆ ಬರಬಹುದಾ? ವಿನಯ ಎನ್ನುವವನು ವಿನಯವಂತನೂ, ನಿತ್ಯಾನಂದರು ಯಾವಾಗಲೂ ನಿತ್ಯಾನಂದರಾಗಿಯೇ ಇರುತ್ತಾರಾ? ಸ್ವಾಮೀಜಿ: ಹಿಂದೆ ನಾಮಕರಣ ಮಾಡುವಾಗಲೇ ಆ ಮಗುವಿನ ಭವಿತವ್ಯವನ್ನು ಚಿಂತಿಸಿ ಅನ್ವರ್ಥಕವಾದ ನಾಮಕರಣ ಮಾಡುತ್ತಿದ್ದರು. ಕೌರವನಿಗೆ ನಾಮಕರಣ ಮಾಡಿದ್ದು ದೃತರಾಷ್ಟ್ರ. ಅದು ನಾಮಕರಣದ ವಿಧಿ. ಅದರಲ್ಲಿ ಯಾವುದೇ ಪಕ್ಷಪಾತ ಮಾಡುವಂತಿರಲಿಲ್ಲ. ಹಾಗಾಗಿ ದುರ್ಯೋಧನ, ದುಶ್ಯಾಸನ, ದುರ್ಜಯ, ಹೀಗೆ ನಾಮಕರಣ ಮಾಡಿದನು. ಅವರೆಲ್ಲ ಕೆಟ್ಟವರೇ ಎಂದು ಅವನಿಗೆ ಗೊತ್ತಿತ್ತು. ಹಾಗೆಯೇ ನಾಮಕರಣ ಮಾಡಬೇಕು. ಅದು ಹಿಂದಿನ ಕ್ರಮ. ಆದರೆ ಈಗ ಹಾಗೆ ಮಾಡುತ್ತಾ ಇಲ್ಲ. ಆದರೆ ಅನ್ವರ್ಥಕವನ್ನು ಗುರುತಿಸಿ ನಾಮಕರಣ ಮಾಡುವುದರಿಂದ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಅವನ ಒಳ್ಳೆಯದಾದ ದಾರಿಯಲ್ಲಿ ಅವನು ಹೋಗುತ್ತಾನೆ, ಸಮರ್ಥನಾಗುತ್ತಾನೆ, ಅವನಿಗೆ ಆರ್ಥಿಕ ಸಮೃದ್ಧತೆಯೂ, ಮನಸ್ಸಿನ ಶಾಂತಿಯೂ, ಎಲ್ಲವೂ ಸಿಗುತ್ತದೆ. ಹೆಸರು ಆಕರ್ಷಕವಾಗಿದೆ ಎಂದು ಇಡುವುದರಿಂದ ಫಲಿತ ನೀಡುವುದಿಲ್ಲ. ಸ್ವಭಾವಕ್ಕನುಗುಣವಾಗಿ ಅನ್ವರ್ಥಕವನ್ನು ಗುರುತಿಸಿ ಹೆಸರಿಡುವುದರಿಂದ ಆ ಮಗು ಒಳ್ಳೆಯರೀತಿಯಲ್ಲಿ ಸ್ವಭಾವ ಸಹಜವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದೇ ಮಗುವಿಗೆ ಸ್ವಭಾವಕ್ಕೆ ವಿಕೃತವಾದ ಅಥವಾ ವಿರುದ್ಧವಾದ ಹೆಸರನ್ನು ಸಂಯೋಜನೆ ಮಾಡಿದರೆ ಮಗುವಿಗೆ ತೊಂದರೆ ಆಗುವ ಸಾಧ್ಯತೆಯೂ ಇರುತ್ತದೆ. ಆ ಕಾರಣಕ್ಕೆ ಹೆಸರು ಶುದ್ಧವಾಗಿರಬೇಕು ಎಂದು ಹೇಳುವುದು. ಅನ್ವರ್ಥಕವನ್ನು ಕಂಡು ಹಿಡಿದು ಮುಂದೆ ಯಾವತ್ತೋ ಹೆಸರು ಬದಲಾಯಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಇಡುವಾಗಲೇ ಮಗುವಿಗೆ ಅನ್ವರ್ಥಕ ನಾಮವನ್ನು ಇಡಬೇಕು ಎಂದು ಹೇಳುತ್ತದೆ. ಅದನ್ನು ಅನ್ವೇಷಿಸುವ ವಿಧಾನಗಳಿವೆ. ಆ ಸಂಬಂಧವಾದ ಪುಸ್ತಕವನ್ನು ಹಿಂದೆಯೇ ಬರೆದಿದ್ದೇನೆ. ಓದಿ ನೋಡಿ ಗೊತ್ತಾಗುತ್ತದೆ. ಆ ರೀತಿ ಅನ್ವರ್ಥ ನಾಮವನ್ನು ಇಡುವ ಪ್ರಯತ್ನ ಮಾಡಿ. ಈಗಾಗಲೇ ಕರ್ಮ ಸಮುಚ್ಚಯ ಪ್ರಕಟಣೆಗೆ ಹೋಗುತ್ತಿದೆ. ಅದರಲ್ಲೂ ಕೂಡ ನಕ್ಷತ್ರ ನಾಮ ಹೇಗೆ ಬರುತ್ತದೆ, ಗುಪ್ತ ನಾಮ, ಮಾಸ ನಾಮಗಳು ಹೇಗೆ ಬರುತ್ತವೆ ಎಂಬ ಎಲ್ಲ ವಿಷಯಗಳು ನಾಮಕರಣ ಪ್ರಕ್ರಿಯೆಯಲ್ಲಿ ಬರುತ್ತವೆ. ಅದನ್ನು ನೋಡಿಕೊಂಡು ಸಮಾಜದಲ್ಲಿ ಒಳ್ಳೆ ಒಳ್ಳೆಯ ಹೆಸರುಗಳನ್ನು ಬಳಕೆಗೆ ತನ್ನಿ. ತುಂಬಾ ಇಷ್ಟಕೊಡತಕ್ಕಂತಹ, ಬಹಳ ವಿಶಿಷ್ಟವಾದ ಅರ್ಥ ಇರುವಂತಹ ಹೆಸರುಗಳ ಪಟ್ಟಿಯೇ ಅದರಲ್ಲಿ ಸಿಗುತ್ತವೆ. ಅಂತಹ ಹೆಸರುಗಳನ್ನಿಟ್ಟಾಗ ಸೂಕ್ತವಾಗಿ ಆ ಮಗು ಗುರಿಯತ್ತ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಆ ರೀತಿಯಲ್ಲಿ ನಿಮ್ಮ ಪ್ರಯತ್ನ ಇರಲಿ.

ಪ್ರಶ್ನೆ: ಗುರುಗಳೇ, ಇಂದ್ರಜಿತು, ಜಯದೃತ ಎಂದೆಲ್ಲ ನಾಮಕರಣ ಮಾಡಿರುತ್ತಾರೆ. ಈ ರೀತಿಯ ಹೆಸರುಗಳು ಎಷ್ಟು ಸೂಕ್ತ? ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಸ್ವಾಮೀಜಿ: ಜಯದೃತನೂ ಒಬ್ಬ ಮಹಾಭಾರತದ ಪಾತ್ರಧಾರಿಯೇ. ಕೌರವನ ತಂಗಿ ದುಶ್ಶಲೆಯನ್ನು ಮದುವೆ ಆಗಿದ್ದನು. ಅವರ ವಯಸ್ಸಿನ ಅಂತರವನ್ನು ತೆಗೆದುಕೊಂಡರೆ ಆತ ದುಶ್ಶಲೆಯ ಸಾವಿರ ಪಟ್ಟು ವಯಸ್ಸಿನವನು. ಅವನ ತಂದೆಯ ಹೆಸರು ವೃದ್ಧಕ್ಷತ್ರ. ಆತ ಮಹಾನ್ ಶಿವಭಕ್ತ. ಸದಾ ಶಿವನ ತಪಸ್ಸು. ಅದನ್ನು ಬಿಟ್ಟರೆ ಬೇರೆಯ ಮಾತೇ ಇಲ್ಲ. ಈಶ್ವರನ ಬೇರೆ ಬೇರೆ ಹೆಸರನ್ನು, ನಾಮವನ್ನು ಉಚ್ಚಾರಣೆ ಮಾಡುವ ಮೂಲಕ ರಾಜ್ಯದ ಆಳ್ವಿಕೆ ಮಾಡುತ್ತಿದ್ದನು. ಮಂತ್ರಿಗೆ ಆಜ್ಞೆಯನ್ನು ನೀಡಬೇಕಿದ್ದರೆ ಶಿವನ ಹೆಸರೊಂದನ್ನು ಉಚ್ಚರಿಸುವುದು. ಇಂತಹ ಕೆಲಸ ಆಗಬೇಕಿದ್ದರೆ ಅದನ್ನು ಈಶ್ವರನ ಹೆಸರಿನ ಮುಖೇನ ಹೇಳುತ್ತಿದ್ದ. ಆತ ಅಷ್ಟೊಂದು ಜ್ಞಾನಿಯಾಗಿದ್ದನು. ಆದರೆ ಆತನಿಗೆ ಸಂತಾನ ಇರಲಿಲ್ಲ. ಅವನು ತನ್ನ ೭೨,೦೦೦ ವರ್ಷದ ನಂತರ ಶಿವನಲ್ಲಿ ಬೇಡಿಕೊಳ್ಳುತ್ತಾನೆ. ಅಲ್ಲಿಯವರೆಗೂ ತಾನು ಯಾರನ್ನೂ ಬೇಡುವುದಿಲ್ಲ ಎನ್ನುವ ದೃಢ ಸಂಕಲ್ಪ ಆತನಲ್ಲಿತ್ತು. ಸಂತಾನ ಇಲ್ಲ ಎಂದಾದಾಗ ಬೇರೆಯವರ ಸಲಹೆಯಂತೆ ಅವನು ಶಿವನಲ್ಲಿ ಬೇಡಿಕೊಳ್ಳುತ್ತ್ತಾನೆ. ಹೀಗೆ ಬೇಡಿಕೊಳ್ಳಲು ಕಾರಾಣ ವೃದ್ಧಕ್ಷತ್ರ ಕೊನೆಗಾಣಬೇಕಿರುವುದು. ಇದಲ್ಲದೆ ಬೇರೆ ದಾರಿ ಇರಲಿಲ್ಲ. ಆತ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ಇದ್ದರೂ ಪ್ರಕೃತಿಯಲ್ಲಿ ಇರಲಿಲ್ಲ. ಋಣಕ್ಕೆ ಸಿಗಲಿಲ್ಲ. ಅವನಿಗೆ ಋಣವನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ಅವನ ಬದುಕನ್ನು ಮುಕ್ತಾಯ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಅದಕ್ಕಾಗಿ ಇತರರಿಂದ ಪ್ರೇರೇಪಿಸಲ್ಪಟ್ಟು ಶಿವನಲ್ಲಿ ಬ್ರೆಡಿಕೊಳ್ಳುತ್ತಾನೆ. ಆಗ ಜಯದೃತನ ಸೃಷ್ಟಿಯಾಗುತ್ತದೆ. ಆಗಲೇ ಶಿವನಲ್ಲಿ ಕೇಳುತ್ತಾನೆ, ಈತ ಜಯದೃತನಾಗಬೇಕು, ಎಲ್ಲವನ್ನೂ ಜಯಿಸಬೇಕು ಎಂಬುದಾಗಿ. ಶಿವನು ತಥಾಸ್ತು ಎನ್ನುತ್ತಾನೆ. ಇದು ದ್ವಾಪರಾಯುಗದ ಮಧ್ಯ ಕಾಲ. ಕೃಷ್ಣ ಇನ್ನೂ ಹುಟ್ಟಿರಲಿಲ್ಲ. ವ್ಯಾಸರೂ ಹುಟ್ಟಿರುವುದಿಲ್ಲ. ಜಯದೃತ ಮೊದಲೇ ಹುಟ್ಟಿರುತ್ತಾನೆ. ಆತ ಮಹಾಕಾಯ. ಮಹಾಭಾರತದ ಕಾಲ ಬಂದಾಗ ಜನರ ಕಾಯ ಸಣ್ಣದಾಗುತ್ತ ಬಂತು. ಜಯದೃತನ ಕಾಲದಲ್ಲಿ ಜನರು ಮಹಾಕಾಯರಾಗಿಯೇ ಇರುತ್ತಿದ್ದರು. ಶಿವನ ವರದಂತೆ ಜಯದೃತ ಅಜೇಯನಾಗಿಯೇ ಇದ್ದನು. ಅವನ ಮಹಾಕಾಯಕ್ಕೆ ಹೊಡೆದ ಬಾಣಗಳು ಅವನಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತಿದ್ದವು. ಆ ರೀತಿಯಲ್ಲಿ ಆತ ಬೆಳೆದು ಬಂದ. ನಂತರ ವೃದ್ಧಕ್ಷತ್ರನು ತನ್ನ ಮಗನಿಗೋಸ್ಕರ ಪುನಃ ತಪಸ್ಸು ಮಾಡುತ್ತಾನೆ. ನನ್ನ ಮಗನಿಗೆ ಸಾವೇ ಇಲ್ಲದಂತೆ ವಾರ ಕೇಳುತ್ತಾನೆ. ಅದಕ್ಕೆ ಶಿವ, ನೀನು ಮತ್ತು ನಿನ್ನ ಮಗ ಮಹಾನ್ ದೈವ ಭಕ್ತರು. ನೀನು ಕೇಳಿದ ವರ ನೀಡಲು ಆಕ್ಷೇಪ ಇಲ್ಲ. ಆದರೆ ನನಗೆ ದ್ರೋಹ ಮಾಡಿದರೆ ಏನು ಮಾಡಲಿ ಎಂದು ಕೇಳುತ್ತಾನೆ. ನಿನಗೆ ದ್ರೋಹ ಮಾಡಿದರೆ ತಲೆ ಕತ್ತರಿಸಿಬಿಡು ಆದರೆ ಬೇರೆ ಯಾರಿಗೂ ಅವನನ್ನು ಕೊಲ್ಲಲು ಆಗಬಾರದು ಎಂದು ವೃದ್ಧಕ್ಷತ್ರ ಹೇಳುತ್ತಾನೆ. ತಲೆ ಕತ್ತರಿಸಿದರೆ ಮುಂಡ ಉಳಿಯುತ್ತದಲ್ಲ ಎಂದು ಕೇಳಿದಾಗ ಅವನ ತಲೆ ಭೂಪಾತ ಮಾಡುವವನು