April 20, 2018

ದೇವಾಲಯದಿಂದ ರಾಷ್ಟ್ರದುದ್ಧಾರ


ದೇವಾಲಯಗಳ ನಿರ್ಮಾಣವೇ ಸ್ವಸ್ಥ ಸಮಾಜದ ಸಾಕಾರಕ್ಕೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಒಂದು ದೇವಾಲಯದಿಂದ ಒಂದು ರಾಷ್ಟ್ರದ ಉದ್ಧಾರವೂ ಕೂಡ ಸಾಧ್ಯವೆಂದು ನನಗೆ ಇತ್ತೀಚೆಗಷ್ಟೇ ತಿಳಿದ ವಿಚಾರ. ಇತ್ತೀಚೆಗಷ್ಟೇ ಬ್ರಹ್ಮ ಕಲಶದಿಂದ ಅಭಿಷಿಕ್ತನಾದ ಜ್ಞಾನ ಶಕ್ತಿ ಸುಬ್ರಹ್ಮಣ್ಯನ ದೇವಾಲಯದ ಬಗ್ಗೆ, ನನಗೆ ತಿಳಿದಿರುವ ಅಲ್ಪ ಜ್ಞಾನದಿಂದ ತಿಳಿದಷ್ಟು ಬರೆಯುತ್ತಿದ್ದೇನೆ. ತಪ್ಪಿಯಿದ್ದರೆ ತಿದ್ದಿ ಹೇಳಿರೆಂದು ಪ್ರಾರ್ಥನೆ.


ಪಾವಂಜೆಯು ಇರುವುದು ದಕ್ಷಿಣ ಕರಾವಳಿಯ ಮೂಲೆಯಲ್ಲಿ. ಇಲ್ಲಿ ಸ್ಥಾಪಿತ ಪುಟ್ಟ ದೇಗುಲವೊಂದು ಸಂಪೂರ್ಣ ಭಾರತ ವರ್ಷದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ನಂಬಲು ಸ್ವಲ್ಪ ಕಷ್ಟ. ಆದರೆ ತಂತ್ರಕ್ಕೆ ಅಸಾಧ್ಯವೆಂಬುವುದೇ ಇಲ್ಲ. ವಿಶ್ವ ಜಿಗೀಷದ್ ಯಾಗದ ಸಂದರ್ಭಲ್ಲಿ, ಯಾಗದ ಎರಡನೆಯ ದಿನವೇ ಇಲ್ಲಿಂದ ಹೊರಟ ಕಿರಣ, ಶಬ್ದ ತರಂಗಗಳು ಯುರೋಪ್, ಆಫ್ರಿಕಾ ಖಂಡಗಳನ್ನು ತಲುಪಿ ಪರಿಣಾಮಗಳನ್ನು ಬೀರಿದ್ದನ್ನು ಕೇಳಿದ ನನಗೆ ಪಾವಂಜೆಯ ತಂತ್ರೋಕ್ತ ಪೂಜೆಗಳಾದ ರಂಗ ಪೂಜೆ, ಕಾರ್ತಿಕ ದೀಪೋತ್ಸವ, ಸೋಣೆ ಆರತಿ ಹಾಗೂ ಅಗೇಲು ಸೇವೆಗಳ ಪರಿಣಾಮ ನಮ್ಮ ದೇಶದ ಮೇಲೆ ಆಗುತ್ತಿದೆ ಅನ್ನುವುದನ್ನು ದೊಡ್ಡ ವಿಷಯ ಅನ್ನಿಸದೆ ಇರದು! ಅವು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಹೇಗೆ ಪರಿಣಾಯಾಮ ಬೀರುತ್ತಿವೆ ಎನ್ನುವುದನ್ನು ನನಗೆ ತೋಚಿದಷ್ಟು ವಿಶದವಾಗಿ ಹೇಳಲು ಬಯಸುತ್ತೇನೆ. ಆಧುನಿಕ ತಂತ್ರಜ್ಞಾನದಲ್ಲಿ ನಾನು ಪಡೆದ ಪಿಎಚ್. ಡಿ ಯು ಈ ವಿಷಯದ ಅಧ್ಯಯನದಲ್ಲಿ ಯಾವುದೇ ಸಹಾಯ ಮಾಡಿರುವುದಿಲ್ಲ. ಅಲ್ಲದೆ ಆಧುನಿಕ ತಂತ್ರಜ್ಞಾನದ ಹಾಗೂ ವಿಜ್ಞಾನದ ಯಾವುದೇ ಸಲಕರಣೆಗಳು ಈ ತರಂಗಗಳ ಸಾಮರ್ಥ್ಯವನ್ನು ಪರಿಶೀಲಿಸಲು ಅಸಮರ್ಥವಾಗಿವೆ ಎಂಬುದು ಕಟುವಾದರೂ ಸತ್ಯ. ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎನ್ನವ ಭ್ರಮೆಯಲ್ಲಿ ಇಲ್ಲದ, ಕಣ್ಣಿನ ದೃಷ್ಟಿಯ ಸಾಮರ್ಥ್ಯದ ಮಿತಿಯನ್ನು ಅರಿತಿರುವ ಯಾರೂ ಕೂಡ ಈ ಸತ್ಯವನ್ನು ತಮಗಿರುವ ಕುತೂಹಲದ ಮೂಲಕ ಅರಿಯಬಹುದು.

ಮೇಲೆ ತಿಳಿಸಿದ ಹಲವಾರು ತಂತ್ರೋಕ್ತ ಪೂಜೆಗಳು ದೇವರ ಕಲಾಭಿವೃದ್ಧಿಗಾಗಿ ಮಾಡುವಂತಹ ಸೇವೆಗಳು. ಬ್ರಹ್ಮಕಲಶವೂ ಕೂಡ. ದೇವರ ಕಲಾಭಿವೃದ್ಧಿಯು ಒಂದು ರೀತಿ ದೇವರಲ್ಲಿ ಶಕ್ತಿಯನ್ನು ತುಂಬುವಂತಹುದು. ಇಲ್ಲಿನ ಸಂದರ್ಭದಲ್ಲಿ ಜ್ಞಾನ ಶಕ್ತಿಯ ಸಂಗ್ರಹಣೆ. ಬುದ್ಧಿಯ ಅಧಿದೇವತೆ ಸರಸ್ವತಿ, ಜ್ಞಾನಕ್ಕೆ ಅಧಿದೇವತೆ ಸುಬ್ರಹ್ಮಣ್ಯ. ಬುದ್ಧಿ ಎಲ್ಲರಿಗೂ ಇರುತ್ತದೆ (ಮನುಷ್ಯನಲ್ಲಿ ಇರಬೇಕಾದದ್ದು) ಆದರೆ ಜ್ಞಾನವನ್ನು ಶ್ರಮಪಟ್ಟು ಗಳಿಸಬೇಕು. ಪಾವಂಜೆಯ ಸುಬ್ರಹ್ಮಣ್ಯ ಜ್ಞಾನಶಕ್ತಿಯನ್ನು ನೀಡುವಂತಹವನು. ನೀಡುತ್ತಾ ನೀಡುತ್ತಾ ಖಾಲಿಯಾಗುವುದಿಲ್ಲವೇ? ಅದಕ್ಕೆ "ಕಲಾಭಿವೃದ್ಧಿ". ಹಿಂದೆ ನವರಾತ್ರಿಯ ಪ್ರಶ್ನೋತ್ತರ ಸಂದರ್ಭದಲ್ಲಿ ಗುರುಗಳು ಹೇಳಿದ ಮಾತು ನೆನಪಿಗೆ ಬರುತ್ತದೆ. "ದೇವಸ್ಥಾನಕ್ಕೆ ಯಾರೂ, ಅದು ಕೊಡು, ಇದು ಕೊಡು ಎಂದು ಬೇಡಲಿಕ್ಕೆ ಹೋಗಬಾರದು. ಹಾಗೆ ಬೇಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ. ದೇವರನ್ನು ಯಾಕೆ ಬೇಡುತ್ತೀರಿ, ನಿಮ್ಮ ಪ್ರಾಪ್ತಿ ಎಷ್ಟು ಉಂಟೋ ಅಷ್ಟು ಸಿಕ್ಕಿಯೇ ಸಿಗುತ್ತದೆ." ಎಂದಿದ್ದರು. ನನಗೆ ಸಿಕ್ಖ್ ಪಂಥದವರು ಗುರುದ್ವಾರದಲ್ಲಿ ನಡೆಸುವ ಸೇವೆಯ ನೆನಪಾಗುತ್ತದೆ. ಅಲ್ಲಿ ಸೇವೆ ಎನ್ನುವುದರ ಅರ್ಥ ಗುರುದ್ವಾರವನ್ನು ಗುಡಿಸಿ ಸ್ವಚ್ಛ ಮಾಡುವುದು, ಹೂವುಗಳಿಂದ ಸಿಂಗರಿಸುವುದು, ಅನ್ನಪ್ರಸಾದ ಇತ್ಯಾದಿ ಬಡಿಸುವುದು, ಚಪ್ಪಲಿ ಕಾಯುವುದು, ಇತ್ಯಾದಿ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು, ಆಗರ್ಭ ಶ್ರೀಮಂತರು ಈ ರೀತಿಯ ಸೇವೆ ಮಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಊರಿನ ದೇವಸ್ಥಾನ ಒಂದರಲ್ಲಿ ೨ ರೂಪಾಯಿ ಕೊಟ್ಟು ಕರ್ಪೂರದ ಆರತಿ "ಸೇವೆ" ನಡೆಸಿ, ತಮ್ಮ ಸಕಲ ಪರಿವಾರದ ಶ್ರೇಯೋಭಿವೃದ್ಧಿಯನ್ನು ದೇವರಲ್ಲಿ ಬೇಡುವುದು ವಿಪರ್ಯಾಸ ಅಲ್ಲವೇ?


