February 6, 2020

ಪ್ರಶ್ನೋತ್ತರಗಳು - 6


ಪ್ರಶ್ನೆ: ಉತ್ತರ ಭಾರತದಲ್ಲಿ ತೀರ್ಥ ಯಾತ್ರೆಗೆ ಹೋದಾಗ ಉಜ್ಜಯಿನಿಯಲ್ಲಿ ಮದ್ಯವನ್ನೇ ತೀರ್ಥವನ್ನಾಗಿ ಕೊಡುತ್ತಿದ್ದರು. ಮದ್ಯವು ಒಂದು ನಿಷೇಧಿತ ವಸ್ತುವಾಗಿರುವಾಗ ಅದನ್ನು ತೀರ್ಥ ಎಂದು ಕೊಟ್ಟರೆ ತಪ್ಪಾಗುವುದಿಲ್ಲವೇ? ಸ್ವಾಮೀಜಿ: ಈ ರೀತಿಯ ವಿಕೃತಿಗಳು ನಮ್ಮ ದೇಶದಲ್ಲಿ ಬೇಕಾದಷ್ಟು ಇದ್ದವು. ಸರಿಯಾದ ಆರಾಧನೆ ಅಲ್ಲದೆ ವಿಕೃತ ಆರಾಧನೆಗಳು ಚಾಲ್ತಿಯಲ್ಲಿದ್ದವು. ಮದ್ಯವನ್ನು ಕೊಡುವುದು, ಮಾಂಸವನ್ನು ನೈವೇದ್ಯವನ್ನಾಗಿ ಕೊಡುವುದು ಎಲ್ಲವೂ ಇದೆ. ಪ್ರಾಣಿ ಬಲಿಯನ್ನು ಕೊಡುವುದು ಇನ್ನೂ ಇದೆ. ಆದರೆ ಅವು ಬಳಕೆಗೆ ಅರ್ಹವಾದದ್ದಲ್ಲ, ಮಾನವೀಯತೆ ಅಲ್ಲ ಎಂದು ಬಿಟ್ಟು ಬಿಡಬೇಕು. ಬಿಡುತ್ತಾ ಬಂದಾಗ ಅವು ಸಹಜವಾಗಿ ಕಡಿಮೆ ಆಗುತ್ತವೆ. ನಾವು ಕೂಡ ಉಜ್ಜಯಿನಿಗೆ ಹೋಗಿದ್ದೇವೆ. ಆದರೆ ತೀರ್ಥವನ್ನು ತೆಗೆದುಕೊಂಡಿಲ್ಲ. ಆ ರೀತಿಯಲ್ಲಿ ಅದನ್ನು ಬಿಡುತ್ತಾ ಬಂದರೆ, ಸಹಜವಾಗಿ ಅದು ನಿಂತು ಹೋಗುತ್ತದೆ. ಮದ್ಯವು ಖಂಡಿತವಾಗಿಯೂ ನಿಷೇಧಿಸಬೇಕಾದ ವಸ್ತುವೇ. ಆದರೆ ವಿಕೃತ ಆಚರಣೆ ಬಂದು ಹೋಗಿದೆ. ವಿಕೃತಿ ಬಂದು ಹೋಗಿದೆ ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವುದೂ ಅಲ್ಲ, ಅಥವಾ ಇಂತಹ ದೇಶದಲ್ಲಿ ನಾನು ಹೇಗೆ ಬದುಕಲಿ ಎಂದು ವಿದೇಶಕ್ಕೆ ಹಾರುವುದೂ ಅಲ್ಲ. ವಿದೇಶದಲ್ಲೂ ಇಂತಹ ಆಚರಣೆಗಳು ಬೇಕಾದಷ್ಟಿವೆ. ಇಲ್ಲೇ ಇದ್ದು ಅದನ್ನು ನಿರಸನ ಮಾಡುವ ಹೋರಾಟ, ಪ್ರಯತ್ನಗಳನ್ನು ನಾವು ಮಾಡಬೇಕು. ಪ್ರಯತ್ನ ಪಟ್ಟರೆ ಹೆಂಗಳೆಯರಿಗೆ ಅದನ್ನು ಸಂಪೂರ್ಣವಾಗಿ ಸರಿಪಡಿಸುವ ಸಾಮರ್ಥ್ಯ ಇದೆ. ಅದು ಹೇಗೆ ಎಂದು