February 6, 2020

ಪ್ರಶ್ನೋತ್ತರ - ೧

ಪ್ರಶ್ನೆ: ಗುರುಗಳೇ, ಪೂಜೆಗೆ ಸುಗಂಧಭರಿತ ಪುಷ್ಪಗಳನ್ನೇ ಬಳಸಬೇಕೆ ಅಥವಾ ಸುಗಂಧವಿಲ್ಲದ ಸಾಮಾನ್ಯ ಪುಷ್ಪ ಬಳಸಬಹುದೇ? ಉತ್ತರ : ತಂತ್ರ ಶಾಸ್ತ್ರವು ಗಂಧವಿಲ್ಲದ್ದನ್ನು ಹೂವು ಎಂದೇ ಹೇಳಿಲ್ಲ. ವಿಶಿಷ್ಟವಾದ, ಗೃಹಣಯೋಗ್ಯವಾದ ಗಂಧವನ್ನು ಹೊಂದಿರಬೇಕೆಂದು ಹೇಳುತ್ತದೆ. ಮನಸ್ಸಿಗೆ ಆನಂದ ನೀಡತಕ್ಕ, ಮುದ ನೀಡತಕ್ಕ ಪರಿಮಳ ಹೊಂದಿರುವಂತಹವು ಮಾತ್ರ ಹೂವುಗಳು. ಉಳಿದವು ಹೂವಲ್ಲ. ಹೂವಿನಂತೆ ಇದ್ದದ್ದೆಲ್ಲ ಹೂವಾಗುವುದಿಲ್ಲ. ಅಥವಾ ಆಕರ್ಷಕ ಬಣ್ಣಗಳನ್ನು ಹೊಂದಿರುವ ಎಲೆಗಳು ಹೂವಾಗಲು ಸಾಧ್ಯವಿಲ್ಲ. ಹಾಗೆಯೇ ಬಣ್ಣವೂ ಹೂವಲ್ಲ ಅಥವಾ ಆಕಾರವೂ ಹೂವಲ್ಲ. ಹೂವು ಎನ್ನುವುದೇ ಗಂಧ ಕಾರಣದಿಂದ. ಹಾಗಾಗಿ ಉಳಿದವುಗಳನ್ನು ಪೂಜೆಗೆ ಇಡಬಾರದು, ಇಡಬಹುದು ಎನ್ನುವುದು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಪ್ರಾಪ್ತ ಇತ್ಯಾದಿಗಳನ್ನು ಅವಲಂಬಿಸಿದೆ. ಯಾವ ಹೂವೂ ಸಿಕ್ಕಿಲ್ಲ, ವಿಗ್ರಹವನ್ನು ಹಾಗೆಯೇ ಅಭಿಷೇಕ ಮಾಡಿ ಬೋಳಾಗಿ ಇಡಲಿಕ್ಕೆ ಮನಸ್ಸಿಗೆ ಒಪ್ಪುವುದಿಲ್ಲ. ಏನೋ ಒಂದು ಆಚ್ಛಾದನೆ ಮಾಡಬೇಕು. ಹೂವು ಸಿಗದೇ ಇದ್ದರೆ ಕೊನೆಗೆ ಪತ್ರೆಯನ್ನಾದರೂ ಉಪಯೋಗಿಸಿ ದೇವರನ್ನು ಸ್ವಲ್ಪ ಭಾಗ ಆಚ್ಛಾದನೆ ಮಾಡಿಯೇ ಇತರ ಅಲಂಕಾರ ಪೂಜೆಗಳನ್ನು ಮಾಡಬೇಕು ಎಂದು ಹೇಳುತ್ತದೆ. ಗಂಧ ಇಲ್ಲದ ಹೂವುಗಳನ್ನೇ ಬಳಸಿ, ಇಲ್ಲವೇ ಪತ್ರೆಗಳನ್ನೇ ಬಳಸಿ ಆದರೆ ಹೂವು ಎನ್ನುವುದು ಮಾತ್ರ ಗಂಧ ಇದ್ದದ್ದಕ್ಕೆ ಮಾತ್ರ. ಅದು ಸ್ಪಷ್ಟ.

ಪ್ರಶ್ನೆ: ನೀವು ಹೂವುಗಳಲ್ಲಿರುವ ಸುಗಂಧಗಳ ಬಗ್ಗೆ ಹೇಳಿದ್ದೀರಿ. ಮಂದಾರ ಪುಷ್ಪಕ್ಕೆ ಯಾವ ಸುಗಂಧ ಇದೆ?