ಜ್ಞಾನ ಶಕ್ತಿಯನ್ನು ನೀಡುವ ಸುಬ್ರಹ್ಮಣ್ಯ, ಜನರಲ್ಲಿ ರಾಷ್ಟ್ರೀಯತೆಯ ಜ್ಞಾನವನ್ನು ಪಸರಿಸುತ್ತಿರುವ ವಿಚಾರ ನಿಮ್ಮ ಕಣ್ಣ ಮುಂದೆಯೇ ಇದೆ. ಸಾಮಾಜಿಕ ಜಾಲ ತಾಣಗಳನ್ನೇ ಗಮನಿಸಿ. ಎಲ್ಲೆಲ್ಲೂ ರಾಷ್ಟ್ರೀಯತೆಯನ್ನು ಪಸರಿಸುವ ಪೋಸ್ಟ್ ಗಳೇ ತುಂಬಿ ಹೋಗಿವೆ. ಎಲ್ಲೆಲ್ಲೂ ಸ್ವಾಮಿ ವಿವೇಕಾನಂದರ, ರಾಮಕೃಷ್ಣ ಪರಮಹಂಸರ, ದೇಶದ ಸ್ವಾತಂತ್ರ್ಯ ಹೋರಾಟಗಾರರ ಉಕ್ತಿಗಳು, ಕಥೆಗಳು ಒಮ್ಮೆಲೇ ಹರಿದಾಡಲಾರಂಭಿಸಿವೆ. ಇವೆಲ್ಲ ರಾಷ್ಟ್ರೀಯತೆಯ ಪುನರುತ್ಥಾನಕ್ಕೆ ಕೆಲವು ಉದಾಹರಣೆಗಳು. ದೇಶದ ಶೇ. ೮೦ ರಿಂದ ೯೦ ಭಾಗವನ್ನು ರಾಷ್ಟ್ರವನ್ನು ಪ್ರೀತಿಸುವವರ ದಂಡೇ ರಾಜ್ಯಗಳನ್ನು ಆಳುತ್ತಿವೆ. ರಾಷ್ಟ್ರದ ಬಗ್ಗೆ ಗೌರವ ತಾಳುವುದು, ರಾಷ್ಟ್ರ ಪ್ರೇಮ, ಉತ್ತಮ ನಾಗರೀಕರಾಗಿ ಬಾಳುವುದು, ಸಮಾಜಮುಖೀ ಚಿಂತನೆ ನಡೆಸುವುದು ಎಲ್ಲವೂ ಸೇರಿದಂತೆ ಭಾರತದಲ್ಲಿ ಉತ್ತಮ ವಾತಾವರಣದ ಅಲೆಯನ್ನು ಕಾಣಬಹುದು.