ಅರ್ಥವಾಗಬೇಕಾದರೆ ಮೊದಲು ಪತಿವೃತಾ ಧರ್ಮ ಎಂದರೆ ಏನೆಂದು ನಿಮಗೆ ಅರ್ಥವಾಗಬೇಕು. ಇದಕ್ಕಾಗಿ ಒಂದು ಉತ್ತಮ ಗೋಷ್ಠಿಯನ್ನು ಆಯೋಜಿಸಿ. ಅಲ್ಲಿ ಸಂಪೂರ್ಣ ವಿವರಗಳನ್ನೂ, ಪ್ರಶ್ನೆಗಳಿಗೆ ಉತ್ತರವನ್ನೂ ನೀಡುತ್ತೇನೆ. ಇದರ ಮುಖೇನ ಒಂದು ಒಳ್ಳೆಯ ಸಮಾಜದ ನಿರ್ಮಾಣ ಸಾಧ್ಯವಿದೆ. ತೀರಾ ಕಲ್ಪನೆಯ, ಮೋಸದ, ತಮ್ಮ ಹಿತಾಸಕ್ತಿಗಾಗಿ ನಿರ್ಮಾಣಗೊಂಡ ಶಾಸ್ತ್ರಗಳು ಎಲ್ಲವೂ ಹೋಗಬೇಕಾದರೆ ಈ ರೀತಿಯ ಚಿಂತನೆ ಆಗಲೇ ಬೇಕು. ಅದಕ್ಕೆ ಒಳ್ಳೆಯ ದಾರಿ ಎಂದರೆ ಪತಿವೃತಾ ಧರ್ಮದ ಚಿಂತನೆ. ಉದಾಹರಣೆಗೆ ನೀವು ಹೇಳುತ್ತೀರಿ, ಐದು ಜನ ವಿಶಿಷ್ಟವಾದ ಪತಿವೃತೆಯರು. ಈಗಿನ ಸಾಮಾಜಿಕ ದೃಷ್ಟಿಯಲ್ಲಿ ಅವರೆಲ್ಲರೂ ಅಪವಿತ್ರರೇ, ಅಲ್ಲವೇ? ಐದು ಜನರೂ ಅಪವಿತ್ರರೆಂದು ಹೇಳುವ ನೀವು ಕೂಡ ಅವರನ್ನು ಹೇಳುವುದು ಕನ್ಯಾ ಎಂಬುದಾಗಿ. ಅಹಲ್ಯ, ದ್ರೌಪದಿ, ಸೀತಾ, ತಾರಾ, ಮಂಡೋದರಿ...ಪಂಚಕನ್ಯಾ ಸ್ಮರೇನ್ನಿತ್ಯಮ್ ...ಎಂದು ಹೇಳುತ್ತೀರಿ. ಕನ್ಯೆ ಅಪವಿತ್ರ ಹೇಗಾಗುತ್ತಾಳೆ? ಅದನ್ನು ಚಿಂತನೆ ಮಾಡುವುದಿಲ್ಲ. ಅದಕ್ಕೇ ಹೇಳಿದ್ದು, ನೀವು ಹೇಳುವ ಮಾತಿನಲ್ಲಿಯೇ ನಿಮ್ಮ ಕಲ್ಪನೆಯಲ್ಲಿರತಕ್ಕಂತಹ ದೋಷ ಏನಿದೆ ಎಂದು ತೋರಿಸಿಕೊಡಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ತೋರಿಸಿಕೊಡುತ್ತ ಅತೀ ಉತ್ಕೃಷ್ಟವಾದಂತಹ, ಅತೀ ಶ್ರೇಷ್ಠವಾದದಂತಹ, ಒಬ್ಬ ತಪಸ್ವಿ ೧೦೦೦ ವರ್ಷ ತಪಸ್ಸು ಮಾಡಿ ಪಡೆಯುವ ಯಾವ ತಪೋಬಲವಿದೆಯೋ ಅದನ್ನು ಕೇವಲ ಒಂದು ಕ್ಷಣದ ಪತಿಸೇವೆಯಿಂದ ಒಬ್ಬ ಗೃಹಿಣಿ ಪಡೆಯಲು ಸಾಧ್ಯ ಎನ್ನುವ ಸತ್ಯವನ್ನು ನಾನು ತೋರಿಸಿಕೊಡುತ್ತೇನೆ. ಅದಕ್ಕಾಗಿ ಗೋಷ್ಠಿಯೊಂದನ್ನು ಸಂಯೋಜನೆ ಮಾಡಿ.

ಪ್ರಶ್ನೆ: ಅತ್ರಿ ಋಷಿಗಳ ಪತ್ನಿ ಅನಸೂಯ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂವರನ್ನೂ ಮಗುವನ್ನಾಗಿ ಪಡೆಯುತ್ತಾಳೆ. ಇದು ಪತಿವೃತ್ಯದ ಶಕ್ತಿಯಿಂದ ಎಂದು ಹೇಳುತ್ತಾರೆ. ನೀವು ಈ ಮೊದಲು ಹೇಳಿದ ೫ ಜನರಲ್ಲಿ ಇವರನ್ನೇಕೆ ಸೇರಿಸಲಿಲ್ಲ? ಸ್ವಾಮೀಜಿ: ಅಲ್ಲಿ ಆ ಪತಿವೃತೆಯರನ್ನು ಹೇಳುವ ಉದ್ದೇಶವಾಗಿರಲಿಲ್ಲ. ಆದರೆ ಪತಿವೃತಾ ಧರ್ಮದ ರಹಸ್ಯ ಅಲ್ಲಿ ಅಡಗಿದೆ ಎಂದು ಹೇಳುವ ಉದ್ದೇಶವಾಗಿತ್ತು. ಇವರ್ಯಾರೂ ಹೆಚ್ಚು ಎಂದು ಹೇಳುವ ಉದ್ದೇಶ ಆ ಮಂತ್ರದಲ್ಲಿಲ್ಲ. ಅವರೆಲ್ಲ ಕನ್ಯೆಯರು, ಆದ್ದರಿಂದ ಪತಿವೃತೆಯರಲ್ಲ. ಅವರು ಗೃಹಸ್ಥರಲ್ಲ. ಗೃಹಿಣಿಯರಲ್ಲ ಎಂದು ಹೇಳಿದ್ದಾರೆ. ಇಂತಹ ರಹಸ್ಯಗಳನ್ನು ಹೇಳಲೆಂದೇ ಗೋಷ್ಠಿಯನ್ನು ಆಯೋಜಿಸಿ ಎಂದು ನಿಮಗೆ ಹೇಳಿದ್ದು.

