ನಿರ್ಲಿಪ್ತ
February 6, 2020
ಪ್ರಶ್ನೋತ್ತರಗಳು - 6
ಪ್ರಶ್ನೋತ್ತರಗಳು - 5
ಪ್ರಶ್ನೋತ್ತರಗಳು - 4
ಪ್ರಶ್ನೋತ್ತರ - 3
ಪ್ರಶ್ನೋತ್ತರ - 2
ಬಿಲ್ವ ಪತ್ರೆಯ ವಿಶೇಷತೆ
ಪ್ರಶ್ನೋತ್ತರ - ೧
ಪ್ರಶ್ನೆ: ಗುರುಗಳೇ, ಪೂಜೆಗೆ ಸುಗಂಧಭರಿತ ಪುಷ್ಪಗಳನ್ನೇ ಬಳಸಬೇಕೆ ಅಥವಾ ಸುಗಂಧವಿಲ್ಲದ ಸಾಮಾನ್ಯ ಪುಷ್ಪ ಬಳಸಬಹುದೇ?
ಉತ್ತರ : ತಂತ್ರ ಶಾಸ್ತ್ರವು ಗಂಧವಿಲ್ಲದ್ದನ್ನು ಹೂವು ಎಂದೇ ಹೇಳಿಲ್ಲ. ವಿಶಿಷ್ಟವಾದ, ಗೃಹಣಯೋಗ್ಯವಾದ ಗಂಧವನ್ನು ಹೊಂದಿರಬೇಕೆಂದು ಹೇಳುತ್ತದೆ. ಮನಸ್ಸಿಗೆ ಆನಂದ ನೀಡತಕ್ಕ, ಮುದ ನೀಡತಕ್ಕ ಪರಿಮಳ ಹೊಂದಿರುವಂತಹವು ಮಾತ್ರ ಹೂವುಗಳು. ಉಳಿದವು ಹೂವಲ್ಲ. ಹೂವಿನಂತೆ ಇದ್ದದ್ದೆಲ್ಲ ಹೂವಾಗುವುದಿಲ್ಲ. ಅಥವಾ ಆಕರ್ಷಕ ಬಣ್ಣಗಳನ್ನು ಹೊಂದಿರುವ ಎಲೆಗಳು ಹೂವಾಗಲು ಸಾಧ್ಯವಿಲ್ಲ. ಹಾಗೆಯೇ ಬಣ್ಣವೂ ಹೂವಲ್ಲ ಅಥವಾ ಆಕಾರವೂ ಹೂವಲ್ಲ. ಹೂವು ಎನ್ನುವುದೇ ಗಂಧ ಕಾರಣದಿಂದ. ಹಾಗಾಗಿ ಉಳಿದವುಗಳನ್ನು ಪೂಜೆಗೆ ಇಡಬಾರದು, ಇಡಬಹುದು ಎನ್ನುವುದು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಪ್ರಾಪ್ತ ಇತ್ಯಾದಿಗಳನ್ನು ಅವಲಂಬಿಸಿದೆ. ಯಾವ ಹೂವೂ ಸಿಕ್ಕಿಲ್ಲ, ವಿಗ್ರಹವನ್ನು ಹಾಗೆಯೇ ಅಭಿಷೇಕ ಮಾಡಿ ಬೋಳಾಗಿ ಇಡಲಿಕ್ಕೆ ಮನಸ್ಸಿಗೆ ಒಪ್ಪುವುದಿಲ್ಲ. ಏನೋ ಒಂದು ಆಚ್ಛಾದನೆ ಮಾಡಬೇಕು. ಹೂವು ಸಿಗದೇ ಇದ್ದರೆ ಕೊನೆಗೆ ಪತ್ರೆಯನ್ನಾದರೂ ಉಪಯೋಗಿಸಿ ದೇವರನ್ನು ಸ್ವಲ್ಪ ಭಾಗ ಆಚ್ಛಾದನೆ ಮಾಡಿಯೇ ಇತರ ಅಲಂಕಾರ ಪೂಜೆಗಳನ್ನು ಮಾಡಬೇಕು ಎಂದು ಹೇಳುತ್ತದೆ. ಗಂಧ ಇಲ್ಲದ ಹೂವುಗಳನ್ನೇ ಬಳಸಿ, ಇಲ್ಲವೇ ಪತ್ರೆಗಳನ್ನೇ ಬಳಸಿ ಆದರೆ ಹೂವು ಎನ್ನುವುದು ಮಾತ್ರ ಗಂಧ ಇದ್ದದ್ದಕ್ಕೆ ಮಾತ್ರ. ಅದು ಸ್ಪಷ್ಟ.
ಪ್ರಶ್ನೆ: ನೀವು ಹೂವುಗಳಲ್ಲಿರುವ ಸುಗಂಧಗಳ ಬಗ್ಗೆ ಹೇಳಿದ್ದೀರಿ. ಮಂದಾರ ಪುಷ್ಪಕ್ಕೆ ಯಾವ ಸುಗಂಧ ಇದೆ?
ಸ್ವಾಮೀಜಿ: ಅದಕ್ಕೆ ಸ್ನಿಗ್ಧ ಎಂದು ಹೇಳಲಾಗುತ್ತದೆ. ಸ್ನಿಗ್ಧ ಗಂಧಾ ಇತಿ ಮನ್ದಾರಃ. ಹೀಗೆ ಬೇರೆ ಬೇರೆ ಪುಷ್ಪಗಳಿಗೆ ಹೇಳಲಾಗಿದೆ. ಮಂದಾರವನ್ನು ಸ್ವಲ್ಪ ಕಾಲ ಆಗ್ರಾಣಿಸಿದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ. ಅದೇ ದೀರ್ಘವಾಗಿ ಆಗ್ರಾಣಿಸಿದರೆ ಒಂದು ದಿನವಿಡೀ ಅದರ ಸುಗಂಧ ನಿಮ್ಮ ಮೈಯಲ್ಲಿ ಇರುತ್ತದೆ.
ಪ್ರಶ್ನೆ: ದೇವಸ್ಥಾನದ ಒಳಗಡೆ ಕೇವಲ ಒಳ್ಳೆಯದನ್ನೇ ಮಾತನಾಡಬೇಕು ಅಥವಾ ಅದನ್ನು ಬಿಟ್ಟು ಬೇರೆಯದನ್ನು ಮಾತನಾಡಲೇ ಬಾರದು, ಬೈಯ್ಯಬಾರದು ಎಂದೆಲ್ಲ ಇದೆ. ಅದನ್ನು ಬೋರ್ಡ್ ಹಾಕಿ ಪ್ರಕಟಿಸಬೇಕೇ?