ನಾಶವಾಗಿ ಹೋಗಬೇಕು ಎಂದು ವೃದ್ಧಕ್ಷತ್ರ ಹೇಳುತ್ತಾನೆ. ಈ ರೀತಿ ವೃದ್ಧಕ್ಷತ್ರ ಆ ವಯೋಮಾನಕ್ಕೆ ತಕ್ಕವಾಗಿ ಈಶ್ವರನ ಅನುಗ್ರಹ ಪಡೆಯುತ್ತಾನೆ. ನಂತರ ಎಷ್ಟೋ ವರ್ಷದ ನಂತರ ಕೌರವರು, ಪಾಂಡವರು ಎಲ್ಲ ಹುಟ್ಟಿ ಇವನೊಬ್ಬ ಮಹಾ ಬಲಿಷ್ಠ ಎನ್ನುವ ಕಾರಣಕ್ಕೆ ಕೌರವನ ಒಂದು ರಾಜನೀತಿಯಂತೆ ತನ್ನ ತಂಗಿಯನ್ನು ಕೊಟ್ಟು ಜಯದೃತನನ್ನು ಒಲಿಸಿಕೊಳ್ಳುತ್ತಾನೆ. ಆದರೆ ಅದು ಮಾತ್ರ ಸಮಾನ ಸಂಬಂಧವಲ್ಲ. ಆದರೆ ತಂಗಿಯನ್ನು ಕೊಟ್ಟು ವೃದ್ಧಕ್ಷತ್ರನ ಜೊತೆ ಕೌರವನು ತನ್ನ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ. ಅತೀ ಬಲಾಢ್ಯ, ಸಾವೇ ಇಲ್ಲದವ, ಶಿವನೇ ಬಂದು ಕೊಲ್ಲಬೇಕಾದವನು, ಅಂತಹವನ ಸಖ್ಯವನ್ನು ಕೌರವ ಪಡೆಯುತ್ತಾನೆ. ಜಯದೃತ ಎನ್ನುವುದು ಅನ್ವರ್ಥಕವೇ, ಅವನಿಗೆ ಸೋಲೇ ಇಲ್ಲ. ಸಾವು ಎನ್ನುವುದು ಮಾತ್ರ ಸೋಲು ಎನ್ನುವುದು ವೃದ್ಧಕ್ಷತ್ರನ ಕಲ್ಪನೆ. ಇವನು ಸಾಯುವುದೇ ಇಲ್ಲ ಹಾಗಾಗಿ ನಿರಂತರ ಜಯದೃತ. ಆದರೆ ಬೇರೆಲ್ಲ ವಿಚಾರದಲ್ಲಿ ಆತ ಸೈನ್ಧವ. ಮಹಾಭಾರತ ಕಾಲದಲ್ಲಿ ಜಯದೃತ ಎನ್ನುವುದಕ್ಕಿಂತ ಸೈನ್ಧವ ಎನ್ನುವುದೇ ಹೆಚ್ಚು ಬಳಕೆಗೆ ಬರುತ್ತದೆ. ಸೈನ್ಧವ ಎಂದರೆ ಪ್ರಾಣ ಇದೆ ಸತ್ತವನು ಎಂದರ್ಥ. ನೀವು ವಿಧವಾ ಎಂದು ಕರೆಯುತ್ತೀರಿ, ಕಳೆದುಕೊಂಡವಳು ಎಂದರ್ಥ. ಹಾಗೆಯೇ ಜಯದೃತ ಪ್ರಾಣವಿದ್ದು ಸತ್ತಂತೆ ಬದುಕಿದ್ದ. ಮಹಾಭಾರತದ ಸುಮಾರು ೫೪ ವರ್ಷ ಕಾಲ ಈ ಕೌರವ ಪಾಂಡವರ ಜನನ ಆದ ನಂತರ ಸಂಬಂಧ ಬೆಳೆಸಿಕೊಂಡು ಸತ್ತಂತೆ ಬದುಕಿದವ. ಮುಂದೆ ಆತನಿಗೆ ಯಾವುದೇ ಹೆಸರಿಲ್ಲ. ಸೈನ್ಧವನ ಪರಾಕ್ರಮ ಅಥವಾ ಸೈನ್ಧವನ ದಾರ್ಷ್ಟ್ಯ ಯಾವುದೂ ಇಲ್ಲ. ಒಟ್ಟಾರೆ ಕೌರವರ ಜೊತೆ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಜೀವನ ಮಾಡಿದ. ಕೊನೆಗೆ ಪಾಶುಪತಾಸ್ತ್ರ ಅವನ ತಲೆ ಕತ್ತರಿಸಿತು, ಅದು ಶಿವ. ಕತ್ತರಿಸಿದ ತಲೆ ಭೂಮಿಗೆ ಬಿದ್ದರೆ ಪಾರ್ವತಿಗೆ ವೈಧವ್ಯ ಬರುವುದೆಂದು ಪಾರ್ವತಿ ಕೊಟ್ಟ ಅಂಜನಾಸ್ತ್ರವು ವೃದ್ಧಕ್ಷತ್ರನ ಕೈಯಲ್ಲಿ ಅದನ್ನು ಇಡುತ್ತದೆ. ಅವನು ಗಲಿಬಿಲಿಗೊಂಡು ಇದೇನೆಂದು ಕೆಳಗೆ ಬೀಳಿಸುತ್ತಾನೆ. ಆಗ ವೃದ್ಧಕ್ಷತ್ರ-ಜಯದೃತರಿಬ್ಬರೂ ಒಟ್ಟಿಗೇ ಮರಣವನ್ನಪ್ಪುತ್ತಾರೆ. ವೃದ್ಧಕ್ಷತ್ರನ ಅಷ್ಟು ವರ್ಷದ ಬದುಕಿಗೆ ಮುಕ್ತಾಯ ಹಾಡುವುದಕ್ಕಾಗಿ ಜಯದೃತ ಹುಟ್ಟಿದ್ದು. ಜಯದೃತ ಸೋತೇ ಇಲ್ಲ, ಅಂದರೆ ಯುದ್ಧ ಮಾಡಿಯೇ ಇಲ್ಲ, ಸತ್ತಂತೆ ಬದುಕಿದವನು. ಒಂದು ಬಾರಿ ದ್ರೌಪದಿಯನ್ನು ಎಳೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿ ಭೀಮಾರ್ಜುನರಿಂದ ಚೆನ್ನಾಗಿ ಪೆಟ್ಟು ತಿನ್ನುತ್ತಾನೆ. ಏಕೆಂದರೆ ಅವನಿಗೆ ಯುದ್ಧ ಮಾಡಲು ಬರುವುದೇ ಇಲ್ಲ. ಚಕ್ರವ್ಯೂಹದ ಸಂದರ್ಭದಲ್ಲಿ ಯುದ್ಧಮಾಡಿದ್ದಲ್ಲ ಕೇವಲ ಬಾಗಿಲಿಗೆ ಅಡ್ಡಲಾಗಿ ನಿಂತದ್ದು ಮಾತ್ರ. ದೈತ್ಯಾಕಾರದ ಅವನಿಗೆ ಬಾಣ ಚುಚ್ಚುವುದಿಲ್ಲ, ಅವನನ್ನು ತಳ್ಳಲೂ ಸಾಧ್ಯವಿಲ್ಲ. ಹಾಗೆ ಅಡ್ಡ ನಿಂತ. ಅಷ್ಟು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಾಗೇ ಸತ್ತಂತೆ ಬದುಕಿದವನಾಗಿ ಕೆಲವು ವರ್ಷ ಇದ್ದನು. ಕಡೆಗೆ ಪಾಶುಪತದಿಂದ ಹತನಾದ. ಜಯದೃತವು ಅನ್ವರ್ಥಕವೇ ಆದರೂ ಸತ್ತಂತೆ ಬದುಕುವವ ಎಂದು ಮಕ್ಕಳಿಗೆ ಹೆಸರಿಡಬೇಕೆಂಬ ಆಸೆ ಇದ್ದರೆ ಅದೇ ಹೆಸರು ಇಡಬಹುದು. ಇಲ್ಲದಿದ್ದರೆ ನಿಮ್ಮ ಮಕ್ಕಳು ಚೇತನರು, ಮುಂದೆ ಭಾರತದ ಉತ್ತಮ ಪ್ರಜೆಗಳಾಗಬೇಕೆಂಬುವ ಅಸೆ ಇರುವವರಿಗೆ ಇಂತಹ ಹೆಸರುಗಳ ಅಗತ್ಯ ಇಲ್ಲ. ಇನ್ನು ಎರಡನೆಯದಾಗಿ ಇಂದ್ರಜಿತು. ನಮ್ಮ ಸಂಪ್ರದಾಯದಲ್ಲಿ ಇಂತಹ ಹೆಸರಿಡುವ ಪದ್ಧತಿ ಇಲ್ಲ. ಏಕೆಂದರೆ ಕೆಲವೊಂದು ಅಕ್ಷರಗಳನ್ನು ಕೂಡ ನಿಷೇಧಿಸಿದೆ. ಮತ್ತು ಇಟ್ಟಾಗ ಅದರಿಂದ ಆಗುವ ಪರಿಣಾಮಗಳಿಗೆ ಅವನು ಬಾಧ್ಯನಾಗುತ್ತಾನೆ. ಇಕಾರದಿಂದ ಆರಂಭ ಇಡುವಂತೆ ಇಲ್ಲ. ಇಕಾರಾಂತ್ಯ ಇದೆ. ಆದ್ದರಿಂದ ಇಂದ್ರಜಿತು ನಿಷೇಧ. ಈಕಾರ ಬೇಕಾದರೆ ಇಡಬಹುದು. ಇಟ್ಟಾಗ ಅದು ಸಹಜ ಅಲ್ಲ, ಅಸಹಜ. ಅದು ಯಾವುದೂ ಸ್ಥಿರವಲ್ಲ, ಅಸ್ಥಿರ. ನಿರಂತರವಾಗಿ ಅದು ಸದಾ ಚಂಚಲವಾಗಿ ಅಸ್ಥಿರವಾಗಿಯೇ ಇರುತ್ತದೆ. ಹಾಗಾಗಿ ಭೂಲೋಕದ ಮಾನವ ಜೀವಿಗಳಿಗೆ ಹೆಸರಿಡುವಾಗ ಇಕಾರ ಆರಂಭದ ಹೆಸರಿಡುವಂತಿಲ್ಲ ಎನ್ನುವುದೇ ಕರ್ಮ ಸಮುಚ್ಚಯದ ನಿರ್ದೇಶನ. ಗಂಡು ಮಕ್ಕಳಿಗೆ ಎರಡು ಅಕ್ಷರದ ಹೆಸರಿಡುವಂತಿಲ್ಲ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳ ಹೆಸರಿಡಬೇಕು. ಹೆಣ್ಣು ಮಕ್ಕಳಿಗೆ ಎರಡಕ್ಷರದ ಹೆಸರು ಬಲು ವಿಶಿಷ್ಟ. ಸೀತಾ, ರಮಾ, ಉಮಾ ಹೀಗೆ. ಅವರು ಶ್ರೇಷ್ಠರಾಗುತ್ತಾರೆ ಅಂತ ಹೇಳುತ್ತದೆ. ಅವರಿಗೆ ಮೂರಕ್ಷರ ಇಡಬಾರದು ಎಂದೇನಿಲ್ಲ ಆದರೆ ಎರಡಕ್ಷರ ಶ್ರೇಷ್ಠ. ಗಂಡು ಮಕ್ಕಳಿಗೆ ಮೂರಕ್ಷರ ಶ್ರೇಷ್ಠ. ಇವೆಲ್ಲ ಕರ್ಮ ಸಮುಚ್ಚಯದಲ್ಲಿ ಬರುವಂತಹ ಕೆಲವು ಸಿದ್ಧಾಂತಗಳು. ಇದನ್ನು ಪಾಲಿಸಿದವರಲ್ಲಿ ಯಶಸ್ಸನ್ನು ಪಡೆದ ಉದಾಹರಣೆಗಳಿವೆ. ಪಾಲಿಸದಿದ್ದವರು ಬೇಕಾದಷ್ಟು ಅನಾಹುತ, ಸಮಸ್ಯೆಗಳನ್ನು ಅನುಭವಿಸಿದ್ದೂ ಇದೆ. ಹಾಗಾಗಿ ಹೆಸರನ್ನು ಆಯ್ಕೆ ಮಾಡುವಾಗ ಸಾಧ್ಯವಾದಷ್ಟು ಸಂಪ್ರದಾಯಕ್ಕೆ ಹಿತವಾಗತಕ್ಕ, ಸಂಪ್ರದಾಯದಲ್ಲಿ ಬಾಳಿ ಬದುಕಿ ಎತ್ತರಕ್ಕೆ ಏರಿದ ಶ್ರೇಷ್ಠ ಪುರುಷರ, ಅನುಕರಣೆಗೆ ಯೋಗ್ಯರಾದವರ ಹೆಸರನ್ನು ಬಳಸುವುದು ಒಳ್ಳೆಯದು.

ಪ್ರಶ್ನೆ: ಗುರುಗಳೇ, ಇಂದ್ರ ಅಂತ ಇದೆ, ಇಂದಿರಾ ಎಂದೆಲ್ಲ ಹೆಸರಿಡುತ್ತಾರಲ್ಲ. ಈ ಬಗ್ಗೆ ಹೇಳಿ. ಸ್ವಾಮೀಜಿ: ಇಂದಿರಾ ಎನ್ನುವ ಹೆಸರು ಚೆನ್ನಾಗಿದೆಯೇ? ಅವರಿಂದ ಏನು ಆಯಿತು ಹೇಳಿ? ನಿಮಗೆ ಗೊತ್ತೇ ಇದೆಯಲ್ಲ! ಇನ್ನು ಇಂದ್ರ, ಚೆನ್ನಾಗಿದೆಯೇ? ಅವನನ್ನು ಮನುಷ್ಯ ಎಂದು ಹೇಳಲೂ ಸಾಧ್ಯವಿಲ್ಲ. ದೇವಲೋಕದ ಪಟ್ಟ ಒಂದಿರಬಹುದು. ಮೈಯೆಲ್ಲಾ ಕಣ್ಣು. ತುರಿಸಿದರೆ ತುರಿಸಿಕೊಳ್ಳಲೂ ಆಗುವುದಿಲ್ಲ. ಗಾಯ ಆಗುತ್ತದೆ, ಕಣ್ಣಿನಲ್ಲಿ ರಕ್ತ ಬರುತ್ತದೆ. ಅದೂ ಒಂದು ಬದುಕೇ? ಅವನ ಅಧಿಕಾರ ಯಾವತ್ತಾದರೂ ಶಾಶ್ವತ ಆಗಿದೆಯೇ? ಇಂದ್ರ ಪಟ್ಟ ನಿರಂತರ ಚರ. ಯಾರಾದರೂ ಬಂದು ಓಡಿಸುತ್ತಲೇ ಇರುತ್ತಾರೆ. ಹೇಗಾದರೂ ಮಾಡಿ ಪುನಃ ಪಟ್ಟ ಸಿಕ್ಕರೆ ಇನ್ಯಾರಾದರೂ ಬಂದು ಓಡಿಸುತ್ತಾರೆ. ಅಸ್ಥಿರ, ಚರ, ಚಂಚಲ, ಸಮಸ್ಯಾ ಎನ್ನುವುದು ಇಂದ್ರ. ಹಾಗಿದ್ದ ಮೇಲೆ ಇಂದ್ರ ಎನ್ನುವ ಹೆಸರು ಬೇಕೇ?