ಪ್ರಶ್ನೆ: ವೇದಕಾಲದಲ್ಲಿ ಹೆಂಗಸರಿಗೂ ಉಪನಯನ ಮಾಡುತ್ತಿದ್ದರು. ಅವರು ಕೂಡ ಹೋಮ ಹವನ ಎಲ್ಲ ಮಾಡುತ್ತಿದ್ದರು. ಅಂತಹ ವ್ಯವಸ್ಥೆಯನ್ನು ನೀವು ಪುನಃ ತರುತ್ತಿದ್ದೀರಿ. ಆ ಕಾಲದ ಪುನರುತ್ಥಾನ ಈಗ ನಡೆಯುತ್ತಿದೆ ಎಂದು ಹೇಳಬಹುದೇ? ಸ್ವಾಮೀಜಿ: ವೇದಕಾಲದಲ್ಲಿ ಇತ್ತು, ನೀವು ಅಧಿಕಾರಗಳನ್ನು ಪಡೆಯುತ್ತಿದ್ದೀರಿ, ಹಾಗಾಗಿ ನಿಮಗೆ ಆ ಎಲ್ಲ ಸೌಲಭ್ಯಗಳು ಸಿಗುತ್ತಿತ್ತು. ನಂತರ ನಿಧಾನವಾಗಿ ನಿಮಗೆ ಓದಾಸೀನ್ಯ ಬೆಳೆಯಿತು. ಮನೆ ಕೆಲಸ ಮಾಡಿದರೆ ಸಾಕು ಎನ್ನುವ ಭಾವನೆ ಉಂಟಾಯಿತು. ಅರ್ಥವಾಗದ ಕಾರಣ ಇವೆಲ್ಲ ಹಾಳು-ಹರಟೆ ಎನ್ನಿಸಲಿಕ್ಕೆ ಪ್ರಾರಂಭವಾಯಿತು. ಸಮಯ ಹಾಳು ಎಂದು ಬಿಡುತ್ತಾ ಬಂದರು. ಹಾಗಾಗಿ ಸಂಸ್ಕಾರಗಳ ಕೊರತೆ ಆಗುತ್ತಾ ಬಂತು. ಈಗ ವೇದ ಕಾಲದವರನ್ನು ಬೈದರೆ ಏನೂ ಪ್ರಯೋಜನವಿಲ್ಲ. ಪ್ರತ್ಯಕ್ಷವಾಗಿ ಕಾಣತಕ್ಕ ದೇವರುಗಳು ತಂದೆ, ತಾಯಿ, ಅವರನ್ನು ಅಧಿಕಾರಯುತವಾಗಿ ಕೇಳಿ. ಆಗ ಕೊಡುತ್ತಾರೆ. ಆಗ ಅದನ್ನು ಸಾಧಿಸಿ ತೋರಿಸಿ. ಆಗ ಬಿಟ್ಟು ಹೋದ ನಷ್ಟವೇನೆಂದು ಗೊತ್ತಾಗುತ್ತದೆ. ಆಗ ಅದನ್ನು ಪುನಃ ಹಿಡಿಯಲಿಕ್ಕೆ ಆಗುತ್ತದೆ. ಹಿಡಿಯಲಿಕ್ಕೆ ಏನೂಕಾಲಮಿತಿ ಎಂಬುವುದಿಲ್ಲ. ಈಗ ಹಿಡಿಯಿವ ಪ್ರಯತ್ನ ಮಾಡುತ್ತಾ ಇದ್ದೀರಿ, ಅದನ್ನು ಹಿಡಿದು ಸಂಶೋಧನೆ ಮಾಡಿ ಸಾರ್ಥಕತೆಯನ್ನು ತೋರಿಸಿಕೊಡಿ, ಆಗ ಎಲ್ಲರೂ ಹಿಡಿಯುತ್ತಾರೆ. ಮಹಿಳೆಯರೆಲ್ಲ ಒಗ್ಗಟ್ಟಾಗಿ ವೇದ ಕಾಲದ ಸಂಸ್ಕೃತಿಯನ್ನು ಆಚರಿಸುತ್ತಾ ಬಂದರೆ ದೇಶಕ್ಕೆ ರಾಜ ಬೇಡ, ಸಂಪತ್ತಿನ ಅಗತ್ಯ ಇಲ್ಲ, ನಿರಂತರ ಸುಖ ಶಾಂತಿ ನೆಮ್ಮದಿ ನಿಮ್ಮ ಮನೆಯ ಬಾಗಿಲಿನಲ್ಲಿ ಬಿದ್ದಿರುತ್ತದೆ. ಯಾವ ಕೊರತೆಯೂ ಇರುವುದಿಲ್ಲ. ವೇದ ಕಾಲದ ಸಂಸ್ಕೃತಿ ಅಷ್ಟು ಚೆನ್ನಾಗಿತ್ತು. ಪ್ರಶ್ನೆ: ಸ್ವಾಮೀಜಿ, ಇದು ಶಾಂತಿ ಕರ್ಮಗಳಿಗೆ ಸಂಬಂಧಪಟ್ಟ ಪ್ರಶ್ನೆ. ೬೦ - ೭೦ ವರ್ಷಗಳಿಗೆ ಮಾಡುತ್ತಾರಲ್ಲ ಅದು ಪ್ರಾಯಶ್ಚಿತ್ತಕ್ಕಾಗಿ ಮಾಡುವ ಶಾಂತಿಯೇ? ಹೌದಾದರೆ ಈ ಮುಂಚೆಯೇ ಹಲವು ಸಂದರ್ಭಗಳಲ್ಲಿ ಅವರು ಶಾಂತಿಗಳನ್ನು ಮಾಡಿಸಿರುವುದರಿಂದ ಪುನಃ ಶಾಂತಿ ಮಾಡಿಸುವ ಅಗತ್ಯ ಇದೆಯೇ? ಸ್ವಾಮೀಜಿ: ನಮ್ಮಲ್ಲಿ ಸೂತ್ರಕಾರರು ಮನುಷ್ಯನು ಮನುಷ್ಯನಾಗಿ ಬದುಕುವುದನ್ನು ತೋರಿಸುವ ಮಾರ್ಗದಲ್ಲಿ ಷೋಡಶ ಸಂಸ್ಕಾರ (ವಿವಾಹದವರೆಗಿನ) ಗಳನ್ನು ಹೇಳುತ್ತಾರೆ. ಮನುಷ್ಯನು ಮನುಷ್ಯನಾಗಿ ಬದುಕುವುದಕ್ಕೆ ಅಷ್ಟು ಸಾಕು. ಆದರೆ ಕೇವಲ ಮನುಷ್ಯನಾಗಿ ಬದುಕಿರುವುದು ಅವನ ಗುರಿ ಅಲ್ಲ. ಅವನು ದೇವನಾಗುವುದಕ್ಕೆ ಪ್ರಯತ್ನ ಪಡಬೇಕು. ಹಾಗಾಗಿ ೬೦ ವರ್ಷ ಆದಮೇಲೆ ಈ ಸಾಂಸಾರಿಕ ಬಂಧನಗಳನ್ನು ಕಡಿಮೆ ಮಾಡಿಕೊಳ್ಳುವ ಒಂದು ವಿಧಾನ. ಉಗ್ರರಥ ಶಾಂತಿ ಎಂದು ಅದನ್ನು ಹೇಳುತ್ತಾರೆ. ಅಲ್ಲಿ ದೃಢ ನಿಶ್ಚಯ ಮಾಡಿ ತನಗಿರತಕ್ಕ ಬಂಧನಗಳಿಂದೆಲ್ಲ ಬಿಡುಗಡೆ ಹೊಂದಬೇಕು. ಈಗಿನ ರಾಜಕಾರಣಿಗಳಂತಲ್ಲ! ಆದರೆ ಗೃಹಸ್ಥನು ತನಗೆ ಈ ಸಂಸಾರದ ಸಮಸ್ಯೆಗಳೆಲ್ಲ, ಬಂಧನಗಳೆಲ್ಲ ಬೇಡ, ಸಂಸಾರವು ಬೇಕು ಆದರೆ ಸಂಸಾರ ಬಂಧನಗಳು ಬೇಡ ಎಂದು ತಿಳಿದು, ಯಾವುದೇ ಕೆಲಸ ನಿರ್ವಹಣೆ, ಜವಾಬ್ದಾರಿಗಳು ಇದ್ದರೆ ಮಗನಿಗೆ ವಹಿಸಿಕೊಟ್ಟು ತಾನು ಸ್ವತಂತ್ರವಾಗಿ ದೇವತಾ ಚಿಂತನೆಗಳನ್ನು ಮಾಡುತ್ತೇನೆ ಎನ್ನುವ ದೃಢ ನಿಶ್ಚಯ ಮಾಡುವುದರಿಂದ ಅದು ಉಗ್ರರಥ ಶಾಂತಿ ಎನ್ನಿಸಿಕೊಳ್ಳುತ್ತದೆ. ಆ ಚಿಂತನೆಯಿಂದ ಮುಂದುವರೆದಾಗ ಸಹಜವಾಗಿ ಮನಸ್ಸು ಪರಿಪಕ್ವವಾಗುತ್ತಾ ಬರುತ್ತದೆ. ತನ್ನ ಜೀವಿತಾವಧಿಯಲ್ಲಿ ಸಹಜವಾಗಿ ಹಲವು ನಾಟಕೀಯ ಜೀವನ, ಮನೆಯಲ್ಲಿ ಬೇಕಾದಷ್ಟು ಸಾಮಾನು ಇದ್ದರೂ ಎಲ್ಲವೂ ಖಾಲಿಯಾಯಿತು ಎಂದು ಹೇಳುತ್ತೇವೆ. ಗೃಹಸ್ಥ ಸುಳ್ಳು ಹೇಳಿದರೂ ಪಾಪ ಅಲ್ಲ ಎಂದು ಹೇಳುತ್ತದೆ. ಏಕೆಂದರೆ ಅವನ ಸಂಚಯನ ಅವನ ಕುಟುಂಬಕ್ಕಾಗಿ. ಹಾಗಾಗಿ ಅವರ ಬೇಡಿಕೆ ನಿಜ ಎಂದರೆ ಮಾತ್ರ ಹಂಚಬೇಕು ಎಂದು ಹೇಳುತ್ತದೆ. ಆದ್ದರಿಂದ ಗೃಹಸ್ಥರು ಅಪಾತ್ರದಾನ ಮಾಡಲೇಬಾರದು ಎಂದು ಹೇಳುತ್ತದೆ. ಹಾಗಾಗಿ ಈ ಜೀವನದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗದ ಕೆಲವೊಂದು ಅಸತ್ಯಗಳನ್ನು ಹೇಳಬೇಕಾಗುತ್ತದೆ. ಇಂತಹ ಹಲವಾರು ಘಟನೆಗಳು ಆಗಿರುತ್ತವೆ. ಆ ಮೂಲಕವಾಗಿ 60 ವರ್ಷ ದಾಟಿದ ಮೇಲೆ ನಮ್ಮ ಅಂತರ್ ಮನದಲ್ಲಿ ಸ್ವಭಾವ ಸಹಜವಾದ ಪಾಪಪ್ರಜ್ಞೆ ಕಾಡಲಾರಂಭಿಸುತ್ತದೆ. ಅಂತಹ ಸುಳ್ಳುಗಳನ್ನು ಹೇಳಿದ್ದರಿಂದ, ತಪ್ಪುಗಳನ್ನು ಮಾಡಿದ್ದರಿಂದ ಅಪರಾಧಿ ಪ್ರಜ್ಞೆ ಕಾಡಲಾರಂಭಿಸುತ್ತದೆ. ಅದನ್ನು ನಿವಾರಿಸಿಕೊಳ್ಳಬೇಕಾದರೆ ದೃಢಭಕ್ತಿ ಬೇಕು. ಅದಕ್ಕೆ 70ನೇ ವಯಸ್ಸಿಗೆ ಭೀಮರಥ ಶಾಂತಿ ಎಂದು ಮಾಡುತ್ತಾರೆ. ಪುರಾಣದ ಹಲವಾರು ಪಾತ್ರಗಳಲ್ಲಿ ಭೀಮನಷ್ಟು ದೃಢನಿಶ್ಚಯ ಹೊಂದಿದವರು ಇನ್ನೊಬ್ಬರು ಸಿಗುವುದಿಲ್ಲ. ಹಾಗಾಗಿ ಅದಕ್ಕೆ ಭೀಮರಥ ಶಾಂತಿ ಎಂದರು. ಆಗ ಬುದ್ಧಿಯ ಪೂರ್ಣ ಸ್ಥಿಮಿತತೆ ಬರುತ್ತದೆ. ಅರವತ್ತಕ್ಕೆ ಅರಳುಮರಳು ಎನ್ನುವುದು ಇರುವುದಿಲ್ಲ. ಪ್ರತಿಯೊಂದು ಮಾತು ಸ್ಪಷ್ಟವಾಗಿರುತ್ತದೆ. ಪ್ರತಿಯೊಂದು ವಿಚಾರವೂ ಸತ್ಯವಾಗಿರುತ್ತದೆ. ಅವರ ಮನಸ್ಸಿಗೆ ಅನಿಸಿದ್ದರಲ್ಲಿ ಅನುಗ್ರಹ ಇರುತ್ತದೆ. ಆಶೀರ್ವಾದ ಇರುತ್ತದೆ. ಆ ರೀತಿಯಲ್ಲಿ ಅವರು ಮುಂದೆ ಬರಲು ಸಾಧ್ಯವಾಗುತ್ತದೆ. 