ಸ್ವಾಮೀಜಿ: ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಗರ್ಭಗುಡಿಯ ಒಳಗಡೆ ಮಾತನಾಡುವಂತಿಲ್ಲ. ಆರತಿ ಹಚ್ಚಿಕೊಡು, ಎಲ್ಲಿ ಹಾಳಾಗಿ ಹೋದೆ? ಎಂದೆಲ್ಲ ಬಯ್ಯುವಂತಿಲ್ಲ. ಅದಕ್ಕೆ ಅವಕಾಶವೇ ಇಲ್ಲ. ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವ ಅಗತ್ಯ ಇಲ್ಲ. ಅದಕ್ಕೋಸ್ಕರವೇ ಪ್ರಧಾನ ಅರ್ಚಕನಷ್ಟೇ ಸಮರ್ಥನಾದ ಸಹಚರಿ ಇರುತ್ತಾನೆ. ಅವನನ್ನು ಕೀಳುಶಾಂತಿ ಎಂದು ಕರೆಯಲಾಗುತ್ತದೆ. ಅವನು ಪ್ರಧಾನ ಅರ್ಚಕನಷ್ಟೇ ಸಾಮರ್ಥ್ಯ ಹೊಂದಿದ್ದು ಗರ್ಭಗುಡಿಯ ಒಳಗೆ ನಡೆಯುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡು ಹೊರಗಿನಿಂದ ಸೌಲಭ್ಯಗಳನ್ನು ವಹಿಸಿಕೊಡಬೇಕು. ಒಳಗೆ ಎಲ್ಲ ಸೌಲಭ್ಯಗಳನ್ನು ಒಂದೇ ಸಾರಿ ತುಂಬಿಸಿಡಲು ಬರುವುದಿಲ್ಲ. ಸಾಮಾನ್ಯವಾಗಿ ಎಷ್ಟೋ ಆಗಮೋಕ್ತ ದೇವಸ್ಥಾನಗಳಲ್ಲಿ, ಜನರನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದ್ದಲ್ಲಿ ಇಬ್ಬರು ಇದ್ದೇ ಇರುತ್ತಾರೆ. ಒಳಗಿದ್ದವನು ಕೊಡು ಎಂದು ಕೂಡ ಮಾತನಾಡುವಂತಿಲ್ಲ. ಮಂತ್ರ ಹೇಳುವುದು ಮಾತ್ರ, ಮತ್ತೆ ಮೌನ. ದೇವಸ್ಥಾನದ ಒಳಪ್ರಾಕಾರಗಳಲ್ಲಿಯೂ ಇದನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಇತರ ಶಬ್ದ ಮಾತನಾಡುವುದಕ್ಕಿಂತ, ತಾವು ಯಾವ ದೇವರ ದರ್ಶನಕ್ಕೆ ಬಂದಿದ್ದೇವೆಯೋ ಆ ದೇವರ ನಾಮಾವಳಿಯನ್ನು ಜಪಿಸುವುದು ಒಳ್ಳೆಯದು. ದೇವಸ್ಥಾನದ ಪ್ರಕಾರದ ಹೊರಗೆ ಬಂಡ ನಂತರ ಇತರ ಸಂಭಾಷಣೆ ಮಾಡಬಹುದು.
ಶಿವ ದೇವಸ್ಥಾನಗಳಲ್ಲಿ ಸಾಲಿಗ್ರಾಮ ಇಟ್ಟು ಪೂಜೆ
ಅವೆಲ್ಲಾ ಇತ್ತೀಚೆಗೆ ಹುಟ್ಟಿಕೊಂಡಂತಹ ಕೆಲವೊಂದಿಷ್ಟು ಸಮಸ್ಯೆಗಳು. ಅದು ಯಾವುದೂ ಆಗಮ ಶಾಸ್ತ್ರಕ್ಕೆ ಸಂಬಂಧಪಟ್ಟದ್ದಲ್ಲ. ಶಿವಲಿಂಗವನ್ನು ನೇರವಾಗಿ ಪೂಜೆ ಮಾಡಬಾರದು ಎಂದು ಎಲ್ಲೂ ಹೇಳಿಲ್ಲ. ಎಲ್ಲ ದೇವರ ಮೊದಲ ಸ್ವರೂಪವೂ ಅದೇ. ನಂತರ ಅದಕ್ಕೆ ಆಕಾರ ಕೊಟ್ಟಾಗ ಬೇರೆ ಬೇರೆ ನಾಮಕರಣ. ಅಷ್ಟು ಬಿಟ್ಟರೆ ಇರುವುದೆಲ್ಲಾ ಸ್ತಾರವಾಗಲೀ, ಭರ್ಗವಾಗಲೀ ಎಲ್ಲ ಸ್ವರೂಪ ನಿರಾಕಾರ. ಎಲ್ಲ ದೇವರೂ ನಿರಾಕಾರ ಸ್ವರೂಪವೇ. ನಂತರ ಅದಕ್ಕೆ ಆಕಾರ ಕೊಟ್ಟು ರೂಪ ಕೊಡುವಂತದ್ದು. ಅದಕ್ಕೆ ಮತ್ತೊಂದು ಆ ರೀತಿಯ ನಿರಾಕಾರ ಸ್ವರೂಪದ ಸಾಲಿಗ್ರಾಮವನ್ನು ಇಡಬೇಕಾದ ಅಗತ್ಯ ಇಲ್ಲ. ಅಲ್ಲಿ ಸಾಲಿಗ್ರಾಮವನ್ನು ಇಡುವುದೇ ನಿರಾಕಾರ ಸ್ವರೂಪ ಎನ್ನುವ ದೃಷ್ಟಿಯಿಂದ. ನಿರಾಕಾರ ಶಿವಲಿಂಗ ಇರುವಾಗ ಮತ್ತೊಂದು ನಿರಾಕಾರ ಏಕೆ ಅಲ್ಲಿ ಇಡಬೇಕು? ಆಗಮದಲ್ಲಿ ಅದಕ್ಕೆ ವಿಶೇಷವಾದ ಮಹತ್ವವನ್ನು ಕೊಟ್ಟಿಲ್ಲ. ಏಕೆಂದರೆ ಆಗಮ ಶಾಸ್ತ್ರ ಬರೆಯುವ ಕಾಲದಲ್ಲಿ ಇವೆಲ್ಲ ಸಮಸ್ಯೆ ಇರಲಿಲ್ಲ. ನಂತರ ಹುಟ್ಟಿಕೊಂಡ ಸಮಸ್ಯೆಗಳಿಗೆ ಯಾರ್ಯಾರೋ ತಾತ್ಕಾಲಿಕ ಪರಿಹಾರದ ವಿಧಿಯನ್ನು ಹೇಳಿದಾಗಲೂ ಕೂಡ ಹೇಳುವುದೇನೆಂದರೆ ಶಿವಲಿಂಗವೇ ನಿರಾಕಾರಾವಾದ್ದರಿಂದ ಸಾಲಿಗ್ರಾಮ ಪ್ರಸ್ತುತ ಅಲ್ಲ. ಎರಡು ನಿರಾಕಾರಗಳನ್ನು ಇಟ್ಟ ಹಾಗೆ ಆಗುತ್ತದೆ ಅಷ್ಟೇ. ಅದರಿಂದ ಏನೂ ಆಗುವುದೂ ಇಲ್ಲ, ಅಗತ್ಯವೂ ಇಲ್ಲ. ಎರಡೂ ಒಂದೇ ಆಗಿದೆ. ಇವು ಇತ್ತೀಚೆಗೆ ಹುಟ್ಟಿಕೊಂಡ ಕೆಲವು ಅವರವರದ್ದಾದ ಹೆಚ್ಚುಗಾರಿಕೆ ತೋರಿಸುವ ಪ್ರಯತ್ನಗಳಾಗಿವೆ. ಅಷ್ಟು ಬಿಟ್ಟರೆ ಸತ್ಯ ಅಲ್ಲ.