ಇತ್ತೀಚಿಗೆ ನನ್ನನ್ನು ಒಬ್ಬರು ಕೇಳಿದರು. ಪಾವಂಜೆಯ ಸುಬ್ಬಪ್ಪ ವಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದಿಲ್ಲವೇ ಎಂದು? ಯಾಕೆ ಈಡೇರಿಸವುದಿಲ್ಲ ಸ್ವಾಮಿ. ಖಂಡಿತ ಈಡೇರಿಸುತ್ತಾನೆ. ಆದರೆ ಅದು ಕೂಡ ಸಮಾಜದ, ರಾಷ್ಟ್ರದ ಚಿಂತನೆಯ ಉದ್ದೇಶವನ್ನೇ ಹೊಂದಿರುತ್ತದೆ. ನಿಮಗೆ ಬರುವ ಸಂಪತ್ತು ಸಮಾಜ ಸೇವೆಗೆ ವಿನಿಯೋಗವಾಗುತ್ತದೆ. ನೀವು ಬಯಸುವ ಉತ್ತಮ ವೈವಾಹಿಕ ಜೀವನ, ಸೌಹಾರ್ದಯುತ ಸಮಾಜಕ್ಕೆ ಕಾರಣವಾಗುತ್ತದೆ. ನೀವು ಬಯಸುವ ಸಂತಾನ ದೇಶಪ್ರೇಮಿ ಆಗುತ್ತದೆ. ದೇಶಕ್ಕೆ ಒಬ್ಬ ಉತ್ತಮ ನಾಗರೀಕ ದೊರೆಯುತ್ತಾನೆ, ನಿಮ್ಮ ವಿದ್ಯೆ ದೇಶಸೇವೆಗೆ ಬಳಸಲ್ಪಡುತ್ತದೆ. ನಿಮಗೆ ಸಿಗುವ ಉತ್ತಮ ಉದ್ಯೋಗ ಭಷ್ಟಾಚಾರ ರಹಿತ ವ್ಯವಸ್ಥೆಗೆ ಕಾರಣವಾಗುತ್ತದೆ. ನೀವು ಉದ್ಧಾರ ಆದರೆ ಸಮಾಜ ಉದ್ದಾರ ಆದ ಹಾಗೆ. ಸಮಾಜ ಉದ್ದಾರ ಆದರೆ ದೇಶ ಉದ್ಧಾರ ಆದ ಹಾಗೆ ಅಲ್ಲವೇ?

ಆಗಮೋಕ್ತವಾಗಿ ಸ್ಥಾಪಿಸಲ್ಪಟ್ಟ ಈ ದೇವಾಲಯ ಹಲವು ಕೌತುಕಗಳ ಆಗರ. ಶ್ರೀ ಅಣ್ಣಪ್ಪಸ್ವಾಮಿಯವರ ಸಾನ್ನಿಧ್ಯ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ. ಇಂತಹ ಸೇವೆಯನ್ನು ಮಾಡಿದರೆ ಇಂತಹ ಫಲಗಳನ್ನು ಪಡೆಯಬಹುದು ಎಂದು ಫಲಕದಲ್ಲಿ ಬರೆದು ತೂಗು ಹಾಕಿರುವ ಪ್ರಥಮ ದೇವಾಲಯವಿದು. ಪಂಚಾಮೃತ ಅಭಿಷೇಕವೆಂದರೆ ನಿಜವಾಗಿಯೂ ಪಂಚಾಮೃತ ಅಭಿಷೇಕ ನಡೆಸುವ, ರುದ್ರಾಭಿಷೇಕವೆಂದರೆ ರುದ್ರ ಪಾರಾಯಣ ಮಾಡಿಯೇ ಅಭಿಷೇಕ ನಡೆಸುವ, ತೈಲಾಭಿಷೇಕ ಎಂದರೆ ಶುದ್ಧವಾದ ತೆಂಗಿನ ಎಣ್ಣೆಯಿಂದಲೇ ಅಭಿಷೇಕ ಮಾಡಿ ಪ್ರಸಾದ ನೀಡುವ ವಿಶಿಷ್ಟ ದೇವಾಲಯವಿದು. ಬೆರಳೆಣಿಕೆಯ ಯುವಕರ ದಂಡು ಮಾಡುವ ಕಾರ್ಯಗಳು ನಿಜಕ್ಕೂ ನಮ್ಮನ್ನು ಆಶ್ಚರ್ಯಚಕಿತಗೊಳಿಸದೆ ಇರದು. ನೂರಾರು ಜನರು ಬೇಕಾದ ಕೆಲಸಗಳಿಗೆ ಏನೇನೂ ಕಡಿಮೆ ಇಲ್ಲದಂತೆ ಪೂರೈಸುವ ಇವರ ಚಾಕಚಕ್ಯತೆ ಒಮ್ಮೆ ನೋಡಿಯೇ ತಿಳಿಯಬೇಕು. ದಿನ ನಿತ್ಯ ಅಗ್ನಿ ಉಪಾಸನೆಯ ಮೂಲಕ ಜ್ಞಾನ ವೃದ್ಧಿಯಾಗುತ್ತದೆ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ.

ಶ್ರೀ ಅಣ್ಣಪ್ಪಸ್ವಾಮಿಯವರು ಪ್ರತಿಪಾದಿಸಿದ ಭಾಗವತ ಸಂಪ್ರದಾಯವಾದಿಗಳಾದ ಸ್ಥಾನಿಕರು ಪೂಜಿಸಿಕೊಂಡು ಬರುವ ವಿಶಿಷ್ಟ ಕ್ಷೇತ್ರವಿದು. ಭಾಗವತ ಎಂದರೇನೆ "ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಉಳ್ಳವರು" ಎಂದರ್ಥ (ಈ ಬಗ್ಗೆ “ಶ್ರೀ ಅಣ್ಣಪ್ಪಸ್ವಾಮಿ" ಸ್ವಾನಿಕರ ಮೂಲ ಪುರುಷ - ಸಂಶೋಧನಾ ಪ್ರಬಂಧ" ಎನ್ನುವ ಲೇಖನದಲ್ಲಿ ಈ ಹಿಂದೆ ವಿವರವಾಗಿ ಬರೆದಿರುತ್ತೇನೆ). ಎಲ್ಲರಲ್ಲೂ ಭಗವಂತನನ್ನು ಕಾಣುವವರು. ಭಾಗವತರಿಂದ ಮಾತ್ರ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಲು ಸಾಧ್ಯ. ಶಾಂತಿ-ಸಾಮರಸ್ಯದ ಬದುಕು ನೆನಸಾಗಲು ಸಾಧ್ಯ. ಆದ್ದರಿಂದ ಭಾಗವತರಿಂದಲೇ ಸ್ವಾಮಿಯ ಮಂತ್ರ-ತಂತ್ರಾದಿಯಾಗಿ ಪೂಜೆ-ಪುನಸ್ಕಾರಗಳು ಸಾಂಗವಾಗಿ ನಡೆದುಕೊಂಡು ಬರುತ್ತಿವೆ ಎಂದು ನನ್ನ ಅನ್ನಿಸಿಕೆ.