ಪ್ರಶ್ನೆ: ಸಂಕಲ್ಪಕ್ಕೆ ಆಚಮನ, ಪ್ರಾಣಾಯಾಮ ಮಾಡುವ ಕ್ರಮ ಇದೆ. ಈ ಸಂದರ್ಭದಲ್ಲಿ ಸೇವಾದಾರರಿಗೆ ಪ್ರಾಣಾಯಾಮದ ಸರಿಯಾದ ಕಲ್ಪನೆ ಇರುವುದಿಲ್ಲ. ಮೂಗು ಹಿಡಿದುಕೊಂಡು ಓಂ ಓಂ ಓಂ ಎಂದು ಹೇಳಿ ಎಂದು ಹೇಳುತ್ತೇವೆ. ಪ್ರಾಣಾಯಾಮದ ಸರಿಯಾದ ಕ್ರಮ ತಿಳಿಸಿ. ಸ್ವಾಮೀಜಿ: ಮೂರು ಬಾರಿ ಬಲ ಮೂಗಿನಿಂದ ಉಸಿರನ್ನು ಎಳೆದುಕೊಂಡು ಎಡ ಮೂಗಿನಿಂದ ಉಸಿರನ್ನು ಬಿಡುತ್ತಾ ಸತ್ ಚಿಂತನೆ ಮಾಡುವುದು. ನಾವು ಯಾವ ಪ್ರದೇಶದಲ್ಲಿ ಇದ್ದೇವೆ, ಭುವಃ, ಸುವಹ, ಮಹಹ, ಜನಃ, ತಪಹ, ಇತ್ಯಾದಿ ವಿಶಿಷ್ಟವಾದ ಎತ್ತರ ಎತ್ತರ ಸಾಧನೆ ಮಾಡಿದ ಲೋಕದ ಕೆಳಗೆ ನಾವಿನ್ನೂ ಮರ್ತ್ಯರಾಗಿದ್ದೇವೆ. ಆ ಎತ್ತರಕ್ಕೆ ನಾವು ಏರಬೇಕಾದರೆ ಈ ಪ್ರಾಣಾಯಾಮ, ಉಸಿರು ತೆಗೆದುಕೊಳ್ಳುವುದು ಬಿಡುವುದರ ಸಮತೋಲನವಿದೆ ಪ್ರಕೃತಿಯಲ್ಲಿ ಅದಕ್ಕೆ ನಾವು ಬದ್ಧರು. ಈಗ ಈ ಕಾರ್ಯ ಮಾಡುವುದರಲ್ಲೂ ನಮ್ಮ ಗುರಿ ಅಷ್ಟಿದೆ. ದುರಾಗ್ರಹ, ವಿಕೃತವಾದ ಆಕಾಂಕ್ಷೆಗಳಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಪ್ರಾಣಾಯಾಮ. ಸಂಕಲ್ಪ ಪೂರ್ವದಲ್ಲಿ ಇಡೀ ಲೋಕದ ಎಲ್ಲರ ಕ್ಷೇಮವನ್ನು ಬಯಸುವುವ ದೃಷ್ಟಿಯಲ್ಲಿ ನನ್ನ ಸಂಕಲ್ಪ ಇರಬೇಕು ಎಂದು ಮೊದಲು ಪ್ರಾಣಾಯಾಮ ಮಾಡಿಸುವುದು. ಉಸಿರು ತೆಗೆದುಕೊಂಡು ಹೊರಗೆ ಬಿಡುವಷ್ಟೇ ಪೂರ್ಣವಾದ ಪರಿಪೂರ್ಣತೆಯನ್ನು ನಾನು ಹೊಂದಬೇಕು ಎನ್ನುವುದು. ಅದಕ್ಕೆ ಯೋಚನೆ ಮಾಡುವುದು ಎತ್ತರದ ಲೋಕಗಳನ್ನು. ಅವರೆಲ್ಲ ಯಾಕೆ ಮೇಲೇರಿದರೆಂದರೆ ಈ ಚಿಂತನೆಯಿಂದ. ಅವರೂ ಕೆಲಸ ಮಾಡಿದವರೇ. ಕರ್ಮ ಮಾಡದಿದ್ದರೆ ಜ್ಞಾನ ಸಿದ್ಧಿಯಿಲ್ಲ. ಆದರೆ ಕರ್ಮದ ಹಿನ್ನಲೆ ಹೇಗಿದೆ ಎಂದರೆ ಪ್ರಾಮಾಣಿಕವಾದ ಬೇಡಿಕೆ ಇದೆ ಎಂದರ್ಥ. ಪ್ರಾಮಾಣಿಕವಾದ ಸಹಜ ಬೇಡಿಕೆಯಿಂದ ಕರ್ತವ್ಯ ನಿರ್ವಹಣೆಗಾಗಿ ಈ ಕರ್ತವ್ಯವನ್ನು