ಇತ್ತೀಚೆಗೆ ವಿದೇಶವನ್ನು ಸುತ್ತಿಕೊಂಡು ಬಂದವರೊಬ್ಬರು ಕೇಳುತ್ತಿದ್ದರು. ವಿದೇಶದಲ್ಲಿ ಒಂದು ಕ್ಷೇತ್ರ ಇದೆ. ಅದು ಈಶ್ವರನ ಆರಾಧನಾ ಸ್ಥಳ ಎಂದು ಒಂದಿಷ್ಟು ಜನ ಹೇಳುತ್ತಾರೆ. ಹಾಗೇ ಒಂದಷ್ಟು ಜನ ಅದು ಮೊಹಮ್ಮದೀಯರ ದೈವಿಕ ನಂಬಿಕೆಯ ಕ್ಷೇತ್ರ ಎಂದು ಹೇಳುತ್ತಾರೆ. ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾರೆ. ಇದು ಸರಿಯೇ ಎಂದು ಕೇಳಿದರು. ಅದು ಹೇಗೆಯೇ ಇರಲಿ. ಒಂದು ನಿರ್ಮಾಣ, ಒಂದು ಕಟ್ಟಡವಂತೂ ಅಲ್ಲಿದೆ. ಒಳಗೆ ಏನಿದೆ ಎನ್ನುವುದು ಮುಖ್ಯವಲ್ಲ. ಯಾವುದೇ ಒಂದು ನಿರ್ಮಾಣ ಕಟ್ಟಡವೇ ಇದ್ದರೂ ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾ ಇದ್ದರೆ ಆ ಒಂದು ನಂಬಿಕೆಯನ್ನು ಬೆಳೆಸಿಕೊಂಡು ಬಂದಿರುವ ಮನುಷ್ಯನ ಮನಸ್ಸೆಲ್ಲವೂ ಕ್ರೂರವಾಗುತ್ತಾ ಹೋಗುತ್ತದೆ. ಅದೇ ಪ್ರದಕ್ಷಿಣೆ ತಿರುಗಿದರೆ ಶಾಂತವಾಗುತ್ತಾ, ಸುಪ್ತವಾಗುತ್ತಾ ಹೋಗುತ್ತದೆ. ಕ್ರೂರವಾಗುತ್ತಾ ಹೋಗುತ್ತದೆ ಎನ್ನುವುದಕ್ಕೆ ನಿಮಗೆ ಆಧಾರಗಳು ಬೇಕಿಲ್ಲ ಎಂದು ನನ್ನ ಭಾವನೆ. ಹಾಗೆಯೇ ಕ್ರೂರವಾಗುತ್ತಾ ಹೋಗಲಿ, ಅದಕ್ಕೊಂದು ಪರಿಹಾರ ಆಗ ಸಿಗುತ್ತದೆ. ರಾವಣ ಮುಂತಾದ ಎಷ್ಟೆಲ್ಲ ರಾಕ್ಷಸರು ಕ್ರೂರಿಗಳಾದರು, ಕಂಸನೂ ಕ್ರೂರಿಯಾಗಿ ಹುಟ್ಟಿ ಎಷ್ಟೆಲ್ಲ ಕಷ್ಟಗಳನ್ನು ನೀಡಿದ. ಏನಾದರೂ ಆಯಿತೇ? ಕಡೆಗೆ ಎಲ್ಲವೂ ಸರಿಯಾಯಿತಲ್ಲವೇ? ಅಲ್ಲಿಯವರೆಗೆ ಕಾಯೋಣ.
---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
ಪ್ರದಕ್ಷಿಣೆಯಾಗಿ ಸುತ್ತು - ಅರ್ಧ ಸುತ್ತು
ಔಷಧಿಗೆ ಈಶ್ವರನೇ ಅಧಿಪತಿ. ಹಿಂದೆ ಕೆಲವು ಭಾಗಗಳಲ್ಲಿ ಚಿಕಿತ್ಸಾಲಯವಾಗಿ ಶಿವಾಲಯಗಳನ್ನು ಕಟ್ಟುತ್ತಿದ್ದರು. ಅಲ್ಲಿ ಪಶುಪತಿ ದೇವರು. ಪಶುಪತಿಯ ರೂಪದಲ್ಲಿ ಶಿವನ ಆರಾಧನೆಯಾಗುತಿತ್ತು. ಅಲ್ಲಿ ಲಿಂಗ ಮತ್ತು ಒಳಪ್ರಾಕಾರದಷ್ಟು ಭಾಗದ ಕೆಳಗೆ ದೊಡ್ಡ ಒಂದು ಚಾವಡಿ ಇರುತಿತ್ತು. ಗರ್ಭಗುಡಿಯ ನಾಳ ಒಂದು ಮಾತ್ರ ಮೇಲೆ ಹೋಗುವುದು ಬಿಟ್ಟರೆ ಉಳಿದೆಲ್ಲ ಭಾಗ ಚಾವಡಿಯಂತೆ ಇರುತಿತ್ತು. ಅಲ್ಲಿ ಕೆಲವೊಂದಿಷ್ಟು ರೋಗಗಳಿಗೆ ಸರಳವಾದ ಚಿಕಿತ್ಸೆ ಕೊಡುವುದು ಸಾಧ್ಯವಿತ್ತು. ಅಂತಹ ವ್ಯವಸ್ಥೆ ಮಾಡಿದ್ದರು. ಅದರ ಬಿರಡೆ ಇದ್ದದ್ದು ನೀವು ಈಗ ಅರ್ಧ ಸುತ್ತು ಬಂದು ಚಂಡೇಶ್ವರನಿಗೆ ಸುತ್ತು ಹಾಕಿ ಹೋಗುತ್ತೀರಲ್ಲ ಆ ಪ್ರದೇಶದಲ್ಲಿ. ಅದನ್ನು ತಿರುಗಿಸಿದರೆ ಕೆಳಗೆ ಹೋಗಲು ಮೆಟ್ಟಿಲು ಸಿಗುತ್ತದೆ. ಅಲ್ಲಿಂದ ರೋಗಿಗಳನ್ನು ಕೆಳಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕುಳ್ಳಿರಿಸಿ ಮೇಲೆ ಆಗತಕ್ಕಂತಹ ರುದ್ರ ಪಾರಾಯಣ ಇತ್ಯಾದಿಗಳನ್ನು ಸಂಯೋಜಿಸಿ ಚಿಕಿತ್ಸೆ ಕೊಡುತ್ತಿದ್ದರು. ಯಾವುದೇ ವೆಚ್ಚ ಇರುತ್ತಿರಲಿಲ್ಲ. ಮನೋರೋಗಗಳಿಗಂತೂ ಅದು ಉತ್ತಮವಾದ ಚಿಕಿತ್ಸೆಯಾಗಿತ್ತು. ಅದು ಪಶುಪತಿ ಕಲ್ಪದಲ್ಲಿ ಪ್ರತಿಷ್ಟೆಯಾದ ದೇವಸ್ಥಾನಗಳಲ್ಲಿ ಮಾತ್ರ. ನಂತರ ಅದರ ನ್ಯಾಸ ರೂಪವಾಗಿ ಇಡುವ ಕ್ರಮ ಬಂತು. ಎಲ್ಲ ಶಿವಾಲಯಗಳಲ್ಲೂ ತಂತ್ರೋಕ್ತವಾಗಿ ಬಲಿ ಕಲ್ಲುಗಳನ್ನು ಪ್ರತಿಷ್ಟಾಪನೆ ಮಾಡುವಾಗ ಚಂಡೇಶ್ವರ ಎಂದು ಅಲ್ಲಿ ಇಡುವ ಕ್ರಮ ಬಂತು. ಆ ಪಶುಪತಿ ದೇವಾಲಯವಾದರೆ ಆ ಕಲ್ಲಿನ ಮೇಲೆ ಓಡಾಡಲು ಬರುವುದಿಲ್ಲ. ಅಲ್ಲಿನ ಬಾಗಿಲಿನ ಕಲ್ಲಿನ ಬಿರಡೆ ತಿರುಗಿಸಿದರೆ ಮೇಲಕ್ಕೆ ಹೋಗುತ್ತದೆ ಮತ್ತು ಬಿರಡೆ ತಿರುಗಿಸಿದರೆ ಕೆಳಕ್ಕೆ ಹೋಗುತ್ತದೆ. ಅದರ ಮೇಲೆ ಓಡಾಡಿದಾಗ ಅಕಸ್ಮಾತ್ ಕೆಳಕ್ಕೆ ಬೀಳುವ ಸಂಭವ ಇರುತ್ತದೆ. ಅದಕ್ಕೆ ಅದರ ಮೇಲೆ ಓಡಾಡಬಾರದು ಎಂದು ಅಲ್ಲಿಯ ವರೆಗೆ ಬಂದು ವಾಪಾಸು ಹೋಗುವ ಕ್ರಮ ಪಶುಪತಿ ದೇವಸ್ಥಾನದಲ್ಲಿ ಮಾತ್ರ ಇದ್ದದ್ದು. ಈ ನ್ಯಾಸ ಇದ್ದಲ್ಲೆಲ್ಲ ಓಡಾಡಬಾರದು ಎಂದೇನಿಲ್ಲ. ಆದರೆ ಅಲ್ಲಿ ಇದೆಯಲ್ಲ ಎಂದು ಇಲ್ಲೂ ಅನುಸರಿಸುವ ಕ್ರಮ ಬಂದಿತು. ಅದು ಖಂಡಿತ ಪೂರ್ಣ ಅಲ್ಲ. ಪೂರ್ಣ ಪ್ರದಕ್ಷಿಣೆ ಬರಬೇಕು. ಅಲ್ಲಿ ಯಾವುದೋ ಆಡಳಿತ ಮಂಡಳಿ ಇದೆ, ಅದು ನಿರ್ದೇಶನ ಮಾಡಿದೆ ಎಂದರೆ ಅಲ್ಲಿ ಅದು ಅನಿವಾರ್ಯ, ನೀವು ವಾಪಾಸು ತಿರುಗಿ ಬನ್ನಿ. ಜಗಳ ಮಾಡಬೇಡಿ ಅಥವಾ ಹೋಗಲೇಬೇಡಿ. ಆದರೆ ನೀವು ನಿಮ್ಮ ದೇವಸ್ಥಾನದಲ್ಲಿ ಪೂರ್ಣ ಪ್ರದಕ್ಷಿಣೆ ಬನ್ನಿ.
