April 7, 2018

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 3&4


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೩

ಶ್ಯುನಶ್ಯೇಫ

ಶ್ವೇತಾಘಮರ್ಷಣ ಋಷಿಯು ಕ್ರೌನ್ಚಾರಾಣ್ಯ ಪ್ರದೇಶದಲ್ಲಿ೫ ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ೪ನೇ ಮಗನೇ ಶ್ಯುನಶ್ಯೇಫ. ಆ ಪ್ರದೇಶವು ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಸಹಜವಾಗಿ ಆಹಾರದ ಕೊರತೆ ಇತ್ತು, ಶ್ಯುನಶ್ಯೇಫರು ಹದಿನಾರನೇ ವಯಸ್ಸಿಗೆ ಸಕಲ ವೇದಪಾರಂಗತರಾಗಿ, ಮಹಾಜ್ಞಾನಿಯಾಗಿ ಈ ಲೋಕದ ಅನ್ನಾದಿ ಋಣಗ್ರಾಹ್ಯವನ್ನು ಬಿಟ್ಟು ಅನ್ನಾದಿಗಳಲ್ಲಿ ದೊರೆಯುವ "ವಾಜ" ವೆಂಬ ಸಾರಗ್ರಹಿಸುವ ಶಕ್ತಿಯನ್ನು ಹೊಂದಿದ್ದರು. ಇದನ್ನರಿತ ದೇವತೆಗಳು ತಮ್ಮ ಅಮರತ್ವಕ್ಕೆ ಕುಂದಾದೀತೆಂದು ಚಿಂತಿಸಿ ಒಂದು ನಾಟಕ ರೂಪಿಸುತ್ತಾರೆ. ರಾಜಾ ಹರಿಶ್ಚಂದ್ರನೆಂಬ ರಾಜನಿಗೆ ಜಲೋದರ ಎಂಬ ರೋಗ ಬರುತ್ತದೆ. ಪುರೋಹಿತನಾದ ಯತಿಯು ದೇವತೆಗಳ ಆದೇಶದಂತೆ ವರುಣ ಯಾಗವನ್ನೂ, ಬಲಿಪಶುವಾಗಿ ೧೬ ವರ್ಷದ ವೇದ ವೇದಾಂಗ ಪರಿಣತ ಬ್ರಾಹ್ಮಣ ವಟುವನ್ನು ಯೂಪ ಪಶು ಮಾಡಿದಲ್ಲಿ ರೋಗ ಪರಿಹಾರವಾಗುತ್ತದೆ ಎಂದನು. ರಾಜನ ಆದೇಶದಂತೆ ಮಂತ್ರಿಯು ಹುಡುಕುತ್ತಾ ಕ್ರೌನ್ಚಾರಾಣ್ಯಕ್ಕೆ ಬಂದಾಗ ಶ್ವೇತಾಘಮರ್ಷಣನು ಮಂತ್ರಿಗೆ "ಅರಸನಿಗೆ ನಾವೆಲ್ಲ ಮಕ್ಕಳಂತೆ. ಅವನ ಅನಿವಾರ್ಯತೆಗೆ ಬೇಕಿದ್ದಲ್ಲಿ ನನ್ನ ಮಗನನ್ನೇ ಕೊಡುತ್ತೇನೆ. ವೇದ ಪಾರಂಗತನಾದ ಅವನಿಗೂ ಇದೊಂದು ಪರೀಕ್ಷೆ" ಎಂದನು. ಮಗನನ್ನು ಕರೆದು ಯೂಪವನ್ನು ಜಯಿಸಿ ರಾಜನನ್ನು ಗುಣಮುಖನಾಗಿ ಮಾಡು ಎಂದನು. ಯಾಗ ವಿಧಿಯಂತೆ ಯೂಪ ಪಶುವಿಗೆ ವರಣೆಯಿತ್ತು, ಅಭ್ಯಾವರ್ತಿನೀ ಹೋಮಪೂರ್ವಕ ಯೂಪರೋಪ ಮಾಡಿ ಬಂಧಿಸಲಾಯಿತು. ವರುಣನು ಯೂಪವನ್ನು ಆಕ್ರಮಿಸಿದ. ಆದರೆ ಶ್ಯುನಶ್ಯೇಫನು ಅಘಮರ್ಷಣ ಜಪ ಮಾಡುತ್ತಾ ವರುಣನನ್ನೇ ಜಯಿಸಿದ. ಆಗ ವರುಣನು ರಾಜನ ಖಾಯಿಲೆಯೆಯನ್ನು ಹಿಂಪಡೆದು ಶ್ಯುನಶ್ಯೇಫನನ್ನು ಹರಸಿದನು. ಶ್ಯುನಶ್ಯೇಫರು ಅನ್ನದಲ್ಲಿರುವ ವಾಜವನ್ನು ಬೇರ್ಪಡಿಸುವ ವಿಧ್ಯೆಯನ್ನು ಸಾಧಿಸಿದ ಕಾರಣ ದೇವತೆಗಳಿಗಿಂತ ಹೆಚ್ಚಿನವರಾದರು. ಇಂದ್ರನ ಸಖ್ಯವನ್ನು ಹೊಂದಿ ಅಮರನಾದನು. ಮಂತ್ರ ದೃಷ್ಟಾರನಾದನು. ಹಾಗಾಗಿ ಈ ಮಂತ್ರದ ಗಾನಕ್ಕೆ ಅಂತಹ ವಿಶಿಷ್ಟ ಶಕ್ತಿ ಇದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೪