70ನೇ ವಯಸ್ಸಿನಿಂದ ಭಕ್ತಿಯಿಂದ ಬೆಳೆಯುತ್ತಾ ಬಂದರೆ ೮೦ ನೇ ವಯಸ್ಸಿಗೆ ಅವರು ಪರಿಪೂರ್ಣ ರಾಗುತ್ತಾರೆ. ಭೂಲೋಕದ ನಡೆದಾಡುವ ದೇವರಾಗುತ್ತಾರೆ. ಹಾಗಾಗಿಯೇ ವಿಜಯರಥ ಶಾಂತಿ. ಪ್ರಕೃತಿಯ ಎಲ್ಲಾ ಋಣಗಳನ್ನು ಗೆದ್ದವರು, ದೇವರು ಎಂದರ್ಥ. ವಿಜಯರಥ ಶಾಂತಿಯನ್ನು ಮಾಡಿಕೊಂಡ ಎರಡೇ ವರ್ಷದಲ್ಲಿ ಅವರು ಸುದರ್ಶನ ರಾಗುತ್ತಾರೆ. ಎರಡು ವರ್ಷ ಮೂರು ತಿಂಗಳ ಬಳಿಕ ಸಹಸ್ರಚಂದ್ರದರ್ಶನ ಶಾಂತಿ ಮಾಡುತ್ತಾರೆ. ಆನಂತರ ಅವರನ್ನು ಒಮ್ಮೆ ನೋಡುವುದೇ ಪುಣ್ಯ. ಅವರು ಏನೂ ಮಾಡಬೇಕಾಗಿಲ್ಲ. ಮನೆಯಲ್ಲಿ ಕುಳಿತಿದ್ದರೆ ಸಾಕು. ಅವರನ್ನು ಒಮ್ಮೆ ನೋಡಿ ಅವರಿಗೆ ನಮಸ್ಕಾರ ಮಾಡಿ ಹೋದರೆ ಸಾಕು ಹೋದ ಕೆಲಸವೆಲ್ಲ ಆಗುತ್ತದೆ. ಅದಕ್ಕಾಗಿ ಅವರನ್ನು ಸುದರ್ಶನರು ಎಂದು ಹೇಳುತ್ತಾರೆ. ಅದಕ್ಕಾಗಿ ಮನೆಯಲ್ಲಿ ಹಿರಿಯರು ಬೇಕು. ಅವರು 82 ವರ್ಷ ನಂತರ ಮತ್ತೆ ಹತ್ತು ಇಪ್ಪತ್ತು ವರ್ಷ ಬದುಕಬೇಕು. ಆಗ ನಾವು ಯಶಸ್ಸು ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ. ಎಲ್ಲಾ ಸಂಸ್ಕಾರಗಳು ಅವರು ದೇವತ್ವಕ್ಕೆ ಏರುವ ದಾರಿ. ನಮಗೆ ಮಾರ್ಗದರ್ಶನ. ಹಾಗಾಗಿ ಆ ಶಾಂತಿಗಳನ್ನು ಆಚರಿಸುವುದರಿಂದ ನಮಗೆ ಲಾಭ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

1 comment:

  1. Dr. Ratan Prakash Clinic offers Doctors Consultation, Full Body Checkup, Sugar Checkup & ECG Test. Dr. Ratan Prakash has more than 27+ years of experience.
    best general physician doctor in patna

    ReplyDelete