---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
ಕೇರಳದವರು ಬಂದು ಅಶುದ್ಧಿಯ ಬಗ್ಗೆ ಹೇಳಲು ಅವರಿಗೆ ಸಿಗುವ ಆಧಾರಗಳೇನು?
ಆಧಾರವೇ ಇಲ್ಲ. ಯಾವುದೋ ಪ್ರದೇಶದ ಜ್ಯೋತಿಷಿ ಬಂದು ನಿಮ್ಮಲ್ಲಿ ಅಶೌಚದವರು ಒಳಗೆ ಹೋಗಿದ್ದಾರೆ, ಅಶುದ್ಧಿಯಾಗಿದೆ ಎಂದೆಲ್ಲ ಹೇಳಿದರೆ ಅದು ಖಂಡಿತ ಅವರ ಕಲ್ಪನೆ. ಸತ್ಯ ಅಲ್ಲ. ಹೇಗೆ ಹೇಳುತ್ತಾರೆ ಎಂದರೆ ಅವರಿಗೆವಾಕ್ ಸ್ವಾತಂತ್ರ್ಯ ಇದೆ. ನೀವು ಕೇಳಿದ್ದಕ್ಕೆ ಪರಿಹಾರ ಕೊಡಲು ಅವರು ಬದ್ಧರೂ ಅಲ್ಲ. ಹೇಳಿ ಹೋಗುವುದು ಮಾತ್ರ. ನಂತರ ಪರಿಹಾರ ಆಗಲಿಲ್ಲ ಎಂದರೂ ಅದಕ್ಕೂ ಅವರು ಜವಾಬ್ದಾರರಲ್ಲ. ಹಾಗಾಗಿ ಅವರಿಗೆ ಹೇಳುವ ಅಧಿಕಾರ ಇದೆ! ನೀವು ಕರೆಸಿರುತ್ತೀರಿ, ಅದ್ಧೂರಿಯಾದ ದಕ್ಷಿಣೆ ಕೊಡುತ್ತೀರಿ. ಅದಕ್ಕವರು ಏನಾದರೂ ಹೇಳಲೇ ಬೇಕು. ನಿಮಗೆ ಭಾಧಕಗಳೂ, ಸಮಸ್ಯೆಗಳೂ ಹೇಳದಿದ್ದರೆ ನಿಮಗೆ ದಕ್ಷಿಣೆ ಕೊಡಲು ಮನಸ್ಸು ಬರುತ್ತದೆಯೇ? ಅದಕ್ಕೆ ಒಂದಿಷ್ಟು ದೋಷಗಳನ್ನು ಹೇಳಿ ದಕ್ಷಿಣೆ ತೆಗೆದುಕೊಂಡು ಹೋಗುವುದು ಪದ್ಧತಿಯಾಗಿದೆ. ಅದು ಈ ಪ್ರದೇಶಕ್ಕೆ ಖಂಡಿತ ಸೂಕ್ತವೂ ಅಲ್ಲ. ಇದನ್ನು ನಾನು ಮಾತ್ರ ಹೇಳಿದ್ದಲ್ಲ. ನಿಮ್ಮ ಗುರುರಾಜ ಭಟ್ಟರು (ಇಲ್ಲಿನ ಇತಿಹಾಸ ಸಂಶೋಧಕರು) ಹೇಳಿದ್ದಾರೆ. ಪ್ರಶ್ನೆ ಮಾರ್ಗ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿದ ಕಬ್ಯಾಡಿ ಜೋಯಿಸರು ಹೇಳಿದ್ದಾರೆ. ಅಷ್ಟಮಂಗಲ ಪ್ರಶ್ನೆ ಎಂದು ಅಲ್ಲಿನವರು ಬಂದು ಮೋಸ ಮಾಡುತ್ತಿದ್ದಾರೆ, ಅವರನ್ನು ನಂಬಬೇಡಿ ಎಂದು ಬರೆದಿದ್ದಾರೆ. ಹಣವನ್ನು ತೆಗೆದುಕೊಂಡು ಹೋಗಲಿಕ್ಕೆ 8-10 ದಿವಸ ಅನಾವಶ್ಯಕವಾಗಿ ಕಾಲವನ್ನು ಕಳೆಯುತ್ತಾರೆ. ಆ ರೀತಿ ವಿಮರ್ಶೆ ಮಾಡಲು ಅವಕಾಶ ಇಲ್ಲ. ಆಗಮ ಶಾಸ್ತ್ರ ಹೇಳಿದಂತೆ ಹೋಗಬೇಕೆ ವಿನಹ ಪ್ರಶ್ನೆಯಿಂದ ಹೋಗುವುದಲ್ಲ. ಹೀಗೆಂದು ಸ್ಪಷ್ಟವಾಗಿ ಅವರ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಈ ಕಡೆಯ ಬಹಳ ಜನ ಚಿಂತಕರು ವಿರೋಧಿಸಿದ್ದರೂ ಏನೋ ಹೊಟ್ಟೆ ಹೊರೆದುಕೊಳ್ಳಲು ದಾರಿಯಾಗುತ್ತದೆ ಎಂದು ನಾವು ಇಟ್ಟುಕೊಂಡಿದ್ದೇವೆ!
---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು
September 6, 2019
ಸೋಣೆ ಆರತಿಯ ವಿಶೇಷ
ಸಿಂಹ ಮಾಸದಲ್ಲಿ ದೇವರಿಗೆ ವಿಶೇಷವಾಗಿ ಸಲ್ಲಿಸಲ್ಪಡುವ ಸೇವೆಯೇ ಸೋಣೆ ಆರತಿ. ಸಿಂಹ ಮಾಸದಲ್ಲಿ ಸೂರ್ಯನು ಅತ್ಯಂತ ಪ್ರಖರವಾಗಿ ಬೆಳಗುತ್ತಿರುತ್ತಾನೆ. ಆದ್ದರಿಂದ ರಾತ್ರಿಯ ಸೂರ್ಯನಾದ ದೀಪದ ಬೆಳಕಿನಲ್ಲಿ ಅಥರ್ವ ವೇದದ ವಿಶೇಷವಾದ ೧೦ ಮಂತ್ರಗಳನ್ನು ಹೇಳುತ್ತಾ, ೫ ಮರದ ಹಲಗೆಯಿಂದ ಮಾಡಿದ ಆರತಿಯಲ್ಲಿ ಆರತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಆರತಿ ಬೆಳಗುವುದನ್ನು ಬಿಟ್ಟು ಆರತಿಯನ್ನು ನೇರವಾಗಿ ಹಿಡಿದು ಸೇವಾಕರ್ತರನ್ನು ದೇವರಿಗೆ ತೋರಿಸಲಾಗುತ್ತದೆ. ತನ್ಮೂಲಕ ಸೇವಾಕರ್ತನ ತೇಜಸ್ಸು, ವರ್ಚಸ್ಸುಗಳು ಹೆಚ್ಚಲಿ ಎಂಬ ಉದ್ದೇಶ ಇರುತ್ತದೆ. ಆರತಿಗೆ ತ್ಯಾಗಮಯಿ ಸನ್ಯಾಸಿಯೊಬ್ಬ ಬಳಸಿದ ವಸ್ತ್ರವನ್ನು ಬತ್ತಿಯಾಗಿ ಬಳಸಲಾಗುತ್ತದೆ. ಧೂಪದ ಎಣ್ಣೆ (ಗಣಪತಿ ಕಾಯಿಗಳನ್ನು ಆರಿಸಿ, ಚೆನ್ನಾಗಿ ಕುದಿಸಿ ಎಣ್ಣೆ ಬಿಡುವ ವರೆಗೆ ಬಿಸಿ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಇಂಧನ ಬೇಕಾಗಿರುವುದರಿಂದ ಇದರ ಮೌಲ್ಯ ತುಪ್ಪಕ್ಕಿಂತಲೂ ಹೆಚ್ಚು) ಯನ್ನು ಆರತಿಗೆ ಬಳಸಲಾಗುತ್ತದೆ. ಆರತಿಯ ಬಳಿಕ ಅರ್ಧ ಸುಟ್ಟು ಹೋದ ಬತ್ತಿಗಳನ್ನು ಆರಿಸಿ ಮರುದಿನ ಹೋಮ ಮಾಡಲಾಗುತ್ತದೆ. ಅಲ್ಲಿಗೆ ಸೋಣೆ ಆರತಿಯ ಸೇವೆ ಸಂಪೂರ್ಣವಾದಂತೆ.