ಸ್ವಾಮೀಜಿ: ಅದಕ್ಕೆ ಸ್ನಿಗ್ಧ ಎಂದು ಹೇಳಲಾಗುತ್ತದೆ. ಸ್ನಿಗ್ಧ ಗಂಧಾ ಇತಿ ಮನ್ದಾರಃ. ಹೀಗೆ ಬೇರೆ ಬೇರೆ ಪುಷ್ಪಗಳಿಗೆ ಹೇಳಲಾಗಿದೆ. ಮಂದಾರವನ್ನು ಸ್ವಲ್ಪ ಕಾಲ ಆಗ್ರಾಣಿಸಿದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ. ಅದೇ ದೀರ್ಘವಾಗಿ ಆಗ್ರಾಣಿಸಿದರೆ ಒಂದು ದಿನವಿಡೀ ಅದರ ಸುಗಂಧ ನಿಮ್ಮ ಮೈಯಲ್ಲಿ ಇರುತ್ತದೆ.

ಪ್ರಶ್ನೆ: ದೇವಸ್ಥಾನದ ಒಳಗಡೆ ಕೇವಲ ಒಳ್ಳೆಯದನ್ನೇ ಮಾತನಾಡಬೇಕು ಅಥವಾ ಅದನ್ನು ಬಿಟ್ಟು ಬೇರೆಯದನ್ನು ಮಾತನಾಡಲೇ ಬಾರದು, ಬೈಯ್ಯಬಾರದು ಎಂದೆಲ್ಲ ಇದೆ. ಅದನ್ನು ಬೋರ್ಡ್ ಹಾಕಿ ಪ್ರಕಟಿಸಬೇಕೇ?

ಸ್ವಾಮೀಜಿ: ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಗರ್ಭಗುಡಿಯ ಒಳಗಡೆ ಮಾತನಾಡುವಂತಿಲ್ಲ. ಆರತಿ ಹಚ್ಚಿಕೊಡು, ಎಲ್ಲಿ ಹಾಳಾಗಿ ಹೋದೆ? ಎಂದೆಲ್ಲ ಬಯ್ಯುವಂತಿಲ್ಲ. ಅದಕ್ಕೆ ಅವಕಾಶವೇ ಇಲ್ಲ. ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವ ಅಗತ್ಯ ಇಲ್ಲ. ಅದಕ್ಕೋಸ್ಕರವೇ ಪ್ರಧಾನ ಅರ್ಚಕನಷ್ಟೇ ಸಮರ್ಥನಾದ ಸಹಚರಿ ಇರುತ್ತಾನೆ. ಅವನನ್ನು ಕೀಳುಶಾಂತಿ ಎಂದು ಕರೆಯಲಾಗುತ್ತದೆ. ಅವನು ಪ್ರಧಾನ ಅರ್ಚಕನಷ್ಟೇ ಸಾಮರ್ಥ್ಯ ಹೊಂದಿದ್ದು ಗರ್ಭಗುಡಿಯ ಒಳಗೆ ನಡೆಯುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡು ಹೊರಗಿನಿಂದ ಸೌಲಭ್ಯಗಳನ್ನು ವಹಿಸಿಕೊಡಬೇಕು. ಒಳಗೆ ಎಲ್ಲ ಸೌಲಭ್ಯಗಳನ್ನು ಒಂದೇ ಸಾರಿ ತುಂಬಿಸಿಡಲು ಬರುವುದಿಲ್ಲ. ಸಾಮಾನ್ಯವಾಗಿ ಎಷ್ಟೋ ಆಗಮೋಕ್ತ ದೇವಸ್ಥಾನಗಳಲ್ಲಿ, ಜನರನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದ್ದಲ್ಲಿ ಇಬ್ಬರು ಇದ್ದೇ ಇರುತ್ತಾರೆ. ಒಳಗಿದ್ದವನು ಕೊಡು ಎಂದು ಕೂಡ ಮಾತನಾಡುವಂತಿಲ್ಲ. ಮಂತ್ರ ಹೇಳುವುದು ಮಾತ್ರ, ಮತ್ತೆ ಮೌನ. ದೇವಸ್ಥಾನದ ಒಳಪ್ರಾಕಾರಗಳಲ್ಲಿಯೂ ಇದನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಇತರ ಶಬ್ದ ಮಾತನಾಡುವುದಕ್ಕಿಂತ, ತಾವು ಯಾವ ದೇವರ ದರ್ಶನಕ್ಕೆ ಬಂದಿದ್ದೇವೆಯೋ ಆ ದೇವರ ನಾಮಾವಳಿಯನ್ನು ಜಪಿಸುವುದು ಒಳ್ಳೆಯದು. ದೇವಸ್ಥಾನದ ಪ್ರಕಾರದ ಹೊರಗೆ ಬಂಡ ನಂತರ ಇತರ ಸಂಭಾಷಣೆ ಮಾಡಬಹುದು.

No comments:

Post a Comment