ನೃಮೇಧ

ಪ್ರಸಕ್ತ ಕಾಲದಲ್ಲಿ ಯಾಗ-ಯಜ್ಞಗಳಲ್ಲಿ ಕೆಲ ಅಜ್ಞಾನಿಗಳು ಪ್ರಾಣಿ ಬಲಿಯನ್ನು ಹೊಂದಿಸಿ, ಇದೊಂದು ವೇದೋಕ್ತ ಪ್ರಕ್ರಿಯೆ ಎಂಬಂತೆ ಬಿಂಬಿಸಿ ವೇದ ನಿಂದನೆ ಮಾಡುತ್ತಿದ್ದಾರೆ. ಆದರೆ ಅಲ್ಲಿ ಅವರ ಅಜ್ಞಾನದ ಪರಮಾವಧಿ ಕಂಡು ಬರುತ್ತದೆಯೇ ವಿನಃ ಸತ್ಯವಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಶಬ್ದ ಮೂಲವನ್ನು. ಉದಾಹರಣೆಗೆ "ನೃಮೇಧ", "ನೃಸಿಂಹ" ಇದು ಮೂಲ ಶಬ್ದ. ಇಲ್ಲಿ ನರಮೇಧವಾಗಲೀ, ನರಸಿಂಹವಾಗಲೀ ಇಲ್ಲ. ಋ ಕಾರ ಬಳಕೆಯಾಗಿದೆ, ರ ಕಾರವಲ್ಲ. ನೃಸಿಂಹ ಭೀಕರವೂ ಅಲ್ಲ, ನೃಮೇಧ ನರಮೇಧವೂ ಅಲ್ಲ. ಮೇಧ ಶಬ್ದವು ಯಜ್ಞ ಯಾಗಾದಿಗಳ ಪರ್ಯಾಯ ಶಬ್ದ, ಒಂದು ಪೂರ್ಣ ತ್ಯಾಗರೂಪದ ಅಧ್ಯಯನಶೀಲಯುಕ್ತವಾದ ತಪಸ್ಸು ಎಂದರ್ಥ. ಯಜ್ಞ ಯಾಗಾದಿಗಳಂತೆ ಇಲ್ಲಿ ಅಗ್ನಿ ಸಂಚಯನ ಇರುವುದಿಲ್ಲ. ಆದರೆ ತಪಸ್ಸು, ತ್ಯಾಗ, ಜಪ, ಜೀವನವೂ ಕೂಡಾ ಯಜ್ಞ ಸಮಾನವಾದ್ದರಿಂದ ಈ ಶಬ್ದ ಬಳಕೆಯಲ್ಲಿ ಬಂದಿದೆ. ಇಲ್ಲಿ ನೃಮೇಧ ಎಂದರೆ ನರಮೇಧ ಮಾಡಿದವನು ಎಂದರ್ಥವಲ್ಲ. ಆತ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ಮಹಾತಪಸ್ವಿ. ಅವನ ಇನ್ನೊಂದು ಹೆಸರು ಪುರುಹನ್ಮ. ಹಾಗಾಗಿ ಕೆಲವು ಕಡೆ "ನೃಮೇಧ ಪುರುಹನ್ಮಾಂಗೀರಸಃ" ಎಂದೇ ಸಂಬೋಧಿಸಲ್ಪಡುತ್ತದೆ. ಹಾಗೆಂದು ಪುರುವನ್ನು ಕೊಂದವನೆಂದು ಅರ್ಥವಲ್ಲ. ಇವೆರಡಕ್ಕೂ ಭಿನ್ನವಾದ ವಿಶೇಷ ಇತಿಹಾಸವಿದೆ. ಅದನ್ನು ತಿಳಿಯಲು ಈ ಕಥೆ ಓದಿ.