ಒಟ್ಟಿನಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇಗುಲವು ಸದೃಢ ರಾಷ್ಟ್ರವನ್ನು ಕಟ್ಟುವಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣೀಭೂತವಾಗಿದೆ. ಪ್ರತ್ಯಕ್ಷ ವ್ಯವಹಾರವನ್ನು ಈ ಲೇಖನದ ಮೂಲಕ ವಿವರವಾಗಿ ಹೇಳಿದ್ದೇನೆ. ಪರೋಕ್ಷ ವ್ಯವಹಾರವನ್ನು ವಿವರಿಸಲು ನಾನು ಸಮರ್ಥನಲ್ಲ. ಅಷ್ಟು ವಿದ್ಯೆಯನ್ನು ಇನ್ನೂ ಸಾಧಿಸದಿರುವುದೇ ಇದಕ್ಕೆ ಕಾರಣ. ಇನ್ನೊಮ್ಮೆ ಯಾವುದಾದರೂ ದೇವಳಕ್ಕೆ ಹೋದಾಗ ತಮ್ಮಿಂದ ಆದಷ್ಟು ಸೇವೆ (ತಾನು, ಮನ, ಧನ ದಿಂದ) ಮಾಡಿ. ಏನನ್ನೂ ಬೇಡಲು ಹೋಗಬೇಡಿ. ಇದೂ ಒಂದು ರೀತಿಯ ಸಮಾಜ ಸೇವೆಯೇ. ನಿಮಗೆ ಸಮಾಜದ ಕೆಳ ವರ್ಗಗಳ ಸೇವೆ ಮಾಡಲು ಮನಸ್ಸಿದ್ದು ಕಾರ್ಯ ಬಾಹುಳ್ಯದಿಂದ ಸಾಧ್ಯವಾಗದೆ ಇದ್ದರೆ, ಬಹು ಸುಲಭವಾದ ಅನ್ನ ದಾನ ಸೇವೆ ಮಾಡಿಸಿ. ಅನ್ನದ ಮೂಲಕ ದೇಹವನ್ನು ಸೇರುವ ಸ್ವಾಮಿಯ ಪ್ರಸಾದವು ಅವರ ಜ್ಞಾನವನ್ನು ಪ್ರಚೋದಿಸಿ ಉತ್ತಮ ನಾಗರೀಕರನ್ನಾಗಿ ಮಾಡುತ್ತದೆ. ಇದರಿಂದ ಉತ್ತಮ ಸಮಾಜ ತನ್ಮೂಲಕ ಉತ್ತಮ ದೇಶ ಕಟ್ಟಬಹುದು. ಈಗ ತಿಳಿಯಿತೇ, ಯಾಗಗಳ ಮುಖಾಂತರ ಲಕ್ಷಾಂತರ ಜನರ ಅನ್ನದಾನ, ತನ್ಮೂಲಕ ಬೌದ್ಧಿಕ ಪರಿಷ್ಕರಣೆ ಹೇಗೆ ಸಾಧಿಸಬಹುದು ಎಂದು. ನಮ್ಮ ಸುಬ್ಬಪ್ಪನಿಗೆ ಯಾವುದೇ ಸೇವೆ ಸಲ್ಲಿಸಿ, ನೀವು ಸಮಾಜಸೇವೆಯ ಸುಖ ಅನುಭವಿಸಬಹುದು.

ಓಂ ಶರವಣಭವಾಯ ನಮಃ

No comments:

Post a Comment