ಇದು ಕೇಳಿ ತಿಳಿದ ವಿಚಾರ. ಚಿಕ್ಕ - ಪುಟ್ಟ ದೋಷವಿದ್ದರೆ ಕ್ಷಮೆ ಇರಲಿ.
October 15, 2018
ಅಮೆ-ಸೂತಕದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ಇದೆ. ಇದು ಸರಿಯೆ?
April 20, 2018
ದೇವಾಲಯದಿಂದ ರಾಷ್ಟ್ರದುದ್ಧಾರ
April 7, 2018
ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 3&4
ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 1&2
April 2, 2018
ಮೂರ್ಖರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಭಾಗ ೩ - ಫೇಸ್ಬುಕ್, ಗೂಗಲ್ ಗಳು ಉಚಿತವಲ್ಲ!
May 24, 2017
ಬಾಳೆಕುದ್ರು ಮಠದ ಶ್ರೀ ಅಣ್ಣಪ್ಪಸ್ವಾಮಿ ನಿರ್ಮಿತ ನ್ಯಾಯದಾನ ಯಂತ್ರ
ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಳಿಯ ಶ್ರೀ ಬಾಳೆಕುದ್ರು ಸಂಸ್ಥಾನದ "ಶ್ರೀಮಠ"ದಲ್ಲಿರುವ ಕುತೂಹಲಕಾರಿ ನ್ಯಾಯದಾನಯಂತ್ರದ ಸಂಕ್ಷಿಪ್ತ ಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಶ್ರೀಮಠವು ಅತ್ಯಂತ ಸುಂದರವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಅತ್ಯಂತ ವಿಸ್ಮಯಕಾರೀ ಸಂಗತಿಗಳು ಹೊರಬರುತ್ತಿವೆ. ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಅಂತಹ ಒಂದು ವಿಸ್ಮಯವೇ ಈ ನ್ಯಾಯದಾನ ಯಂತ್ರ. ಇದನ್ನು ಸ್ಥಾಪಿಸಿದವರು ನಮ್ಮೆಲ್ಲರ ಪ್ರೀತಿಯ ಅಜ್ಜ ಶ್ರೀ ಅಣ್ಣಪ್ಪಸ್ವಾಮಿಯವರು. ಬಾಳೆಕುದ್ರು ಮಠ ಹಾಗೂ ಶ್ರೀ ಅಣ್ಣಪ್ಪಸ್ವಾಮಿಯ ಸಂಬಂಧಗಳ ಬಗ್ಗೆ ಈಗಲೇ ಈ ಬ್ಲಾಗಿನಲ್ಲಿ ಬರೆಯಲಾಗಿದೆ. ಅದನ್ನು ಈ ವಿಳಾಸದಲ್ಲಿ ಓದಬಹುದು
ಬಾಳೆಕುದ್ರು ಮಠದ ನ್ಯಾಯದಾನ ಯಂತ್ರದ ಚಿತ್ರವನ್ನು ಇಲ್ಲಿ ನೀಡಲಾಗಿದೆ.
ಎದುರಿಗೆ ಕಾಣುತ್ತಿರುವ ದ್ವಾರವೇ ನಾನು ಪ್ರಸ್ತಾಪಿಸುತ್ತಿರುವ ನ್ಯಾಯದಾನ ಯಂತ್ರ. ಇದರ ಮೂಲಕ ಹಾದು ಬರುವ ಪ್ರತಿಯೊಬ್ಬ ವ್ಯಕ್ತಿಯೂ ಸತ್ಯವನ್ನು ನುಡಿಯಲೇ ಬೇಕು. ಅಂತಹ ತಂತ್ರವನ್ನು ಶ್ರೀ ಅಣ್ಣಪ್ಪಯ್ಯನವರು ಈ ದ್ವಾರದಲ್ಲಿ ಅಳವಡಿಸಿದ್ದಾರೆ. ಇದರ ಮೂಲಕ ಸುಮಾರು ೨೩೦೦ ವರ್ಷಗಳಿಂದಲೂ ಶ್ರೀಮಠದಲ್ಲಿ ನ್ಯಾಯದಾನವು ಸುವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ಸಾವಿರಾರು ಕ್ಲಿಷ್ಟ ಸಮಸ್ಯೆಗಳು ಪರಿಹಾರವನ್ನು ಕಂಡುಕೊಂಡಿವೆ, ಮಾತ್ರವಲ್ಲ ಇನ್ನೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿಗೂ ಈ ಪರಂಪರೆ ಉಳಿದು, ಬೆಳೆದು ಬಂದಿರುವುದು ಶ್ರೀಮಠದ ಹೆಗ್ಗಳಿಕೆ.
ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಸತ್ಯ, ನ್ಯಾಯ, ಧರ್ಮದ ಪ್ರತಿರೂಪವಾಗಿ ನಮ್ಮನ್ನು ಸಲಹುತ್ತಿರುವುದು ಸರ್ವವಿದಿತ. ಇನ್ನು ಶ್ರೀ ಅಣ್ಣಪ್ಪಯ್ಯನವರು ದೇಶದಾದ್ಯಂತ ಸಂಚರಿಸಿ ನ್ಯಾಯದಾನ ಯಂತ್ರಗಳನ್ನು ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ. ಇದರ ಕುರುಹುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದು ಧರ್ಮಸ್ಥಳ, ಹಿರಿಯಡ್ಕ ಮತ್ತು ಮಾರಣಕಟ್ಟೆಗಳಲ್ಲಿ ಮಾತ್ರ ಎಂದು ನಾನು ತಿಳಿದಿದ್ದೆ. ಈಗ ಶ್ರೀಮಠದ ನ್ಯಾಯದಾನಯಂತ್ರವು (ಬಾಗಿಲು) ಬೆಳಕಿಗೆ ಬಂದು ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗೆ ಹೊಸ ಅವಕಾಶದ ಬಾಗಿಲನ್ನೇ ನಮಗಾಗಿ ತೆರೆದಿದೆ. ನಾವೆಲ್ಲರೂ ಕೋರ್ಟು ಕಛೇರಿ ಎಂದು ಹಣ, ಸಮಯ ಎರಡನ್ನೂ ವ್ಯರ್ಥ ಮಾಡುವ ಬದಲು ನಮ್ಮ ಹಿರಿಯರು ಕೊಟ್ಟಿರುವ ಇಂತಹ ಅಮೂಲ್ಯ ಯಂತ್ರಗಳ ಸಹಾಯದಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋಣ. ಗುರುಗಳ ಸಾನ್ನಿಧ್ಯದಿಂದ ಪುನೀತರಾಗೋಣ. ವಂದೇ ಮಾತರಂ.
