February 6, 2020

ಬಿಲ್ವ ಪತ್ರೆಯ ವಿಶೇಷತೆ


ಈ ಕಡೆ ಬಿಲ್ವಪತ್ರೆಯ ಹೂಗಳು ಸಿಗುವುದಿಲ್ಲ. ಅವುಗಳಲ್ಲಿಯೂ ಕೆಲವೊಂದಿಷ್ಟು ಪೂಜಾರ್ಹವಾದ ಗುಣಗಳಿವೆ. ತಂತ್ರ ಶಾಸ್ತ್ರದ ಪ್ರಕಾರ ಪೂಜೆಯಲ್ಲಿ ಬಿಲ್ವದ ಬೇರುಗಳನ್ನು ಹೇಳಿದೆ, ತೊಗಟೆಯನ್ನು ಹೇಳಿದೆ, ಪತ್ರೆಯನ್ನು ಹೇಳಿದೆ, ಪುಷ್ಪವನ್ನು ಹೇಳಿದೆ, ಹಾಗೆಯೆ ಫಲವನ್ನು ಹೇಳಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಹೇಳಲಾಗಿದೆ. ಬಿಲ್ವದ ಗಂಧವನ್ನೂ ಹೇಳಿದ್ದಾರೆ. ಆಂಧ್ರ-ಒಡಿಶಾ ಕಡೆಗಳಲ್ಲಿ ಬಿಲ್ವ ಮರದ ಕೊರಡನ್ನು ತೇದಿ ಗಂಧ ತೆಗೆಯುತ್ತಾರೆ. ಅಲ್ಲಿ ಶ್ರೀಗಂಧದ ಕೊರಡನ್ನು ಬಳಸುವುದೇ ಇಲ್ಲ. ಬಿಲ್ವದ ಕೊರಡು ತುಂಬಾ ಉತ್ತಮವಾದ ಗಂಧವನ್ನು ನೀಡುತ್ತದೆ. ಬಿಲ್ವದ ಬೇರಿಗೆ ಅದರ ೧೦ ಪಟ್ಟು ಗಂಧವನ್ನು ನೀಡುವ ಶಕ್ತಿ ಇದೆ. ಆದರೆ ಬೇರಿನಿಂದ ಬರುವ ಗಂಧವನ್ನು ಹೆಚ್ಚಾಗಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ದೇವಾಲಯಗಲ್ಲಿಯೂ ಇದನ್ನು ಬಳಸುವುದಿಲ್ಲ. ಏಕೆಂದರೆ ಬೇರನ್ನು ತೆಗೆದಾಗ ಮರವು ಸಾಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿಕೃತವಾಗಿ ಬೇರನ್ನು ತೆಗೆಯುವಂತಿಲ್ಲ. ಎಲ್ಲಿ ಬಿಲ್ವ ಮರದ ಬೇರನ್ನು ಕತ್ತರಿಸುತ್ತೀರೋ ಅಲ್ಲಿ ಇನ್ನೊಂದು ಮರ ಹುಟ್ಟುತ್ತದೆ. ಅದೇ ಬೇರು ಮೇಲೆ ಬಂದು ಗಿಡವಾಗುತ್ತದೆ. ಹೀಗೆ ಬೇರನ್ನು ಕತ್ತರಿಸುತ್ತಾ ಹೋದಾಗ ಮರ ಸಾಯುತ್ತದೆ. ಬಿಲ್ವದ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದನ್ನು ಬೆಳೆಸುವುದು ಬಲು ಕಷ್ಟಕರ. ಹಾಗಾಗಿ ಬೇರನ್ನು ಸಾರ್ವತ್ರಿಕವಾಗಿ ದೇವಾಲಯಗಳಲ್ಲಿ ಗಂಧವಾಗಿ ಬಳಸುವುದಿಲ್ಲ. ಆದರೆ ಬಿಲ್ವದ ಕೊರಡನ್ನು ಶ್ರೀಗಂಧ, ಚಂದನದಂತೆ ಗಂಧವಾಗಿ ಬಳಸುವ ಕ್ರಮ ಇದೆ. ಅದು ಔಷಧಿಯಾಗಿಯೂ ಆಗುತ್ತದೆ. ಹಾಗೆಯೆ ಪತ್ರೆಯ ಭಾಗವನ್ನು ತೆಗೆದುಕೊಂಡರೆ, ಮೊದಲು ಅದನ್ನು ನೀರಿನಿಂದ ತೊಳೆದು ಕಸ, ಕಷ್ಮಲಗಳನ್ನು ಬೇರ್ಪಡಿಸಬೇಕು. ಆಮೇಲೆ ನೀರಿನಲ್ಲಿ ೧೦ ನಿಮಿಷ ಹಾಕಿಟ್ಟರೆ ಒಂದಷ್ಟು ಔಷಧೀಯ ಅಂಶಗಳನ್ನು ನೀರಿಗೆ ಬಿಡುತ್ತದೆ. ಇದು ಅತ್ಯುತ್ತಮವಾದ ಪಾನೀಯ ಜಲ. ಕುಡಿಯಲು ಅತೀ ಶ್ರೇಷ್ಠವಾದುದು. ಮಳೆ ಬಾರದೇ ಇದ್ದಾಗ, ಮಳೆ ತುಂಬಾ ಹಿಂದೆ ಹೋದಾಗ ಬೇರೆ ಎಲ್ಲ ಕುಡಿಯುವ ನೀರೂ ಹಾಳಾಗುತ್ತದೆ. ಬಾವಿಯಲ್ಲಿ ನೀರಿದ್ದರೂ ಕೂಡ ಆಳಕ್ಕೆ ಹೋಗಿ ಕುಡಿಯಲು ಅನರ್ಹವಾಗಿರುತ್ತದೆ. ಇದಕ್ಕೆ ಸುಲಭ ಉಪಾಯ ಬಿಲ್ವಪತ್ರೆ. ನೀರನ್ನು ಎರಡು ಕೊಡ ಎಳೆದಿಟ್ಟು ಬಿಲ್ವಪತ್ರೆಯನ್ನು ಹಾಕಿದರೆ ಸಾಕು ನೀರು ಪರಿಶುದ್ಧವಾಗಿ ಬಿಡುತ್ತದೆ. ಹಾಳಾದ ನೀರಿಂದ ಬರುವ ಗಂಟಲು ಕೆರೆತ, ಕಫ ಇತ್ಯಾದಿಗಳಿಗೆ ಇದು ಪರಿಹಾರ ನೀಡುತ್ತದೆ. ಬಿಲ್ವಪತ್ರೆಗೆ ಅಷ್ಟು ಶಕ್ತಿ ಇದೆ. ಅದಕ್ಕಾಗಿಯೇ ಹೇಳಿದ್ದು, ಪೂಜೆಯಲ್ಲಿ ಇವತ್ತು ಏರಿಸಿದ ಬಿಲ್ವಪತ್ರೆಯನ್ನು ತೊಳೆದರೆ ನಾಳೆ ಕೂಡ ಏರಿಸಬಹುದು ಎಂದು. ಅದರರ್ಥ ನೀರಿಗೆ ಹಾಕಿದ ತಕ್ಷಣ ನೀರು ಶುದ್ಧವಾಯಿತು. ಹೀಗೆ ಎಷ್ಟು ಬಾರಿ ಕೂಡ ಬಿಲ್ವ ಪತ್ರೆಯ ಮೂಲಕ ನೀರನ್ನು ಶುದ್ಧಗೊಳಿಸಬಹುದು. ಬಿಲ್ವಪತ್ರೆ ತನ್ನ ಗುಣ ಕಳೆದುಕೊಳ್ಳುವುದಿಲ್ಲ. ಹೀಗೆ ೨೧ ದಿನಗಳ ಕಾಲ ನೀರಿನ ಸಂಪರ್ಕದಿಂದ ನೀರನ್ನು ಶುದ್ಧಗೊಳಿಸಿ ತನ್ನ ಗುಣ ಕಾಯ್ದುಕೊಳ್ಳುವ ಶಕ್ತಿ ಬಿಲ್ವಪತ್ರೆಗಿದೆ. ಆದರೆ ಒಂದು ಬಿಲ್ವ ಫಲ ೧೦೦ ವರ್ಷಗಳ ಕಾಲ ತನ್ನ ಶಕ್ತಿಯನ್ನು ಉಳಿಸಿಕೊಳ್ಳಬಲ್ಲದು. ಔಷಧವಾಗಿ ಬಿಲ್ವಾದಿ ತೈಲ ಇತ್ಯಾದಿಗಳನ್ನು ಕೇಳಿರಬಹುದು. ಇವುಗಳಲ್ಲೆಲ್ಲ ೧೦೦ ವರ್ಷಗಳ ಕಾಲ ತನ್ನ ಔಷಧೀಯ ಗುಣಗಳನ್ನು ಬಿಲ್ವವು ಉಳಿಸಿಕೊಳ್ಳುತ್ತದೆ. ಹಾಗಾಗಿ ಇದು ಅತಿ ವಿಶಿಷ್ಟವಾದ ಮರ, ಭಾರತದಾದ್ಯಂತ ಮಾತ್ರ ಕಾಣಸಿಗುತ್ತದೆ (ಅಂದರೆ ಬಲೂಚಿಸ್ತಾನದಿಂದ - ಬರ್ಮಾದ ವರೆಗೆ, ದಕ್ಷಿಣದ ಶ್ರೀಲಂಕಾದ ವರೆಗೆ). ವಿದೇಶದಲ್ಲೆಲ್ಲೂ ಕಾಣಸಿಗುವುದಿಲ್ಲ. ಇದೇ ಲಕ್ಷಣ ಇರುವ ಭೂಮಿ ಇದ್ದರೂ ವಿದೇಶದಲ್ಲಿ ಇದು ಬೆಳೆಯುವುದಿಲ್ಲ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

No comments:

Post a Comment