ಒಂದಾನೊಂದು ಕಾಲದಲ್ಲಿ ಹೈಹಯ ವಂಶದ ಅರಸುಗಳು ಚಕ್ರವರ್ತಿಗಳಾಗಿ ಸಪತದ್ವೀಪಗಳನ್ನು ಆಳುತ್ತಿದ್ದರು. ಅವರು ದುಷ್ಟರೂ, ಅಧರ್ಮಿಗಳೂ, ಪ್ರಜಾಪೀಡಕರೂ ಆಗಿದ್ದರು. ಹಾಗೇ ಈ ಕಾಲದಲ್ಲಿ ಬ್ರಾಹ್ಮಣರೂ ಎರಡು ಪಂಗಡಗಳಾಗಿ (ಭಾರ್ಗವರು + ಆಂಗೀರಸರು) ಮಂತ್ರಾಸ್ತ್ರಗಳ ಮುಖೇನ ಹೋರಾಡುತ್ತಿದ್ದರು. ಆಗ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ನೃಮೇಧ (ಮೂಲ ಹೆಸರು 'ಬಂಧು') ನು ತಾಯಿಯ ಅಪ್ಪಣೆ ಪಡೆದು ದೀರ್ಘ ಕಾಲ ಅಧ್ಯಯನ, ತಪಸ್ಸು ನಡೆಸಿ, ಪೂರ್ಣಜ್ಞಾನ ಪಡೆದು ತನ್ನೂರಿಗೆ ಬರುವಾಗ ತನ್ನ ಊರು ನಾಶವಾಗಿರುವುದನ್ನು ನೋಡುತ್ತಾನೆ. ಈ ಸಮಾಜ ವ್ಯವಸ್ಥೆಯನ್ನು ಸರಿಪಡಿಸಲು ಅವನು ಸಪ್ತರ್ಷಿಗಳ ಕುರಿತು ಪ್ರಾರ್ಥಿಸಿದಾಗ ಅವರು " ನೃಮೇಧ ಎಂಬ ಯಾಗ ಮುಖೇನ ಕ್ಷತ್ರಿಯಲ್ಲಿರತಕ್ಕ ಆನೃಶಂಸ ಗುಣವನ್ನು ತಿದ್ದಿ ನೃಶಂಸರನ್ನಾಗಿ ಮಾಡು" ಎಂದರು. ಹೀಗೆ ಯಾಗ ಮಾಡುತ್ತಿರಲು ಭಾರ್ಗವರು "ಪುರು" ಎಂಬುವನ ನೇತೃತ್ವದಲ್ಲಿ ಅಡ್ಡಿ ಮಾಡಲು ಆತನನ್ನು, ಮತ್ತವರ ಕಡೆಯವರನ್ನು ಶೀಲಾ ಪ್ರತಿಮೆ ಮಾಡಿ ಯಾಗ ಮುಗಿಸುತ್ತಾನೆ. ಬಳಿಕ ಹೈಹಯರು ಕ್ಷಾತ್ರ ಧರ್ಮದಂತೆ ಪ್ರಜಾರಂಜಕರಾಗಿ ಬದುಕುತ್ತೇವೆ ಎಂದು ವಾಗ್ದಾನ ಮಾಡಿ ತೆರಳುತ್ತಾರೆ. ಆದರೆ 'ಪುರು' ವಿನ ಪ್ರತಿಮೆ ಮಾತ್ರ ಹಾಗೇ ಉಳಿಯುತ್ತದೆ. ಅದನ್ನು ಮುಕ್ತಗಳಿಸಲು ಹೋದಾಗ "ಹೇ ವಿಪ್ರಬಂಧೋ! ಪುರುಹನ್ ಮಾ" ಎಂದು ಅಶರೀರ ವಾಣಿ ಕೇಳಿಸುತ್ತದೆ. ಅವನ ಆಯುಸ್ಸು ತೀರಿ ವರ್ಷವಾಗಿದೆ. ಈಗ ಮನುಷ್ಯರೂಪ ಕೊಟ್ಟರೆ ಸಾಯುತ್ತಾನೆ. ಆಗ ಸಪ್ತರ್ಷಿಗಳನ್ನು ಪ್ರಾರ್ಥಿಸಿದಾಗೆ "ಈ ಪುರುವು ಪ್ರತಿಮಾರೂಪದಲ್ಲಿ ದಕ್ಷಿಣಕ್ಕೆ ಮುಖಮಾಡಿರುವುದರಿಂದ ದಕ್ಷಿಣಾಮೂರ್ತಿ ಎನಿಸಿಕೊಳ್ಳುತ್ತಾನೆ. ತ್ರಿಮೂರ್ತಿಗಳು ಏಕೀಭವಿಸಿ ದತ್ತಾತ್ರೇಯನಾಗಿ ಹುಟ್ಟುವಾಗ ಋಣಕಾರಣ ದೇಹಿಯಾಗಿ ಇವನಿರುತ್ತಾನೆ. ಮುಂದಿನ ಕ್ಷತ್ರಿಯ ನಿಗ್ರಹಕ್ಕೆ ಇವನ ಪಾತ್ರ ಈಗಲೇ ಆರಂಭವಾಗಿದೆ. ನೀನು ಮುಂದೆ "ನೃಮೇಧ", "ಪುರುಹನ್ಮಾ" ನೆಂದೂ ಖ್ಯಾತನಾಗುತ್ತೀಯ ಎಂದರು.

"ನೃಮೇಧ" ಕ್ಕೂ, ನರಮೇಧಕ್ಕೂ, "ಪುರುಹನ್ಮಾ", ಪುರುವಿನ ಹತ್ಯೆಗೂ ಅರ್ಥಯಿಸುವುದು ಬಾಲಿಶ ಅಲ್ಲವೇ? ಬಂಧುಗಳೇ, ಮೊದಲು ವೇದಾಧ್ಯನ ನಡೆಸಿ, ಬಳಿಕ ವ್ಯಾಖ್ಯಾನ ಮಾಡಿ.

No comments:

Post a Comment