May 10, 2017
ನೂತನ ರಥ ಸಮರ್ಪಣೆ ಮತ್ತು ರಥೋತ್ಸವದ ವರದಿ
ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಹಾಶ್ರಮ ಸ್ವಾಮಿಗಳ ಪರಮಾನುಗ್ರಹದಿಂದ
ತಾ: ೯-೫-೨೦೧೭ರಂದು ಶ್ರೀಮಠ ಬಾಳೆಕುದ್ರುವಿನ ನರಸಿಹ ದೇವರಿಗೆ ಸುಮಾರು ೬೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಭವ್ಯವಾದ ರಥವನ್ನು ಸಮರ್ಪಿಸಲಾಯಿತು. ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ, ವೇದವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ನಿರ್ದೇಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬಳಿಕ ವೈಭವದ ರಥೋತ್ಸವವೂ ನೆರವೇರಿತು. ಮಧ್ಯಾಹ್ನ ಯಕ್ಷಗಾನ - ಪ್ರವಚನ, ಪ್ರಸಂಗ - "ಪ್ರಥಮ ಭಾಗವತ ಪ್ರಹ್ಲಾದ" ಕಾರ್ಯಕ್ರಮ ನಡೆಯಿತು. ಶ್ರೀಮತಿ ಭವ್ಯಶ್ರೀ ಹರೀಶ್ ಅವರ ಕಂಚಿನ ಕಂಠದಲ್ಲಿ ಗಾನವೂ, ಶ್ರೀ ಉಜಿರೆ ಅಶೋಕ್ ಭಟ್ಟರಿಂದ ಪ್ರವಚನ - ಜ್ಞಾನಾಮೃತ ಸಿಂಚನವೂ ಜರುಗಿತು. ಪ್ರಹ್ಲಾದನು ಹೇಗೆ ಭಾಗವತನೆನಿಸಿಕೊಂಡ, ಪ್ರಹ್ಲಾದ ರಾಜಾಭಿಷಕ್ತನಾದ ಬಳಿಕ ಹೇಗೆ ಭಾಗವತನಾಗಿ ಜಗತ್ತನ್ನೇ ಆಳಿದ. ಸಮಸ್ತ ಭೂಮಂಡಲಕ್ಕೆ ಹೇಗೆ ಪರೋಪಕಾರಿಯಾಗಿ ಬಾಳಿ ಶಾಶ್ವತವಾದ ಸ್ಥಾನವನ್ನು ಗಳಿಸಿದ ಎನ್ನುವುದನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಭಟ್ಟರು ಬಲು ಸುಂದರವಾಗಿ ವ್ಯಾಖ್ಯಾನಿಸಿದರು. ಎಲ್ಲರೂ ಪ್ರಹ್ಲಾದ ಎಂದರೆ ತಂದೆಯನ್ನು ಕೊಲ್ಲಿಸಿದವನು ಎಂದು ಜರೆಯುವುದು ತರವಲ್ಲ. ನರಸಿಂಹನು ಉಗ್ರರೂಪ ತೊರೆದು ಪ್ರಹ್ಲಾದನಲ್ಲಿ ವರವನ್ನು ಕೇಳೆಂದಾಗ ಆತ ತನಗೇನೂ ಕೇಳದೆ ತನ್ನ ತಂದೆಗೆ ಮುಕ್ತಿಯನ್ನು ಕರುಣಿಸು ಎಂದು ಕೋರುವುದರ ಮೂಲಕ ನಿಜವಾದ ಭಾಗವತ ಧರ್ಮವನ್ನು ಜಗತ್ತಿಗೆ ತೋರಿಸುತ್ತಾನೆ. ಪ್ರಹ್ಲಾದನು ಹರ ದ್ವೇಷಿಯಲ್ಲ, ಕೇವಲ ಹರಿಯನ್ನು ವಿರೋಧಿಸುವ ತಂದೆಗೆ ತಿಳಿಹೇಳಲು ಹರಿನಾಮವನ್ನು ಬಳಸಿದ. ಹರಿ-ಹರರಲ್ಲಿ ಭೇಧವಿಲ್ಲ, ಅದೇ ಭಾಗವತ ಎನ್ನುವ ವಿಚಾರವು ಅಶೋಕ್ ಭಟ್ಟರ ಪ್ರವಚನದ ಸಾರವಾಗಿತ್ತು.
May 4, 2017
ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!
ಕೆಲವು ವರ್ಷಗಳ ಹಿಂದೊಮ್ಮೆ ಮಾತಿನ ಮಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಕೇಳಿದ್ದೆ. ಆರ್. ಎಸ್. ಎಸ್ ನ ಪ್ರಚಾರಕರಂತೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ಹುಳುಕುಗಳನ್ನು ವೈಭವೀಕರಿಸಿ ಹೇಳುತ್ತಾ ಚಪ್ಪಾಳೆಗಿಟ್ಟಿಸುತ್ತಿದ್ದ ಬಿಸಿರಕ್ತದ ಆ ಯುವಕನನ್ನು ಇಂದು ನೀವು ಕಾಣಲು ಸಾಧ್ಯವಿಲ್ಲ. ಇತ್ತೀಚಿಗೆ ಉಡುಪಿ ಜಿಲ್ಲೆಯ ಬಾಳೆಕುದ್ರುವಿನ ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನಕಾರನಾಗಿ ಕಾಣಿಸಿದ ವ್ಯಕ್ತಿ ಬೇರೆಯವನೇ ಏನೋ ಎಂದು ಹೇಳುವಷ್ಟು ಬದಲಾಗಿದ್ದಾರೆ ಚಕ್ರವರ್ತಿ. ಮಾತಿನ ತೀಕ್ಷತೆ, ಮೊನಚು, ಉದಾಹರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಪರಿಯಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗದೆ ಇದ್ದರೂ ಕೂಡ, ವಿಷಯ ಮಂಡನೆಯಲ್ಲಿ, ವೈಚಾರಿಕತೆಯಲ್ಲಿ ಪ್ರೌಢಿಮೆಯನ್ನು ತೋರಲಾರಂಭಿಸಿದ್ದಾರೆ. ತಾವು ನಂಬಿರುವ ತತ್ವ ಸಿದ್ಧಾಂತಗಳಿಗೆ ರಾಷ್ಟ್ರೀಯತೆಯ ಸೊಗಡನ್ನು ತುಂಬುತ್ತಿದ್ದಾರೆ. ಹಿಂದೆಲ್ಲ ಬರಿಯ ಮಾತಿನಿಂದಲೇ ಮಂಟಪವನ್ನು ಕಟ್ಟುತ್ತಿದ್ದವರು ಈಗ ಕೃತಿಯಲ್ಲೂ ಅದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಕ್ರವರ್ತಿ ಬದಲಾಗಿದ್ದಾರೆ. ಸಮಾಜಕ್ಕೆ ಇನ್ನೂ ಉತ್ತಮವಾದದ್ದನ್ನು ಕೂಡುವ ಸಂಕಲ್ಪದಿಂದ ಬದಲಾಗಿದ್ದಾರೆ ಎನ್ನಬಹುದೇನೋ.