ಮಾಡುತ್ತಿದ್ದೇನೆ ಅನ್ನುವ ಕಲ್ಪನೆ ಬರಲಿ ಎನ್ನುವ ಉದ್ದೇಶದಿಂದ ಮೂಗನ್ನು ಹಿಡಿದುಕೊಂಡು ಬಲಮೂಗಿನಿಂದ ಉಸಿರನ್ನು ಎಳೆದುಕೊಂಡು ಎಡಮೂಗಿನಿಂದ ಗಾಳಿಯನ್ನು ಬಿಡುತ್ತೀರಿ. ನಂತರ ದೇಶ ಕಾಲಗಳ ಸಂಕೀರ್ತನೆ. ಈಗ ಯಾವ ಕಾಲ. ಅಗಾಧವಾದ ಹಿಂದಿನ ಕಾಲವನ್ನು ಹೇಳಿಕೊಂಡು ಹೋಗುತ್ತದೆ. ನಾವು ಆ ಲೆಕ್ಕದಲ್ಲಿ ಏನೂ ಅಲ್ಲದ ಕ್ಷಣಿಕ ಕಾಲದಲ್ಲಿ ಬದುಕುತ್ತಿರುವವರು. ಎಷ್ಟು ಸಣ್ಣವರು ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಲ್ಪನೆಯೂ ಅಷ್ಟು ಸಣ್ಣದಾಗಿರಬೇಕು. ದೊಡ್ಡ ಬೇಡಿಕೆ ಇರಲೇಬಾರದು. ಪ್ರಪಂಚದ ವಿಶಾಲತೆಯನ್ನು ಹೇಳುತ್ತದೆ, ಆ ಅಗಾಧತೆಯಲ್ಲಿ ನಾನು ಕುಳಿತ ಜಾಗ ಎಷ್ಟು ಸಣ್ಣದು, ನಮ್ಮ ಅಧಿಕಾರ ವ್ಯಾಪ್ತಿ ಎಷ್ಟಿರಬಹುದು ಎಂಬೆಲ್ಲ ಕಲ್ಪನೆ ಇರಬೇಕು ಎಂಬ ಕಾರಣಕ್ಕಾಗಿ ದೇಶ ಕಾಲಗಳ ಸಂಕೀರ್ತನೆ ಬಂದದ್ದು. ನಂತರ ನಾನು ಏನು ಕಾರ್ಯ ಮಾಡುತ್ತಾ ಇದ್ದೇನೆ, ಅದು ಯಾವ ಉದ್ದೇಶಕ್ಕಾಗಿ, ಆ ಉದ್ದೇಶವು ಸಾರ್ಥಕ ಎಂದು ನಿನಗೆನಿಸಿದರೆ ಅದನ್ನು ನೆರವೇರಿಸು, ಇಲ್ಲದಿದ್ದರೆ ಅದರ ಫಲಾಫಲಗಳೆಲ್ಲ ನಿನಗೆ ಅರ್ಪಣೆ. ಬ್ರಹ್ಮಾರ್ಪಣವಾಗಲಿ ಎನ್ನುವ ಉದ್ದೇಶದಿಂದ ಪ್ರಾಣಾಯಾಮ ಎಂದು ಇರುವುದು. ಯಾವುದೇ ಸಂಕಲ್ಪ ಮಾಡಲಿ ಕೊನೆಗೆ ಬ್ರಹ್ಮಾರ್ಪಣ ಮಾಡುವುದಷ್ಟೇ, ನಾನು ಕೇಳಿದ ವಿಚಾರ ಖಂಡಿತವಾಗಿಯೂ ಇಲ್ಲಿಗೆ ಹಿತಾದಾಯಕವಾ್ದರೆ ಮಾತ್ರ ನನಗೆ ಒದಗಿಸು. ಇಲ್ಲದಿದ್ದರೆ ಎಲ್ಲ ನೀನೇ ಇಟ್ಟುಕೊಂಡುಬಿಡು ಎಂದು ವಾಪಸು ಕೊಡುವುದೇ ಬ್ರಹ್ಮಾರ್ಪಣ. ಅಲ್ಲಿಯವರೆಗೆ ಕರ್ಮಾಂಗದ ಹಿನ್ನಲೆಯಲ್ಲಿ ಸದುದ್ದೇಶ ಇರುತ್ತದೆ. ಹೀಗೆ ಮಾಡಿದರೆ ಮಾತ್ರ ಭುವ ಲೋಕವನ್ನೋ, ಸುವ ಲೋಕವನ್ನೂ, ಸತ್ಯಲೋಕವನ್ನೋ ಏರಲಿಕ್ಕೆ ಸಾಧ್ಯವಾಗುತ್ತದೆ.

No comments:

Post a Comment