"ಮಿಥುನ್ ಚಕ್ರವರ್ತಿ" - ಹೀಗೆಂದಾಗ ಹಿಂದಿ ಚಲನಚಿತ್ರದ ನಟನೊಬ್ಬನ ನೆನಪಾಗಿರಬೇಕಲ್ಲ! ಅದೇ ನಾಮಧೇಯದ ಸೂಲಿಬೆಲೆ ಎಂಬ ಊರಿನ ಮಹತ್ವಾಕಾಂಕ್ಷೆಯ ಹುಡುಗನೊಬ್ಬ ದೇಶಭಕ್ತಿಯ ಭಾವಗಳನ್ನು ಮನದಲ್ಲಿ ತುಂಬಿಕೊಂಡು ಆರ್. ಎಸ್. ಎಸ್ ಸೇರುತ್ತಾನೆ. ಅಲ್ಲಿ ಸಂಘದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುತ್ತಾನೆ. ಸಂಘದ ಕೆಲವೊಂದು ನೀತಿ ನಿಯಮಗಳು ಯುವಕ ಮಿಥುನ್ ನ ಕ್ಷಿಪ್ರ ಬೆಳವಣಿಗೆಯ ಕನಸುಗಳಿಗೆ ಅಡ್ಡಗಾಲಾಗಿ ಪರಿಣಮಿಸುತ್ತವೆ. ಈ ಹೊತ್ತಿಗಾಗಲೇ ಇಂಜಿನಿಯರಿಂಗ್ ಪದವಿಯನ್ನು ಪೂರ್ತಿಗೊಳಿಸಿದ್ದ ಮಿಥುನ್, ತನ್ನ ಮಹತ್ವಾಕಾಂಕ್ಷೆಯನ್ನು ಪೋಷಿಸುವ, ಅದನ್ನು ಈಡೇರಿಸಲು ಸಹಕರಿಸುವ ಇತರ ಸಂಘಟನೆಯನ್ನು ಅರಸುತ್ತಿರುತ್ತಾನೆ. ಅದು ೯೦ ರ ದಶಕದ ಕೊನೆಯ ಭಾಗ. ರಾಷ್ಟ್ರಬಂಧು ಶ್ರೀ ರಾಜೀವ ದೀಕ್ಷಿತರು "ಆಜಾದಿ ಬಚಾವೋ ಆಂದೋಲನ"ದ ಮೂಲಕ ಮನೆಮಾತಾಗಿದ್ದ ಕಾಲವದು. ಗಾಂಧೀಜಿಯ ರಾಮರಾಜ್ಯದ ಕನಸನ್ನು ನೆನಸು ಮಾಡಲು, ಸ್ವದೇಶೀ ಚಳುವಳಿಯನ್ನು ದೇಶದ ಉದ್ದಗಲಕ್ಕೂ ಪಸರಿಸಲು, ತಮ್ಮ ಆಕರ್ಷಕ ಶೈಲಿಯ ಭಾಷಣದ ಮೂಲಕ ದೇಶದ ಹಳ್ಳಿ ಹಳ್ಳಿಗಳಿಗೂ ಸಂಚಾರ ಕೈಗೊಳ್ಳುತ್ತಿದ್ದರು. ಹಿಂದಿ ಭಾಷಣಕಾರರಾದ ಅವರಿಗೆ ಕರ್ನಾಟಕದ ಹಳ್ಳಿಗಳನ್ನು ತಲುಪಲು ಸಮರ್ಥ ಭಾಷಾಂತರಕಾರನ ಅವಶ್ಯಕತೆ ಇತ್ತು. ಅಷ್ಟೋತ್ತಿಗಾಗಲೇ ಮಿಥುನ್ "ವೀರ ಸಾವರ್ಕರ್" ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿಯಾಗಿತ್ತು. ಆಜಾದಿ ಬಚಾವೋ ಆಂದೋಲನದಲ್ಲಿ ತನ್ನ ಆಕಾಂಕ್ಷೆಗಳ ಪೂರೈಕೆಗೆ ಇರುವ ಅವಕಾಶಗಳನ್ನು ಅರ್ಥಮಾಡಿಕೊಂಡ ಮಿಥುನ್, ರಾಜೀವ್ ದೀಕ್ಷಿತರಿಗೆ ಭಾಷಾಂತರಕಾರನಾಗಿ ಸೇರಿಕೊಳ್ಳುತ್ತಾನೆ. ಸುಮಾರು ೭ ವರ್ಷಗಳ ಕಾಲ ಆಜಾದಿ ಬಚಾವೋ ಆಂದೋಲನದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಮಿಥುನ್, ರಾಜೀವ್ ದಿಕ್ಷಿತರಿಂದ ಭಾಷಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಈ ಸಮಯದಲ್ಲಿ ಅವನ ಆಕಾಂಕ್ಷೆಗಳಿಗೆ ತಣ್ಣೀರು ಸುರಿಯುವ ಕಾರ್ಯ ಆಂದೋಲನದಲ್ಲಿ ನಡೆದು ಹೋಗುತ್ತದೆ. ಪ್ರಮುಖವಾಗಿ ರಾಜೀವ್ ದೀಕ್ಷಿತರ ಭಾಷಣದ ವೇದಿಕೆಯಲ್ಲಿ ಮಿಥುನ್ ಕೇವಲ ಭಾಷಾಂತರಕಾರನಾಗಿಯೇ ಉಳಿದುಹೋಗುತ್ತಾನೆ. ಸ್ವಂತ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಆ ವೇದಿಕೆ ಸಹಾಯ ಮಾಡುವುದೇ ಇಲ್ಲ. ಹೀಗಾಗಿ ಕ್ರಮೇಣ ಆ ಆಂದೋಲನದಿಂದ ದೂರ ಸರಿಯುತ್ತಾ ಕೊನೆಗೆ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ "ಜಾಗೊ ಭಾರತ್" ಎನ್ನುವ ರಾಷ್ಟ್ರಪ್ರೇಮವನ್ನು ಸಾರುವ ವಿಶಿಷ್ಟವಾದ ಕಾರ್ಯಕ್ರಮ ಮಿಥುನ್ ಚಕ್ರವರ್ತಿ ಅಥವಾ ಚಕ್ರವರ್ತಿ ಸೂಲಿಬೆಲೆಯಿಂದ ಆರಂಭವಾಗುತ್ತದೆ. ಅಂದರೆ ಆರ್. ಎಸ್. ಎಸ್. ನಿಂದ ಹೊರಬಂದು "ಜಾಗೊ ಭಾರತ್" ಆರಂಭಿಸುವ ಕಾಲಘಟ್ಟದಲ್ಲಿ ಆಜಾದಿ ಬಚಾವೋ ಆಂದೋಲನವನ್ನು ಮಿಥುನ್ ಚಿಮ್ಮು ಹಲಗೆಯಾಗಿ ಮಾತ್ರ ಬಳಸಿಕೊಳ್ಳುತ್ತಾನೆ ಎಂದರೂ ತಪ್ಪಿಲ್ಲ. ಮಿಥುನ್ ಹೊರಬಂದ ನಂತರ ಕರ್ನಾಟಕದಲ್ಲಿ ಆಜಾದಿ ಬಚಾವೋ ಆಂದೋಲನವು ಮುಂದೆ "ಹಿಂದ್ ಸ್ವರಾಜ್ ಅಭಿಯಾನ" ಎನ್ನುವ ಹೆಸರಿನಿಂದ ಕುಂಟುತ್ತಾ ಸಾಗಿ, ರಾಜೀವ್ ದೀಕ್ಷಿತರು ಬಾಬಾ ರಾಮದೇವರೊಂದಿಗೆ ರಾಜಕೀಯ ಪಕ್ಷದ ಸಂಕಲ್ಪ ಕೈಗೊಂಡ ನಂತರ ಕಣ್ಮರೆಯಾಗುತ್ತದೆ. ಈಗಲೂ ಆ ಅಭಿಯಾನದ ಕೆಲವು ಕಾರ್ಯಕರ್ತರು ಮೈಸೂರಿನಲ್ಲಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ರಾಜೀವ್ ದೀಕ್ಷಿತರು ತಮ್ಮ ಪ್ರಿಯವಾದ ಉಪನ್ಯಾಸದ ಸಂದರ್ಭದಲ್ಲಿ ಹೃದಯಾಘಾತ ಅನುಭವಿಸುತ್ತಾರೆ. ಅವರ ಜೀವವನ್ನು ಉಳಿಸಬಹುದಾಗಿದ್ದ ಚುಚ್ಚುಮದ್ದನ್ನು ಕೇವಲ ವಿದೇಶಿ ಔಷಧ ಎನ್ನುವ ಕಾರಣಕ್ಕೆ ನಿರಾಕರಸಿ ಬಳಿಕ ಕೀರ್ತಿಶೇಷರಾಗುತ್ತಾರೆ.
ಆಜಾದಿ ಬಚಾವೋ ಆಂದೋಲನದಿಂದ ಹೊರಬಂದ ಸಮಯದಲ್ಲಿ ಮಿಥುನ್ ಗೆ ಆರ್ಥಿಕ ಅಭದ್ರತೆ ಕಾಡುತ್ತದೆ. ಆಗ ಹುಟ್ಟಿದ್ದು "ಜಾಗೊ ಭಾರತ್". ಆಕಾಶವಾಣಿಯ ಕಲಾವಿದರನ್ನು ಕಟ್ಟಿಕೊಂಡು, ರಾಜೀವ್ ದೀಕ್ಷಿತರ ಜೀವನಾನುಭವಗಳನ್ನು ಬಳಸಿಕೊಂಡು, ದುಬಾರಿಯಾದ ಶುಲ್ಕವನ್ನು ನಿಗದಿಪಡಿಸಿ ಸಿದ್ಧಗೊಳಿಸಲ್ಪಟ್ಟ "ಜಾಗೊ ಭಾರತ್" ಕರ್ನಾಟಕದಾದ್ಯಂತ ಸಂಚಲನ ಮೂಡಿಸಿತು. ಇದು ಮಿಥುನ್ ಗೆ ಆರ್ಥಿಕ ದೃಢತೆಯನ್ನು ನೀಡಿದ್ದಲ್ಲದೆ "ಚಕ್ರವರ್ತಿ ಸೂಲಿಬೆಲೆ ಶ್ರೇಷ್ಠ ವಾಗ್ಮಿ" ಎಂಬ ಖ್ಯಾತಿಯನ್ನೂ ತಂದುಕೊಟ್ಟಿತು. ಮಹತ್ವಾಕಾಂಕ್ಷೆಯ ಮಿಥುನ್ ಗೆ ಇದೂ ಕೂಡ ತೃಪ್ತಿ ನೀಡದೆ ಇದ್ದಾಗ ಕಂಡದ್ದು ಶ್ರೀ ನರೇಂದ್ರ ಮೋದಿಯವರು. ೨೦೧೩ರಲ್ಲಿ "ನಮೋ ಬ್ರಿಗೇಡ್" ಆರಂಭವಾಯಿತು, ಭಾಜಪದ ಸಖ್ಯವೂ ಬೆಳೆಯಿತು. ಆರ್. ಎಸ್. ಎಸ್ ನ ಪ್ರಚಾರಕನಂತೆ ಮಾತನಾಡುತ್ತಿದ್ದ ಮಿಥುನ್ ಭಾಜಪದ ಪ್ರಚಾರಕನಂತೆ ಮಾತನಾಡತೊಡಗಿದನು. ಮಾತೆತ್ತಿದರೆ ಹಿಂದೂ, ಹಿಂದುತ್ವದ ವಿಚಾರಗಳು. ರಾಷ್ಟ್ರಬಂಧು ರಾಜೀವ್ ದೀಕ್ಷಿತರ ಗಾಂಧೀವಾದದ ಮಾತುಗಳ ಬದಲಾಗಿ ಆರ್. ಎಸ್. ಎಸ್ ನ ಸಂಕುಚಿತ ವಿಚಾರಧಾರೆಗಳು "ನಮೋ ಬ್ರಿಗೇಡ್" ನ ಮೂಲಕ ಕೇಳಲಾರಂಭಿಸಿದವು. ಮುಂದೆ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ "ನಮೋ ಬ್ರಿಗೇಡ್" ಹೋಗಿ "ಯುವ ಬ್ರಿಗೇಡ್" ಸ್ಥಾಪನೆಯಾಯಿತು. ಕ್ರಮೇಣ ಮಿಥುನ್ ನ ಭಾಷಣದಲ್ಲಿದ್ದ ಉಗ್ರ ಹಿಂದುತ್ವದ ವಿಚಾರಗಳು ಮೊನಚನ್ನು ಕಳೆದುಕೊಳ್ಳುತ್ತಾ ಬಂದವು. ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ಹಾಗೂ ಅವರ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎನ್ನಬಹುದು. ಮೋದಿಯವರು ಕೇವಲ "ಹಿಂದೂಗಳ ಪ್ರಧಾನಿ"ಯಾಗದೆ "ಭಾರತೀಯರ ಪ್ರಧಾನಿ" ಯಾದರು. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎನ್ನುವುದೇ ಮಂತ್ರವಾಯಿತು. ಇದರಿಂದಾಗಿ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರೂ ಕೂಡ ರಾಷ್ಟ್ರೀಯವಾದಿಗಳಾಗುವ ಅನಿವಾರ್ಯತೆ ಉಂಟಾಯಿತು. ಇದೇ ಕಾರಣಕ್ಕೆ ನಾನು ಹೇಳಿದ್ದು "ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!".
ಗಾಂಧೀಜಿಯ ಮಾನವತಾವಾದ, ಸರ್ವರನ್ನೂ ಸಮನಾಗಿ ಕಾಣುವ ಭಾವ, ಇವುಗಳನ್ನು ರಾಜೀವ ದೀಕ್ಷಿತರು ಸಂಪೂರ್ಣ ಭಾರತದಲ್ಲಿ ಕಾಣಲು ಬಯಸಿದ್ದರು. ಈಗ ಅದೇ ವಿಚಾರಗಳನ್ನು ಸೂಲಿಬೆಲೆಯವರು ಪುನರುಚ್ಚರಿಸಲಾರಂಭಿಸದ್ದಾರೆ. ಬಾಳೆಕುದ್ರು ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಭಾಷಣದಲ್ಲಿ ಕೂಡ ನನಗೆ ಪ್ರಮುಖವಾಗಿ ಕೇಳಿಸಿದ್ದು ಈ ವಿಚಾರಗಳೇ. ಎಲ್ಲ ಭಾರತೀಯರೂ ಒಂದೇ. ನಾನು ಯಾರನ್ನೂ ಜಾತಿಯಿಂದ ಗುರುತಿಸಲು ಬಯಸುವುದಿಲ್ಲ. ಅವರವರ ಕಾರ್ಯದಿಂದಲೇ ಅವರವರ ವರ್ಣಗಳ ನಿರ್ಧಾರವಾಗುತ್ತದೆ. ನಾನು ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದ ಕೆಲಸಗಳಿಂದಾಗಿ ನಾನು ಶೂದ್ರ ವರ್ಣಕ್ಕೆ ಸೇರಿದವನು ಎಂದು ಬ್ರಾಹ್ಮಣನಾಗಿ ಹುಟ್ಟಿರುವ ಸೂಲಿಬೆಲೆ ಹೇಳುತ್ತಿರುವಾಗ ನಿಜಕ್ಕೊ ಅವರು ಬದಲಾಗಿದ್ದಾರೆ ಎಂದು ಅನ್ನಿಸಿತು. "ಯುವ ಬ್ರಿಗೇಡ್" ನ ಉತ್ತಮವಾದ ಕೆಲಸಗಳ ಮೂಲಕ ಸೂಲಿಬೆಲೆಯವರು ತಾವು ಕೇವಲ ಮಾತುಗಾರ ಮಾತ್ರವಲ್ಲ, ಹೇಳಿದ್ದನ್ನು ಮಾಡಿ ತೋರಿಸುವ ತಾಕತ್ತು ಕೂಡ ಇದೆ ಎಂದು ಸಾಬೀತು ಮಾಡುತ್ತಿದ್ದಾರೆ. ಮಠದ ಕಲ್ಯಾಣಿಯನ್ನು ಉಚಿತವಾಗಿ ಸ್ವಚ್ಚಗೊಳಿಸುವ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ. ಹೀಗೆ ಒಂದೇ ತತ್ವ ಸಿದ್ಧಾಂತಕ್ಕೆ ಜೋತು ಬೀಳದೆ "ಮೊದಲು ಮಾನವನಾಗು" ಎಂಬ ದಿಸೆಯಲ್ಲಿ ಅವರು ಮುನ್ನಡೆದರೆ ದೇಶಕ್ಕೊಬ್ಬ ಆದರ್ಶ ಪುರುಷ ಸಿಗುವುದರಲ್ಲಿ ಸಂಶಯವಿಲ್ಲ. ವಂದೇ ಮಾತರಂ.
(ಲೇಖಕರು ಮಣಿಪಾಲ ತಾಂತ್ರಿಕ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಲ್ಲಿ ಪ್ರಾಧ್ಯಾಪಕರು. ಹಿಂದೆ ಆಜಾದಿ ಬಚಾವೋ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು)
Subscribe to:
Posts (Atom)